ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಪ್ರಚಾರಕ್ಕೆ ಜೆಡಿಎಸ್ ನಾಯಕರೇ‌ ಗೈರು!

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಯ ಸಮನ್ವಯಕ್ಕೆ ಸಭೆ ನಡೆಸಿದ್ದರೂ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಪ್ರಚಾರದಲ್ಲಿ ಜೆಡಿಎಸ್‌ ನಾಯಕರ ಗೈರು ಎದ್ದು ಕಾಣುತ್ತಿದೆ.

ಯದುವೀರ್‌ ನಡೆಸುತ್ತಿರುವ ರೋಡ್‌ ಶೋ, ಕಾರ್ನರ್‌ ಸಭೆ, ಸಂವಾದ ಹಾಗೂ ಸಭೆಗಳಲ್ಲಿ ‌ಜೆಡಿಎಸ್‌ನ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಷ್ಟೇ ಪಾಲ್ಗೊಳ್ಳುತ್ತಿದ್ದು, ನಾಯಕರು ಬಾರದಿರುವುದು ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ‘ಜೆಡಿಎಸ್‌ನವರಿಂದ ಅಷ್ಟೇನೂ ಸಹಕಾರ ದೊರೆಯುತ್ತಿಲ್ಲ’ ಎಂಬ ಆರೋಪ ವ್ಯಾಪಕವಾಗಿದ್ದು, ‘ಜೆಡಿಎಸ್‌ ಮೈತ್ರಿ ಧರ್ಮ ಪಾಲಿಸುತ್ತಿದ್ದೆಯೇ? ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ!

ಸಮನ್ವಯ ಸಭೆ ನಂತರವೂ: ಮಾರ್ಚ್‌ 27ರಂದು ನಗರದಲ್ಲಿ ನಡೆದಿದ್ದ ಬಿಜೆಪಿ–ಜೆಡಿಎಸ್‌ ಸಮನ್ವಯ ಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಈ ಭಾಗದ ಜೆಡಿಎಸ್ ನಾಯಕರು ಬಿಜೆಪಿ ನಾಯರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಅದಕ್ಕೂ ಮುನ್ನ, ಜೆಡಿಎಸ್ ನಾಯಕರಾದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು ಅವರ ಕಚೇರಿಯಲ್ಲೇ ಯದುವೀರ್‌ ಭೇಟಿಯಾಗಿ ಬೆಂಬಲ ಕೋರಿದ್ದರು.

ಜಿ.ಟಿ.ದೇವೇಗೌಡರು ಒಮ್ಮೆಯಷ್ಟೆ ಪ್ರಚಾರ ಮಾಡಿದ್ದಾರೆ. ಸಾ.ರಾ. ಮಹೇಶ್ ಸಮನ್ವಯ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ನಂತರ, ಈ ಯಾರೂ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಮಾರ್ಚ್‌ 29ರಂದು ಬಿಜೆಪಿ ನಗರ ಯುವ ಮೋರ್ಚಾದಿಂದ ಇಲ್ಲಿನ ಕುವೆಂಪುನಗರದ ಬಂದಂತಮ್ಮ ಕಾಳಮ್ಮ ಸಮುದಾಯ ಭವನ ಆವರಣದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾಜಿ ಮೇಯರ್‌ ಆರ್.ಲಿಂಗಪ್ಪ ಪಾಲ್ಗೊಂಡಿದ್ದರು. ಕೆ.ಜಿ. ಕೊಪ್ಪಲು ಭಾಗದಲ್ಲಿ ನಡೆದ ಪ್ರಚಾರದಲ್ಲಿ ಮಾತ್ರ ಜೆಡಿಎಸ್‌ನ ಕೆಲವು ಸ್ಥಳೀಯ ನಾಯಕರು ಭಾಗವಹಿಸಿದ್ದರು. ಕಾರ್ಯಕರ್ತರೂ ಕಡಿಮೆ ಸಂಖ್ಯೆಯಲ್ಲಿದ್ದರು.

‘ಪ್ರಚಾರದ ಕಾವು ದಿನೇ ದಿನೇ ಏರುತ್ತಿದ್ದರೂ, ಚುನಾವಣೆಗೆ (ಏ.26) ಕೆಲವೇ ದಿನಗಳು ಉಳಿದಿದ್ದರೂ ಎರಡೂ ಪಕ್ಷಗಳ ನಡುವೆ ಇನ್ನೂ ಸಮನ್ವಯ ಮೂಡಿಲ್ಲವೇ’ ಎಂಬ ಅನುಮಾನಕ್ಕೂ ಈ ಬೆಳವಣಿಗೆಗಳು ಕಾರಣವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲೇ ನಡೆಯುತ್ತಿರುವ ಈ ಬೆಳವಣಿಗೆಯು ಬಿಜೆಪಿಯವರ ಬೇಸರವನ್ನುಂಟು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚರ್ಚೆಯಾಗಿದೆ: ‘ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರಿಂದ ಅಷ್ಟೇನೂ ಸಹಕಾರ ದೊರೆಯದಿರುವುದು ಪಕ್ಷದ ಸಭೆಯಲ್ಲಿ ಚರ್ಚೆಯಾಗಿದೆ. ವರಿಷ್ಠರ ಗಮನಕ್ಕೂ ತರಲಾಗಿದೆ. ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ನಾವಂತೂ ವ್ಯಾಪಕವಾಗಿ ಪ್ರಚಾರ ನಡೆಸುತ್ತಿದ್ದೇವೆ’ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

‘ಒಕ್ಕಲಿಗರ ಮತ ನಿರ್ಣಾಯಕವಾಗಿರುವುದರಿಂದ, ಜೆಡಿಎಸ್‌ ಜೊತೆಗಿನ ಸಖ್ಯದಿಂದ ಅನುಕೂಲವಾಗಲಿದೆ ಎಂದು ನಿರೀಕ್ಷಿಸಿದ್ದೇವೆ. ಜೆಡಿಎಸ್‌ನವರು ತುಂಬು ಮನಸ್ಸಿನಿಂದ ಪ್ರಚಾರ ಮಾಡಿದರಷ್ಟೆ ಅದು ಸಾಧ್ಯವಾಗುತ್ತದೆ. ಇನ್ನೂ ಸಮಯವಿದೆ, ನೋಡೋಣ’ ಎಂದರು.

‘ಸಮನ್ವಯದಲ್ಲಿ ಲೋಪವೇನಿಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ. ನಮ್ಮೆಲ್ಲ ಮುಖಂಡರು ಹಾಗೂ ಕಾರ್ಯಕರ್ತರೂ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ’ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT