ಸೋಮವಾರ, ಮಾರ್ಚ್ 1, 2021
29 °C

ದೀಪಿಕಾ ಖಿನ್ನತೆ ಮೀರಿ ನಿಂತ ಬಗೆ

ವಿಶಾಖ ಎನ್‌. Updated:

ಅಕ್ಷರ ಗಾತ್ರ : | |

Deccan Herald

ಗುಳಿಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆ ಖಿನ್ನತೆಗೆ ಒಳಗಾಗಿ ಹಲವು ದಿನಗಳ ಕಾಲ ಚಿತ್ರೀಕರಣದಿಂದಲೇ ದೂರ ಉಳಿದದ್ದು ಹೊಸ ವಿಚಾರವೇನಲ್ಲ. ನಿರಂತರ ಚಿಕಿತ್ಸೆ, ಪೋಷಕರಾಡಿದ ಸಮಾಧಾನದ ಮಾತುಗಳು ಆಕೆಯನ್ನು ಗಟ್ಟಿಗೊಳಿಸಿದ್ದವು. ಹೇಳಿಕೊಳ್ಳಲಾಗದ ಒಂಟಿತನ, ಸಂಕಟದಿಂದ ಹೊರಬಂದ ದೀಪಿಕಾಳ ಮೊಗದಲ್ಲೀಗ ವಿಶ್ವವನ್ನೇ ಗೆದ್ದ ಸಂಭ್ರಮದ ನಗು ಸದಾ ತೊಯ್ದಾಡುತ್ತಿದೆ. ಕಳೆದ ವರ್ಷ ಪ್ರಿಯಾಂಕಾ ಚೋಪ್ರಾ ಮುಡಿಯಲ್ಲಿದ್ದ ‘ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ’ ಗರಿಯನ್ನು, ಈ ವರ್ಷ ತಮ್ಮ ಮುಡಿಗೆರಿಸಿಕೊಂಡಿರುವ ದೀಪಿಕಾ ಖಿನ್ನತೆಯನ್ನು ಮೀರಿ ನಿಂತ ಬಗೆ ಇಲ್ಲಿದೆ.

**

‘ಹ್ಯಾಪಿ ನ್ಯೂ ಇಯರ್’ ಹಿಂದಿ ಸಿನಿಮಾದ ಬಾಲಿಶ ದೃಶ್ಯಗಳನ್ನು ತೆರೆಮೇಲೆ ನೋಡಿ ಕೆಲವರು ಟೀಕಿಸುತ್ತಿದ್ದರು. ಇನ್ನು ಕೆಲವರು ನಟಿ ದೀಪಿಕಾ ಪಡುಕೋಣೆಗೆ ಇನ್ನೂ ‘ಸ್ಕೋಪ್’ ಸಿಗಬೇಕಿತ್ತು ಎಂದುಕೊಳ್ಳುತ್ತಿದ್ದರು. ಆದರೆ, ದೀಪಿಕಾ ಅವರ ತಾಯಿ ಉಜಾಲ ಕಣ್ಣಲ್ಲಿ ಆ ಬಾಲಿಶ ದೃಶ್ಯಗಳೂ ಕಣ್ಣೀರು ತರಿಸಿದ್ದವು. ಅವರ ಪಾಲಿಗೆ ಆ ಸಿನಿಮಾದ ಹಾಸ್ಯ ದೃಶ್ಯಗಳು ಕೂಡ ನಗು ತರಿಸಿರಲಿಲ್ಲ. ಯಾಕೆಂದರೆ, ಅವರ ಮಗಳು ಆ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲೇ ಖಿನ್ನತೆಗೆ ಒಳಗಾಗಿದ್ದು.

ಮೂರು ವರ್ಷಗಳ ಹಿಂದಿನ ಪರಿಸ್ಥಿತಿ ಅದು; 2014ರ ಪ್ರಾರಂಭ. ಬೆಳ್ಳಂ ಬೆಳಿಗ್ಗೆ ದೀಪಿಕಾ ಚಿತ್ರೀಕರಣಕ್ಕೆಂದು ಹಲವು ದಿನ ಎದ್ದು, ಹೊತ್ತಿಗೆ ಸರಿಯಾಗಿ ಸೆಟ್ ತಲುಪುವುದು ಮಾಮೂಲಾಗಿತ್ತು. ಒಂದು ದಿನ ಎದ್ದಾಕ್ಷಣ ಹೊಟ್ಟೆಯಲ್ಲಿ ಏನೋ ಸಂಕಟ. ಎಲ್ಲವೂ ಖಾಲಿ ಖಾಲಿ ಎಂಬ ಭಾವ. ದೊಡ್ಡ ಮನೆಯಲ್ಲಿ ಕೆಲಸಕ್ಕಿದ್ದವರಿಗೂ ತಮ್ಮ ‘ಮೇಡಂ’ ಪರಿಸ್ಥಿತಿ ಏನೆಂದು ಅರ್ಥವಾಗಲಿಲ್ಲ. ಅಮ್ಮನಿಗೆ ಫೋನ್ ಮಾಡಿ, ದೀಪಿಕಾ ಬಿಕ್ಕತೊಡಗಿದರು. ಬಹಳ ಬೇಗ ಉಜಾಲ ಅವರಿಗೆ ಮಗಳ ಕಷ್ಟ ಅರ್ಥವಾಯಿತು. ಅದೇನು ಒಂಟಿತನವೋ, ಹಗಲು-ರಾತ್ರಿಗಳೆನ್ನದೆ ಕೆಲಸ ಮಾಡಿದ ದಣಿವೋ, ಯಾರ ನಂಬುವುದು ಹಿತಕಾಯ್ವರೆಂದು ಎಂಬ ಭಾವನೆಯೋ? ಮಗಳ ಮನಸ್ಸಿನಲ್ಲಿ ಹೊಯ್ದಾಟ ಇದೆಯೆನ್ನುವುದನ್ನು ಅವರು ಬಹಳ ಬೇಗ ಅರಿತರು.

ಬೆಂಗಳೂರಿನಲ್ಲಿದ್ದ ಮನೋವೈದ್ಯೆ ಅನ್ನಾ ಚಾಂಡಿ ವಿಮಾನ ಹತ್ತಿ ಮುಂಬೈನಲ್ಲಿದ್ದ ನಟಿಯ ಮನೆ ತಲುಪಿದರು. ದೀಪಿಕಾ ತಮ್ಮೊಳಗಿದ್ದ ಸಂಕಟವನ್ನು ಹಂಚಿಕೊಂಡರು. ಸಲಹೆಗಳಿಂದಲೇ ಖಿನ್ನತೆ ಕರಗೀತು ಎಂದುಕೊಂಡರು. ಔಷಧದ ಅಗತ್ಯವಿದೆ ಎಂದು ಅನ್ನಾ ಹೇಳಿದರೂ, ದೀಪಿಕಾ ಮೊದಲಿಗೆ ಒಲ್ಲೆ ಎಂದರು. ಆಮೇಲೆ ಬೆಂಗಳೂರಿನ ಇನ್ನೊಬ್ಬ ವೈದ್ಯ ಡಾ. ಶಾಮ್ ಭಟ್ ಅವರಿಂದ ಎರಡನೇ ಅಭಿಪ್ರಾಯ ಪಡೆದರು. ಔಷಧವೇ ದಾರಿ ಎಂದು ಗೊತ್ತಾಯಿತು. 

‘ಹ್ಯಾಪಿ ನ್ಯೂ ಇಯರ್’ ಚಿತ್ರದ ಕ್ಲೈಮ್ಯಾಕ್ಸ್‌ನ ಚಿತ್ರೀಕರಣ ಮುಗಿಸಿದ ಅಷ್ಟೂ ದಿನ ದೀಪಿಕಾ ಖಿನ್ನತೆಯಲ್ಲೇ ಇದ್ದರು. ಅಷ್ಟು ಹೊತ್ತಿಗೆ ನಿರ್ದೇಶಕ ಶೂಜಿತ್ ಸರ್ಕಾರ್ ‘ಪೀಕು’ ಚಿತ್ರದ ಪಾತ್ರಕ್ಕೆ ಕಾಲ್‌ಶೀಟ್ ಪಡೆದಿದ್ದರು. ಎರಡು ತಿಂಗಳು ದೀಪಿಕಾ ಅಲ್ಪವಿರಾಮ ತೆಗೆದುಕೊಂಡರು. ಕೆಲಸದಿಂದ ಅವರಿಗೆ ರಜಾ ಬೇಕಿತ್ತು. ಒತ್ತಡದಿಂದ ಹೊರಬರಲೆಂದು ಅವರು ಬೆಂಗಳೂರಿನ ಅಮ್ಮನ ಮನೆಗೆ ಹೋದರು. 

‘ಮಾಡೆಲ್ ಆಗುವೆ’, ‘ನಟಿಯಾಗುವೆ’ ಎಂದು ಮಗಳು ಹೇಳಿದ್ದಾಗ ತುಸುವೂ ಬೇಸರ ಪಟ್ಟುಕೊಳ್ಳದೆ ಬೆನ್ನುತಟ್ಟಿದ್ದವರು ಪ್ರಕಾಶ್ ಪಡುಕೋಣೆ. ಖಿನ್ನತೆಯಿಂದ ಹೊರಬರಲು ದೀಪಿಕಾಗೆ ಅವರು ಕೆಲವು ಕಿವಿಮಾತು ಹೇಳಿದರು.

ಬಲು ಬೇಗ ನಟಿ ಖಿನ್ನತೆಯಿಂದ ಹೊರಬಂದರು. ಆದರೆ, ಆ ಪ್ರಕ್ರಿಯೆಯಲ್ಲಿ ಅವರಿಗೆ ಅನೇಕ ಮಹತ್ವದ ವಿಷಯಗಳು ಗೊತ್ತಾದವು. ಮುಂಬೈಗೆ ವಾಪಸಾದಾಗ ಅವರ ಸ್ನೇಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಖಿನ್ನತೆಯೇ ಕಾರಣ ಎಂದು ಗೊತ್ತಾದಾಗ ಸಂಕಟವಾಯಿತು. ‘ದಿ ಲಿವ್ ಲವ್ ಲಾಫ್ ಫೌಂಡೇಷನ್’ ಸರ್ಕಾರೇತರ ಸಂಸ್ಥೆಯ ಸ್ಥಾಪನೆಗೆ ಆ ಅನುಭವವೇ ನಾಂದಿ.

‘ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ’ಯ ರಾಯಭಾರಿಯಾದ ದೀಪಿಕಾ, ಖಿನ್ನತೆಯಿಂದ ತಾನು ಹೊರಬಂದ ಬಗೆಯನ್ನು ಮುಕ್ತವಾಗಿ ಹೇಳಿಕೊಂಡೂ ಸುದ್ದಿಯಾದರು. ಅದರಿಂದ ಅನೇಕರಿಗೆ ಪ್ರೇರಣೆಯನ್ನೂ ನೀಡಿದರು. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್, ನಟಿ ಅನುಷ್ಕಾ ಶರ್ಮ ಕೂಡ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲಿದ್ದವರೇ. ಅವರಿಗೂ ದೀಪಿಕಾ ಧೈರ್ಯವು ಟಾನಿಕ್ ಆಗಿ ಒದಗಿಬಂದಿತು.

ಇತ್ತೀಚೆಗೆ ಬೆಂಗಳೂರಿನಲ್ಲಿ ಖಿನ್ನತೆಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ದೀಪಿಕಾ ಹತ್ತು ನಿಮಿಷವಷ್ಟೇ ಬಂದು ಹೋದರು. ಆಗ ಅವರಾಡಿದ ನುಡಿ ಮತ್ತೆ ಸುದ್ದಿಯಾಯಿತು. ಭಾರತದಲ್ಲಿ ಏನಿಲ್ಲವೆಂದರೂ 5 ಕೋಟಿ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂಬ ಸತ್ಯ ದೀಪಿಕಾ ಸುಂದರ ನಯನಗಳನ್ನು ಇನ್ನಷ್ಟು ಚುರುಕುಗೊಳಿಸಿತು.

‘ಬೇಸರವೇ ಬೇರೆ, ಖಿನ್ನತೆಯೇ ಬೇರೆ. ನಮ್ಮ ಸಮಾಜ ಖಿನ್ನರಾದವರನ್ನು ಸಂತೈಸುವಷ್ಟು ಮಾಗಬೇಕು. ಅದನ್ನು ಸಾಧ್ಯವಾಗಿಸಲು ನನ್ನ ಸಂಸ್ಥೆಯ ಮೂಲಕ ಯತ್ನಿಸುತ್ತಿರುವೆ’ ಎಂದು ದೀಪಿಕಾ ಒಮ್ಮೆ ಹೇಳಿಕೊಂಡಿದ್ದರು. ಅಭಿನಯದಲ್ಲಿನ ಅವರ ನಿಯಂತ್ರಣ ಮತ್ತು ಹದ ನೋಡಿದರೆ, ಬದುಕಿನಲ್ಲಿ ದೊಡ್ಡ ಒತ್ತಡದ ಅಲೆಯನ್ನು ಎದುರಿಸಿ ಗೆದ್ದ ಆತ್ಮವಿಶ್ವಾಸ ಎಂಥವರಿಗೂ ಎದ್ದುಕಾಣುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು