ಶನಿವಾರ, ಸೆಪ್ಟೆಂಬರ್ 18, 2021
28 °C

ದಿಶಾ ಸಾಲಿಯಾನ ಸಾವು; ಸುಳ್ಳು ಸುದ್ದಿ ಹಂಚಬೇಡಿ ಎಂದ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆ‌ ಹಾಗೂ ಅವರ ಮ್ಯಾನೇಜರ್‌ ದಿಶಾ ಸಾಲಿಯನ್‌ ಸಾವಿನ ಕುರಿತಾಗಿ ದಿನಕ್ಕೊಂದು ಸುದ್ದಿ ಹರಿದಾಡುತ್ತಲೇ ಇವೆ.

ಈ ಸುದ್ದಿಗಳಿಂದ ಬೇಸತ್ತಿರುವ ದಿಶಾ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ‘ಇಂಥ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವು ದನ್ನು ನಿಲ್ಲಿಸಿ. ಅವಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹರಡಬೇಡಿ’ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜೂನ್ 9ರಂದು ಮುಂಬೈನಲ್ಲಿ ದಿಶಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅದಾಗಿ ನಾಲ್ಕು ದಿನಗಳ ನಂತರ ನಟ ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಬ್ಬರ ಸಾವಿನ ನಡುವೆ ಪರಸ್ಪರ ಸಂಬಂಧ ಕಲ್ಪಿಸಿದ ಸುದ್ದಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ‘ಈ ಎಲ್ಲಾ ಕಲ್ಪಿತ ಕತೆಗಳಿಗೆ ಅಂತ್ಯ ಹಾಕಬೇಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬ ಸದಸ್ಯರು, ಪತ್ರ ಬರೆದು  ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇಂತಹ ಸುಳ್ಳು ಮಾಹಿತಿಗಳನ್ನು ಹರಡಬೇಡಿ, ಸ್ವಲ್ಪ ಮಾನವೀಯತೆ ತೋರಿಸಿ’ ಎಂದು ಮನವಿ ಮಾಡಿದ್ದಾರೆ. 

‘ಸ್ನೇಹಿತರೇ, ಯಾರೆಲ್ಲ ಇದನ್ನು ಓದಿತ್ತಿರುವಿರೋ ಅವರಿಗೆ ವೈಯಕ್ತಿಕವಾಗಿ ನಮ್ಮ ಬಗ್ಗೆಯಾಗಲಿ ಹಾಗೂ ದಿಶಾ ಬಗ್ಗೆಯಾಗಲಿ  ಹೆಚ್ಚೇನೂ ತಿಳಿದಿರಲಾರದು.  ಆದರೆ ನಾವೆಲ್ಲ ಮನುಷ್ಯರು. ನಮಗೆ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇದೆ. ನೀವು ನಮ್ಮ ನೋವನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಮ್ಮ ನಂಬಿಕೆ’ ಎಂದು ಪತ್ರದ ಆರಂಭದಲ್ಲಿ ಬರೆದಿದ್ದಾರೆ.  

‘ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದೇವೆ. ಆಕೆಯ ಸಾವಿನಿಂದ ಆಗಿರುವ ನೋವಿನಿಂದ ಹೊರಬರಲು ನಾವು ಪ್ರಯತ್ನಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಅನಗತ್ಯ ಸುಳ್ಳು ಸುದ್ದಿ, ಕಟ್ಟುಕತೆಗಳಿಂದ ಘಾಸಿಯಾಗಿದೆ. ಆಕೆಯನ್ನು ಕಳೆದುಕೊಂಡ ನೋವು ಮರೆಯಲು ನೀವು ನಮ್ಮೊಂದಿಗೆ ಇರಿ. ಹಾಗೇ ಇದು ಸೂಕ್ಷ್ಮ ವಿಚಾರ. ಇದರ ಲಾಭವನ್ನು ಬೇರೆಯವರು ಪಡೆದುಕೊಳ್ಳಬಹುದು’ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ. 

ಪತ್ರದ ಕೊನೆಯಲ್ಲಿ ‘ದಿಶಾ ಮಗಳು, ಸಹೋದರಿ, ಸ್ನೇಹಿತೆ ಸ್ಥಾನವನ್ನು ತುಂಬಿದ್ದಳು. ನಿಮ್ಮ ಪ್ರೀತಿಪಾತ್ರರಿಗೆ ಇಂತಹ ಸ್ಥಿತಿ ಎದುರಾದರೆ ನಿಮಗೆ ಹೇಗೆ ಎನ್ನಿಸುತ್ತದೆ? ನಾವು ಮೊದಲು ಮಾನವರಾಗೋಣ. ಸಾವಿನಲ್ಲಿ ಆಕೆಯನ್ನು ಶಾಂತಿಯಿಂದ ಇರಲು ಬಿಡೋಣ. ಕರುಣೆಯನ್ನು ಹಂಚೋಣ’ ಎಂದು ಪತ್ರದಲ್ಲಿ ವಿನಂತಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು