ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ಬಾಸ್‌’ 9: ‘ಸರ್ಕಸ್‌’ ಜಾಕಿಗೊಲಿದ ಜಾಕ್‌ಪಾಟ್‌

Last Updated 6 ಜನವರಿ 2023, 0:59 IST
ಅಕ್ಷರ ಗಾತ್ರ

ರೂಪೇಶ್‌ ಶೆಟ್ಟಿ ಸಾಗಿಬಂದ ಹಾದಿ..

ನಾನು ಈಗ ಕರ್ನಾಟಕದ ದೊಡ್ಡ ವೇದಿಕೆಯಲ್ಲಿ ಪರಿಚಯಗೊಂಡಿದ್ದೇನೆ. ಆದರೆ ಸುಮಾರು 10, 12 ವರ್ಷಗಳಿಂದಲೂ ಕಲಾ ಕ್ಷೇತ್ರದಲ್ಲಿದ್ದೇನೆ. ಮಂಗಳೂರು ಸಮೀಪ ಉಪ್ಪಳ ನಮ್ಮ ಊರು. ಅಪ್ಪ ತ್ಯಾಂಪಣ್ಣ ಶೆಟ್ಟಿ, ಅಮ್ಮ ಪ್ರೇಮಾ ಶೆಟ್ಟಿ. ಅಕ್ಕ ಮತ್ತು ಸಹೋದರ ಇದ್ದಾರೆ. ಪ್ರಾಥಮಿಕ ಶಿಕ್ಷಣದ ಬಳಿಕ ಮಂಗಳೂರಿಗೆ ಬಂದೆ. ಕುಟುಂಬದಲ್ಲಿ ಬೇರೆ ಬೇರೆ ರೀತಿಯ ಕಷ್ಟಗಳಿದ್ದವು. ದೊಡ್ಡಮ್ಮನ ಮನೆಯಲ್ಲಿದ್ದು ನಾವೆಲ್ಲಾ ಓದಿದೆವು. ಅವರ ಮನಸ್ಸು ತುಂಬಾ ದೊಡ್ಡದು. ಬಿಬಿಎಂ ಪದವಿಯ ಬಳಿಕ ನನ್ನದೇ ಆದ ಆಸಕ್ತಿಯ ವೇದಿಕೆ ಕಟ್ಟಿಕೊಳ್ಳಬೇಕು ಅನಿಸಿತು. ಹಾಗಾಗಿ ಸಣ್ಣಪುಟ್ಟ ಪ್ರಯತ್ನಗಳನ್ನು ಮಾಡುತ್ತಾ ಹೋದೆ. ಕೆಲಕಾಲ ಬ್ಯಾಂಕೊಂದರಲ್ಲಿ ಪ್ರತಿನಿಧಿಯಾಗಿಯೂ ದುಡಿದೆ. ಆ ದಾರಿ ನನ್ನದಲ್ಲ ಅನಿಸಿತು. ಅದನ್ನೂ ತೊರೆದೆ. ಹೀಗೆ ಸಾಗುತ್ತಾ ಇಲ್ಲಿಯವರೆಗೆ ಬಂದಿದ್ದೇನೆ ನೋಡಿ.

ಹಾಡು, ಸಾಹಿತ್ಯ, ಗಾಯನ, ನಟನೆ ಈ ಪ್ರಕಾರ ನಿಮ್ಮಲ್ಲಿ ಸಮ್ಮಿಳಿತಗೊಂಡದ್ದು ಹೇಗೆ?

ನನ್ನ ತಂದೆ ಯಕ್ಷಗಾನ ಕಲಾವಿದರು. ನನಗೂ ಅತ್ತ ಆಸಕ್ತಿ ಇತ್ತು. ಆದರೆ, ಪೂರ್ಣವಾಗಿ ತೊಡಗಿಸಿಕೊಳ್ಳಲು ಆಗಲಿಲ್ಲ. ಶಾಲಾ ದಿನಗಳಲ್ಲಿ ನನ್ನ ಅಕ್ಕ ಅಭಿನಯ, ಗಾಯನ ಮಾಡುತ್ತಿದ್ದಳು. ಅವಳು 10ನೇ ತರಗತಿ ಪಾಸಾಗಿ ಹೋದ ನಂತರ ಶಿಕ್ಷಕರು, ಸ್ನೇಹಿತರು ನನ್ನ ಮೇಲೆ ಒತ್ತಡ ಹೇರಿದರು. ನಾನೂ ಹಾಡಬೇಕು, ಅಭಿನಯಿಸಬೇಕು ಎಂದೆಲ್ಲಾ ಒತ್ತಾಯ ಇತ್ತು. ಶಿಕ್ಷಕರ ಮೇಲಿನ ಭಯದಿಂದಲೋ, ಸ್ನೇಹಿತರ ಒತ್ತಾಯಕ್ಕೋ ಮಣಿದು ಅಭಿನಯ, ನಿರೂಪಣೆ ಮಾಡುತ್ತಿದ್ದೆ. ಮುಂದೆ ಅದೇ ಬದುಕು ಕಟ್ಟಿಕೊಡುತ್ತದೆ ಅಂದುಕೊಂಡಿರಲಿಲ್ಲ. ಈ ಪ್ರದರ್ಶಕ ಕಲೆಗಳಿಗೆ
ಬರುತ್ತಿದ್ದ ಪ್ರತಿಕ್ರಿಯೆಗಳು ನನ್ನನ್ನು ಈ ಕ್ಷೇತ್ರದಲ್ಲೇ ಮುಂದುವರಿಯಲು ಉತ್ತೇಜಿಸಿದವು. ಹಾಗೆ ನೋಡಿದರೆ ನನಗೆ ಕ್ರಿಕೆಟ್‌ ಎಂದರೆ ಪಂಚಪ್ರಾಣ. ಆದರೆ, ಬಾಲ್ಯವನ್ನು ಆಟಗಳಲ್ಲಿ ಕಳೆಯಲು ಆಗಲಿಲ್ಲ. ಅಜ್ಜನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಸಾಕಷ್ಟು ವ್ಯಾಪಾರವನ್ನೂ ಕಲಿತೆ. ಅದೆಲ್ಲಾ
ಈಗ ಸಹಾಯಕ್ಕೆ ಬಂದಿವೆ.

ವಿಡಿಯೊ– ರೇಡಿಯೊ ಜಾಕಿ ಬದುಕಿನ ಬಗ್ಗೆ?

ಇದು ಸುಮಾರು 10 ವರ್ಷಗಳ ಹಿಂದಿನ ಕತೆ. ಆಗ ಡಿಜಿಟಲ್‌ ವೇದಿಕೆಗಳ ಭರಾಟೆ ಇಷ್ಟೊಂದು ಇರಲಿಲ್ಲ. ಮಲಯಾಳಂನಲ್ಲಿ ಇಂಥ ವಿಡಿಯೊ ಆಲ್ಬಂಗಳು ಹೆಚ್ಚು ಸಿದ್ಧವಾಗುತ್ತಿದ್ದವು. ಆಗ ನಾನೂ ಏಕೆ ಇಂಥ ಪ್ರಯತ್ನ ಮಾಡಬಾರದು ಎಂದು ಮುಂದಾದೆ. ತುಳು ಭಾಷೆಯಲ್ಲಿ ಹತ್ತಾರು ಸಂಗೀತ ಆಲ್ಬಂಗಳ ಸಿ.ಡಿಗಳನ್ನು ರೂಪಿಸಿ ಬಿಡುಗಡೆ ಮಾಡಿದೆ. ಸಾವಿರಾರು ಪ್ರತಿಗಳು ಮಾರಾಟವಾದವು. ಅಂದೂ ಇಂದೂ ಇದಕ್ಕೆ ಬೆಂಬಲಿಸಿದ ನಿರ್ಮಾಪಕರು, ಕೊಂಡು ವೀಕ್ಷಿಸಿದ ಎಲ್ಲರೂ ಈ ಯಶಸ್ಸಿಗೆ ಕಾರಣರು. ಅದೊಂದು ದೊಡ್ಡ ವೇದಿಕೆಯಾಯಿತು. ಈ ಆಲ್ಬಂಗಳೇ ಮುಂದೆ ನಾನು ರೇಡಿಯೊ ಜಾಕಿಯಾಗಲು ಕಾರಣವಾದವು.

ಬೆಳ್ಳಿತೆರೆಗೆ ಬಂದದ್ದು?

ಅದೇನೂ ಸುಲಭದ ದಾರಿ ಆಗಿರಲಿಲ್ಲ. ಸುಮಾರು 10 ಚಿತ್ರಗಳ ಪೈಕಿ 9 ವಿಫಲವಾದವು. ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದು, ಮತ್ತೆ ಕೆಲವು ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದು ನಟಿಸಿದ್ದೂ ಇತ್ತು. ವಿಫಲವಾದಾಗ ಮೈತುಂಬಾ ಸಾಲ, ಒತ್ತಡ ಇತ್ತು. ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದೆ. ಕಳೆದ ವರ್ಷ ತೆರೆ ಕಂಡ ‘ಗಿರ್‌ಗಿಟ್‌’ ತುಳು ಚಿತ್ರ ಆರ್ಥಿಕವಾಗಿ ಸ್ವಲ್ಪ ಸ್ಥಿರಗೊಳಿಸಿತು. ಒಂದು ವೇಳೆ ಅದೂ ಕೈಕೊಟ್ಟಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಈಗ ಕೈಯಲ್ಲಿ ಎರಡು ಕನ್ನಡ ಚಿತ್ರಗಳಿವೆ. ನನ್ನದೇ ನಿರ್ದೇಶನದ ‘ಸರ್ಕಸ್‌’ ಬಿಡುಗಡೆಗೆ ಸಿದ್ಧವಾಗಿದೆ. ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಜ.13ಕ್ಕೆ ತೆರೆಕಾಣುತ್ತಿದೆ. ತುಳು, ಕೊಂಕಣಿ ಪ್ರೇಕ್ಷಕರನ್ನು ತಲುಪಿದ್ದೇನೆ. ಇನ್ನು ಕನ್ನಡ ಪ್ರೇಕ್ಷಕರಿಗೆ ಅದ್ಭುತವಾದ ಸಿನಿಮಾ ಕೊಡಬೇಕು ಎಂಬ ಉತ್ಸಾಹವಿದೆ.

ಬಿಗ್‌ಬಾಸ್‌ ಅನುಭವ?

ಆ ಒಳ ಪ್ರಪಂಚವೇ ಬೇರೆ. ನಾವು ಇಲ್ಲಿ ನೋಡುತ್ತಿರುವ ಪ್ರಪಂಚವೇ ಬೇರೆ. ಗೆಲುವಂತೂ ಊಹಿಸಿಯೇ ಇರಲಿಲ್ಲ. ಆರಂಭದ ಒಂದೆರಡು ವಾರ ತುಂಬಾ ಕಷ್ಟವೆನಿಸಿತ್ತು. ಹಾಗೆ ನೋಡಿದರೆ ಇದೇ ಸರಳ. ಅಲ್ಲಿ ಸಾಕಷ್ಟು ತಾಳ್ಮೆ, ಸಹಬಾಳ್ವೆ, ನಮ್ಮ ತಪ್ಪನ್ನು ಒಪ್ಪಿಕೊಳ್ಳುವ ಗುಣ... ಹೀಗೆ ಅನೇಕ ವಿಷಯಗಳನ್ನು ಕಲಿತಿದ್ದೇನೆ. ನೋಡಿ, ಅಲ್ಲಿ ಮಾತನಾಡಿದರೂ ಕಷ್ಟ, ಮೌನವಾಗಿದ್ದರೆ ಇನ್ನೂ ಕಷ್ಟ. ಹೀಗೆ ಸಮತೋಲನ ಕಾಯ್ದುಕೊಳ್ಳಬೇಕು. ಐದು ತಿಂಗಳ ಬಳಿಕ ಹೊರ ಪ್ರಪಂಚಕ್ಕೆ ನಿಧಾನಕ್ಕೆ ಒಗ್ಗಿಕೊಳ್ಳುತ್ತಿದ್ದೇನೆ. ತುಂಬಾ ಬದಲಾಗಿದ್ದೇನೆ ಎಂದು ಗೆಳೆಯರು ಹೇಳುತ್ತಿದ್ದಾರೆ.

ಸಾಕಷ್ಟು ಗಾಸಿಪ್‌ಗಳಿಗೆ ಒಳಗಾದಿರಿ?

ನೀವು ಹೇಳುತ್ತಿರುವುದು ಸಾನ್ಯಾ ಅಯ್ಯರ್‌ ಮತ್ತು ನನ್ನ ಬಗ್ಗೆ. ನಮ್ಮಿಬ್ಬರ ಮಧ್ಯೆ ಶುದ್ಧವಾದ ಸ್ನೇಹ ಇದೆ. ಕಿರುತೆರೆಯಲ್ಲಿ ನಮ್ಮ ಆತ್ಮೀಯತೆಯನ್ನು ನೋಡಿ ಒಬ್ಬೊಬ್ಬರು ಒಂದೊಂದು ರೀತಿ ಭಾವಿಸಿದರು. ಅದಕ್ಕೆ ಏನೂ ಮಾಡಲಾಗದು. ಮದುವೆ, ಪ್ರೀತಿ ಇತ್ಯಾದಿ ಬಗ್ಗೆ ನಾನು ಇನ್ನೂ ಯೋಚಿಸಿಯೇ ಇಲ್ಲ. ಬಿಗ್‌ಬಾಸ್‌ ಟ್ರೋಫಿ ಸಿಕ್ಕಿದೆಯಲ್ಲಾ. ಅದಕ್ಕೆ ಗೌರವ ತರುವಂತಹ ಸಾಧನೆ ಮಾಡಬೇಕು. ಸಿನಿಮಾಗಳನ್ನು ಮಾಡಬೇಕು. ಒಂದಿಷ್ಟು ಜನರ ಸೇವೆ ಮಾಡಬೇಕು. ಈ ಹಾದಿಯಲ್ಲೇ ಮುಂದುವರಿದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT