ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಚಿತ್ರದುರ್ಗ: ಡಬಲ್‌ ಬ್ಯಾಲೆಟ್‌ ಮತಯಂತ್ರಕ್ಕೆ ಸಿದ್ಧತೆ

ಕಣದಲ್ಲಿ ಉಳಿದ ಹೆಚ್ಚು ಅಭ್ಯರ್ಥಿಗಳು l 1957ರಲ್ಲಿ ಇಬ್ಬರೇ ಉಮೇದುವಾರರು
Published 12 ಏಪ್ರಿಲ್ 2024, 6:49 IST
Last Updated 12 ಏಪ್ರಿಲ್ 2024, 6:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ (ಮೀಸಲು)ಕ್ಕೆ ಆಯ್ಕೆ ಬಯಸಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಅಖಾಡದಲ್ಲಿ 20 ಅಭ್ಯರ್ಥಿಗಳು ಉಳಿದಿರುವುದರಿಂದ ಡಬಲ್‌ ಬ್ಯಾಲೆಟ್‌ ಮತಯಂತ್ರ ಬಳಕೆಗೆ ಸಿದ್ಧತೆ ನಡೆದಿದೆ.

1952ರಿಂದ 2019ರವರೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ 17 ಚುನಾವಣೆಗಳನ್ನು ಎದುರಿಸಿದೆ. 2019ರಲ್ಲಿ 19 ಹಾಗೂ 1996ರಲ್ಲಿ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಕ್ರಮಬದ್ಧವಾಗಿದ್ದ 24 ನಾಮಪತ್ರಗಳ ಪೈಕಿ ನಾಲ್ವರು ಉಮೇದುವಾರಿಕೆ ಹಿಂಪಡೆದ ಕಾರಣ 20 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

1952ರಲ್ಲಿ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಸೇರಿ ಮೂವರು ಹುರಿಯಾಳುಗಳು ಕಣದಲ್ಲಿದ್ದರು. 1957ರಲ್ಲಿ ಇಬ್ಬರು ಉಮೇದುವಾರರು ತೀವ್ರ ಪೈಪೋಟಿ ನಡೆಸಿದ್ದರು. 1980ರವರೆಗೆ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದವರ ಸಂಖ್ಯೆ 4 ಮೀರಿರಲಿಲ್ಲ. ಕ್ಷೇತ್ರಕ್ಕೆ ನಡೆದ 12 ಚುನಾವಣೆಗಳಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳ ಸಂಖ್ಯೆ ಒಂದಂಕಿಯನ್ನೂ ದಾಟಿರಲಿಲ್ಲ. ಐದು ಚುನಾವಣೆಗಳಲ್ಲಿ ಕೇವಲ ಮೂವರು ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದರು. 2009ರ ಬಳಿಕ ಅಖಾಡದಲ್ಲಿ ಇರುವ ವರ ಸಂಖ್ಯೆ ಹತ್ತಕ್ಕಿಂತಲೂ ಹೆಚ್ಚು.

ಸಲ್ಲಿಕೆಯಾಗಿದ್ದವು 45 ನಾಮಪತ್ರ:

1996ರಲ್ಲಿ ನಡೆದ ಚುನಾವಣೆಯಲ್ಲಿ 45 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇಷ್ಟು ಅಭ್ಯರ್ಥಿಗಳು ಈವರೆಗಿನ ಯಾವುದೇ ಚುನಾವಣೆಯಲ್ಲಿ ಕಣಕ್ಕೆ ಇಳಿದಿಲ್ಲ. ಈ ಪೈಕಿ ಇಬ್ಬರ ನಾಮಪತ್ರ ತಿರಸ್ಕೃತಗೊಂಡು, 25 ಜನರು ಉಮೇದುವಾರಿಕೆ ಹಿಂಪಡೆದಿದ್ದರು. 18 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು.

ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದವರಲ್ಲಿ ಅತಿ ಹೆಚ್ಚು ಜನರು ಕಣದಿಂದ ಹಿಂದೆ ಸರಿದಿದ್ದಾರೆ. 1971ರಲ್ಲಿ 10 ಅಭ್ಯರ್ಥಿಗಳಲ್ಲಿ ಏಳು ಉಮೇದುವಾರರು ನಾಮಪತ್ರ ಹಿಂಪಡೆ ದಿದ್ದರು. 2009 ಹಾಗೂ 2014ರಲ್ಲಿ ಕಣಕ್ಕೆ ಇಳಿದಿದ್ದ 19 ಜನರಲ್ಲಿ ಐವರು ನಾಮಪತ್ರ ಹಿಂಪಡೆದಿದ್ದರು. 2019ರಲ್ಲಿ 24 ಅಭ್ಯರ್ಥಿಗಳಲ್ಲಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡು, ನಾಲ್ವರು ಕಣದಿಂದ ಹಿಂದೆ ಸರಿದಿದ್ದರು. 2004ರಲ್ಲಿ ಒಬ್ಬರು ಮಾತ್ರ ಉಮೇದುವಾರಿಕೆ ವಾಪಾಸ್‌ ಪಡೆದಿದ್ದರು.

ಠೇವಣಿ ಉಳಿಸಿಕೊಳ್ಳದ ಪಕ್ಷೇತರರು:

ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅ‌ಭ್ಯರ್ಥಿಗಳ ನಡುವೆಯೇ ಹಣಾಹಣಿ ನಡೆದಿದೆ. ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ ಬಹುತೇಕರು ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಚಲಾವಣೆಯಾದ ಮತಗಳಲ್ಲಿ 6ನೇ ಒಂದು ಭಾಗದಷ್ಟು ಮತ ಪಡೆಯಲು ಸಾಧ್ಯವಾಗದೇ ಇದ್ದವರ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಳ್ಳುತ್ತದೆ. 1952 ಹಾಗೂ 1957ರಲ್ಲಿ ಸ್ಪರ್ಧಿಸಿದ ಎಲ್ಲರಿಗೂ ಠೇವಣಿ ಸಿಕ್ಕಿದೆ. 1971, 1977, 1980, 1999ರಲ್ಲಿ ತಲಾ ಒಬ್ಬರು, 1984ರಲ್ಲಿ 9, 1991ರಲ್ಲಿ ಐವರು, 1996ರಲ್ಲಿ 15 ಹುರಿಯಾಳುಗಳು ಠೇವಣಿ ಕಳೆದುಕೊಂಡಿದ್ದಾರೆ. 1998, 2004ರಲ್ಲಿ ತಲಾ ಮೂವರು, 2009ರಲ್ಲಿ 7, 2014ರಲ್ಲಿ 11 ಹಾಗೂ 2019ರಲ್ಲಿ 17 ಅಭ್ಯರ್ಥಿಗಳ ಠೇವಣಿ ನಷ್ಟವಾಗಿದೆ.

ಡಬಲ್‌ ಬ್ಯಾಲೆಟ್‌ಗೆ ಸಿದ್ಧತೆ

ಏ. 26ರಂದು ನಡೆಯುತ ಮತದಾನಕ್ಕೆ ಡಬಲ್‌ ಬ್ಯಾಲೆಟ್‌ ಬಳಕೆ ಮಾಡಲು ಚುನಾವಣಾಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚುವರಿ ಬ್ಯಾಲೆಟ್‌ ಯೂನಿಟ್‌ಗಳನ್ನು ತರಿಸಿಕೊಳ್ಳಲಾಗಿದೆ.

‘ಕಣದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಉಳಿದರೆ ಮಾತ್ರ ಡಬಲ್‌ ಬ್ಯಾಲೆಟ್‌ ಮತಯಂತ್ರ ಬಳಕೆ ಅನಿವಾರ್ಯವಾಗುತ್ತದೆ. 15 ಅಭ್ಯರ್ಥಿಗಳು ಹಾಗೂ ನೋಟ ಸೇರಿ ಯೂನಿಟ್‌ ಸಿದ್ಧಪಡಿಸಲಾಗುತ್ತದೆ. 20 ಜನರು ಕಣದಲ್ಲಿ ಉಳಿದಿರುವುದರಿಂದ ಡಬಲ್‌ ಬ್ಯಾಲೆಟ್‌ ಬಳಸಲಾಗುತ್ತದೆ. ರಾಯಚೂರಿನಿಂದ 1,000 ಬ್ಯಾಲೆಟ್‌ ಯೂನಿಟ್‌ (ಬಿಯು) ಚಿತ್ರದುರ್ಗಕ್ಕೆ ಬಂದಿವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT