ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಕ್ಷೇತ್ರ: 5ನೇ ತರಗತಿಯಿಂದ ಎಂ.ಟೆಕ್. ವಿದ್ಯಾರ್ಹತೆಯವರಿಂದ ಸ್ಪರ್ಧೆ

ಅಂಬೇಡ್ಕರ್‌ ಕಿರಿಯ, ರಾಜು ಹಿರಿಯ
Published 23 ಏಪ್ರಿಲ್ 2024, 4:38 IST
Last Updated 23 ಏಪ್ರಿಲ್ 2024, 4:38 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಕೂಲಿ ಮಾಡುವವರು, ಎಂಜಿನಿಯರ್‌ಗಳು, ವಿಜ್ಞಾನಿ, ಸಾಮಾಜಿಕ ಕಾರ್ಯಕರ್ತರು, ವ್ಯಾಪಾರಿಗಳು, ಉದ್ಯಮಿಗಳು ಹಾಗೂ  ರಾಜಪರಿವಾರಕ್ಕೆ ಸೇರಿದ ವ್ಯಕ್ತಿ ಅಭ್ಯರ್ಥಿಗಳಾಗಿದ್ದಾರೆ. ಜನತಂತ್ರದ ಹಬ್ಬದಲ್ಲಿ ನಾವೂ ಸ್ಪರ್ಧಿಸಬಹುದು ಎಂಬುದನ್ನು ಶ್ರೀಸಾಮಾನ್ಯರು ನಿರೂಪಿಸಿದ್ದಾರೆ.

ಅಭ್ಯರ್ಥಿಗಳು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದಾರೆ. ವಯಸ್ಸು, ವಿದ್ಯಾರ್ಹತೆ, ಆದಾಯದ ಮೂಲ, ವೃತ್ತಿ ಮೊದಲಾದವುಗಳನ್ನು ತಿಳಿಸಿದ್ದಾರೆ.

ಆ ಪ್ರಕಾರ ನೋಡಿದರೆ, ಕಣದಲ್ಲಿರುವವರಲ್ಲಿ ಹಿರಿಯರೆಂದರೆ ಪಕ್ಷೇತರ ಅಭ್ಯರ್ಥಿ ರಾಜು. ಅವರಿಗೆ 70 ವರ್ಷ ವಯಸ್ಸು. ಅತ್ಯಂತ ಕಿರಿಯ ಎಂದರೆ, ಅಂಬೇಡ್ಕರ್ ಸಿ.ಜೆ., 30 ವರ್ಷ ವಯಸ್ಸಿನ ಅವರು ಪಕ್ಷೇತರಾಗಿ ಸ್ಪರ್ಧಿಸಿದ್ದಾರೆ. ಕಣದಲ್ಲಿರುವ ಎಲ್ಲರೂ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನ ಎಂ.ಲಕ್ಷ್ಮಣ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನುಭವ ಹೊಂದಿದ್ದಾರೆ. ಕ್ಷೇತ್ರವು ರಾಜವಂಶಸ್ಥ ಹಾಗೂ ಸಾಮಾನ್ಯರ ನಡುವಿನ ಹೋರಾಟದಿಂದಾಗಿಯೇ ದೇಶದ ಗಮನವನ್ನೂ ಸೆಳೆದಿದೆ.

ರಾಜಪರಿವಾರಕ್ಕೆ ಸೇರಿದ ಯದುವೀರ್‌ ವೃತ್ತಿ ಕಾಲಂನಲ್ಲಿ – ಭೇರುಂಡ ಮೀಡಿಯಾ ಪ್ರೈವೇಟ್ ಲಿಮಿಟೆಡ್, ವೆಂಕಟೇಶ್ವರ ರಿಯಲ್‌ ಎಸ್ಟೇಟ್‌ ಎಂಟರ್‌ಪ್ರೈಸಸ್‌ ಪ್ರೈ.ಲಿ., ಒಡೆಯರ್‌ ಇನ್‌ವೆಸ್ಟ್‌ವೆಂಟ್ ಪ್ರೈ.ಲಿ., ಮಹಿಷೂರು ರಾಯಲ್‌ ಹೆರಿಟೇಜ್ ಹೋಟೆಲ್ ಪ್ಯಾಲೇಸಸ್ ಅಂಡ್ ಸ್ಪಾಸ್ ಪ್ರೈ.ಲಿ., ಲಿಟಲ್‌ ಬಂಟಿಂಗ್ ಪ್ರೈ.ಲಿ. ಹಾಗೂ ಭೇರುಂಡ ಫೌಂಡೇಷನ್‌ಗೆ ಕಂಪನಿ ನಿರ್ದೇಶಕ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ದೇಶಕರ ಸಂಭಾವನೆ, ಲಾಭಾಂಶ ಹಾಗೂ ಬಡ್ಡಿಯಿಂದ ಆದಾಯ– ತಮ್ಮ ಆದಾಯದ ಮೂಲ ಎಂದು ಹೇಳಿಕೊಂಡಿದ್ದಾರೆ.

ಪತ್ರಕರ್ತ, ಸಮಾಜ ಸೇವಕ: ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ವ್ಯಾಪಾರ (ಬ್ಯುಸಿನೆಸ್) ನನ್ನ ಉದ್ಯೋಗ ಎಂದು ತಿಳಿಸಿದ್ದಾರೆ. ಅದೇ ತಮ್ಮ ಆದಾಯದ ಮೂಲ ಎಂದೂ ಹೇಳಿಕೊಂಡಿದ್ದಾರೆ.

ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎನ್.ಅಂಬರೀಷ್ ತಾವು ಪತ್ರಕರ್ತ ಹಾಗೂ ಸ್ವಯಂ ಸಮಾಜಸೇವಕ ಎಂದು ತಿಳಿಸಿದ್ದಾರೆ. ಆ ವೃತ್ತಿಯೇ ತಮ್ಮ ಆದಾಯದ ಮೂಲ ಎಂದು ಪ್ರಮಾಣಪತ್ರ ನೀಡಿದ್ದಾರೆ. ಅವರು ಚಾಮರಾಜನಗರ ಜಿಲ್ಲೆ ದೊಡ್ಡರಾಯಪೇಟೆಯವರು.

ಕರುನಾಡು ಪಾರ್ಟಿಯ ಎಚ್.ಕೆ.ಕೃಷ್ಣ ನಿರ್ದಿಷ್ಟ ವೃತ್ತಿಯನ್ನು ನಮೂದಿಸಿಲ್ಲ. 

ಕರ್ನಾಟಕ ರಾಷ್ಟ್ರ ಸಮಿತಿಯ ಎಂ.ಎಸ್. ಪ್ರವೀಣ್ ಸ್ವಂತ ಸಂಸ್ಥೆ ಇದೆ ಹಾಗೂ ಕೃಷಿ ತಮ್ಮ ಆದಾಯದ ಮೂಲ ಎಂದು ಹೇಳಿಕೊಂಡಿದ್ದಾರೆ. ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ಅಭ್ಯರ್ಥಿ ಎ.ಜಿ.ರಾಮಚಂದ್ರ ರಾವ್ ಸ್ವಯಂ ವ್ಯಾಪಾರವೇ ತಮ್ಮ ಆದಾಯದ ಮೂಲ ಎಂದು ತಿಳಿಸಿದ್ದಾರೆ.

ಎಸ್‌ಯುಸಿಐಸಿ ಪಕ್ಷದ ಸುನಿಲ್ ಟಿ.ಆರ್. ಸ್ವಯಂ ಉದ್ಯೋಗ ಮಾಡುತ್ತಿರುವುದಾಗಿ ಅದೇ ಆದಾಯದ ಮೂಲವೂ ಆಗಿದೆ ಎಂದು ತಿಳಿಸಿದ್ದಾರೆ. ಸೋಶಿಯಲಿಸ್ಟ್ ಪಾರ್ಟಿಯ ಹರೀಶ್ ಎನ್. ಉದ್ಯಮಿ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ ಎಂದು ಪ್ರಮಾಣಪತ್ರ ನೀಡಿದ್ದಾರೆ.

ಪಕ್ಷೇತರಾಗಿ ಕಣದಲ್ಲಿರುವ ಅಂಬೇಡ್ಕರ್ ಸಿ.ಜೆ. ‘ಕೂಲಿ ಹಾಗೂ ವ್ಯಾಪಾರ, ಸಾಮಾಜಿಕ ಕೆಲಸ ಕಾರ್ಯ’ವೇ ತಮ್ಮ ವೃತ್ತಿ ಎಂದು ನಮೂದಿಸಿದ್ದಾರೆ. ಅದೇ ಅವರ ಆದಾಯದ ಮೂಲವೂ ಹೌದು.

ಪಕ್ಷೇತರ ಅಭ್ಯರ್ಥಿ ಕ್ರಿಸ್ಟೋಫರ್ ರಾಜಕುಮಾರ್ ವ್ಯಾಪಾರದಲ್ಲಿ ತೊಡಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಪಿ.ಕೆ.ದರ್ಶನ್‌ ಶೌರಿ ಕೊಡಗು ಜಿಲ್ಲೆಯವರು. ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವುದಾಗಿ ತಿಳಿಸಿದ್ದಾರೆ.

ಪಕ್ಷೇತರ ರಾಜು ಸಮಾಜಸೇವೆಯೇ ತಮ್ಮ ಉದ್ಯೋಗ ಎಂದು ಹೇಳಿದ್ದಾರೆ. ಆದಾಯದ ಮೂಲವಿಲ್ಲ ಎಂದು ತಿಳಿಸಿದ್ದಾರೆ. ರಾಮ ಮೂರ್ತಿ ಎಂ. ಕೂಲಿ ತಮ್ಮ ವೃತ್ತಿ ಎಂದು ಮಾಹಿತಿ ನೀಡಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದ ಅಭ್ಯರ್ಥಿ ಎ.ಎಸ್. ಸತೀಶ್ ವ್ಯಾಪಾರ ಮಾಡುತ್ತಿದ್ದಾರೆ.

ಕಣದಲ್ಲಿ ವಿಧಿವಿಜ್ಞಾನ ವಿಜ್ಞಾನಿ

ಸಮಾಜವಾದಿ ಜನತಾ ಪಾರ್ಟಿಯಿಂದ ಕಣದಲ್ಲಿರುವ ಎಚ್‌.ಎಂ.ನಂಜುಂಡಸ್ವಾಮಿ ಬೆಂಗಳೂರಿನ ಸಹಕಾರ ನಗರದ ನಿವಾಸಿಯಾಗಿದ್ದಾರೆ. ಅವರು ಸರ್ಕಾರದಿಂದ ಸಿಗುವ ಪಿಂಚಣಿಯೇ ನನ್ನ ಆದಾಯ ಎಂದು ಅವರು ತಿಳಿಸಿದ್ದಾರೆ. ‘ನಾನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ 10 ವರ್ಷಗಳವರೆಗೆ ಕಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದೆ. ಕಲಬುರಗಿಯ ಪ್ರಾದೇಶಿಕ ಪ್ರಯೋಗಾಲಯದಲ್ಲಿ ಒಂದು ವರ್ಷ ಸಹಾಯಕ ರಾಸಾಯನಿಕ ವಿಶ್ಲೇಷಕರಾಗಿ ಕೆಲಸ ಮಾಡಿದ್ದೆ. ಬಳಿಕ ನನ್ನನ್ನು ಮರೆವಿನ ಸಮಸ್ಯೆಯ ಕುರಿತು ಹೆಚ್ಚಿನ ವಿದ್ಯಾಭ್ಯಾಸಕ್ಕೆ (ಪೋಸ್ಟ್‌ ಡಾಕ್ಟರೇಟ್) ಸರ್ಕಾರದಿಂದ ದಕ್ಷಿಣ ಆಫ್ರಿಕಾಕ್ಕೆ  ಕಳುಹಿಸಲಾಗಿತ್ತು. 2012ರಿಂದ ಮಂಗಳೂರಿನಲ್ಲಿ ಉಡುಪಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಿಗೆ ರಾಸಾಯನಿಕ ಪರೀಕ್ಷಕನಾಗಿ 2022ರವರೆಗೆ ಕೆಲಸ ಮಾಡಿದ್ದೆ. ಒಟ್ಟು 22 ವರ್ಷ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಹಲವು ಪ್ರಕರಣಗಳಲ್ಲಿ ಬಹಳಷ್ಟು ನ್ಯಾಯಾಲಯಗಳಿಗೆಲ್ಲ ಓಡಾಡುತ್ತಿದ್ದೆ. ಪ್ರಯೋಗಾಲಯದಿಂದ ಹೊರಗೆ ಬಂದು ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂದು 2022ರಲ್ಲೇ ವಿಆರ್‌ಎಸ್ ಪಡೆದುಕೊಂಡಿದ್ದೆ. ಈಗ ಸ್ಪರ್ಧಿಸಿದ್ದೇನೆ’ ಎಂದು ಮಾಹಿತಿ ನೀಡಿದರು. ‘ನಂಜನಗೂಡು ತಾಲ್ಲೂಕು ಹೆಮ್ಮರಗಾಲದವರಾದ ಅವರು ಕಾರ್ಯನಿಮಿತ್ತ ಬೆಂಗಳೂರಿನ ವಾಸಿಯಾಗಿದ್ದಾರೆ. ಸ್ನೇಹಿತರು ದೂರವಾಣಿ ಸಂಪರ್ಕಗಳ ಮೂಲಕ ಪ್ರಚಾರ ಮಾಡುತ್ತಿದ್ದೇನೆ. ವಿವಿಧೆಡೆಗೆ ಭೇಟಿ ನೀಡಿ ಮತ ಯಾಚಿಸುತ್ತಿದ್ದೇನೆ. ಅಬ್ಬರದ ಪ್ರಚಾರಕ್ಕೆ ನನ್ನಲ್ಲಿ ಸಂಪನ್ಮೂಲ ಇಲ್ಲ’ ಎಂದು ತಿಳಿಸಿದರು.

ಏಕೈಕ ಮಹಿಳಾ ಅಭ್ಯರ್ಥಿ ಗೃಹಿಣಿ

ಕ್ಷೇತ್ರದಲ್ಲಿ ಕಣದಲ್ಲಿರುವ ಏಕೈಕ ಮಹಿಳಾ ಅಭ್ಯರ್ಥಿ ಉತ್ತಮ ಪ್ರಜಾಕೀಯ ಪಕ್ಷದ ಲೀಲಾವತಿ ಜೆ.ಎಸ್. ಗೃಹಿಣಿಯಾಗಿದ್ದು ಮನೆಯ ಬಾಡಿಗೆ ಆದಾಯದ ಮೂಲ ಎಂದು ಮಾಹಿತಿ ನೀಡಿದ್ದಾರೆ. ಅವರ ಪತಿ ಶಿವಕುಮಾರಯ್ಯ ನಿವೃತ್ತ ಎಸ್ಪಿಯಾಗಿದ್ದಾರೆ.

ಯಡೂರಪ್ಪ ರಂಗಸ್ವಾಮಿ

ನಿವೃತ್ತ ನೌಕರರು ಪಕ್ಷೇತರರಾಗಿ ಕಣದಲ್ಲಿರುವ ಪಿ.ಎಸ್.ಯಡೂರಪ್ಪ ವ್ಯವಸಾಯ ಹಾಗೂ ಸಾಮಾಜಿಕ ಕೆಲಸ ಕಾರ್ಯದಲ್ಲಿ ತೊಡಗಿದ್ದೇನೆ ಎಂದು ಹೇಳಿದ್ದಾರೆ. ಕೃಷಿಯೊಂದಿಗೆ ನಿವೃತ್ತಿ ಪಿಂಚಣಿಯೂ ಆದಾಯದ ಮೂಲ ಎಂದು ಮಾಹಿತಿ ನೀಡಿದ್ದಾರೆ. ಅವರು ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ರಂಗಸ್ವಾಮಿ ಎಂ. ಕೆಎಸ್‌ಆರ್‌ಟಿಸಿಯ ನಿವೃತ್ತ ಕಂಡಕ್ಟರ್‌ ಆಗಿದ್ದಾರೆ. ತಿಂಗಳಿಗೆ ಬರುತ್ತಿರುವ ₹ 2407 ಆದಾಯದ ಮೂಲ ಎಂದು ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT