ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಆರ್‌ಕೆ ಪ್ರೊಡಕ್ಷನ್ಸ್: ಪಾರ್ವತಮ್ಮ ಹಾದಿಯಲ್ಲಿ ಅಶ್ವಿನಿ

Published 26 ಜುಲೈ 2023, 18:30 IST
Last Updated 26 ಜುಲೈ 2023, 18:30 IST
ಅಕ್ಷರ ಗಾತ್ರ

‘ಸಿನಿಮಾ ಬಿಡುಗಡೆ ಅಂದರೆ ಒಂಥರಾ ಭಯವಾಗುತ್ತೆ’ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಹೀಗೆಂದರು. ‘ಆಚಾರ್ & ಕೋ.’ ಸಿನಿಮಾ ತೆರೆಕಾಣುತ್ತಿರುವ(ಜುಲೈ 28) ಸಂದರ್ಭದ ಸಹಜ ದುಗುಡ ಇದು. ‘ಮಾಯಾಬಜಾರ್’ ಸಿನಿಮಾ ಆದಮೇಲೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಪಿಆರ್‌ಕೆ ನಿರ್ಮಾಣದಲ್ಲಿ ತಯಾರಾದ ಚಿತ್ರವಿದು. ಪುನೀತ್ ಅವರಿಗೂ ತಮ್ಮ ಸಿನಿಮಾ ಬಿಡುಗಡೆಯಾಗುವ ಒಂದು ವಾರ ಮೊದಲಿನಿಂದ ಇಂತಹ ದುಗುಡ ಇರುತ್ತಿತ್ತಂತೆ. ಆಗೆಲ್ಲ ಅವರು ಹೆಚ್ಚು ಮೌನ ತುಳುಕಿಸುತ್ತಿದ್ದುದನ್ನು ಅಶ್ವಿನಿ ನೆನಪಿಸಿಕೊಂಡರು.

ಪುನೀತ್ ಅವರೇ ಹಸಿರು ನಿಶಾನೆ ತೋರಿ ಹೋಗಿದ್ದ ಸ್ಕ್ರಿಪ್ಟ್‌ ‘ಆಚಾರ್‌ & ಕೋ.’. ಅದಲ್ಲದೆ ‘ಒ2’ ಸಿನಿಮಾಗೂ ಅವರು ಅಸ್ತು ಹೇಳಿದ್ದರು. ಮೆಡಿಕಲ್ ಥ್ರಿಲ್ಲರ್‌ ಕಥಾಹಂದರದ ‘ಒ2’ ಕೂಡ ಇದೇ ವರ್ಷ ತೆರೆಕಾಣಲಿದೆ. ಆಶಿಕಾ ರಂಗನಾಥ್ ನಟಿಸಿರುವ ಆ ಸಿನಿಮಾ ಬಗೆಗೆ ಅಶ್ವಿನಿ ಅವರಿಗೆ ನಿರೀಕ್ಷೆ ಮೂಡಿದೆ. ಅವರು ಖುದ್ದು ಥ್ರಿಲ್ಲರ್‌ಮೋಹಿ. ಅವರೀಗ ಮೂರು ಕಾದಂಬರಿಗಳನ್ನು ಓದುತ್ತಿದ್ದಾರೆ. ಅವುಗಳಲ್ಲಿ ಯಾವುದಾದರೊಂದು ಸಿನಿಮಾಗೆ ಹೊಂದಬಹುದೆ ಎನ್ನುವುದು ಅವರಿಗಿರುವ ಕುತೂಹಲ. ಆ ಕಾದಂಬರಿಗಳು ಯಾರವು ಎನ್ನುವುದು ಸದ್ಯಕ್ಕೆ ಗುಟ್ಟು. ಮಹಿಳೆ ಬರೆದಿದ್ದಾರೆಂದು ಸಣ್ಣ ಸುಳಿವು ಕೊಟ್ಟರು. ಪಾರ್ವತಮ್ಮ ರಾಜ್‌ಕುಮಾರ್‌ ಹೀಗೆ ಕೃತಿಗಳನ್ನು ಓದಿ, ಸಿನಿಮಾ ಮಾಡುತ್ತಿದ್ದ ದಿನಗಳನ್ನು ಅವರ ಈ ಧೋರಣೆ ನೆನಪಿಸಿತು.

ಚಿತ್ರಕಥೆ, ಚಿತ್ರೀಕರಿಸುವ ಕ್ರಮ ಇವಿಷ್ಟೂ ಪಕ್ಕಾ ಇದ್ದು, ತಮಗೆ ಹಿಡಿಸಿದಲ್ಲಿ ಹೊಸಬರಾದರೂ ಸಿನಿಮಾ ನಿರ್ಮಿಸಲು ಮುಂದಾಗುವುದು ಅಶ್ವಿನಿ ಅವರ ಜಾಯಮಾನ. ಅವರ ಪಿಆರ್‌ಕೆ ವೆಬ್‌ಸೈಟ್‌ ಮೂಲಕ ಆಸಕ್ತರು ಸಣ್ಣ ವಿಡಿಯೊ ಮಾಡಿ ಕಳುಹಿಸಿದರೂ ಗಮನಿಸುವ ವ್ಯವಸ್ಥೆಯನ್ನು ಅವರು ಮಾಡಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಅವರಿಗೆ ಮೂವರು ನಿರ್ದೇಶಕರು ನೆರವಾಗುತ್ತಾರೆ. ಅವರು ಯಾರು ಯಾರು ಎನ್ನುವುದನ್ನು ಕೂಡ ಅಶ್ವಿನಿ ಹೇಳಲು ನಿರಾಕರಿಸಿದರು. ದೊಡ್ಡ ನಿರ್ಮಾಣ ಸಂಸ್ಥೆಗಳು ಸಹಯೋಗ ಬಯಸಿದರೆ ಅದಕ್ಕೂ ತಾವು ಮುಕ್ತ ಮುಕ್ತ ಎಂದರು.

ದೊಡ್ಡ ಮಗಳು ಧೃತಿ ಕಲೆ–ವಿನ್ಯಾಸದ ಸೂಕ್ಷ್ಮಗಳ ಕೋರ್ಸ್‌ ಒಂದನ್ನು ಮಾಡುತ್ತಿದ್ದಾರೆ. ಚಿಕ್ಕಮಗಳು ವಂದಿತಾ ಪಿಯು ವಿದ್ಯಾರ್ಥಿನಿ. ಸಿನಿಮಾದ ತಾಂತ್ರಿಕ ಸೂಕ್ಷ್ಮಗಳನ್ನು ಅಣ್ಣಂದಿರಾದ ವಿನಯ್ ಹಾಗೂ ಯುವ ರಾಜ್‌ಕುಮಾರ್ ಜತೆಯಲ್ಲಿ ವಂದಿತಾ ಈಗಾಗಲೇ ಚರ್ಚಿಸುತ್ತಿರುವುದು ಅಶ್ವಿನಿ ಅವರ ಗಮನಕ್ಕೆ ಬಂದಿದೆ. ಸಿನಿಮಾ ಉತ್ಕಟತೆ ಇಟ್ಟುಕೊಂಡ ಕುಟುಂಬದವರೇ ತಾವಾಗಿರುವುದರಿಂದ ಅದರಿಂದ ದೂರ ಉಳಿಯುವುದಂತೂ ಅಸಾಧ್ಯ ಎಂದಾಗ ಅವರ ಕಣ್ಣಲ್ಲಿ ಆತ್ಮವಿಶ್ವಾಸದ ಹೊಳಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT