ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ನಿಮಿತ್ತ, ಮೋದಿಯೇ ಅಭ್ಯರ್ಥಿ: ಕಾಗೇರಿ

Published 7 ಏಪ್ರಿಲ್ 2024, 15:40 IST
Last Updated 7 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭಾ ಚುನಾವಣೆಯು ಸೈದ್ಧಾಂತಿಕ ಹೋರಾಟವಾಗಿದೆ. ಕ್ಷೇತ್ರಗಳಲ್ಲಿ ನಾವು ನಿಮಿತ್ತ ಮಾತ್ರ. ಮೋದಿಯವರೇ ಅಭ್ಯರ್ಥಿ’ ಎಂದು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರತಿ ಕ್ಷೇತ್ರಕ್ಕೂ ಒಬ್ಬ ಅಭ್ಯರ್ಥಿ ಇರಬೇಕು. ವಿವಿಧ ಮಾನದಂಡ ಅನುಸರಿಸಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಆದರೆ, ಮೋದಿಯವರೇ ನಿಜವಾದ ಅಭ್ಯರ್ಥಿ. ನಾವು ಅವರನ್ನು ಪ್ರತಿನಿಧಿಸುತ್ತೇವೆ’ ಎಂದು ಹೇಳಿದರು.

‘ಹತ್ತು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದೆ.  ಅಸಾಧ್ಯ ಎನಿಸುವ ಕೆಲಸಗಳನ್ನೂ ಮಾಡಿದೆ. ಒಂದೆಡೆ ಮೋದಿಯವರು ನುಡಿದಂತೆ ನಡೆದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸುಳ್ಳಿನ ಭರವಸೆಗಳನ್ನು ನೀಡುವ ಮೂಲಕ ಜನರನ್ನು ಮುಳ್ಳಿನ ಹಾದಿಯಲ್ಲಿ ನಡೆಸುತ್ತಿದ್ದಾರೆ’ ಎಂದು ಕಾಗೇರಿ ಹೇಳಿದರು.

ಉಜ್ವಲಾ, ಜನೌಷಧ, ಸುಕನ್ಯಾ ಸಮೃದ್ಧಿ, ಮುದ್ರಾದಂತಹ ಪ್ರಮುಖ ಯೋಜನೆಗಳು ಇದಕ್ಕೆ ಸಾಕ್ಷಿ. ಜಿ 20 ಸಮಾವೇಶಗಳು ದೇಶದಲ್ಲಿ ನಡೆದದ್ದು ಇದೇ ಮೊದಲು. ಮೋದಿಯವರ ಆಡಳಿತ ಜನರನ್ನು ಸಬಲೀಕರಿಸುವಂತಹದ್ದು. ಮಹಾತ್ಮಗಾಂಧಿಯವರ ಅಂತ್ಯೋದಯ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ರಾಜ್ಯದ ಎಲ್ಲ 28 ಕ್ಷೇತ್ರಗಳು ಬಿಜೆಪಿಗೆ ಸುರಕ್ಷಿತ. ಒಟ್ಟಾರೆ 400ಕ್ಕೂ ಮೀರಿ ಕ್ಷೇತ್ರಗಳನ್ನು ಗೆದ್ದು ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂದು ಕಾಗೇರಿ ತಿಳಿಸಿದರು.

ಬಿಜೆಪಿ ರಾಜ್ಯ ವಕ್ತಾರರಾದ ಪ್ರಕಾಶ್‌ ಶೇಷರಾಘವಾಚಾರ್‌, ಹರಿಪ್ರಕಾಶ್‌ ಕೋಣೆಮನೆ, ಮಾಧ್ಯಮ ಪ್ರಕೋಷ್ಠ ಸಂಚಾಲಕ ಕರುಣಾಕರ ಖಾಸಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT