ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

Published 10 ಮೇ 2024, 16:09 IST
Last Updated 10 ಮೇ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದರೂ, ಜೂನ್‌ 6ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಹೀಗಾಗಿ ರಾಜ್ಯ ಸರ್ಕಾರವು ಪ್ರಮುಖ ನಿರ್ಧಾರ ಕೈಗೊಳ್ಳಲು ಮತ್ತು ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಒಂದು ತಿಂಗಳು ಕಾಯಲೇಬೇಕಿದೆ.

ಮಾರ್ಚ್‌ 16ರಿಂದ ದೇಶದಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಏಳು ಹಂತಗಳ ಮತದಾನದ ಬಳಿಕ ಜೂನ್‌ 4ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿರುವ ಘೋಷಣೆಯನ್ನು ಜೂನ್‌ 6ರಂದು ಕೇಂದ್ರ ಚುನಾವಣಾ ಆಯೋಗ ಹೊರಡಿಸಲಿದೆ. ಅಲ್ಲಿಯವರೆಗೂ ನೀತಿಸಂಹಿತೆ ಜಾರಿಯಲ್ಲಿ ಇರಲಿದೆ.

ರಾಜ್ಯದಲ್ಲಿ ಏಪ್ರಿಲ್‌ 26 ಮತ್ತು ಮೇ 7ರಂದು ತಲಾ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. ಮತ ಎಣಿಕೆಗೆ ಜೂನ್‌ 4ರವರೆಗೂ ಕಾಯಬೇಕಿದೆ. ಮತದಾನ ಮತ್ತು ಎಣಿಕೆ ಮಧ್ಯೆ ತಿಂಗಳ ಅಂತರವಿದ್ದು, ಈ ಅವಧಿಗೆ ಚುನಾವಣಾ ನೀತಿಸಂಹಿತೆ ಸಡಿಲಿಕೆ ಮಾಡಬಹುದು ಎಂಬ ನಿರೀಕ್ಷೆ ರಾಜ್ಯ ಸರ್ಕಾರದಲ್ಲಿ ಇತ್ತು.

ರಾಜ್ಯದಲ್ಲಿ 223 ತಾಲ್ಲೂಕುಗಳಲ್ಲಿ ತೀವ್ರವಾದ ಬರಗಾಲ ಇದೆ. ಮುಂಗಾರು ಮಳೆಗಾಲವೂ ಸಮೀಪಿಸುತ್ತಿದೆ. ಆಯೋಗವು ನೀತಿಸಂಹಿತೆ ಸಡಿಲಿಕೆ ಮಾಡಿದರೆ ಬರ ನಿರ್ವಹಣೆ, ವಿಪತ್ತು ನಿರ್ವಹಣೆಗೆ ಸಿದ್ಧತೆ ಜತೆಗೆ ಅಭಿವೃದ್ಧಿ ಕಾಮಗಾರಿ ಹಾಗೂ ನೀತಿ ನಿರೂಪಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರ ಯೋಚಿಸಿತ್ತು ಎಂದು ಮೂಲಗಳು ತಿಳಿಸಿವೆ.

ಮೇಲುಸ್ತುವಾರಿ ಸಮಿತಿಗೇ ಅಧಿಕಾರ: ‘ಚುನಾವಣಾ ನೀತಿಸಂಹಿತೆಯನ್ನು ಪೂರ್ಣ ಪ್ರಮಾಣದಲ್ಲಿ ಸಡಿಲಿಕೆ ಮಾಡುವಂತೆ ಯಾವುದೇ ಮನವಿ ಬಂದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ದೇಶದ ಇತರೆಡೆ ಇರುವಂತೆ ರಾಜ್ಯದಲ್ಲೂ ಜೂನ್‌ 6ರವರೆಗೆ ನೀತಿಸಂಹಿತೆ ಜಾರಿಯಲ್ಲಿ ಇರುತ್ತದೆ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.

‘ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಮೇಲುಸ್ತುವಾರಿ ಸಮಿತಿ ನಿಯಮಿತವಾಗಿ ಸಭೆ ನಡೆಸಿ, ಪರಿಶೀಲಿಸುತ್ತಿದೆ. ಸಮಿತಿ ಕಳುಹಿಸುವ ಪ್ರಸ್ತಾವಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸುತ್ತೇವೆ. ಆಯೋಗದ ಅನುಮತಿ ದೊರೆತ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT