ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಚುನಾವಣೆ| ‘ಕನ್ನಡ ಅಸ್ಮಿತೆ’ಯ ರಾಜಕಾರಣ; ಬರೀ ಮಾತಿನ ಬಾಣ

Last Updated 2 ಏಪ್ರಿಲ್ 2023, 4:15 IST
ಅಕ್ಷರ ಗಾತ್ರ

ಬೆಂಗಳೂರು: ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆಗೊಂಡು, ಅದರ ಆಧಾರದ ಮೇಲೆಯೇ ಒಕ್ಕೂಟ ವ್ಯವಸ್ಥೆಯನ್ನು ಕಟ್ಟಿಕೊಂಡ ಭಾರತದಂತಹ ದೇಶದಲ್ಲಿ ರಾಜಕಾರಣದ ಚಹರೆ ಬದಲಿಸುವ, ರಾಜಕೀಯ ಹಣೆಬರಹವನ್ನೇ ತಿದ್ದುವ ಅಪಾರ ಶಕ್ತಿ ಇರುವುದು ಭಾಷೆಗೆ. ಭಾಷೆಯ ಮೇಲಿನ ಅಭಿಮಾನ, ಅಂಧಾಭಿಮಾನದ ಕಾರಣಕ್ಕೆ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವಾಗಿದೆ. ಹೊಸ ರಾಜ್ಯಗಳೇ ಉದಯವಾಗಿವೆ.

ಕರ್ನಾಟಕದ ವಿಧಾನಸಭೆ ಚುನಾವಣೆ ಎದುರಾಗಿರುವ ಹೊತ್ತಿನೊಳಗೆ ನಮ್ಮ ಕನ್ನಡದ ಅಸ್ಮಿತೆಯ ವಿಷಯದಲ್ಲಿ ರಾಜಕೀಯ ಪಕ್ಷಗಳ ಒಲುವು–ನಿಲುವು ಕೂಡ ಮುನ್ನೆಲೆಗೆ ಬರಬೇಕಾದ ಪ್ರಮುಖ ಸಂಗತಿ. ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯುವ ಪಕ್ಷ, ಕನ್ನಡದ ಹಿರಿಮೆ–ಗರಿಮೆಯನ್ನು ಎತ್ತಿಹಿಡಿದು, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸೆಟೆದು ನಿಲ್ಲುವ ರಾಜಕಾರಣ ಮಾಡಬೇಕು ಎಂಬ ಸದಾಶಯ ಕನ್ನಡಿಗರದ್ದಾಗಿದೆ. ಕನ್ನಡ, ಕನ್ನಡಿಗರ ವಿಷಯ ಮುಂಚೂಣಿಗೆ ಬಂದಾಗ, ರಾಷ್ಟ್ರೀಯತೆ, ಹಿಂದುತ್ವದ ರಾಜಕಾರಣ ಮಾಡುತ್ತಿರುವ ಆಡಳಿತಾರೂಢ ಬಿಜೆಪಿ, ಮಾತಿನಲ್ಲಷ್ಟೇ ಕನ್ನಡದ ಪರವಾಗಿ ನಿಂತಂತೆ ಕಾಣಿಸುತ್ತದೆ. ಹಿಂದಿಯನ್ನೇ ಅಸ್ತ್ರವಾಗಿ ಬಳಸಿ ಏಕಭಾಷೆ, ಏಕ ರಾಷ್ಟ್ರ, ಏಕಧರ್ಮ ಪ್ರತಿಪಾದಿಸುವ ಆ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುವ ಆತಂಕ ಸ್ಥಳೀಯ ನಾಯಕರನ್ನು ಸುತ್ತುವರಿದಿದೆ. ಹೀಗಾಗಿ, ಈ ವಿಷಯ ಬಂದಾಗ, ಮೌನವೇ ರಾಜ್ಯ ನಾಯಕರ ಅಸ್ತ್ರ.

ಅದೇ, ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿದ್ದರೆ ಕೇಸರಿ ಪಡೆಯವರು ಕನ್ನಡವನ್ನೇ ಹೊತ್ತು ಕುಣಿಯತ್ತಿದ್ದರು ಎಂಬ ವಿಷಯದಲ್ಲಿ ಸಂಶಯವೇ ಬೇಡ.

ಇನ್ನು ಕಾಂಗ್ರೆಸ್ ನಾಯಕರ ನಿಲುವು ಗಮನಿಸಿದರೆ ಕೇಂದ್ರದಲ್ಲಿ ಅವರದ್ದೇ ಪಕ್ಷ ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳುವ ಧೋರಣೆ ಬೇರೆ. ಬಿಜೆಪಿ ಇದ್ದಾಗ ತೋರಿದ ಅವತಾರವೇ ಮತ್ತೊಂದು ಬಗೆಯದು. ಭಾಷೆ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳದ್ದು ಬಹುತೇಕ ಕೇಂದ್ರದಲ್ಲಿ ಯಾವ ಸರ್ಕಾರ ಇದೆ ಎಂಬುದನ್ನು ಆಧರಿಸಿದ ಅನುಕೂಲಕಾರಿ ರಾಜಕಾರಣ.

ಪ್ರಾದೇಶಿಕ ಪಕ್ಷದ ಸ್ವರೂಪ ಪಡೆದುಕೊಂಡಿರುವ, ಅಧಿಕಾರಕ್ಕಾಗಿ ಕಾಂಗ್ರೆಸ್- ಬಿಜೆಪಿ ಎಂಬ ಭಿನ್ನತೆ ತೋರದೇ ಹೊಂದಾಣಿಕೆ ಮಾಡಿಕೊಳ್ಳುವ ಜೆಡಿಎಸ್‌ ಪಕ್ಷದ್ದು ಭಾಷೆ ವಿಷಯದಲ್ಲಿ ನಿಖರ, ಸ್ಪಷ್ಟ ಧೋರಣೆ. ಮೈತ್ರಿ ಸರ್ಕಾರ ಇದ್ದಾಗ, ಕೇಂದ್ರದಲ್ಲಿರುವ ಸರ್ಕಾರದ ನಿಲುವಿಗೆ ತಕ್ಕಂತೆ ನಾಜೂಕಿನ ನಡೆ ಈ ಪಕ್ಷದ್ದಾಗಿದೆ.

ಕೇಂದ್ರ ಸರ್ಕಾರದ ನೇಮಕಾತಿಗಳಲ್ಲಿ, ಹಿಂದಿ ಹೇರಿಕೆ ವಿಷಯದಲ್ಲಿ ಈ ಎಲ್ಲ ಪಕ್ಷಗಳ ಬಣ್ಣ ಬಯಲಾಗಿದೆ. ಮೈತ್ರಿ ಸರ್ಕಾರ ತೊರೆದ ಬಳಿಕ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕನ್ನಡ ಹೋರಾಟಗಾರರಷ್ಟೇ ಪ್ರಬಲರಾಗಿ ಕನ್ನಡಿಗರ ಪರ ಧ್ವನಿ ಎತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಇರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ನಾಯಕರು, ಕನ್ನಡದ ಪರ ಗಟ್ಟಿ ಧ್ವನಿ ಎತ್ತುವ ಸಲೀಸಿನ ಹಾಗೂ ಲಾಭದ ದಾರಿಯಲ್ಲಿಯೇ ಸಾಗುತ್ತಿದ್ದಾರೆ.

ಆದರೆ, ಭಾಷಾಭಿಮಾನ ಎಂದ ಕೂಡಲೇ ಎಲ್ಲರೂ ತಮಿಳುನಾಡಿನ ಕಡೆಗೆ ಮುಖ ಮಾಡುತ್ತಾರೆ. ನೆರೆ ರಾಜ್ಯದಲ್ಲಿ ತಮಿಳು ಭಾಷೆಗೆ ಗಟ್ಟಿ ನೆಲೆ ಇದೆ. ಅಷ್ಟರಮಟ್ಟಿಗೆ ಕರ್ನಾಟಕದಲ್ಲಿ ಕನ್ನಡ ಮನಸ್ಸುಗಳು ಕನ್ನಡವನ್ನು ಉಳಿಸಿ ಬೆಳೆಸಲು ಕಂಕಣ ಬದ್ಧರಾಗಿಲ್ಲ.

‘ಒಂದು ದೇಶ, ಒಂದು ಭಾಷೆ ಎಂಬ ಪರಿಕಲ್ಪನೆಯಡಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ‘ಅಧಿಕೃತ ಭಾಷೆ ಹಿಂದಿ’ ಎಂದು ಪರಿಗಣಿಸಲ್ಪಟ್ಟರೆ ಒಳಿತು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ 2019ರಲ್ಲಿ ಹೇಳಿದಾಗ ರಾಜ್ಯದಲ್ಲಿಯೂ ಅಸಮಾಧಾನ– ಆಕ್ರೋಶ ವ್ಯಕ್ತವಾಗಿತ್ತು. ಎಲ್ಲ ವಲಯಗಳಿಂದ ಪಕ್ಷಾತೀತವಾಗಿ ಕನ್ನಡಪರ ಧ್ವನಿ ಮೊಳಗಿತ್ತು. ಹಿಂದಿಯನ್ನು ಬಲವಂತವಾಗಿ ಹೇರುವ ಕುತಂತ್ರ ಎಂಬ ಆಕ್ರೋಶದ ಕೂಗು ಎಲ್ಲೆಡೆ ಕೇಳಿ ಬಂದಿತ್ತು. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಹೇಳಿದ್ದರು. ‘ಪ್ರತಿಯೊಬ್ಬರೂ ಹಿಂದಿ ಕಲಿಯಬೇಕೆಂಬ ಅರ್ಥದಲ್ಲಿ ಶಾ ಹೇಳಿದ್ದಾರೆಯೇ ಹೊರತು, ಅದು ಹಿಂದಿ ಹೇರಿಕೆ ಅಲ್ಲ. ಅನಗತ್ಯವಾಗಿ ವಿವಾದ ಮಾಡಲಾಗುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಸಮಜಾಯಿಷಿ ನೀಡಿದ್ದರು.

ಚುನಾವಣೆ ಎದುರುಗೊಳ್ಳುವ ಹೊತ್ತಿಗೆ ರಾಜ್ಯದ ಬಿಜೆಪಿ ಸರ್ಕಾರ, ಕನ್ನಡ ಭಾಷೆಗೆ ಕಾನೂನು ರಕ್ಷಣೆ ನೀಡುವ, ಜೊತೆಗೆ ಉನ್ನತ ಶಿಕ್ಷಣದಲ್ಲಿ ಕನ್ನಡಿಗರಿಗೆ ಮೀಸಲಾತಿ ಮತ್ತು ಸ್ಥಳೀಯರಿಗೆ ಉದ್ಯೋಗಕ್ಕೆ ಆದ್ಯತೆ ನೀಡುವ ಅಂಶಗಳಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ’ ರೂಪಿಸಿದೆ. ಕರ್ನಾಟಕದಲ್ಲಿ ಆಡಳಿತ ಮತ್ತು ಇತರ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವಂತೆ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಹಲವು ಆದೇಶಗಳನ್ನು ಹೊರಡಿಸಿವೆ. ಆದರೂ, ಕಾನೂನು ಬೆಂಬಲ ಇಲ್ಲದ ಕಾರಣ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿ ಆಗಿರಲಿಲ್ಲ. ಅಧಿಕಾರ ಅನುಭವಿಸುವ ಎಲ್ಲ ಪಕ್ಷಗಳು ಚುನಾವಣೆ ವರ್ಷದಲ್ಲೇ ಇಂತಹ ವಿಷಯದಲ್ಲಿ ’ನಿರ್ಣಾಯಕ‘ ತೀರ್ಮಾನ ತೆಗೆದುಕೊಂಡದ್ದುಂಟು.

ಶಾಸ್ತ್ರೀಯ ಭಾಷೆಯ ವಿಷಯಕ್ಕೆ ಬಂದರೆ, 2017ರಿಂದ 2020ರ ಅವಧಿಯಲ್ಲಿ ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹ 642 ಕೋಟಿ ಮೀಸಲಿಟ್ಟಿದೆ. ಕನ್ನಡಕ್ಕೆ ₹ 42 ಕೋಟಿ ಬೇಡಿಕೆ ಇದ್ದರೂ ಕೇವಲ ₹ 3 ಕೋಟಿ ನೀಡಿದೆ. ಇದೇ ಅವಧಿಯಲ್ಲಿ ತಮಿಳು ಭಾಷೆಗೆ ₹ 23 ಕೋಟಿ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕನ್ನಡ ಭಾಷೆಗೆ ಸುಮಾರು ₹ 5 ಕೋಟಿ ಬಂದಿದೆ ಎಂದೂ ದೊಡ್ಡರಂಗೇಗೌಡ ಅವರು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ್ದ ಎಚ್‌.ಡಿ. ಕುಮಾರಸ್ವಾಮಿ, ‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ 15 ವರ್ಷಗಳೇ ಆಗಿವೆ. ಆದರೆ ಮೂರು ವರ್ಷಗಳಲ್ಲಿ ಕನ್ನಡಕ್ಕೆ ಸಿಕ್ಕಿದ ಅನುದಾನ ಕೇವಲ ₹ 3 ಕೋಟಿ. ಕನ್ನಡದ ಕಣ್ಣಿಗೆ ಸುಣ್ಣ, ಬೇರೆ ಭಾಷೆಗಳಿಗೆ ಬೆಣ್ಣೆ. ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ’ ಎಂದು‌ ಪ್ರಶ್ನಿಸಿದ್ದರು. ಒಕ್ಕೂಟ ಭಾಷೆಗಳ ನಡುವೆ ಅನುದಾನದಲ್ಲಿ ಮಾತ್ರವಲ್ಲ, ಯಾವ ವಿಷಯದಲ್ಲೂ ತಾರತಮ್ಯ ಎಸಗಬಾರದು. ಈ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರಿಗೆ ರಾಜಧರ್ಮ ಪಾಲನೆ ಅತ್ಯಗತ್ಯ. ದೇಶಕ್ಕೆ ಅತಿಹೆಚ್ಚು ತೆರಿಗೆ ತೆರುತ್ತಿರುವ ಕರ್ನಾಟಕದ ವಿಷಯದಲ್ಲಿ ಇಂಥ ರಾಜಧರ್ಮ ಪಾಲನೆ ಆಗುತ್ತಿಲ್ಲ’ ಎಂದು ಟೀಕಿಸಿದ್ದರು.

‘ನಮಗೆ (ಕನ್ನಡಿಗರಿಗೆ) ನಮ್ಮದೇ ಆದ ಭಾಷೆ ಇದೆ. ಧ್ವಜ, ಸ್ವಾಭಿಮಾನವಿದೆ. ಭಾಷೆ ಎಂದರೆ ಸ್ವಾಭಿಮಾನದ ಪ್ರಶ್ನೆಯಾಗಿದೆ’ ಎನ್ನುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಪ್ರತಿಪಾದನೆ. ‘ನಮ್ಮ ನೆಲ, ಜಲ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ, ನಮ್ಮ ಮೊದಲ ಆದ್ಯತೆ ಕನ್ನಡ ಭಾಷೆ. ನಂತರ ನಾವು ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕಿನ ಪ್ರಕಾರ ಬೇರೆ ಭಾಷೆಗಳನ್ನು ಬಳಸಬಹುದು’ ಎನ್ನುವುದು ಅವರ ವಾದ.

ಪ್ರಸ್ತುತ ಕನ್ನಡವನ್ನು ಉಳಿಸಿ ಎಂಬ ಘೋಷಣೆ ರಾಜ್ಯದಲ್ಲಿ ಜೀವ ತಳೆದಿದೆ. ಹಾಗೆಂದ ಮಾತ್ರಕ್ಕೆ ಕನ್ನಡಿಗರಿಗೆ ಮಾತೃಭಾಷೆಯ ಮೇಲೆ ಅಭಿಮಾನ ಇಲ್ಲ ಎಂದರ್ಥವಲ್ಲ. ಬದಲಾಗಿ ನಮ್ಮ ರಾಜ್ಯದಲ್ಲಿ ಕನ್ನಡಾಭಿಮಾನಕ್ಕೆ ಸ್ವಂತ ತಾತ್ವಿಕ ನೆಲೆಯಿಲ್ಲ, ರಾಜಕೀಯ ಶಕ್ತಿ ಇಲ್ಲ. ಹೀಗಾಗಿ, ಕನ್ನಡದ ಒಳಗಿನ ವಿಕೃತಿಗೆ ವಿರೋಧವಾಗುವುದು ಕನ್ನಡಾಭಿಮಾನದ ತಾತ್ವಿಕ ನೆಲೆಯಾಗಬೇಕು ಹಾಗೂ ಸ್ಪಷ್ಟ ರಾಜಕೀಯ ಶಕ್ತಿ ಪ್ರಾಪ್ತವಾಗಬೇಕು ಎನ್ನುವುದು ಕನ್ನಡ ಮನಸ್ಸುಗಳ, ಕನ್ನಡಪರ ಹೋರಾಟಗಾರರ ಆಶಯ.

ಶಾಸ್ತ್ರೀಯ ಭಾಷೆ ಸ್ಥಾನ: ಕಣ್ಣೊರೆಸುವ ತಂತ್ರ

ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯ ಮಾನ್ಯತೆ ಪಡೆದಿದ್ದರೂ ಕೇಂದ್ರದ ಅನುದಾನ ಪಡೆಯುವಲ್ಲಿ ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ ಎನ್ನುವುದು ಕನ್ನಡಿಗರ ಆರೋಪ. ಹಾವೇರಿಯಲ್ಲಿ ನಡೆದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ದೊಡ್ಡರಂಗೇಗೌಡ, ‘ಡಬಲ್ ಎಂಜಿನ್’ (ರಾಜ್ಯ ಮತ್ತು ಕೇಂದ್ರ) ಬಿಜೆಪಿ ಸರ್ಕಾರಗಳು ಕನ್ನಡ ಭಾಷೆಯ ರಕ್ಷಣೆ ಮತ್ತು ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಪ್ರಶ್ನಿಸಿದ್ದರು. ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ‘ಕೇಂದ್ರ ಸರ್ಕಾರ ಯಾವಾಗಲೂ ‘ಡಬಲ್ ಎಂಜಿನ್’ ಸರ್ಕಾರದ ಅನುಕೂಲಗಳ ಬಗ್ಗೆ ಮಾತನಾಡುತ್ತದೆ. ಆದರೆ, ಅದು ಕನ್ನಡಕ್ಕೆ ಹೇಗೆ ಒಲವು ತೋರಿದೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಭಾಷೆಯ ಅಭಿವೃದ್ಧಿ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಹೆಚ್ಚಿನದನ್ನು ಇದುವರೆಗೆ ಸಾಧಿಸಲಾಗಿಲ್ಲ’ ಎಂದೂ ಅವರು ಕುಟುಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT