ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಲಖನೌ (ಉತ್ತರಪ್ರದೇಶ)

Published 6 ಏಪ್ರಿಲ್ 2024, 0:16 IST
Last Updated 6 ಏಪ್ರಿಲ್ 2024, 0:16 IST
ಅಕ್ಷರ ಗಾತ್ರ

ರಾಜನಾಥ ಸಿಂಗ್‌ (ಬಿಜೆಪಿ)

ಉತ್ತರಪ್ರದೇಶದ ಲಖನೌ ಲೋಕಸಭಾ ಕ್ಷೇತ್ರವು ಈ ಬಾರಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಪ್ರಬಲ ಅಭ್ಯರ್ಥಿಗಳ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಕಳೆದೆರಡು ಚುನಾವಣೆಯಲ್ಲಿ ಇಲ್ಲಿಂದ ಗೆದ್ದು ಸಂಸತ್‌ ಪ್ರವೇಶಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನೇ ಬಿಜೆಪಿಯು ಮತ್ತೆ ಅಭ್ಯರ್ಥಿಯಾಗಿಸಿದೆ. 2019ರ ಚುನಾವಣೆಯಲ್ಲಿ 3,47,302 ಮತಗಳ ಅಂತರದಿಂದ ಸಿಂಗ್‌ ಅವರು ಪ್ರತಿಸ್ಪರ್ಧಿ ಎಸ್‌ಪಿಯ ಪೂನಂ ಸಿನ್ಹಾ ಅವರನ್ನು ಪರಾಭವಗೊಳಿಸಿದ್ದರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಐದು ಬಾರಿ ಪ್ರತಿನಿಧಿಸಿದ್ದ ಈ ಕ್ಷೇತ್ರವು ದಶಕಗಳಿಂದಲೂ ಬಿಜೆಪಿಯ ತೆಕ್ಕೆಯಲ್ಲಿದೆ. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಸಿಂಗ್‌ ಅವರು ಸ್ಥಳೀಯ ಹಾಗೂ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಪ್ರಭಾವಿಯಾಗಿರುವುದರಿಂದ ಈ ಸಲವೂ ಗೆಲ್ಲುತ್ತಾರೆ ಎಂಬ ವಿಶ್ವಾಸ ಬಿಜೆಪಿಗಿದೆ.

ರವಿದಾಸ್ ಮೆಹರೋತ್ರಾ (ಸಮಾಜವಾದಿ ಪಕ್ಷ)

ಬಿಜೆಪಿಯ ಭದ್ರಕೋಟೆಯಾಗಿರುವ ಲಖನೌ ಕ್ಷೇತ್ರದಲ್ಲಿ ರಾಜನಾಥ ಸಿಂಗ್‌ ಅವರನ್ನು ಮಣಿಸಲು ತಂತ್ರಗಾರಿಕೆ ರೂಪಿಸಿರುವ ಸಮಾಜವಾದಿ ಪಕ್ಷವು, ಶಾಸಕ ರವಿದಾಸ್ ಮೆಹರೋತ್ರಾ ಅವರನ್ನು ಅಖಾಡಕ್ಕಿಳಿಸಿದೆ. ಇವರು ಲಖನೌ ಸೆಂಟ್ರಲ್‌ ಕ್ಷೇತ್ರದ ಶಾಸಕರಾಗಿದ್ದು, ಸ್ಥಳೀಯವಾಗಿಯೂ ಹೆಚ್ಚು ಪ್ರಭಾವ ಹೊಂದಿರುವ ನಾಯಕರಾಗಿದ್ದಾರೆ. ಅಖಿಲೇಶ್‌ ಯಾದವ್‌ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ರವಿದಾಸ್‌ ಅವರು ಸಚಿವರಾಗಿದ್ದರು. ‘ಇಂಡಿಯಾ’ ಒಕ್ಕೂಟದ ಜೊತೆಗೆ ಕೈಜೋಡಿಸಿರುವುದರಿಂದ ಕಾಂಗ್ರೆಸ್‌ ಮತಗಳು ಈ ಬಾರಿ ರವಿದಾಸ್‌ ಅವರಿಗೆ ಸಿಗಲಿದೆ ಎಂಬುದು ಸಮಾಜವಾದಿ ಪಕ್ಷದ ವಿಶ್ವಾಸ. ಈ ಕಾರಣಕ್ಕಾಗಿಯೇ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರನ್ನು ಅದೃಷ್ಟ ಪರೀಕ್ಷೆಗಿಳಿಸಿದೆ. ಕಳೆದ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು 1,80,011 ಮತಗಳನ್ನು ಪಡೆದಿದ್ದರು. ಈ ಮತಗಳು ಈ ಸಲ ಎಸ್‌ಪಿ ಬತ್ತಳಿಕೆಗೆ ಸೇರಲಿವೆ ಎಂಬ ವಿಶ್ವಾಸದಲ್ಲಿದ್ದಾರೆ ಅದರ ನಾಯಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT