ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದದ ಸಮಯದಲ್ಲಿ ತಪ್ಪಾಗಿರಬಹುದು; ವಿವಾದಕ್ಕೆ ತಾವೇ ತೆರೆ ಎಳೆದ ಅಜಯ್ ದೇವಗನ್

Last Updated 27 ಏಪ್ರಿಲ್ 2022, 16:38 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿ ಭಾಷೆ ಕುರಿತಂತೆ ನಟ ಸುದೀಪ್‌ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದನ್ನು ಮೊದಲಿಗೆ ಟ್ವೀಟ್‌ ಮೂಲಕ ತೀವ್ರವಾಗಿ ಖಂಡಿಸಿದ್ದ ಬಾಲಿವುಡ್‌ ನಟ ಅಜಯ್‌ ದೇವ್‌ಗನ್‌, ನಂತರದಲ್ಲಿ ಅನುವಾದದ ಸಂದರ್ಭದಲ್ಲಿ ತಪ್ಪಾಗಿರಬಹುದು ಎನ್ನುವ ಮೂಲಕ ವಿವಾದಕ್ಕೆ ತಾವೇ ತೆರೆ ಎಳೆದಿದ್ದಾರೆ.

ಸುದೀಪ್‌ ಅವರನ್ನು ಟ್ಯಾಗ್‌ ಮಾಡಿ ಬುಧವಾರ ಸಂಜೆ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದ ಅಜಯ್‌ ದೇವ್‌ಗನ್‌, ‘ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲವಾಗಿದ್ದರೆ, ನೀವೇಕೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್‌ ಮಾಡಿ ಬಿಡುಗಡೆ ಮಾಡುತ್ತಿದ್ದೀರಿ? ಹಿಂದಿ ನಮ್ಮ ಮಾತೃಭಾಷೆ, ರಾಷ್ಟ್ರಭಾಷೆ ಆಗಿತ್ತು, ಮುಂದೆಯೂ ಆಗಿರಲಿದೆ’ ಎಂದು ಉಲ್ಲೇಖಿಸಿದ್ದರು.

ಇದಕ್ಕೆ ಟ್ವೀಟ್‌ನಲ್ಲೇ ಪ್ರತಿಕ್ರಿಯೆ ನೀಡಿರುವ ಸುದೀಪ್‌, ‘ನನ್ನ ಹೇಳಿಕೆಯ ಹಿನ್ನೆಲೆಗೂ ಅದು ನಿಮಗೆ ತಲುಪಿರುವುದಕ್ಕೂ ಸಂಪೂರ್ಣ ವ್ಯತ್ಯಾಸವಿದೆ. ಯಾರಿಗೂ ನೋವುಂಟು ಮಾಡಲು, ಪ್ರಚೋದಿಸಲು ಅಥವಾ ಚರ್ಚೆಗಾಗಿ ನಾನು ಆ ಹೇಳಿಕೆ ನೀಡಿಲ್ಲ. ನಾನು ದೇಶದ ಎಲ್ಲ ಭಾಷೆಗಳನ್ನೂ ಗೌರವಿಸುತ್ತೇನೆ. ನೀವು ಹಿಂದಿ ಭಾಷೆಯಲ್ಲಿ ಮಾಡಿದ ಟ್ವೀಟ್‌ ಅನ್ನು ನಾನು ಅರ್ಥೈಸಿಕೊಂಡೆ. ಏಕೆಂದರೆ ನಾವು ಹಿಂದಿಯನ್ನು ಕಲಿತಿದ್ದೇವೆ, ಪ್ರೀತಿಸಿದ್ದೇವೆ ಹಾಗೂ ಗೌರವಿಸಿದ್ದೇವೆ. ಒಂದು ವೇಳೆ ನಿಮ್ಮ ಹಿಂದಿ ಟ್ವೀಟ್‌ಗೆ ನಾನು ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ಎಂದು ಊಹೆ ಮಾಡುತ್ತಿದ್ದೇನೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್‌’ ಎಂದಿದ್ದಾರೆ.

ಸುದೀಪ್‌ ಅವರ ಸ್ಪಷ್ಟನೆಗೆ ಮತ್ತೊಂದು ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ದೇವ್‌ಗನ್‌, ‘ಸುದೀಪ್‌, ನೀವು ನನ್ನ ಸ್ನೇಹಿತ. ಆದ ತಪ್ಪು ತಿಳಿವಳಿಕೆಯನ್ನು ಸ್ಪಷ್ಟಪಡಿಸಿರುವುದಕ್ಕೆ ಧನ್ಯವಾದ. ನಾನು ಚಿತ್ರರಂಗವನ್ನು ಒಂದಾಗಿ ನೋಡಿದ್ದೇನೆ. ನಾವು ಎಲ್ಲ ಭಾಷೆಯನ್ನು ಗೌರವಿಸುತ್ತೇವೆ ಹಾಗೂ ಇತರರೂ ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ಆಶಿಸುತ್ತೇವೆ. ನಿಮ್ಮ ಮಾತುಗಳು ನನಗೆ ಅನುವಾದ ಆದ ಸಂದರ್ಭದಲ್ಲಿ ತಪ್ಪಾಗಿರಬಹುದು’ ಎಂದಿದ್ದಾರೆ. ಈ ಟ್ವೀಟ್‌ಗೂ ಪ್ರತಿಕ್ರಿಯೆ ನೀಡಿರುವ ಸುದೀಪ್‌, ‘ಸಂಪೂರ್ಣ ವಿಷಯವನ್ನು ತಿಳಿಯದೇ, ಪ್ರತಿಕ್ರಿಯೆ ನೀಡದೆ ಇರುವುದೂ ಮುಖ್ಯವಾಗುತ್ತದೆ. ನಿಮ್ಮನ್ನು ದೂಷಿಸುವುದಿಲ್ಲ’ ಎಂದಿದ್ದಾರೆ.

ಇಬ್ಬರು ಸ್ಟಾರ್‌ಗಳ ನಡುವೆ ನಡೆದ ಈ ಟ್ವೀಟ್‌ ಸರಣಿಗೆ ಸಾವಿರಾರು ಜನರು ಟ್ವೀಟ್‌ ಮೂಲಕವೇ ಪ್ರತಿಕ್ರಿಯೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಸುದೀಪ್‌ ಹೇಳಿದ್ದೇನು?

ಕೆಲ ದಿನಗಳ ಹಿಂದೆ ನಡೆದ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ, ನಟ ಉಪೇಂದ್ರ ಅವರ ನೂತನ ಪ್ಯಾನ್‌ ಇಂಡಿಯಾ ಚಿತ್ರ ‘ಐ ಆ್ಯಮ್‌ ಆರ್‌’ ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಸುದೀಪ್‌ ಮಾತನಾಡಿ, ‘ಪ್ರಸ್ತುತ ಹಿಂದಿ ಎನ್ನುವುದು ರಾಷ್ಟ್ರೀಯ ಭಾಷೆಯಾಗಿಲ್ಲ. ಬಾಲಿವುಡ್‌ನವರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದು, ಅಲ್ಲಿಂದ ತೆಲುಗು ಮತ್ತು ತಮಿಳು ಭಾಷೆಗೆ ಡಬ್‌ ಮಾಡಿ, ಒದ್ದಾಡುತ್ತಿದ್ದಾರೆ. ದಕ್ಷಿಣದ ಸಿನಿಮಾಗಳು ಡಬ್‌ ಆಗಿ ಅಲ್ಲಿ ಓಡುತ್ತಿವೆ. ನಾವು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿಲ್ಲ. ಅದು ಮುಂಬೈನಿಂದ ಬರುತ್ತಿದೆ. ನಾವು ಎಲ್ಲೆಡೆಯೂ ತಲುಪುವ ಸಾಮರ್ಥ್ಯವಿರುವ ಸಿನಿಮಾ ಮಾಡುತ್ತಿದ್ದೇವೆ. ಇವತ್ತು ಚಿತ್ರರಂಗವು ಮುನ್ನುಗುತ್ತಿರುವುದನ್ನು ನೋಡುತ್ತಿರುವಾಗ, ಭಾಷೆ ಎನ್ನುವುದು ಕೇವಲ ತಡೆಯಾಗಿತ್ತಷ್ಟೇ. ಇವತ್ತು ಇದನ್ನು ಒಡೆದು ಮುನ್ನುಗ್ಗಿದೆ’ ಎಂದಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲೂ ಇದನ್ನು ಮರು ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT