ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಸಭೆಯಲ್ಲಿ ಗಲಾಟೆ: ಡಿಕೆಶಿ ವಿರುದ್ಧ ಬಿಜೆಪಿ –ಜೆಡಿಎಸ್ ನಿಯೋಗದಿಂದ ದೂರು

Published 16 ಏಪ್ರಿಲ್ 2024, 15:30 IST
Last Updated 16 ಏಪ್ರಿಲ್ 2024, 15:30 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ತುಮಕೂರಿನಲ್ಲಿ ಸೋಮವಾರ ನಡೆದ ಎನ್‌ಡಿಎ ಚುನಾವಣಾ ಪ್ರಚಾರ ಸಭೆಯಲ್ಲಿ ಗಲಾಟೆ ನಡೆಸಲು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ತುಮಕೂರಿನ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಹಿಳೆಯರು ವೇದಿಕೆಯವರೆಗೂ ನುಗ್ಗಿ ಗಲಾಟೆ ಮಾಡಿದ್ದರು. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರಿಗೆ ಮಂಗಳವಾರ ದೂರು ನೀಡಿರುವ ಜೆಡಿಎಸ್‌–ಬಿಜೆಪಿ ನಿಯೋಗ, ‘ಶಿವಕುಮಾರ್‌ ಕುಮ್ಮಕ್ಕಿನಿಂದಲೇ ಗಲಾಟೆ ನಡೆದಿದೆ’ ಎಂದು ದೂರಿದೆ.

ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಮತ್ತು ಜೆಡಿಎಸ್‌ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ. ರಂಗನಾಥ್ ನೇತೃತ್ವದ ನಿಯೋಗವು ಮುಖ್ಯ ಚುನಾವಣಾಧಿಕಾರಿಯವರಿಗೆ ಮಂಗಳವಾರ ದೂರು ಸಲ್ಲಿಸಿತು.

‘ಬಹಿರಂಗ ಸಭೆಗಳಲ್ಲಿ ಗಲಾಟೆಗೆ ಕುಮ್ಮಕ್ಕು ನೀಡುವಂತೆ ಶಿವಕುಮಾರ್‌ ಮತ್ತು ಸಚಿವ ಕೆ.ಎನ್‌. ರಾಜಣ್ಣ ಭಾಷಣ ಮಾಡುತ್ತಿದ್ದಾರೆ. ಇದರಿಂದ ಪ್ರಚೋದನೆಗೆ ಒಳಗಾದ ಕಾಂಗ್ರೆಸ್‌ ಕಾರ್ಯಕರ್ತೆಯರು ಸೋಮವಾರದ ಸಭೆಯಲ್ಲಿ ದಾಂಧಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಗಲಾಟೆ ನಿಯಂತ್ರಿಸಲು ಕ್ರಮ ಕೈಗೊಂಡಿಲ್ಲ. ಮಹಿಳೆಯರು ದೇವೇಗೌಡರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದರು. ಜೆಡಿಎಸ್‌, ಬಿಜೆಪಿ ಕಾರ್ಯಕರ್ತರೇ ಗೌಡರನ್ನು ರಕ್ಷಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ದೇವೇಗೌಡರು ಚುನಾವಣಾ ಪ್ರಚಾರ ನಡೆಸದಂತೆ ತಡೆಯುವ ದುರುದ್ದೇಶ ಶಿವಕುಮಾರ್‌ ಅವರಿಗಿದೆ. ಅವರ ಬೆಂಬಲಿಗರು ಯಾವುದೇ ರೀತಿಯ ಕೃತ್ಯ ಎಸಗುವುದಕ್ಕೂ ಸಿದ್ಧರಿದ್ದಾರೆ. ಆದ್ದರಿಂದ ಶಿವಕುಮಾರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ದೇವೇಗೌಡರ ಪ್ರಚಾರ ಸಭೆಯಲ್ಲಿ ಭದ್ರತಾ ಲೋಪಕ್ಕೆ ಕಾರಣವಾದ ಪೊಲೀಸ್‌ ಅಧಿಕಾರಿಗಳನ್ನು ಪತ್ತೆಹಚ್ಚಿ, ಕ್ರಮ ಜರುಗಿಸಬೇಕು’ ಎಂದು ನಿಯೋಗ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT