ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘು ಸಿನಿಮಾ ವಿಮರ್ಶೆ: ಬಲವಂತದ ಏಕಪಾತ್ರ ಸೂತ್ರ

Published 28 ಏಪ್ರಿಲ್ 2023, 20:35 IST
Last Updated 28 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ವಿನಾಯಕ ಕೆ.ಎಸ್‌.

ಚಿತ್ರ: ರಾಘು

ನಿರ್ಮಾಣ: ರಣ್ವಿತ್​ ಶಿವಕುಮಾರ್​, ಅಭಿಷೇಕ್​ ಕೋಟಾ

ನಿರ್ದೇಶನ: ಎಂ. ಆನಂದ್​ ರಾಜ್​

ಪಾತ್ರವರ್ಗ: ವಿಜಯ್‌ ರಾಘವೇಂದ್ರ

ನಾಟಕ, ನೃತ್ಯ, ಯಕ್ಷಗಾನದಂತಹ ಬೇರೆ ಬೇರೆ ಕಲಾಪ್ರಕಾರಗಳಲ್ಲಿ ಏಕವ್ಯಕ್ತಿ ಪ್ರದರ್ಶನ ವಿರಳವಲ್ಲ. ಆದರೆ ಸಿನಿಮಾ ವಿಷಯಕ್ಕೆ ಬಂದಾಗ, ಅದರಲ್ಲಿಯೂ ಕನ್ನಡದಲ್ಲಿ ಒಂದೇ ಪಾತ್ರ ಹೊಂದಿರುವ ಚಿತ್ರ ಬಂದಿದ್ದು ಅತ್ಯಂತ ವಿರಳ. ಆ ನೆಲೆಯಲ್ಲಿ ನೋಡಿದಾಗ ವಿಜಯ್‌ ರಾಘವೇಂದ್ರ ಅಭಿನಯದ ‘ರಾಘು’ ವಿಶಿಷ್ಟ ಪ್ರಯೋಗ. ಇಂಥ ಸಿನಿಮಾಗಳಲ್ಲಿ ನಟನೊಬ್ಬ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಬೇಕು. ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವ ನಟ ವಿಜಯ್​ ರಾಘವೇಂದ್ರ, ತಮಗೆ ಸಿಕ್ಕ ಪಾತ್ರವನ್ನು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ.

ಇಡೀ ಚಿತ್ರದಲ್ಲಿ ಇತರ ಪಾತ್ರಗಳು ಅಗತ್ಯ ಮತ್ತು ಅನಿವಾರ್ಯವಾಗಿದ್ದರೂ ಓರ್ವ ಪಾತ್ರಧಾರಿಯನ್ನು ಮಾತ್ರ ತೋರಿಸುತ್ತೇನೆ ಎಂಬಂತಹ ಚಿತ್ರಕಥೆಗೆ ನಿರ್ದೇಶಕ ಆನಂದ್​ ರಾಜ್ ಮಾರುಹೋಗಿರುವುದು ಇಡೀ ಪ್ರಯೋಗವನ್ನೇ ಹಾಸ್ಯಾಸ್ಪದವಾಗಿಸಿಬಿಡುತ್ತದೆ. ಚಿತ್ರದುದ್ದಕ್ಕೂ ತರ್ಕವಿಲ್ಲದ ಈ ರೀತಿಯ ಸಾಕಷ್ಟು ದೃಶ್ಯಗಳು ಕಾಣಸಿಗುತ್ತವೆ. ಇಲ್ಲಿ ನಾಯಕನನ್ನು ಬಿಟ್ಟು ಉಳಿದ ಪಾತ್ರ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರವೇ ಸಿಗುವುದಿಲ್ಲ! ತೀರ ನಗು ತರಿಸುವುದು ಪೊಲೀಸ್‌ ಠಾಣೆಯ ದೃಶ್ಯ. ದೂರು ಬರೆಸಿಕೊಳ್ಳುವ ಪೇದೆಯ ಮಾತನ್ನು ಮಾತ್ರ ಕೇಳಿಸುತ್ತಾರೆ. ಆದರೆ ಮುಖ ಕಾಣಿಸುವುದಿಲ್ಲ. ಇಡೀ ಚಿತ್ರಕಥೆ ನಿಂತಿರುವುದೇ ರಾಘುವಿನ ಪ್ರೇಯಸಿ ಪಾತ್ರದ ಮೇಲೆ. ಆದರೆ ಆಕೆಯ ಮುಖ ಯಾಕೆ ಚಿತ್ರದಲ್ಲಿ ಕಾಣುವುದಿಲ್ಲ ಎಂದರೆ, ಬಹುಶಃ ಅದಕ್ಕೆ ಉತ್ತರ ಇದು ಒಂದೇ ಪಾತ್ರ ಹೊಂದಿರುವ ಸಿನಿಮಾ ಎಂದಿರಬೇಕು

ಒಂದೇ ಪಾತ್ರವೇ ಹಿಡಿದಿಟ್ಟುಕೊಳ್ಳುವಂತಹ ಗಟ್ಟಿಯಾದ ಕಥೆಯೇ ಚಿತ್ರಕ್ಕಿಲ್ಲ. ರಾಘುವಿನ ಆಪ್ತಮಿತ್ರ ಅನಾಸಿನ್‌, ಲಾಕ್‌ಡೌನ್‌ ಪ್ರಾರಂಭವಾಯ್ತು ಎಂಬ ಸುದ್ದಿ ನೀಡುವ ಕರೆಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ ಮತ್ತು ಚಿತ್ರ ಮುಗಿಯುವ ಹೊತ್ತಿಗೆ ಪ್ರೇಕ್ಷಕನಿಗೂ ಆತ ಆಪ್ತಮಿತ್ರನಾಗಿರುತ್ತಾನೆ! 

ಛಾಯಾಗ್ರಾಹಕ ಉದಯ್​ ಲೀಲಾ ಮುಚ್ಚುತ್ತಿದ್ದ ಕಣ್ಣುಗಳನ್ನು ಆಗಾಗ ತೆರೆಸುತ್ತಾರೆ. ರಿತ್ವಿಕ್​ ಮುರಳೀಧರ್​ ಹಿನ್ನೆಲೆ ಸಂಗೀತದಿಂದ ಒಂದಷ್ಟು ಕುತೂಹಲ ಹುಟ್ಟಿಸುತ್ತಾರೆ. ಒಂದು ಸಿದ್ಧಸೂತ್ರದ ಸಿನಿಮಾದಲ್ಲಿರಬೇಕಾದ ಪ್ರೀತಿ, ಪ್ರೇಮ, ದ್ವೇಷ...ಎಲ್ಲವೂ ಸಿನಿಮಾದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT