ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ ಸಂದರ್ಶನ | ಪ್ರಧಾನಿ ಮೋದಿ ನಮಗೆ ಸವಾಲೇ ಅಲ್ಲ: ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ವೈಫಲ್ಯ, ನಮ್ಮ ಸಾಧನೆ ‘ಕೈ’ ಹಿಡಿಯುವುದು ಗ್ಯಾರಂಟಿ– ಮುಖ್ಯಮಂತ್ರಿ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ವ್ಯಕ್ತಿಯಾಗಿ ಮೋದಿ ಸವಾಲೇ ಅಲ್ಲ. ಮೋದಿ ಅಲೆಯೂ ಇಲ್ಲ. ಅಯೋಧ್ಯೆಯ ರಾಮನ ವಿಚಾರವೂ ಠುಸ್‌ ಆಗಿದೆ. ಕೇಂದ್ರ ಸರ್ಕಾರದ ವೈಫಲ್ಯ, 10 ತಿಂಗಳ ನಮ್ಮ ಸರ್ಕಾರದ ಸಾಧನೆ ಈ ಬಾರಿ ನಮ್ಮ ‘ಕೈ’ಹಿಡಿಯುವುದು ಗ್ಯಾರಂಟಿ’– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೃಢ ವಿಶ್ವಾಸವಿದು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ್ಯ ರಾಜಕೀಯ, ಮೋದಿ ವರ್ಚಸ್ಸು, ಬಿಜೆಪಿ– ಜೆಡಿಎಸ್‌ ಮೈತ್ರಿ, ತಮ್ಮ ಸರ್ಕಾರದ ಸಾಧನೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ‘ಎತ್ತಿ ತೋರಿಸಲು ನಮ್ಮ ವೈಫಲ್ಯಗಳಿಲ್ಲ. ಯಾವುದೇ ಹಗರಣವೂ ಇಲ್ಲ. ಜನರ ಒಲವು ಕಾಂಗ್ರೆಸ್ ಪರವಾಗಿದೆ. ಹೀಗಾಗಿ, ರಾಜ್ಯದಲ್ಲಿ ಈ ಬಾರಿ ನಾವು 15ರಿಂದ 20 ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದರು. ಮುಖ್ಯಮಂತ್ರಿ ಜೊತೆಗಿನ ಸಂದರ್ಶನದ ಪೂರ್ಣಭಾಗ ಇಲ್ಲಿದೆ.

ಪ್ರ

ಸದ್ಯದ ರಾಜ್ಯ ರಾಜಕೀಯ ವಾತಾವರಣ ಹೇಗಿದೆ?

ಈಗ ಕಾಂಗ್ರೆಸ್‌ ಪರವಾಗಿದೆ. ಈ ಬಾರಿ ಮೋದಿಯವರ ಅಲೆ ಇಲ್ಲ. ನಾವು ಜನರಿಗೆ ಕೊಟ್ಟಿದ್ದ ಭರವಸೆಯಂತೆ ಐದು ‘ಗ್ಯಾರಂಟಿ’ಗಳನ್ನು ಜಾರಿ ಮಾಡಿದ್ದೇವೆ. ಈ ‘ಗ್ಯಾರಂಟಿ’ಗಳ ಫಲ, ಫಲಾನುಭವಿಗಳಿಗೆ ದೊರೆತಿದೆ. ಅವರೆಲ್ಲರೂ ಸಂತುಷ್ಟ ರಾಗಿದ್ದಾರೆ. ಜನರಿಗೆ ನಮ್ಮ ಮೇಲೆ ನಂಬಿಕೆ ಬಂದಿದೆ, ವಿಶ್ವಾಸವಿದೆ. ಹೀಗಾಗಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ.

ಪ್ರ

ಮೋದಿ ನಿಮಗೆ ನೇರ ಸವಾಲೇ? ನಿಮ್ಮ ಪ್ರಕಾರ ಮತದಾರನ್ನು ಹೆಚ್ಚು ಪ್ರಭಾವಿಸಬಹುದಾದ ವಿಷಯ ಯಾವುದು?

ವ್ಯಕ್ತಿಯಾಗಿ ಮೋದಿ ನಮಗೆ ಸವಾಲೇ ಅಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳು, ರಾಜ್ಯದ ಹಿಂದಿನ ಸರ್ಕಾರದ ವೈಫಲ್ಯಗಳು, ನಮ್ಮ ಸರ್ಕಾರದ ಸಾಧನೆಗಳು ಈ ಬಾರಿ ಚುನಾವಣಾ ವಿಷಯವಾಗಿ ಜನರ ಮೇಲೆ ಪರಿಣಾಮ ಬೀರಲಿದೆ.

ಪ್ರ

ಮೋದಿ ಹೆಸರನ್ನೇ ‘ಅಸ್ತ್ರ’ವಾಗಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರಲ್ಲ?

ಮೋದಿ ಅಲೆಯಲ್ಲಿಯೇ ಸರ್ಕಾರ ಮಾಡಲು ಅವರಿಗೆ ಆಗಲ್ಲ. ಬಿಜೆಪಿಗೇನು ಮೋದಿ ಹೊಸಬರಾ? ಗುಜರಾತ್‌ ಮುಖ್ಯಮಂತ್ರಿ ಆಗಿದ್ದರು ನಂತರ ಪ್ರಧಾನಿಯಾದರು. ಅದಕ್ಕಿಂತ ಮಿಗಿಲೇನು?

ಪ್ರ

ಹಾಗಿದ್ದರೆ, ಮೋದಿ ಪ್ರಭಾವ ಇಲ್ಲವೆಂದೇ?

ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ. ನನಗೆ ಇರುವ ಮಾಹಿತಿ ಪ್ರಕಾರ ದೇಶದ ಇತರ ಕಡೆಗಳಲ್ಲೂ ಇಲ್ಲ. ಇರುತ್ತಿದ್ದರೆ ಪಶ್ಚಿಮ ಬಂಗಾಳ, ಪಂಜಾಬ್‌, ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯವರು ಗೆಲ್ಲಬೇಕಿತ್ತಲ್ಲ. ಮೋದಿ ಅಲೆಯಲ್ಲೇ ಗೆಲ್ಲುತ್ತೇವೆ ಎನ್ನುವುದು ಸುಳ್ಳು. 

ಪ್ರ

ಅಯೋಧ್ಯೆಯ ರಾಮ ಚುನಾವಣಾ ವಿಷಯ ಅಲ್ಲವೇ?

ಅಯೋಧ್ಯೆಯ ರಾಮನೂ ಹೊಸ ವಿಷಯವಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ದು ಸರ್ಕಾರ. ಮೋದಿ ಅದನ್ನು ಉಪಯೋಗಿಸಿಕೊಂಡರು. ಆ ವಿಷಯವೀಗ ಠುಸ್‌ ಆಗಿದೆ.

ಪ್ರ

ಮೋದಿಗೆ ಪರ್ಯಾಯ ನಾಯಕ ಕಾಂಗ್ರೆಸ್‌ನಲ್ಲಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ? 

ಯಾರು ಹೇಳಿದ್ದು? ನಮ್ಮಲ್ಲಿ ಬಹಳ ಜನ ನಾಯಕರಿದ್ದಾರೆ. ರಾಹುಲ್‌ ಗಾಂಧಿ, ಖರ್ಗೆ, ದಿಗ್ವಿಜಯ ಸಿಂಗ್‌ ನಾಯಕರಲ್ಲವೇ? ಮೋದಿಯವರಿಗೆ ಪರ್ಯಾಯವಾಗಿ ಎಷ್ಟೊಂದು ಜನ ಇದ್ದಾರೆ. ಮೋದಿಗಿಂತಲೂ ಜಾಸ್ತಿ ವ್ಯಕ್ತಿತ್ವ ಇರುವವರು ಇದ್ದಾರೆ.

ಪ್ರ

ಬಿಜೆಪಿಗೆ ಬೂತ್‌ಮಟ್ಟದ ಸಂಘಟನೆ, ಆರ್‌ಎಸ್‌ಎಸ್‌ ಪ್ಲಸ್. ನಿಮಗೆ ಅಂತಹ ಬಲ ಇಲ್ಲದಿರುವುದು ಕೊರತೆಯೇ?

ಆರ್‌ಎಸ್‌ಎಸ್‌ 1925ರಿಂದಲೇ ಇದೆ. ಜನಸಂಘಕ್ಕೂ ಆರ್‌ಎಸ್‌ಎಸ್‌ ಬೆಂಬಲ ಇತ್ತು. ಆಗ ಅವರು ಎಷ್ಟು ಜನ ಗೆದ್ದಿದ್ದರು? 1980ರಲ್ಲಿಯೂ ಆರ್‌ಎಸ್‌ಎಸ್‌ ಇತ್ತಲ್ಲ. ಆಗ ಎರಡು ಸ್ಥಾನ ಗೆದ್ದರು. ಆರ್‌ಎಸ್‌ಎಸ್‌ ಹೊಸತಾಗಿ ಸಂಘಟನೆಯಾಗಿದ್ದು ಅಲ್ವಲ್ಲ. ಗಾಂಧೀಜಿಯವರನ್ನು ಕೊಂದು ಹಾಕಿದವರು ಯಾರು? ಯಾವ ಸಂಘಟನೆಯವರು? ಗೋಡ್ಸೆ ಯಾವ ಸಂಘಟನೆಯವರು? ಮನಮೋಹನ್‌ ಸಿಂಗ್ 10 ವರ್ಷ ಪ್ರಧಾನಿಯಾಗಿದ್ದರು. ಅದಕ್ಕಿಂತಲೂ ಹಿಂದೆ 50 ವರ್ಷ ಕಾಂಗ್ರೆಸ್ ಇತ್ತು. ಜನ ಬದಲಾವಣೆ ಬಯಸಿದ್ದರು. ಬಿಜೆಪಿಯವರು ಸುಳ್ಳಿನ ಗೋಪುರ ಕಟ್ಟಿ, ಭ್ರಮೆ ಹುಟ್ಟಿಸಿದರು.

ಪ್ರ

ಬಿಜೆಪಿ– ಜೆಡಿಎಸ್‌ ಮೈತ್ರಿ ಸವಾಲು ಅಲ್ಲವೇ?

ಜೆಡಿಎಸ್‌ – ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರಿಂದ ನಮಗೇನೂ ತೊಂದರೆ ಆಗಲ್ಲ. ಇದು ಅಪವಿತ್ರ ಮೈತ್ರಿ ಎನ್ನುವುದು ಜನರಿಗೆ ಗೊತ್ತಾಗಿಬಿಟ್ಟಿದೆ. ಅವರು ಅಧಿಕಾರಕ್ಕಾಗಿ ಜೊತೆಯಾಗಿದ್ದಾರೆ. ‘ಕಾಂಗ್ರೆಸ್‌ ಅನ್ನು ಸೋಲಿಸುವುದಕ್ಕೆಂದೇ ನಾವು ಒಂದಾಗಿದ್ದೇವೆ. ಅದೇ ನಮ್ಮ ಗುರಿ’ ಎಂದು ಹಾಸನದಲ್ಲಿ ದೇವೇಗೌಡರು ಹೇಳಿದ್ದಾರೆ. ಮೈತ್ರಿ ಮಾಡಿಕೊಳ್ಳಲು ಇದು ವಿಷಯನಾ? ಇದನ್ನು ಜನ ನಂಬುತ್ತಾರಾ? ಅದರ ಮೇಲೆ ಜನ ಮತ ಹಾಕುತ್ತಾರಾ?

ಪ್ರ

ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಕೂಡಾ ‘ಕುಟುಂಬ ರಾಜಕೀಯ’ ಅನುಸರಿಸಿದೆಯಲ್ಲವೇ?

ಸ್ಥಳೀಯರು ಯಾರನ್ನು ಶಿಫಾರಸು ಮಾಡಿದ್ದಾರೆಯೋ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ಅವರು ಮಂತ್ರಿಗಳ ಮಕ್ಕಳು ಆಗಿರಬಹುದು, ಬೇರೆಯವರೂ ಆಗಿರಬಹುದು. ಧಾರವಾಡದಲ್ಲಿ ಪಕ್ಷದ ಕಾರ್ಯಕರ್ತ ವಿನೋದ್‌ ಅಸೂಟಿ, ಉತ್ತರ ಕನ್ನಡದಲ್ಲಿ ಅಂಜಲಿ, ದಕ್ಷಿಣ ಕನ್ನಡದಲ್ಲಿ ಪದ್ಮರಾಜ್‌, ಮೈಸೂರು– ಕೊಡಗಿನಲ್ಲಿ ಲಕ್ಷ್ಮಣ್ ಅಭ್ಯರ್ಥಿ. ಅವರೆಲ್ಲರೂ ಕಾರ್ಯಕರ್ತರಲ್ಲವೇ? ಚಾಮರಾಜನಗರದಲ್ಲಿ ಮಹದೇವಪ್ಪ ನಿಲ್ಲುವುದಾದರೆ ಅವರಿಗೇ ಕೊಡಿ, ಇಲ್ಲದಿದ್ದರೆ ಅವರ ಮಗನಿಗೆ ಟಿಕೆಟ್‌ ಕೊಡುವಂತೆ ಎಲ್ಲರೂ ಹೇಳಿದರು.

ಪ್ರ

ಅಂದರೆ, ಸೋಲಬಹುದೆಂಬ ಭೀತಿಯಿಂದ ಸಚಿವರು ಸ್ಪರ್ಧೆಗೆ ಮುಂದಾಗಲಿಲ್ಲವೇ?

ನಾವು ಅಲ್ಲಿ (ಚಾಮರಾಜನಗರ) ಒಂದೇ ಕಡೆ ಸಚಿವರನ್ನು ಕಣಕ್ಕಿಳಿಸಲು ಮುಂದಾಗಿದ್ದೆವು. ಮಹದೇವಪ್ಪನಿಗೆ ನಿಲ್ಲುವಂತೆ ಹೇಳಿದ್ದೆವು. ಮಗನಿಗೆ ಕೊಡಿ ಎಂದು ಶಾಸಕರು, ಸೋತವರು, ಬ್ಲಾಕ್‌ ಸಮಿತಿಯವರು, ಪರಿಷತ್‌ ಸದಸ್ಯರು ಹೇಳಿದರು. ಹೀಗಾಗಿ, ಮಗನಿಗೆ ಕೊಟ್ಟಿದ್ದೇವೆ.

ಪ್ರ

ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕೆಲವೆಡೆ ಇನ್ನೂ ಗೊಂದಲ ಮುಂದುವರಿದಿದೆಯಲ್ಲ?

ಬಾಗಲಕೋಟೆ ಒಂದೇ ಕಡೆ. ಬೇರೆ ಎಲ್ಲಿದೆ? ದಾವಣಗೆರೆಯಲ್ಲಿ ವಿನಯ್‌ಕುಮಾರ್‌ಗೆ ಟಿಕೆಟ್‌ ಕೊಡುತ್ತೇವೆಂದು ಯಾರೂ ಹೇಳಿಯೇ ಇಲ್ಲ.

ಪ್ರ

ಕೋಲಾರದಲ್ಲಿ ರಾಜಿ ಸಂಧಾನ ಮಾಡಲು ರಾಜ್ಯ ನಾಯಕರಿಗೆ ಕೊನೆಗೂ ಸಾಧ್ಯವಾಗಲಿಲ್ಲವಲ್ಲ?

ಅಲ್ಲಿ ಎರಡು (ಸಚಿವ ಕೆ.ಎಚ್‌. ಮುನಿಯಪ್ಪ– ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್‌) ಗುಂಪು ಇದೆ. ರಾಜಿ ಮಾಡಲು ಪ್ರಯತ್ನಿಸಿದ್ದೇವೆ. ಆಗದೇ ಇದ್ದಾಗ ಮೂರನೇ ಅಭ್ಯರ್ಥಿಗೆ ಹೈಕಮಾಂಡ್‌ ಟಿಕೆಟ್ ಕೊಟ್ಟಿದೆ. ಅಲ್ಲಿ ಯಾವ ಬಣ ರಾಜಕೀಯವೂ ಪ್ರಭಾವ ಬೀರಲ್ಲ. ಎರಡೂ ಗುಂಪಿನವರು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ.

ಪ್ರ

ಮೈಸೂರು– ಕೊಡಗಿನಲ್ಲಿ ಯದುವೀರ್‌ ಬಿಜೆಪಿ ಅಭ್ಯರ್ಥಿ. ನಿಮ್ಮ ಅಭಿಪ್ರಾಯವೇನು?

ಯದುವೀರ್‌ ಬಗ್ಗೆ ಮಾತನಾಡಲು ನಾನು ಹೋಗಲ್ಲ. ಪ್ರತಾಪ್ ಸಿಂಹನನ್ನು ಬದಲಿಸಿ ಬಿಜೆಪಿಯವರು ಯದುವೀರ್‌ಗೆ ಟಿಕೆಟ್‌ ಕೊಟ್ಟಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಎಂ. ಲಕ್ಷ್ಮಣ್ ಸಾಮಾನ್ಯ ಕಾರ್ಯಕರ್ತ. ಕೆಳಹಂತದಿಂದ ಬಂದವರು. ಜನರ ಜೊತೆ ಸಂಪರ್ಕ ಇರುವವ. ರೈತನ ಮಗ, ವಿದ್ಯಾವಂತ. ಅಲ್ಲಿ ಈ ಬಾರಿ ನಮ್ಮ ಅಭ್ಯರ್ಥಿ ಶೇ 100ರಷ್ಟು ಗೆಲ್ಲುತ್ತಾರೆ.

ಪ್ರ

ಈ ಬಾರಿ ಎಷ್ಟು ಸ್ಥಾನ ನಿರೀಕ್ಷಿಸುತ್ತೀರಿ. ಆ ವಿಶ್ವಾಸಕ್ಕೆ ಆಧಾರವೇನು?

ನಾವು ಮಾಡಿರುವಂಥ ಕೆಲಸದ ಆಧಾರದ ಮೇಲೆ 15ರಿಂದ 20 ಸ್ಥಾನ ಗೆಲ್ಲುತ್ತೇವೆ. ಇವತ್ತಿನವರೆಗೆ ನಮ್ಮ ಯಾವುದೇ ವೈಫಲ್ಯ ಇಲ್ಲ. ಯಾವುದೇ ಹಗರಣವೂ ಇಲ್ಲ. ಹೀಗಾಗಿ, ಈ ಬಾರಿ ಜನ ನಮ್ಮ ಕೈ ಹಿಡಿಯುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಶೇ 43ರಷ್ಟು ಮತ ಬಂದಿದೆ. ಬಿಜೆಪಿಯರಿಗೆ ಶೇ 37ರಷ್ಟು ಮತ ಬಂದಿದೆ. ಹೀಗಾಗಿ, 136 (ಕ್ಷೇತ್ರಗಳನ್ನು) ಗೆದ್ದಿದ್ದೇವೆ. ಕಳೆದ 10 ತಿಂಗಳಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುವಂಥ ಯಾವುದೇ ಕೆಲಸವನ್ನು ನಾವು ಮಾಡಿಲ್ಲ. ಬಿಜೆಪಿಯವರು ಎಷ್ಟು ಸುಳ್ಳು ಭರವಸೆಗಳನ್ನು ನೀಡಿದರೂ, ಜನರು ನಮಗೆ ಆಶೀರ್ವಾದ ಮಾಡಿಯೇ ಮಾಡುತ್ತಾರೆಂಬ ವಿಶ್ವಾವಿದೆ. 

ಪ್ರ

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ?

ಅದವರ ಭ್ರಮೆ. ನಾವು 136 ಸ್ಥಾನ ಗೆದ್ದಿರುವವರು. ಹೇಗೆ ಪತನವಾಗುತ್ತದೆ. ಅವರಿಗೆ ಬಹುಮತ ಇರಲಿಲ್ಲ. ‘ಆಪರೇಷನ್‌ ಕಮಲ’ ಮಾಡಿಯೇ 3 ವರ್ಷ 10 ತಿಂಗಳು ಅವರ ಸರ್ಕಾರ ಉಳಿದುಕೊಂಡಿತ್ತು. ನಮ್ಮ ಸರ್ಕಾರ ಹೇಗೆ ಪತನವಾಗುತ್ತದೆ?

ಪ್ರ

ಉತ್ತರ ಭಾರತದಲ್ಲಿ ರಾಜ್ಯ ಸರ್ಕಾರಗಳನ್ನು ಕೆಡವಿದ ನಿದರ್ಶನಗಳಿವೆಯಲ್ಲ?

ಕರ್ನಾಟಕದಲ್ಲಿ ಅದೆಲ್ಲ ನಡೆಯಲ್ಲ. ನಮ್ಮ ಯಾವೊಬ್ಬ ಶಾಸಕನೂ ಬಿಜೆಪಿ ಜೊತೆ ಹೋಗಲ್ಲ.

ಪ್ರ

ಚುನಾವಣೆ ನಂತರ ‘ಗ್ಯಾರಂಟಿ’ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂದು ಪ್ರಚಾರ ಮಾಡಲಾಗುತ್ತಿದೆಯಲ್ಲವೇ?

ಅದು ಚುನಾವಣಾ ಗಿಮಿಕ್. ಅವರು ಸುಳ್ಳು ಹೇಳುತ್ತಾರೆ. ‘ಗ್ಯಾರಂಟಿ’ಗಳನ್ನು ಯಾಕೆ ನಿಲ್ಲಿಸುತ್ತೇವೆ? ಮುಂದಿನ ವರ್ಷಕ್ಕೆ ‘ಗ್ಯಾರಂಟಿ’ಗಳಿಗೆಂದೇ ನಾನು 52 ಸಾವಿರ ಕೋಟಿ ಬಜೆಟ್‌ನಲ್ಲಿ ತೆಗೆದಿಟ್ಟಿದ್ದೇನೆ. ಈ ‘ಗ್ಯಾರಂಟಿ’ ಯೋಜನೆಗಳು ಮುಂದುವರಿಯುತ್ತವೆ. ಜೊತೆಗೆ, ಇನ್ನೊಮ್ಮೆ ನಮಗೆ ಆಶೀರ್ವಾದ ಮಾಡಿದರೆ ಮುಂದೆಯೂ ಮುಂದುವರಿಯುತ್ತದೆ.

ಪ್ರ

‘ಗ್ಯಾರಂಟಿ’ಗಳ ಫಲವಾಗಿ ಕಾಂಗ್ರೆಸ್ ಪರ ಮಹಿಳಾ ಮತದಾರರ ಒಲವು ನಿರೀಕ್ಷಿಸುತ್ತೀರಾ?

‘ಗ್ಯಾರಂಟಿ’ಗಳ ಮೂಲಕ ಮಹಿಳೆಯರಿಗೆ ಹೆಚ್ಚು ಶಕ್ತಿ ಕೊಡುವ ಯೋಜನೆ ಮಾಡಿದ್ದೇವೆ. ‘ಗೃಹ ಲಕ್ಷ್ಮಿ’, ‘ಶಕ್ತಿ’, ‘ಗೃಹ ಜ್ಯೋತಿ’ ಇವೆಲ್ಲ ಹೆಚ್ಚು ಶಕ್ತಿ ತುಂಬುವ ಯೋಜನೆಗಳು. ದೇವಸ್ಥಾನಕ್ಕೆ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ದೇವಸ್ಥಾನಗಳಲ್ಲಿ ₹700 ಕೋಟಿ ಇದ್ದ ಸಂಗ್ರಹ ₹7 ಸಾವಿರ ಕೋಟಿವರೆಗೆ ಹೆಚ್ಚಿದೆ. ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ತಿರುಗಾಡುವಂತಾಗಿದೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಿದೆ. ಮಹಿಳಾ ಮತದಾರರು ಒಲವು ತೋರುವ ವಿಶ್ವಾಸವಿದೆ.  

ಪ್ರ

ಎಲ್ಲ ವಿರೋಧಗಳ ನಡುವೆಯೂ ಜಾತಿ ಗಣತಿ ವರದಿ ಸ್ವೀಕರಿಸಿದ್ದೀರಿ. ಇದರಿಂದ ಕಾಂಗ್ರೆಸ್‌ಗೆ ಲಾಭ ಆಗಬಹುದೇ?

ನಾವು ಇನ್ನೂ ಅದರ ಬಗ್ಗೆ ಚರ್ಚೆ ಮಾಡಿಲ್ಲ. ನಾನೂ ವರದಿಯನ್ನು ನೋಡಿಲ್ಲ. ಜಾತಿ ಗಣತಿ ಮಾಡಬೇಡಿ ಎಂದು ಯಾರೂ ಹೇಳಿಲ್ಲ. ಮಾಡಿ ಎಂದೇ ಎಲ್ಲರೂ ಹೇಳುವುದು. ಹಾಗೆಂದು, ವರದಿ ಸ್ವೀಕರಿಸಿದ ತಕ್ಷಣ ವಿರೋಧ ಮಾಡುತ್ತಾರೆ ಎನ್ನುವುದು ಸುಳ್ಳು.

ಪ್ರ

‘ಗ್ಯಾರಂಟಿ’ಗಳಿಗೆ ಕರ್ನಾಟಕ ಸರ್ಕಾರದ ಬಳಿ ಹಣ ಇಲ್ಲ. ಹೀಗಾಗಿ ತೆರಿಗೆ ಹಣಕ್ಕೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆಂದು ನಿರ್ಮಲಾ ಸೀತಾರಾಮನ್‌ ಹೇಳುತ್ತಿದ್ದಾರಲ್ಲ...

‘ಗ್ಯಾರಂಟಿ’ಗಳಿಗೆ ಹಣ ಇಲ್ಲವೆಂದು ಎಲ್ಲಿ ಹೇಳಿದ್ದೇವೆ? ನೀವು (ಕೇಂದ್ರ) ಕೊಡಬೇಕಾದುದುನ್ನು ಕೊಟ್ಟಿಲ್ಲವೆಂದು ಹೇಳುತ್ತಿದ್ದೇವೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತೇವೆಯೇ ಹೊರತು ಗ್ಯಾರಂಟಿಗೆ ದುಡ್ಡು ಕೊಡಿ ಎಂದು ಕೇಳಿದ್ದೇವೆಯೇ? ನಿರ್ಮಲಾ ಸೀತಾರಾಮನ್‌ ಅವರಿಗೆ, ‘ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಬಿಟ್ವಿದ್ದೇವೆ, ಜಾರಿ ಮಾಡಲು ಹಣ ಇಲ್ಲ, ಕೊಡಿಯಮ್ಮ’ ಎಂದು ಕೇಳಿದ್ದೇವೆಯೇ? ಈ ವರ್ಷ, ಮಾರ್ಚ್ ಕೊನೆವರೆಗೆ ‘ಗ್ಯಾರಂಟಿ’ಗಳಿಗೆ ₹36 ಸಾವಿರ ಕೋಟಿ ಖರ್ಚು ಮಾಡಿದ್ದೇವೆಯಲ್ಲ. ಮುಂದಿನ ವರ್ಷಕ್ಕೆ ₹52 ಸಾವಿರ ಕೋಟಿ ಬಜೆಟ್‌ನಲ್ಲಿ ಇಟ್ಟಿದ್ದೇವೆ. ತೆರಿಗೆ ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಿ ಎಂದಿದ್ದೇವೆ. ಬರಗಾಲಕ್ಕೆ ಹಣ ಕೊಡಿ. ಅದು ನಿಮ್ಮ ಕರ್ತವ್ಯ ಎಂದು ಹೇಳಿದ್ದೇವೆಯೇ ಹೊರತು ‘ಗ್ಯಾರಂಟಿ’ಗೆ ಕೊಡಿ ಎಂದಿಲ್ಲ. 

ಪ್ರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ನಿಮ್ಮ ಮಧ್ಯೆ ಸಮನ್ವಯ ಚೆನ್ನಾಗಿದೆ ಅನಿಸುತ್ತಿದೆ. ಇದು ಚುನಾವಣೆಗೆ ಸೀಮಿತವೇ? 

ನಾವು ಮೊದಲಿನಿಂದಲೂ ಸಮನ್ವಯದಿಂದಲೇ ಇದ್ದೇವೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಅವರು ಅಧ್ಯಕ್ಷರಾಗಿದ್ದರು. ಆಗ ಸಮನ್ವಯ ಇರಲಿಲ್ಲವೇ? ಸಮನ್ವಯ ಇಲ್ಲದೆಯೇ ನಾವು 136 ಕ್ಷೇತ್ರ ಗೆದ್ದಿದ್ದೇವೆಯೇ? ಆಗಲೂ ಸಮನ್ವಯ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಅದರಲ್ಲಿ ಅನುಮಾನವೇ ಇಲ್ಲ.

ಪ್ರ

ಚುನಾವಣೆ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಆಗಬಹುದೇ?

ಚುನಾವಣೆಯ ಬಳಿಕವೆಂದು ಬದಲಾವಣೆ ಮಾಡುವುದಿಲ್ಲ. ಹೈಕಮಾಂಡ್‌ ಮುಂದೆ ಯಾವ ತೀರ್ಮಾನ ಮಾಡುತ್ತದೆಯೊ? ಆದರೆ, ತಕ್ಷಣಕ್ಕೆ ಯಾವುದೇ ಬದಲಾವಣೆ ಮಾಡುವುದಿಲ್ಲ.

ಪ್ರ

ಅಧಿಕಾರ ಹಂಚಿಕೆ ಸೂತ್ರ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿದೆಯಲ್ಲ?

ಮಾತನಾಡುವವರು ಮಾತನಾಡುತ್ತಾರೆ. ಹೈಕಮಾಂಡ್‌ನವರು ಏನು ತೀರ್ಮಾನ ಮಾಡುತ್ತಾರೊ, ಆ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ.

ಪ್ರ

ನೀವು ಕೈಗೊಂಡ ‘ಉತ್ತರಿಸಿ ಮೋದಿ’, ‘ನನ್ನ ತೆರಿಗೆ, ನನ್ನ ಹಕ್ಕು’ ಅಭಿಯಾನ ಮತ ಪರಿವರ್ತನೆ ಮಾಡಬಹುದೇ?

ತೆರಿಗೆ ಹಂಚಿಕೆಯಲ್ಲಿ ನಮಗೆ ಅನ್ಯಾಯ ಆಗಿರುವುದು ರಾಜ್ಯದ ಜನರಿಗೆ ಗೊತ್ತಾಗಿದೆ. ಅದರಿಂದ ನಮಗೆ ಅನುಕೂಲ ಆಗಿಯೇ ಆಗುತ್ತದೆ. ಅನ್ಯಾಯವನ್ನು ಅವರು ಸರಿಪಡಿಸಲ್ಲ, ಹೀಗಾಗಿ ನಾವು ಜನರ ಬಳಿಗೆ ಹೋಗುತ್ತೇವೆ. ಜನರು ಖಂಡಿತಾ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಯಾರು ಅನ್ಯಾಯ ಮಾಡಿದ್ದಾರೆ ಅವರ ವಿರುದ್ಧ ಜನ ಮತ ಹಾಕುತ್ತಾರೆ. 

ಪ್ರ

ಕೇಂದ್ರ ಸರ್ಕಾರದ ಮೇಲೆ ಈ ಮಟ್ಟಕ್ಕೆ ನೀವು ಹರಿಹಾಯಲು ಕಾರಣ?

ಕರ್ನಾಟಕದ ಹಿತರಕ್ಷಣೆ, ಕನ್ನಡಿಗರ ರಕ್ಷಣೆ ನನ್ನ ಕರ್ತವ್ಯ. ಹೀಗಾಗಿ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲೇಬೇಕಾದ ಅನಿವಾರ್ಯತೆಯಿದೆ. ಆ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ.

ಪ್ರ

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯೆಂಬ ನಿಮ್ಮ ಕೂಗಿಗೆ ಇತರ ರಾಜ್ಯಗಳೂ ಕೈಜೋಡಿಸಿದೆಯಲ್ಲ?

ತೆರಿಗೆ ಹಂಚಿಕೆಯಲ್ಲಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗಿದೆ. ತೆರಿಗೆ ಶೇಖರಣೆಯಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ನಮಗೆ ಈ ವರ್ಷ ಬರುವಂಥದ್ದು ಸುಮಾರು ₹37,250 ಕೋಟಿ. ಉತ್ತರ ಪ್ರದೇಶಕ್ಕೆ ₹2.12 ಲಕ್ಷ ಕೋಟಿ. ಇದು ನ್ಯಾಯವೇ? ತಾರತಮ್ಯ ಅಲ್ಲವೇ? ನಮಗೆ ₹1 ಲಕ್ಷ ಕೋಟಿಯಾದರೂ ಬರಬೇಕಲ್ಲ. ಕರ್ನಾಕದಿಂದ ₹4.30 ಲಕ್ಷ ಕೋಟಿ ಸಂಗ್ರಹವಾಗುತ್ತದೆ. ಅದರಲ್ಲಿ ನಾಲ್ಕರಲ್ಲಿ ಒಂದು ಭಾಗವಾದರೂ ಬರಬೇಕಲ್ಲವೇ?

ಪ್ರ

ರಾಜ್ಯಕ್ಕೆ ಉದ್ದೇಶಪೂರ್ವಕವಾಗಿ ಕೇಂದ್ರ ಅನ್ಯಾಯ ಮಾಡುತ್ತಿದೆಯೆಂದು ಅನಿಸುತ್ತಿದೆಯೇ?

ಉದ್ದೇಶಪೂರ್ವಕವಾಗಿಯೇ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ತೆರಿಗೆ ಹಂಚಿಕೆಯಲ್ಲಿ, ಬರಗಾಲ ಬಂದಾಗ ಅವರೇ ಘೋಷಣೆ ಮಾಡಿದ ಅನುದಾನ ಕೊಟ್ಟಿಲ್ಲ. ಇದುವರೆಗೆ 14ನೇ ಹಣಕಾಸು ಆಯೋಗದ ಶಿಫಾರಸು ಸೇರಿ ನಮಗೆ ₹1.87 ಲಕ್ಷ ಕೋಟಿ ಬರಬೇಕು. ಅಷ್ಟು ಬಂದಿದ್ದರೆ ರಾಜ್ಯದ ಅಭಿವೃದ್ಧಿ ಮಾಡಬಹುದಿತ್ತಲ್ಲ. ನೀರಾವರಿ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಹಣ ಕೊಡಲು ಸಾಧ್ಯ ಆಗುತ್ತಿರಲಿಲ್ಲವೇ?

ಪ್ರ

ಚುನಾವಣೆ ನಂತರ ಜೆಡಿಎಸ್ ಭವಿಷ್ಯ ಏನಾಗಬಹುದು?

ಅವರು (ಬಿಜೆಪಿ–ಜೆಡಿಎಸ್‌) ಹೆಚ್ಚು ಸ್ಥಾನಗಳಲ್ಲಿ ಸೋಲುತ್ತಾರೆ. ಸೋತ ಬಳಿಕ ಹೊಂದಾಣಿಕೆ ಇರಲ್ಲ. ಒಡಕು ಉಂಟಾಗುತ್ತದೆ. ಮೈತ್ರಿಯಲ್ಲಿ ಬ್ರೇಕ್‌ ಆಗುತ್ತದೆ. 

ಪ್ರ

ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಚಿವರಾಗುತ್ತಾರೆ ಎಂದು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರಲ್ಲ?

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್‌ ಮತ್ತು ಅದರ ಮೈತ್ರಿ ಪಕ್ಷಗಳು ನೂರಕ್ಕೆ ನೂರಷ್ಟು ಅಧಿಕಾರಕ್ಕೆ ಬರಲಿವೆ. ಎನ್‌ಡಿಎ ಅಧಿಕಾರಕ್ಕೆ ಬರಲ್ಲ, ನೋಡಿ.

ಪ್ರ

‘ಅಬ್‌ ಕಿ ಬಾರ್ 400 ಪಾರ್’ ಎಂದು ಬಿಜೆಪಿಯವರು ಹೇಳಿದರೆ, ನೀವು 200 ದಾಟಲ್ಲ ಎನ್ನುತ್ತಿದ್ದೀರಿ?

ನನಗೆ ಬಂದಿರುವ ಮಾಹಿತಿ ಪ್ರಕಾರ, ಬಿಜೆಪಿಯವರೇ ಮಾಡಿಸಿದ ಸಮೀಕ್ಷೆಯಲ್ಲಿ ಅವರು ಸುಮಾರು 200 ಗೆಲ್ಲಬಹುದೆಂದು ಗೊತ್ತಾಗಿದೆ. ಅದಕ್ಕೆ ಅವರು 400, 400 ಎಂದು ಹೇಳುತ್ತಾರೆ. ಅದವರ ಚುನಾವಣಾ ತಂತ್ರಗಾರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT