ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಒಕ್ಕಲಿಗ ಮತ: ಡಿಕೆ–ಎಚ್‌ಡಿಕೆ ಕಿತ್ತಾಟ

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಬುಧವಾರ ಆದಿಚುಂಚನಗಿರಿಯ ಶಾಖಾ ಮಠಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಮೂರು ಪಕ್ಷಗಳ ನಾಯಕರ ಮಧ್ಯೆ ವಾಕ್ಸಮರ ಆರಂಭವಾಗಿದೆ.

ನಿರ್ಮಲಾನಂದನಾಥ ಸ್ವಾಮೀಜಿಯವರ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಸ್ವಾಮೀಜಿಯವರನ್ನು ಬಳಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಅವರನ್ನು ರಾಜಕೀಯಕ್ಕೆ ಎಳೆದು ತರಬಾರದು’ ಎಂದಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಒಕ್ಕಲಿಗ ಮುಖ್ಯಮಂತ್ರಿಯನ್ನು ಕುರ್ಚಿಯಿಂದ ಇಳಿಸಿದ್ದ ಬಿಜೆಪಿಯವರು ಈಗ ಅವರನ್ನೇ ಕರೆದುಕೊಂಡು ಸ್ವಾಮೀಜಿ ಭೇಟಿಗೆ ಹೋಗಿದ್ದಾರೆ ಎಂದು ಕೆಣಕಿದ್ದರು.

ಸ್ವಾಮೀಜಿ ಬಳಸಿಕೊಳ್ಳಬೇಡಿ: ಎಚ್‌ಡಿಕೆ

*ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯಲು ಮುಂದಾಗಿರುವ ಸಿದ್ದರಾಮಯ್ಯ ಅವರಿಗೆ ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗರ ಮೇಲೆ ಅಭಿಮಾನ ಬಂದಿದೆ. ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಏನೆಲ್ಲಾ ಮಾಡಿದ್ದಾರೆ ಎಂಬುದು ಗೊತ್ತಿದೆ

* ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಿದೆ. ರಾಜಕೀಯಕ್ಕೂ ಧರ್ಮಕ್ಕೂ ಏನು ಸಂಬಂಧ? ಧಾರ್ಮಿಕವಾಗಿ ನಾಡಿಗೆ ಮಾರ್ಗದರ್ಶನ ಮಾಡುತ್ತಿರುವ ಸ್ವಾಮೀಜಿಯವರನ್ನು ರಾಜಕೀಯಕ್ಕೆ ಎಳೆದು ತರಬಾರದು

*ನಾನು ಎಂದೂ ಅಧಿಕಾರದಲ್ಲಿ ಇದ್ದಾಗ ನಮ್ಮ ಸಮುದಾಯದ ಸ್ವಾಮೀಜಿಯವರನ್ನು ದುರುಪಯೋಗಪಡಿಸಿಕೊಳ್ಳುವ ಕೆಲಸ ಮಾಡಿಲ್ಲ. ಅಧಿಕಾರ ದುರ್ಬಳಕೆಯನ್ನೂ ಮಾಡಿಕೊಂಡಿಲ್ಲ. ಜಾತ್ಯತೀತ ಎಂದು ಹೇಳಿಕೊಳ್ಳೋರು ಪ್ರತಿ ದಿನ ಜಾತಿ ಬಗ್ಗೆ ಮಾತನಾಡುತ್ತಾರೆ. ನಮ್ಮ ಸಮಾಜದ ಜನ ದಡ್ಡರಲ್ಲ. ಇವರು ನಡೆಸುತ್ತಿರುವ ರಾಜಕೀಯ ಎಲ್ಲರಿಗೂ ಅರ್ಥ ಆಗುತ್ತದೆ

* ನನ್ನ ನೇತೃತ್ವದ ಮೈತ್ರಿ ಸರ್ಕಾರದ ಪತನಕ್ಕೆ ಕಾಂಗ್ರೆಸ್‌ ನಾಯಕರು ಏನೆಲ್ಲಾ ಮಾಡಿದರು ಎನ್ನುವುದು ನನಗೆ ಗೊತ್ತಿದೆ. ಆಗ ಕಾಂಗ್ರೆಸ್‌ ನಾಯಕರಲ್ಲಿಯೇ ಯಾಕೆ ಸಂಘರ್ಷ ನಡೆಯಿತು ಎನ್ನುವುದೂ ತಿಳಿದಿದೆ. ಧರ್ಮಸ್ಥಳದ ಸಿದ್ಧವನದಲ್ಲಿ ಸರ್ಕಾರದ ಪತನಕ್ಕೆ ಸಿದ್ಧೌಷಧ ಅರೆದದ್ದು ಯಾರು ಎಂಬುದು ರಾಜ್ಯದ ಜನರಿಗೆ ಗೊತ್ತು

ಒಕ್ಕಲಿಗ ಸಿ.ಎಂ ಇಳಿಸಿದ್ದನ್ನು ಸ್ವಾಮೀಜಿ ಪ್ರಶ್ನಿಸಿಲ್ಲವೇ: ಡಿಕೆಶಿ

* ಮೈತ್ರಿ ಸರ್ಕಾರ ಪತನವಾದ ಬಳಿಕ ನಮ್ಮ ಸಮಾಜದ (ಒಕ್ಕಲಿಗ) ಸಿ.ಎಂ ಅವರನ್ನು ಇಳಿಸಿ ಬಿಟ್ಟಿರಲ್ಲ ಎಂದು ಬಿಜೆಪಿಯರನ್ನು ಸ್ವಾಮೀಜಿ ಪ್ರಶ್ನಿಸಬಹುದಿತ್ತಲ್ಲವೇ? ಇದನ್ನು ಕೇಳುವ ಶಕ್ತಿ ಸ್ವಾಮೀಜಿಯವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರನ್ನೇ ಇಂದು ಸ್ವಾಮೀಜಿಯವರ ಬಳಿ ಕರೆದುಕೊಂಡು ಹೋಗಿ ಆಶೀರ್ವಾದ ಪಡೆಯುತ್ತಿದ್ದಾರಲ್ಲವೇ?

* ಒಕ್ಕಲಿಗರು ಮತ್ತು ಸ್ವಾಮೀಜಿಗಳು ದಡ್ಡರಲ್ಲ. ಸ್ವಾಮೀಜಿಗಳ ಬಳಿ ಬರುವವರಿಗೆ ವಿಭೂತಿ, ಹೂವಿನ ಹಾರ ಹಾಕಿ ಕಳಿಸುತ್ತಾರೆ. ಅವರು ನಮ್ಮ ಪರವೂ ಮಾಡುವುದಿಲ್ಲ, ಅವರ ಪರವೂ ಮಾಡುವುದಿಲ್ಲ

* ಮಠದ ಸ್ವಾಮೀಜಿಗಳನ್ನೂ ಬಿಟ್ಟಿಲ್ಲ. ಪರ್ಯಾಯ ಒಕ್ಕಲಿಗ ಮಠ ಸೃಷ್ಟಿಸಿದ ಕುಮಾರಸ್ವಾಮಿ, ತಮ್ಮ ಮಾತಿಗೆ ಎಂದಿಗೂ ಬದ್ಧರಾಗಿರುವುದಿಲ್ಲ. ಹೀಗಾಗಿ ಅವರ  ಮಾತಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಈಗ ದಿನಬೆಳಗಾದರೆ ಮಠಕ್ಕೆ ಹೋಗಿ ಭೇಟಿ ಮಾಡುತ್ತಾರೆ

* ನಾವು (ಕಾಂಗ್ರೆಸ್) ಎಂಟು ಮಂದಿ ಒಕ್ಕಲಿಗರಿಗೆ ಲೋಕಸಭಾ ಟಿಕೆಟ್ ನೀಡಿದ್ದೇವೆ. ನಾನು ಡಿಸಿಎಂ ಮತ್ತು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾವೆಲ್ಲಾ ಸಮಾಜದ ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ತಯಾರಿದ್ದೇವೆ. ಭವಿಷ್ಯದ ಬಗೆಗಿನ ಮಾತುಗಳು ನಮಗೆ ಏಕೆ? ನಮ್ಮ ಸಮಾಜದವರು ದಡ್ಡರಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT