ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಬಲಿಗರ ಜೊತೆ ‘ಕೈ’ ಹಿಡಿದ ಬಚ್ಚೇಗೌಡ, ಪುಟ್ಟ ಅಂಜನಪ್ಪ

Published 2 ಏಪ್ರಿಲ್ 2024, 15:45 IST
Last Updated 2 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಶಾಸಕ, ಜೆಡಿಎಸ್ ಮುಖಂಡ ಚಿಕ್ಕಬಳ್ಳಾಪುರದ ಕೆ.ಪಿ. ಬಚ್ಚೇಗೌಡ ಮತ್ತು ಶಿಡ್ಲಘಟ್ಟದ ಮುಖಂಡ ಪುಟ್ಟ ಅಂಜನಪ್ಪ ತಮ್ಮ ಬೆಂಬಲಿಗರ ಜತೆ ಮಂಗಳವಾರ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಡಾ.ಎಂ.ಸಿ. ಸುಧಾಕರ್‌, ಇಬ್ಬರಿಗೂ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕೆಲವು ಮುಖಂಡರು ತಮ್ಮ ಬೆಂಬಲಿಗರ ಜತೆ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಕಾಂಗ್ರೆಸ್ ಪಕ್ಷ ಸೇರಿದ ನಂತರ ಹಳಬರು, ಹೊಸಬರು ಎನ್ನುವ ತಾರತಮ್ಯ ನಮ್ಮಲ್ಲಿ ಇಲ್ಲ. 50 ವರ್ಷ ಪಕ್ಷ ಕಟ್ಟಿರುವವರು ಮತ್ತು ಹೊಸಬರನ್ನು ಒಟ್ಟಿಗೆ ತೆಗೆದುಕೊಂಡು, ಎಲ್ಲ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಹೋಗಬೇಕು’ ಎಂದು ಸಲಹೆ ನೀಡಿದರು.

‘ಆಪರೇಷನ್ ಕಮಲ’ ಮಾಡಿ ಮುಖ್ಯಮಂತ್ರಿ ಗಾದಿಯಿಂದ ಕೆಳಗೆ ಇಳಿಸಿದವರ ಜತೆಗೆ ಎಚ್‌.ಡಿ. ಕುಮಾರಸ್ವಾಮಿ ನೆಂಟಸ್ತನ ಮಾಡಿಕೊಂಡಿದ್ದಾರೆ. ಎಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಜನ ಅವರನ್ನು ನೋಡಿ ನಗುತ್ತಿದ್ದಾರೆ’ ಎಂದರು.

‘ಚಿಕ್ಕಬಳ್ಳಾಪುರದಲ್ಲಿ ಜಾತಿ, ನೀತಿಯ ಮಾತುಗಳು ಕೇಳಿಬರುತ್ತಿದೆ. ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವಾಗ ಎಲ್ಲಿ ಹೋಗಿತ್ತು ಈ ಜಾತಿ, ನೀತಿ? ‌ಕಾಂಗ್ರೆಸ್ ಪಕ್ಷ ಎಂಟು ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಿದೆ. ಜೆಡಿಎಸ್‌ ಮತ್ತು ಬಿಜೆಪಿಯಿಂದ ಒಂದೇ ಕುಟುಂಬದ ಮೂರು ಮಂದಿ ಚುನಾವಣೆ ಎದುರಿಸುತ್ತಿದ್ದಾರೆ. ದೇವೇಗೌಡರು ತಮ್ಮ ಅಳಿಯನನ್ನೇ ಬಿಜೆಪಿಯಿಂದ ನಿಲ್ಲಿಸಿದ ಮೇಲೆ ಜೆಡಿಎಸ್‌ ಚಿಹ್ನೆ ಮತ್ತು ಆ ಪಕ್ಷಕ್ಕೆ ಬೆಲೆಯೇ ಇಲ್ಲದಂತಾಗಿದೆ’ ಎಂದರು.

‘ಸಿ.ಎಂ. ಇಬ್ರಾಹಿಂ ಅವರ ಮಗ ಕೂಡ ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ. ಸಾಕಷ್ಟು ಅಲ್ಪಸಂಖ್ಯಾತರು, ಒಕ್ಕಲಿಗ ನಾಯಕರು ಸೇರಿದಂತೆ ಎಲ್ಲ ವರ್ಗಗಳ ಜನರು ಪಕ್ಷ ಸೇರಲು ಮುಂದೆ ಬರುತ್ತಿದ್ದಾರೆ’ ಎಂದರು.

ರಾಜಕೀಯ ತಂತ್ರಗಾರಿಕೆ: ‘60 ಸಾವಿರ ಮತಗಳ ಲೀಡ್ ಕೊಟ್ಟರೆ ನನ್ನನ್ನು ಟಚ್ ಮಾಡುವವರಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವರು ತಮ್ಮ ಮತದಾರರ ಬಳಿ ಶಕ್ತಿ ನೀಡುವಂತೆ ಕೋರುತ್ತಿದ್ದಾರೆ. ಇದು ಅವರ ರಾಜಕೀಯ ತಂತ್ರಗಾರಿಕೆ. ಇದು ಸಹಜ. ನಾನು ನಮ್ಮ ಕ್ಷೇತ್ರಕ್ಕೆ ಹೋದಾಗ ನಾವು ನಮ್ಮ ಮತದಾರರ ಬಳಿ ಕೇಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT