ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು?

ವರವಾಗಬಲ್ಲದೇ ಮಹಿಳಾ ಮೀಸಲಾತಿ ಮಸೂದೆ
Published 11 ಏಪ್ರಿಲ್ 2024, 0:30 IST
Last Updated 11 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆಕಾಶದ ಅರ್ಧ ನಕ್ಷತ್ರಗಳು ನಾವು; ಈ ಭೂಮಿಯಲರ್ಧ ಕೇಳುವೆವು’ ಎಂಬುದು ಮಹಿಳಾ ಚಳವಳಿಯ ಸತ್ವಪೂರ್ಣ ಘೋಷಣೆಗಳಲ್ಲೊಂದು. ಭೂಮಿಯಲರ್ಧ ಪಾಲು ಹೋಗಲಿ, ಪ್ರಜಾತಂತ್ರದ ಆಧಾರ ಸ್ತಂಭಗಳಾದ ಲೋಕಸಭೆ–ವಿಧಾನಸಭೆಗಳಲ್ಲಿ ಅರ್ಧವಲ್ಲ; ಶೇ 33ರಷ್ಟು ಪ್ರಾತಿನಿಧ್ಯವೂ ಸಿಕ್ಕಿಲ್ಲ. ಅದಕ್ಕಾಗಿ ದಶಕಗಳ ಕಾಲ ಹೋರಾಟ ನಡೆದಿದೆ. ಆದರೆ ಈ ಹೋರಾಟಕ್ಕೆ ಈ ವರೆಗೂ ನ್ಯಾಯ ದಕ್ಕಿಸಿಕೊಳ್ಳಲು ಪುರುಷ ಮೇಲಾಧಿಪತ್ಯದ ರಾಜಕಾರಣ ಅವಕಾಶ ಕೊಟ್ಟಿಲ್ಲ.

ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಮಹಿಳೆಯರಿಗೆ ಸಿಕ್ಕಿರುವ ರಾಜಕೀಯ ಪ್ರಾತಿನಿಧ್ಯವೆಷ್ಟು ಎಂಬ ಲೆಕ್ಕಾಚಾರ ಹಾಕಲು ಹೊರಟರೆ ಬೆರಳೆಣಿಕೆಯಲ್ಲೇ ಶುರುವಾಗುವ ಲೆಕ್ಕ ಅಲ್ಲಿಯೇ ಮುಗಿಯುತ್ತದೆ. 28 ಕ್ಷೇತ್ರಗಳ ಪೈಕಿ ಸಮಬಲದಲ್ಲಿ ಸ್ಪರ್ಧಿಸಬೇಕಾಗಿದ್ದ ಮಹಿಳೆಯರ ಸಂಖ್ಯೆ 8ಕ್ಕೆ ಸೀಮಿತ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸಚಿವರನ್ನೇ ಕಣಕ್ಕೆ ಇಳಿಸಬೇಕು ಎಂಬ ನಿರ್ಣಯಕ್ಕೆ ಬಂದಿದ್ದರಿಂದಾಗಿ, ಸಚಿವರು ತಮ್ಮ ಹೆಣ್ಣುಮಕ್ಕಳನ್ನು ಕಣಕ್ಕೆ ದೂಡಿದರಯ, ಹೀಗಾಗಿ ಇಷ್ಟಾದರೂ ಮಹಿಳೆಯರು ಕಣದಲ್ಲಿ ಇದ್ದಾರೆ. 

ಮಹಿಳೆಯರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳದ್ದು ತಾರತಮ್ಯದ ಧೋರಣೆಯೇ. ಮಹಿಳೆಯರಿಗೇಕೆ ರಾಜಕಾರಣ? ಕುಟುಂಬ, ಅಡುಗೆ ಮನೆ ಚೆನ್ನಾಗಿ ನಿಭಾಯಿಸಿದರೆ ಸಾಕು ಎನ್ನುವ ಮನಃಸ್ಥಿತಿ ಈಗಲೂ ಬದಲಾಗಿಲ್ಲ. (ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸೊಸೆಯ ಎದುರಾಳಿ ಸ್ಪರ್ಧಿ ಗಾಯತ್ರಿ ಸಿದ್ದೇಶ್ವರ ಅವರು ಅಡುಗೆ ಮಾಡಲು ಲಾಯಕ್ಕು ಎಂದಿದ್ದರು).

ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯೊಬ್ಬರು ಮೊದಲ ಬಾರಿಗೆ ಸ್ಪರ್ಧಿಸುವ ಅವಕಾಶ ಪಡೆದದ್ದು 3ನೇ ಲೋಕಸಭಾ ಚುನಾವಣೆಯಲ್ಲಿ. ಅಂದರೆ, 1952ರಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯ ಹತ್ತು ವರ್ಷಗಳ ಬಳಿಕ. 1962ರಲ್ಲಿ ಧಾರವಾಡ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸರೋಜಿನಿ ಮಹಿಷಿ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿ, ರಾಜ್ಯದ ಮೊದಲ ಸಂಸದೆಯಾದರು. 

1962ರಿಂದ 2019ರವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾದ ಸಂಸದೆಯರ ಸಂಖ್ಯೆ 15 ಮಾತ್ರ. 2009, 2014ರಲ್ಲಿ ತಲಾ ಒಬ್ಬರು, 2019ರಲ್ಲಿ ಇಬ್ಬರು ಸಂಸದೆಯರು ಮಾತ್ರ ಆಯ್ಕೆಯಾಗಿದ್ದರು. 2024ರಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು ಎಂಬ ನಿರೀಕ್ಷೆ  ಗರಿಗೆದರಿದೆ.  

ಇಂದಿರಾಗೆ ರಾಜಕೀಯ ಪುನರ್ ಜನ್ಮ

1978ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ಅವರಿಗೆ ಚಿಕ್ಕಮಗಳೂರು ಕ್ಷೇತ್ರ ರಾಜಕೀಯ ಪುನರ್ ಜನ್ಮನೀಡಿತ್ತು. 1999ರಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್ ನಡುವಿನ ಸ್ಪರ್ಧೆಯಲ್ಲಿ ಸೋನಿಯಾ ಗೆದ್ದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಲೀಲಾದೇವಿ ಆರ್. ಪ್ರಸಾದ್ ಅತ್ಯಲ್ಪ ಅಂತರದಿಂದ ಸೋತಿದ್ದರು. 2004ರಲ್ಲಿ ಕನಕಪುರದಿಂದ ಸ್ಪರ್ಧಿಸಿದ್ದ ತೇಜಸ್ವಿನಿ ಶ್ರೀರಮೇಶ್ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದು ದಾಖಲೆಯಾಗಿತ್ತು.

ಮಹಿಳಾ ಮೀಸಲಾತಿ ವರವಾಗುವುದೇ?

ಕರ್ನಾಟಕಕ್ಕೆ ಮಹಿಳಾ ಮೀಸಲಾತಿ ಕಲ್ಪನೆ ಹೊಸದೇನಲ್ಲ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡುವ ಕರ್ನಾಟಕ ಪಂಚಾಯತ್‌ ರಾಜ್ (ತಿದ್ದುಪಡಿ) ಕಾಯ್ದೆ 2010ರಲ್ಲಿಯೇ ಜಾರಿಗೆ ಬಂದಿದೆ. ಆದರೆ, ಮಾದರಿ ಹಾಕಿಕೊಟ್ಟ ಬಳಿಕವೂ ವಿಧಾನಸಭೆಯಲ್ಲಿನ ಮಹಿಳೆಯರ ಪ್ರಾತಿನಿಧ್ಯ ಶೇ 33 ಅನ್ನೂ ತಲುಪಲಿಲ್ಲ.

‘ಮಹಿಳೆಯರಿಗೆ ಟಿಕೆಟ್ ನೀಡುವಾಗ ಗೆಲ್ಲುವ ಅಭ್ಯರ್ಥಿಗೇ ಮಣೆ ಹಾಕುವುದು ವಾಡಿಕೆ. ಜತೆಗೆ ಕುಟುಂಬದ ರಾಜಕೀಯ ಹಿನ್ನೆಲೆ, ಹಣಬಲ, ಜಾತಿಯ ಪ್ರಭಾವವನ್ನೂ ಲೆಕ್ಕ ಹಾಕಲಾಗುತ್ತದೆ. ಸ್ವತಂತ್ರ ವ್ಯಕ್ತಿತ್ವ, ಹಣಬಲ, ರಾಜಕೀಯ ಹಿನ್ನೆಲೆ ಇಲ್ಲದ ಮಹಿಳೆಯರಿಗೆ ಸುಲಭವಾಗಿ ಟಿಕೆಟ್ ಸಿಗುವುದಿಲ್ಲ. ಜನಮನ್ನಣೆಗಿಂತ ಪಕ್ಷ, ನಾಯಕರ ಮನ್ನಣೆಯೇ ಇಲ್ಲಿ ನಿರ್ಣಾಯಕ’ ಎಂಬುದು ವಿವಿಧ ಪಕ್ಷಗಳ ಮಹಿಳಾ ರಾಜಕಾರಣಿಗಳ ಒಕ್ಕೊರಲ ಅಭಿಪ್ರಾಯ.

ಮಹಿಳಾ ಮೀಸಲಾತಿ ಸಕಾಲಕ್ಕೆ ಜಾರಿಯಾದಲ್ಲಿ ಚುನಾವಣಾ ಕಣದಲ್ಲಿ ಮಹಿಳೆಗೆ ಮತ್ತೊಬ್ಬ ಮಹಿಳೆಯೇ ಎದುರಾಳಿಯಾಗುತ್ತಾರೆ. ಅದಕ್ಕೂ 2029ವರೆಗೆ ಕಾಯಬೇಕು. 

ಭವ್ಯಾ ನರಸಿಂಹಮೂರ್ತಿ
ಭವ್ಯಾ ನರಸಿಂಹಮೂರ್ತಿ
ಲೀಲಾದೇವಿ ಆರ್. ಪ್ರಸಾದ್
ಲೀಲಾದೇವಿ ಆರ್. ಪ್ರಸಾದ್
ಭಾರತಿ ಶೆಟ್ಟಿ
ಭಾರತಿ ಶೆಟ್ಟಿ
ಮಹಿಳಾ ಮೀಸಲಾತಿ ಜಾರಿಯಾದರೆ ಪಕ್ಷ ಯಾವುದೇ ಇರಲಿ ಒಟ್ಟಾರೆ ಅಲ್ಲಿ ಮಹಿಳೆಯರೇ ಆಯ್ಕೆಯಾಗುತ್ತಾರೆ ಎಂಬುದು ಗಮನೀಯ. ಆ ಕಾಲ ದೂರವಿಲ್ಲ
– ಭವ್ಯಾ ನರಸಿಂಹಮೂರ್ತಿ, ಕಾಂಗ್ರೆಸ್ ಯುವ ನಾಯಕಿ
ರಾಜಕೀಯ ಸ್ಥಾನಮಾನಗಳನ್ನು ನಿರ್ಣಯಿಸುವ ಸಮಿತಿಗಳಲ್ಲಿ ಮಹಿಳೆ ಎಲ್ಲಿಯವರೆಗೆ ಧ್ವನಿ ಎತ್ತುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯರಿಗೆ ಯಾವ ರಾಜಕೀಯ ಸೌಲಭ್ಯವೂ ಸಿಗುವುದಿಲ್ಲ
–ಲೀಲಾದೇವಿ ಆರ್. ಪ್ರಸಾದ್, ಮಾಜಿ ಅಧ್ಯಕ್ಷೆ ಜೆಡಿಎಸ್ ಮಹಿಳಾ ಘಟಕ
ಮಹಿಳೆಯರು ಹೆಚ್ಚಿರುವ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಬೇಕಿತ್ತು. ಬಿಜೆಪಿ ಆಡಳಿತಾವಧಿಯಲ್ಲಿ ಅಂಗೀಕೃತವಾಗಿರುವ ಮಹಿಳಾ ಮೀಸಲಾತಿ ಮಸೂದೆಯು ಈ ಆಶಯ ಈಡೇರಿಸುವ ವಿಶ್ವಾಸವಿದೆ
–ಭಾರತಿ ಶೆಟ್ಟಿ, ಸಹ ಸಂಚಾಲಕಿ ಬಿಜೆಪಿ ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT