ಬೆಂಗಳೂರು: ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ ಅನ್ನ ಸಿನಿಮಾ ವೀಕ್ಷಣೆ ಮಾಡಿದರು.
ಅನ್ನ ಸಿನಿಮಾವು ನಾನು ಜಾರಿಗೆ ತಂದ ಅನ್ನ ಭಾಗ್ಯ ಯೋಜನೆಯ ಮಹತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅನ್ನ ಉಣ್ಣಲು ನನ್ನೂರಿನ ಜನ ಹಬ್ಬಕ್ಕಾಗಿ ಕಾಯುತ್ತಿದ್ದ ನನ್ನ ಬಾಲ್ಯದ ದಿನಗಳು ಈ ನಿನಿಮಾದ ಕಥೆಯ ಮೂಲಕ ಕಣ್ಣೆದುರು ಬಂದವು. ನಾನು ಕಂಡ ಹಸಿವು, ಬಡತನಗಳು ನಾಡಿನ ಯಾರೊಬ್ಬರನ್ನೂ ಬಾಧಿಸದಿರಲಿ ಎಂದು 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಕೊಟ್ಟಿದ್ದೆ, ಚಿತ್ರದ ಕೊನೆಯಲ್ಲಿ ಈ ಯೋಜನೆಯ ಮಹತ್ವದ ಬಗ್ಗೆಯೂ ಸಿನೆಮಾ ಬೆಳಕು ಚೆಲ್ಲಿದೆ. ಮನೋರಂಜನೆಯ ಜೊತೆಗೆ ಹಸಿವಿನ ಎದುರು ಬೇರೆಲ್ಲಾ ಸಂಬಂಧಗಳು ಹೇಗೆ ನಗಣ್ಯವೆನಿಸುತ್ತವೆ ಎಂಬ ಸಂದೇಶವನ್ನು ಒಳಗೊಂಡ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಶುಭವಾಗಲಿ, ಚಿತ್ರ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಅನ್ನ ಎನ್.ಎಸ್.ಇಸ್ಲಾಹುದ್ದೀನ್ ನಿರ್ದೇಶನದ ಚಿತ್ರ. ಚಿತ್ರದ ಕಥೆ ಹನೂರು ಚನ್ನಪ್ಪ ಅವರದು. ಹನೂರು ಅವರ ಕಥಾಸಂಕನದಲ್ಲಿನ ‘ಅನ್ನ’ ಎಂಬ 22 ಪುಟಗಳ ಕಥೆ ಒಂದಾಗಿದೆ. ‘80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ.
ಕೆಲವೊಂದು ಹಳ್ಳಿಗಾಡುಗಳಲ್ಲಿ ಅನ್ನ ಹಬ್ಬದ ದಿನ ಮಾತ್ರ ಮಾಡುವುದು ಎಂದು ತಿಳಿದಿತ್ತು. ಈ ಕಥೆಯು ಇದರ ಸುತ್ತವೇ ತಿರುಗಲಿದ್ದು, ಹಳ್ಳಿಯ ಬಡಕುಟುಂಬದಲ್ಲಿ ಬೆಳೆದ ಹುಡುಗನೊಬ್ಬ ಜಾತ್ರೆಯಲ್ಲಿ ನಾಪತ್ತೆಯಾಗಿ ತದನಂತರ ಅವನ ಹುಡುಕಾಟದಲ್ಲಿ ಎದುರಾಗುವ ಒಂದಷ್ಟು ಸಮಸ್ಯೆಗಳ ನಡುವೆ ಅನ್ನದ ಅರಿವು ಮೂಡಿಸುವ ಕಥೆ ಹೊಂದಿದೆ.
ಮಾಸ್ಟರ್ ನಂದನ್ ‘ಮಹದೇವ’ ಎಂಬ ಪಾತ್ರದಲ್ಲಿ ನಟಿಸಿದ್ದು, ಪದ್ಮಶ್ರೀ, ಸಿದ್ದು ಪ್ರಸನ್ನ, ಸಂಪತ್, ಬಲ ರಾಜವಾಡಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.