ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS polls| ಕರ್ನಾಟಕವೆಂದರೆ ಮೋದಿ, ಶಾಗೆ ಸಿಟ್ಟು, ಅಸಡ್ಡೆ: ರಾಮಲಿಂಗಾರೆಡ್ಡಿ ಆರೋಪ

Published 1 ಮೇ 2024, 14:35 IST
Last Updated 1 ಮೇ 2024, 14:35 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕದ ಜನತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ವೋಟ್‌ ಹಾಕಿಲ್ಲ ಎಂಬ ಕಾರಣಕ್ಕೆ ಮೋದಿ, ಶಾ ಅವರಿಗೆ ನಮ್ಮ ರಾಜ್ಯದ ಮೇಲೆ ವಿಪರೀತ ಕೋಪ, ಅಸಡ್ಡೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರತಿ ವಿಷಯದಲ್ಲೂ ಅನ್ಯಾಯ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಭೀಕರ ಬರ ತಲೆದೋರಿದ್ದರೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ, ರಾಜ್ಯದ ಪಾಲಿನ ಜಿಎಸ್‌ಟಿ ನೀಡದೇ ಅನ್ಯಾಯ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯ ಸೋಲಿನ ಅಘಾತದಿಂದ ಅವರಿನ್ನೂ ಹೊರಬಂದಿಲ್ಲ, ರಾಜಕೀಯ ದುರುದ್ದೇಶದಿಂದ ಕೇಂದ್ರ ಸರ್ಕಾರ ಹೀಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ದಕ್ಷಿಣ ಭಾರತದಲ್ಲಿ ರಾಜಕೀಯ ಅಸ್ವಿತ್ವ ಇಲ್ಲದ ಕಾರಣಕ್ಕೆ ಈ ಭಾಗದ ರಾಜ್ಯಗಳಿಗೆ ನಿರಂತರ ಅನ್ಯಾಯ ಮಾಡಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದರು.

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ, ಜೆಡಿಎಸ್‌ನ 27 ಸಂಸತ್‌ ಸದಸ್ಯರು ಒಮ್ಮೆಯೂ ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತಲಿಲ್ಲ. ನಮ್ಮ ರಾಜ್ಯದ ಹಿತಾಸಕ್ತಿ ಬಗ್ಗೆ ಧ್ವನಿ ಎತ್ತದೇ ಕಣ್ಣು ಮುಚ್ಚಿಕುಳಿತ ಒಬ್ಬರೂ ಈ ಬಾರಿ ಆಯ್ಕೆಯಾಗಬಾರದು. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಸಂಸದರು ಆಯ್ಕೆಯಾದರೆ ಅನುಕೂಲವಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವಿದೇಶದಲ್ಲಿ ತೀರಿಕೊಂಡಾಗ ಕೇಂದ್ರ ಸರ್ಕಾರದಿಂದಾಗಲಿ, ಪ್ರಧಾನಿ ಮೋದಿಯಿಂದ ಯಾವುದೇ ಸಹಾಯ, ಸಹಕಾರ ಪಡೆದಿಲ್ಲ. ಕುಮಾರಸ್ವಾಮಿ ಅವರ ಹೇಳಿಕೆಯಲ್ಲಿ ಸತ್ಯವಿಲ್ಲ. ಈ ರೀತಿ ಆರೋಪ ಮಾಡಿದರೆ ಪ್ರಜ್ವಲ್‌ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಬಹುದು ಎಂಬ ಉದ್ದೇಶ ಅವರದಾಗಿದೆ ಎಂದರು.

ಬಿಜೆಪಿಯವರು ಮಹಿಳಾ ವಿರೋಧಿಗಳು. ಮಣಿಪುರದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದಾಗ, ಹಾಸನದ ಪ್ರಕರಣದಲ್ಲಿ ನೊಂದಿರುವ ಮಹಿಳೆಯ ಪರ ಧ್ವನಿ ಎತ್ತದ  ಅಮಿತ್‌ ಶಾ ಅವರ ಮಾತೃ ಶಕ್ತಿ ಎಲ್ಲಪ್ಪ ಹೋಯಿತು ಎಂದು ಪ್ರಶ್ನಿಸಿದರು.

ಮೋದಿ ಅವರು ಬೆಂಗಳೂರು ಬಾಂಬ್‌ ಸ್ಪೋಟದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಅವರದೇ ಪಕ್ಷದ ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದಲ್ಲಿ ಒಟ್ಟು 6 ಬಾರಿ ಬಾಂಬ್‌ ಸ್ಟೋಟ ಆಗಿದೆ. ಈ ಬಗ್ಗೆ ಮೋದಿ ಅವರು ಏಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮುಖಂಡರಾದ ಡಾ. ಮಹಾಂತೇಶ ಬಿರಾದಾರ, ಅಬ್ದುಲ್‌ ಹಮೀದ್‌ ಮುಶ್ರೀಫ್‌, ವಕೀಲ ಸುಭಾಶ ಛಾಯಗೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT