ಬುಧವಾರ, ಜೂನ್ 29, 2022
21 °C

8 ಗಂಟೆಗೆ ಮದುವೆ, 9 ಗಂಟೆಗೆ ನಾಟಕ: ಇದು ನಟಿ ಗಿರಿಜಾ ಲೋಕೇಶ್‌ ಬದುಕಿನ ಕಥೆ

ನಿರೂಪಣೆ: ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಲಲಿತ ಕಲಾ ಸಂಘದ 20ರ ಸಂಭ್ರಮದ ಸಮಾರೋಪಕ್ಕೆ ಅತಿಥಿಯಾಗಿ ಬಂದಿದ್ದ ಹಿರಿಯ ನಟಿ ಗಿರಿಜಾ ಲೋಕೇಶ್‌ ಅವರು, ತಮ್ಮ ಬಾಲ್ಯದ ಜೀವನ ಹಾಗೂ ವೃತ್ತಿ ಬದುಕಿನ ಹಲವು ಕುತೂಹಲಕಾರಿ ಘಟನೆಗಳನ್ನು ನೆನಪಿಸಿಕೊಂಡರು.

**

ರಂಗಭೂಮಿ, ಕಿರುತೆರೆ, ಬೆಳ್ಳಿ ತೆರೆಯಲ್ಲಿ ಮಿಂಚುವ ಹಲವು ಕಲಾವಿದರ ಕೊನೆಗಾಲದ ಸಂಕಷ್ಟವನ್ನು ನಾವೇ ಕೇಳಬೇಕಿದೆ. ನಮ್ಮಿಂದಾದ ಕಿರು ಸಹಾಯವನ್ನು ಮಾಡಬೇಕಾದ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಅನಿವಾರ್ಯವೂ ಆಗಿದೆ. ಅವರಿಗೆ ಸ್ಪಂದಿಸಬೇಕಾದದ್ದು ನಮ್ಮ ಧರ್ಮವೂ ಆಗಬೇಕಿದೆ.

ಬಾಲ್ಯದಿಂದಲೂ 70ರ ಹರೆಯದವರೆಗೂ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಈಗಲೂ ಲವಲವಿಕೆಯಿಂದ ಚಿತ್ರೀಕರಣದಲ್ಲಿ ಭಾಗಿಯಾಗುವೆ. ನನ್ನ ದುಡಿಮೆಯಲ್ಲಿ ಒಂದಿಷ್ಟು ಹಣವನ್ನು 10 ಕಲಾವಿದರ ಕೊನೆಗಾಲದ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ನೀಡುತ್ತಿದ್ದೇನೆ.

ಕಲಾವಿದರ ಸಂಕಷ್ಟಕ್ಕಾಗಿ ಸಚಿವರು, ಅಧಿಕಾರಿಗಳ ಮುಂದೆ ಅಂಗಲಾಚಿಕೊಂಡು ನಿಲ್ಲಲ್ಲು ನನ್ನಿಂದ ಆಗಲ್ಲ. ಹಲವು ಬಾರಿ ಇದು ಪ್ರಯೋಜನಕ್ಕೂ ಬರಲ್ಲ ಎಂಬುದು ಅರಿವಾಗಿದೆ. ಆದ್ದರಿಂದ ನನ್ನ ದುಡಿಮೆಯಲ್ಲೇ ಸಹಕಾರ ನೀಡುತ್ತಿರುವೆ. ಕಲಾ ಲೋಕಕ್ಕೆ ನನ್ನ ಸೇವೆಯಿದು.

₹ 5ಕ್ಕೆ ಒಂದು ನೃತ್ಯ: ಬಾಲ್ಯದಲ್ಲಿ ಸಂಗೀತ, ನೃತ್ಯ ಕಲಿಕೆಯಲ್ಲಿ ನನಗೆ ಆಸಕ್ತಿಯಿರಲಿಲ್ಲ. ಆದರೂ ತಾಯಿ ಬಲವಂತದಿಂದ ಅಭ್ಯಾಸಕ್ಕೆ ಕಳಿಸುತ್ತಿದ್ದರು. ನಾನು ಕಲಿತೆ. ನಮ್ಮದು ದೊಡ್ಡ ಕುಟುಂಬ. ನಾವು 8 ಮಕ್ಕಳಿದ್ದೆವು, ತಂದೆ ವ್ಯಾಪಾರಿ. ಎಲ್ಲವೂ ಅನುಕೂಲವಿತ್ತು. ಎಂಟನೇ ತರಗತಿಯಲ್ಲಿದ್ದಾಗ ನಮ್ಮಪ್ಪ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದರು. ಸಂಸಾರ ನೌಕೆ ಸಾಗುವುದೇ ದುಸ್ತರ ಎನ್ನುವಂತ ಸ್ಥಿತಿ. ಬಾಲ್ಯದಲ್ಲಿ ನಾನು ಕಲಿತ ನೃತ್ಯ ನಮ್ಮ ಕುಟುಂಬಕ್ಕೆ ಆಸರೆಯಾಯ್ತು.

ಆಗ ರಂಗಭೂಮಿ ಪ್ರವೇಶಿಸಿದೆ. ಆರಂಭದ ದಿನಗಳಲ್ಲಿ ಒಂದು ನೃತ್ಯ ಮಾಡಿದರೆ 5 ರೂಪಾಯಿ ಕೊಡೋರು. ಇದು ವಾರಕ್ಕೆ ಸಾಕಾಗೋದು. ತಿಂಗಳಿಗೆ ಇಂತಹ ಎರಡ್ಮೂರು ಕಾರ್ಯಕ್ರಮ ಸಿಗುತ್ತಿದ್ದವು. ನಂತರ ಪಾತ್ರ ಸಿಕ್ಕಿತ್ತು. ಒಂದು ಪಾತ್ರಕ್ಕೆ ₹ 15. ತಿಂಗಳ ರೇಷನ್ ಆಗೋದು. ಹೀಗೆ ಕಲೆ ನನ್ನ ಬದುಕು, ಕುಟುಂಬವನ್ನು ಕೈ ಹಿಡಿಯಿತು.

ಏಕಾಂತಿಯ ಪ್ರಣಯಿ: ನಮ್ಮೆಜಮಾನ್ರು ಲೋಕೇಶ್‌ ಸುಬ್ಬಯ್ಯ ನಾಯ್ಡು ಅವರ ಪುತ್ರ. ರಂಗಭೂಮಿ, ಕನ್ನಡ ಚಲನಚಿತ್ರ ರಂಗಕ್ಕೆ ಹಲವು ಪ್ರಥಮಗಳನ್ನು ನೀಡಿದ ಕುಟುಂಬದ ಕುಡಿ.

ಲೋಕೇಶ್‌ ಹೆಚ್ಚು ಏಕಾಂತ ಬಯಸುತ್ತಿದ್ದವರು. ತಮ್ಮ ಜೀವನದಲ್ಲಿ ಹತ್ತರಿಂದ ಹನ್ನೆರೆಡಕ್ಕೂ ಹೆಚ್ಚು ಆಪ್ತರನ್ನು ಹೊಂದದವರು. ಅದರಲ್ಲಿ ನಾನೂ ಒಬ್ಬಾಕೆ. ಅತ್ಯಾಪ್ತೆ.

ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಯಾರೊಟ್ಟಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಗೆಳತಿಯರ ಸವಾಲು ಸ್ವೀಕರಿಸಿ ಒಂದೊಮ್ಮೆ ಲೋಕೇಶ್ ಮಾತನಾಡಿಸಿದೆ. ಆಗಿನಿಂದ ನಮ್ಮ ನಡುವೆ ಒಡನಾಟ ಬೆಳೆಯಿತು. ಸ್ನೇಹವಾಯ್ತು. ಇದೂ ಪ್ರಣಯಕ್ಕೂ ತಿರುಗಿ, ಮದುವೆಯೂ ಆಯಿತು.

ನಮ್ಮ ಮದುವೆ ದಿನ ಕಾಕನಕೋಟೆ ನಾಟಕದ 25ನೇ ಪ್ರದರ್ಶನ. ಬೆಳಿಗ್ಗೆ 8 ಗಂಟೆಗೆ ಮದುವೆ. 9 ಗಂಟೆಗೆ ನಾಟಕ ಶುರು. ಅಪ್ಪ–ಮಗಳ ಪಾತ್ರದಲ್ಲಿ ಇಬ್ಬರೂ ಅಭಿನಯಿಸಿದೆವು. ಸಿ.ಆರ್‌. ಸಿಂಹ ನಡು ನಡುವೆ ಕಿಚಾಯಿಸುತ್ತಿದ್ದರು. ‘ಮೈ ಮರೆಯಬೇಡ್ರೀ ಕಣ್ರೋ’ ಎನ್ನುತ್ತಿದ್ದರು.

ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವೆ. ಎಲ್ಲ ಪಾತ್ರಗಳಲ್ಲೂ ಅಭಿನಯಿಸಿದ ತೃಪ್ತಿಯಿದೆ. ಆದರೆ ಲೋಕೇಶ್‌ ಅವರಿಂದ ಪಾತ್ರ ನಿಭಾಯಿಸುವಿಕೆಯ ಕಲೆ ಕಲಿಯಲಿಕ್ಕಾಗಲಿಲ್ಲವಲ್ಲಾ ಎಂಬುದೊಂದೇ ನನ್ನ ಕೊರಗಾಗಿದೆ.

ಬಣ್ಣದ ಲೋಕಕ್ಕೆ ಮಗ ಸೃಜನ್ ಲೋಕೇಶ್‌ ಬರಬಾರದು ಎಂಬುದು ನನ್ನ ಹಟವಾಗಿತ್ತು. ಆತ ರ‍್ಯಾಂಕ್ ಸ್ಟೂಡೆಂಟ್‌ ಆಗಿದ್ದ. ಆದರೆ ಲೋಕೇಶ್‌, ‘ಮಕ್ಕಳಿಗೆ ಏನನ್ನೂ ಹೇರಬೇಡ’ ಅಂದ್ರು. ಆಗಿನಿಂದ ಅವನಷ್ಟಕ್ಕೆ ಬಿಟ್ಟೆ. ಅವ ಇದೀಗ ‘ಮಜಾ ಟಾಕೀಸ್‌’ನಿಂದ ಎಲ್ಲೆಡೆ ಖ್ಯಾತನಾಗಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು