ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಬುಲೆನ್ಸ್‌ ಚಾಲಕನಾದ ನಟ ಅರ್ಜುನ್‌ ಗೌಡ

Last Updated 30 ಏಪ್ರಿಲ್ 2021, 21:17 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ರೋಗಿಗಳ ಪರದಾಟಕ್ಕೆ ಮಿಡಿದ ಕನ್ನಡ ಚಿತ್ರರಂಗದ ಯುವ ನಟ ಅರ್ಜುನ್‌ ಗೌಡ, ಆಸ್ಪತ್ರೆಗಳಿಗೆ ರೋಗಿಗಳ ರವಾನೆ, ಚಿತಾಗಾರಕ್ಕೆ ಸೋಂಕಿತ ಮೃತದೇಹಗಳ ಸ್ಥಳಾಂತರ ಹಾಗೂ ತುರ್ತು ಅಗತ್ಯ ಇರುವೆಡೆಗೆ ಆಮ್ಲಜನಕ ಪೂರೈಸುವ ಮೂಲಕ ‘ಆಂಬುಲೆನ್ಸ್‌ ಚಾಲಕ’ನಾಗಿ ಉಚಿತ ಸೇವೆ ನೀಡುತ್ತಿದ್ದಾರೆ.

‘ರುಸ್ತುಂ’, ‘ಒಡೆಯ’, ‘ಏಕ್‌ ಲವ್‌ಯಾ’ ಹಾಗೂ ಇತ್ತೀಚೆಗೆ ತೆರೆಕಂಡ ‘ಯುವರತ್ನ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಬಹುತೇಕ ಚಿತ್ರಗಳಲ್ಲಿ ಖಳನಟನ ಪಾತ್ರ. ಆದರೆ, ಈಗ ಕೋವಿಡ್‌ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಬಹಳಷ್ಟು ರೋಗಿಗಳ ಪಾಲಿಗೆ ನಿಜಜೀವನದ ಹೀರೊ ಆಗಿದ್ದಾರೆ.

‘ನಾನು ಮೊದಲಿಗೆ ಎಲ್ಲರಂತೆ ಕೋವಿಡ್ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಒಂದು ಘಟನೆ ನನ್ನನ್ನು ಆಂಬುಲೆನ್ಸ್ ಚಾಲಕನನ್ನಾಗಿ ಮಾಡಿತು’ ಎನ್ನುತ್ತಾರೆ ನಟ ಅರ್ಜುನ್‌ ಗೌಡ.

‘ನಮ್ಮ ಮನೆಗೆ ಅಜ್ಜಿಯೊಬ್ಬರು ಪ್ರತಿದಿನ ಹಾಲು ಪೂರೈಸುತ್ತಿದ್ದರು. ಹತ್ತು ದಿನಗಳ ಹಿಂದೆ ಅವರು ಕೋವಿಡ್‌ನಿಂದ ಮೃತಪಟ್ಟ ವಿಚಾರ ತಿಳಿಯಿತು. ನನಗೆ ಪರಿಚಿತನಾಗಿದ್ದ ಅವರ ಮೊಮ್ಮಗ ಸಹಾಯ ಕೋರಿ ಕರೆ ಮಾಡಿದ. ಆಂಬುಲೆನ್ಸ್‌ಗೆ ನೀಡಲು ತುರ್ತಾಗಿ ಹಣ ಬೇಕು ಎಂದ. ಎಷ್ಟು ಎಂದು ಕೇಳಿದ್ದಕ್ಕೆ ₹12 ಸಾವಿರ ಎಂದ. ಇದನ್ನು ಕೇಳಿ ಆಘಾತಗೊಂಡೆ. ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲು ಇಷ್ಟು ದೊಡ್ಡ ಮೊತ್ತದ ಬೇಡಿಕೆ ಇಡುವ ಸ್ಥಿತಿ ಕಂಡು ನೋವಾಯಿತು. ಹಾಗಾಗಿ, ಉಚಿತವಾಗಿ ಆಂಬುಲೆನ್ಸ್‌ ಸೇವೆ ನೀಡಬೇಕೆಂದು ನಿರ್ಧರಿಸಿದೆ’ ಎಂದು ಅರ್ಜುನ್ ಆ ಘಟನೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಚಂದ್ರಾ ಬಡಾವಣೆಯಲ್ಲಿ ನನ್ನದೊಂದು ಜಿಮ್ ಇದೆ. ಸದ್ಯಕ್ಕೆ ಚಿತ್ರರಂಗ ತಟಸ್ಥ, ಜಿಮ್‌ಗೂ ನಿರ್ಬಂಧ. ಆಂಬುಲೆನ್ಸ್ ಚಾಲಕನಾಗಿ ಸೇವೆ ಸಲ್ಲಿಸಲು ಇದನ್ನೇ ಅವಕಾಶ ಮಾಡಿಕೊಂಡು, ‘ಪ್ರಾಜೆಕ್ಸ್‌ ಸ್ಮೈಲ್‌ ಟ್ರಸ್ಟ್‌’ನ ಮೊರೆಹೋದೆ. ಅವರಲ್ಲಿದ್ದ ಆಂಬುಲೆನ್ಸ್‌ವೊಂದನ್ನು ಪಡೆದು, ಅದರ ನಿರ್ವಹಣೆ ಹಾಗೂ ಚಾಲನೆ ಕುರಿತು ಎರಡು ದಿನ ತರಬೇತಿ ಪಡೆದೆ. ಒಂದು ವಾರದಿಂದ ಹಲವು ರೋಗಿಗಳನ್ನು ಆಸ್ಪತ್ರೆಗೆ ತಲುಪಿಸಿದ್ದೇನೆ. ಮೃತದೇಹಗಳನ್ನು ಚಿತಾಗಾರಕ್ಕೆಸಾಗಿಸಿದ್ದೇನೆ. ಕೊರತೆ ಇರುವ ಕಡೆಗೆ ಆಮ್ಲಜನಕ ಪೂರೈಸುತ್ತಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ತೃಪ್ತಿ ಇದೆ’ ಎಂದು ಹೇಳಿದರು.

‘ಆಂಬುಲೆನ್ಸ್‌ ಚಾಲಕನಾದ ಬಳಿಕ ಪರಿಸ್ಥಿತಿಯ ನೈಜ ಚಿತ್ರಣ ಕಾಣಿಸಿತು. ಕಾಶಿಯ ಘಾಟ್‌ವೊಂದರಲ್ಲಿ ಮೃತರ ಅಂತ್ಯಕ್ರಿಯೆ ನಡೆಯುವುದನ್ನು ನೋಡಿದ್ದೆ. ಈಗ ಬೆಂಗಳೂರಿನಲ್ಲೇ ಆ ದೃಶ್ಯಗಳು ಕಂಡುಬರುತ್ತಿವೆ’ ಎಂದರು.

ಉಚಿತ ಸೇವೆ ನೀಡುವ ಆಂಬುಲೆನ್ಸ್‌ನೊಂದಿಗೆ ನಟ ಅರ್ಜುನ್ ಗೌಡ
ಉಚಿತ ಸೇವೆ ನೀಡುವ ಆಂಬುಲೆನ್ಸ್‌ನೊಂದಿಗೆ ನಟ ಅರ್ಜುನ್ ಗೌಡ

‘ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ಊರಿಗೆ ತೆರಳಿರುವ ಸ್ನೇಹಿತನ ಮನೆಯಲ್ಲಿ ಒಬ್ಬನೇ ಉಳಿದುಕೊಂಡಿದ್ದೇನೆ. ಕುಟುಂಬವನ್ನು ಸದ್ಯಕ್ಕೆ ದೂರವೇ ಇಟ್ಟಿದ್ದೇನೆ. ಆಂಬುಲೆನ್ಸ್‌ ಉಸ್ತುವಾರಿಯನ್ನು ಸಂಸ್ಥೆಯೇ ನಿರ್ವಹಿಸುತ್ತಿದೆ. ಉಚಿತ ಸೇವೆಗಾಗಿ ಕೈಲಾದ ಆರ್ಥಿಕ ಸಹಾಯ ಮಾಡುತ್ತಿದ್ದೇನೆ. ಆಗಾಗ ಡೀಸೆಲ್‌ ವೆಚ್ಚ ಭರಿಸಲು ಸಮಸ್ಯೆಯಾಗುತ್ತಿದೆ’ ಎಂದೂ ಹೇಳಿದರು.

‘ಬೆಡ್ ಸಾಧ್ಯವಾಗಲಿಲ್ಲ, ಕ್ಷಮಿಸಿ’
‘ಎರಡು ದಿನಗಳ ಹಿಂದೆ ರೋಗಿಯೊಬ್ಬರನ್ನು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಿದ್ದೆ. ಅಲ್ಲಿ ಕ್ಯಾಬ್‌ ಚಾಲಕರೊಬ್ಬರು ಕೋವಿಡ್‌ ಸೋಂಕು ತಗುಲಿರುವ ಪೋಷಕರೊಂದಿಗೆ ಒಂದು ದಿನದಿಂದ ಹಾಸಿಗೆಗಾಗಿ ಕಾಯುತ್ತಿದ್ದರು. ನನ್ನ ಬಳಿ ಬಂದು ಹೇಗಾದರೂ ಒಂದು ಹಾಸಿಗೆ ವ್ಯವಸ್ಥೆ ಮಾಡುವಂತೆ ಅಳುತ್ತಾ ಕೇಳಿಕೊಂಡರು. ಗೊತ್ತಿರುವ ಆಸ್ಪತ್ರೆಗಳಲ್ಲಿ ಸಂಜೆವರೆಗೂ ಪ್ರಯತ್ನಿಸಿದೆ. ಆದರೂ ಹಾಸಿಗೆ ಸಿಗಲೇ ಇಲ್ಲ. ಅವರ ಕಷ್ಟಕ್ಕೆ ನನ್ನಿಂದ ಏನೂ ಮಾಡಲಾರದೆ, ಅಸಹಾಯಕನಾಗಿ ಅಲ್ಲಿಂದ ಹೊರಟೆ. ಆ ನೋವು ಈಗಲೂ ಇದೆ. ಅವರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದು ಮರುಗಿದಅರ್ಜುನ್‌, ತುರ್ತು ಅಗತ್ಯವಿದ್ದವರುಪ್ರಾಜೆಕ್ಸ್‌ ಸ್ಮೈಲ್‌ ಟ್ರಸ್ಟ್‌ನ9845010140 ಸಂಖ್ಯೆಗೆ ಸಂಪರ್ಕಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT