ಭಾನುವಾರ, ಜುಲೈ 25, 2021
22 °C
2020 ಸಿನಿಮಾ ರಂಗಕ್ಕೆ ದುರಂತದ ವರ್ಷ

ಮೂರು ತಿಂಗಳಲ್ಲಿ ಹತ್ತು ಸಿನಿಮಾ ಕಲಾವಿದರ ಸಾವು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕಿನಿಂದಾಗಿ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಈ ಸೋಂಕಿಗೆ ಜಗತ್ತಿನಾದ್ಯಂತ 4 ಲಕ್ಷಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಏರುತ್ತಿದೆ. 2020 ಎನ್ನುವುದು ಜಗತ್ತಿನ ಪಾಲಿಗೆ ಒಂದು ರೀತಿ ಕರಾಳ ವರ್ಷ ಎನ್ನಿಸಿದ್ದರೆ, ಭಾರತೀಯ ಚಿತ್ರರಂಗದ ಪಾಲಿಗೆ ‘ಸಾವಿನ’ ವರ್ಷದಂತೆ ಕಾಣುತ್ತಿದೆ ! 

ಒಂದು ಕಡೆ ಕೊರೊನಾ ಸೋಂಕು ಸಿನಿಮಾ ರಂಗವನ್ನು ಆರ್ಥಿಕವಾಗಿ ಹಿಂಡಿ ಹಿಪ್ಪೆಯಾಗಿಸುತ್ತಿದ್ದರೆ, ಇನ್ನೊಂದು ಕಡೆ ಕೇವಲ ಮೂರು ತಿಂಗಳಲ್ಲಿ (ಏಪ್ರಿಲ್‌–ಜೂನ್‌) ಭಾರತೀಯ ಚಿತ್ರರಂಗದ ಹತ್ತು ಮಂದಿ ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಅದರಲ್ಲೂ ಸಾವಿನ ಪಟ್ಟಿಯಲ್ಲಿ ಹೆಚ್ಚು ಯುವ ಕಲಾವಿದರೇ ಇರುವುದು ಆ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ದೋನಿ ಚಿತ್ರ ಖ್ಯಾತಿ ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆ 

ಎಂ.ಎಸ್‌.ದೋನಿ: ದಿ ಅನ್‌ಟೊಲ್ಡ್‌ ಸ್ಟೋರಿ ಖ್ಯಾತಿಯ ಸುಶಾಂತ್‌ ಸಿಂಗ್‌ ರಜಪೂತ್‌ ಭಾನುವಾರ (ಜೂನ್‌ 14) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದ ನಿವಾಸದಲ್ಲಿ ಅವರು ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಏಪ್ರಿಲ್‌ನಿಂದ ಆರಂಭವಾಯ್ತು... 

ಮಾರ್ಚ್‌ ಕೊನೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಣೆಯಾಯಿತು. ಚಿತ್ರರಂಗ ದಿಗ್ಭಂದನದಿಂದ ಬೇಸತ್ತಿರುವಾಗಲೇ ಕನ್ನಡದ ಜನಪ್ರಿಯ ಹಾಸ್ಯ ನಟ ಬುಲೆಟ್ ಪ್ರಕಾಶ್‌ ಸಾವಿನ ಸುದ್ದಿ ಬಂತು. ಅವರು ಏಪ್ರಿಲ್ 6 ರಂದು ನಿಧನರಾದರು. 44ನೇ ವಯಸ್ಸಿಗೆ ಜೀವನ ಪಯಣ ಮುಗಿಸಿದ ಈ ನಟನ ಸಾವು ಮರೆಯಾಗುವ ಮುನ್ನವೇ ಬಾಲಿವುಡ್‌ ನಟ ಇರ್ಫಾನ್‌ ಖಾನ್ ಏಪ್ರಿಲ್ 29ರಂದು ಕ್ಯಾನ್ಸರ್‌ಗೆ ಬಲಿಯಾದರು. ಬಾಲಿವುಡ್‌ ಸಿನಿಮಾ ರಂಗದಲ್ಲಿ ತನ್ನ ವಿಶಿಷ್ಟ ನಟನೆಯಿಂದಲೇ ಖ್ಯಾತಿ ಪಡೆದಿದ್ದ ಇರ್ಫಾನ್‌, ಖ್ಯಾತ ರಂಗಕರ್ಮಿ ಪ್ರಸನ್ನ ಅವರ ಮೂಲಕ ಕರ್ನಾಟಕದೊಂದಿಗೆ ನಂಟು ಬೆಸೆದುಕೊಂಡಿದ್ದರು.

ಇರ್ಫಾನ್‌ ಸಾವಿನ ಸುದ್ದಿ ಕೇಳಿ ದಿನ ಕಳೆಯುವುದರೊಳಗೆ (ಏಪ್ರಿಲ್ 30) ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಟ, ಕಪೂರ್ ಕುಟುಂಬದ ಸದಸ್ಯ ರಿಷಿ ಕಪೂರ್‌ ಕೂಡ ಕ್ಯಾನ್ಸರ್‌ನಿಂದ ಮೃತಪಟ್ಟರು. ಈ ಎರಡೂ ಸಾವಿನ ಸುದ್ದಿಗಳು ಬಾಲಿವುಡ್‌ನ ಬಿ–ಟೌನ್‌ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಅಭಿಮಾನಿಗಳನ್ನೂ ಶೋಕದ ಮಡುವಿನಲ್ಲಿ ಮುಳುಗುವಂತೆ ಮಾಡಿದವು.

ಮೇನಲ್ಲೂ ಮುಂದುವರಿಯಿತು..

ಏಪ್ರಿಲ್ ಕಳೆದು ಮೇ ತಿಂಗಳ ಎರಡನೇ ವಾರದಲ್ಲೇ ಮತ್ತೊಂದು ಅಘಾತ. ಕನ್ನಡ ಚಿತ್ರರಂಗದ ಮತ್ತೊಬ್ಬ ಹಾಸ್ಯನಟ ಮೈಕಲ್ ಮಧು ಮೇ 13ರಂದು ನಿಧನರಾದರು. 55ರ ಹರೆಯದ ಮಧು ಮಧ್ಯಾಹ್ನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಹಾಗೆ ಕುಸಿದುಬಿದ್ದ ಅವರನ್ನು ಆಸ್ಪತ್ರೆ ದಾಖಲಿಸಲಾಯಿತು. ಆದರೂ ಅವರು ಬದುಕುಳಿಯಲಿಲ್ಲ.

ಮಧುವಿನ ಮರಣದ ಸುದ್ದಿಯನ್ನು ಅರಗಿಸಿಕೊಳ್ಳುವುದರೊಳಗೆ, ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು‘ ರಿಯಾಲಿಟಿ ಶೋ ವಿಜೇತೆ  ಮೆಬಿನಾ ಮೈಕಲ್ (23) ಮೇ 26ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.  ಮೇ ತಿಂಗಳು ಮುಗಿಯುವ ಹೊತ್ತಿಗೆ ಬಾಲಿವುಡ್‌ ಅಂಗಳದಿಂದ ಮತ್ತೊಂದು ಸಾವಿನ ಸುದ್ದಿ. ಬಾಲಿವುಡ್‌ನ ಜನಪ್ರಿಯ ಗೀತೆಗಳಿಗೆ ಸಾಹಿತ್ಯ ರಚಿಸಿದ್ದ ಖ್ಯಾತ ಗೀತ ರಚನೆಕಾರ ಯೋಗೇಶ್‌ ಗೌರ್ (77) ಮೇ 29ರಂದು ನಿಧನರಾದರು.

ಜೂನ್‌ ಆರಂಭದಲ್ಲೇ ಅಘಾತ

ಜೂನ್ ಆರಂಭದಲ್ಲೇ (ಜೂ.1) ಬಾಲಿವುಡ್‌ನ ಸಿನಿಮಾ ಸಂಗೀತ ಕ್ಷೇತ್ರಕ್ಕೆ ಮತ್ತೊಂದು ಅಘಾತಕಾರಿ ಸುದ್ದಿ. ಖ್ಯಾತ ಸಂಗೀತ ನಿರ್ದೇಶಕ 42ರ ಹರೆಯದ ವಾಜಿದ್‌ ಖಾನ್ ಕಿಡ್ನಿ ವೈಫಲ್ಯದಿಂದ ನಿಧನರಾದರು. ‘ದಬಂಗ್‘‌ನಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.

ಈ ಸಾವಿನ ಸಂಕಟ ಮಾಸುವ ಮುನ್ನವೇ ಬಾಲಿವುಡ್‌ನ ಖ್ಯಾತ ನಿರ್ದೇಶಕ ಬಸು ಚಟರ್ಜಿ (93 ವರ್ಷ) ಜೂನ್‌ 4ರಂದು ತೀರಿ ಹೋದ ಸುದ್ದಿ ಬಂತು. ಬಸು ಅವರು ’ರಜನಿಗಂಧ‘ ದಂತಹ ಕ್ಲಾಸಿಕ್‌ ಸಿನಿಮಾಗಳನ್ನು ನಿರ್ದೇಶಿಸಿದ್ದರು.   . 

ಇದಾಗಿ ಒಂದು ವಾರ ಕಳೆಯುವ ಹೊತ್ತಿಗೆ, ಸ್ಯಾಂಡಲ್‌ವುಡ್‌ ಸಿನಿಮಾರಂಗದಲ್ಲಿ ಮತ್ತೊಂದು ಸಾವಿನ ಸುದ್ದಿ ಹೊರಬಿತ್ತು. ಯುವನಟ ಚಿರಂಜೀವಿ ಸರ್ಜಾ ಜೂನ್ 7ರಂದು ಹೃದಯಾಘಾತದಿಂದ ನಿಧನರಾದರು. ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸೋದರ ಅಳಿಯ, ನಟ ಧ್ರುವ ಸರ್ಜಾ ಸೋದರ ಚಿರು 35ನೇ ವಯಸ್ಸಿಗೆ ಜೀವನ ಪಯಣ ಮುಗಿಸಿದರು.  

ಕೊರೊನಾ ಸೋಂಕಿನ ಭೀತಿಯಿಂದಾಗಿ ಒಂದು ಕಡೆ ಚಿತ್ರೋದ್ಯಮದಲ್ಲಿ ಚಟುವಟಿಕೆಗಳು ನಿಂತು ಹೋಗಿವೆ. ಸಿದ್ಧವಾಗಿರುವ ಸಿನಿಮಾಗಳನ್ನು ಬಿಡುಗಡೆ ಮಾಡಲು ಥಿಯೇಟರ್‌ಗಳೇ ಆರಂಭವಾಗಿಲ್ಲ. ಇದರಿಂದ ಬೇಸತ್ತ ನಿರ್ಮಾಪಕ – ನಿರ್ದೇಶಕರು ತಮ್ಮ ಸಿನಿಮಾಗಳನ್ನು ಓಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಶೂಟಿಂಗ್‌ಗಳಿಲ್ಲದೇ ಚಿತ್ರರಂಗದ ಎಲ್ಲ ‘ಅಂಗ‘ಗಳೂ ನಿತ್ರಾಣಗೊಂಡಿರುವ ಈ ಸಂದರ್ಭದಲ್ಲಿ ಸಾಲು ಸಾಲು ಚಿತ್ರಕಲಾವಿದರ ಸಾವು, ಭಾರತದ ಚಿತ್ರರಂಗದ ಪಾಲಿಗೆ ಬಹುದೊಡ್ಡ ಅಘಾತ ನೀಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು