ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವ್ಯವಸ್ಥೆ ವಿಡಂಬನೆಯ ಕೊಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರ 'ಮತ್ತೆ ಉದ್ಭವ'

Last Updated 11 ಡಿಸೆಂಬರ್ 2019, 12:49 IST
ಅಕ್ಷರ ಗಾತ್ರ

ಬಿ.ವಿ.ವೈಕುಂಠರಾಜು ಅವರ ಹೆಸರಾಂತ ನಾಟಕ ‘ಉದ್ಭವ’ವನ್ನು ತೆರೆ ಮೇಲೆ ತಂದು ಚಿತ್ರರಂಗದಲ್ಲಿ ಯಶಸ್ಸಿನ ಮೈಲುಗಲ್ಲು ನೆಟ್ಟಿದ್ದ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ, ಈಗ ಅದರ ಮುಂದುವರಿದ ಭಾಗವಾಗಿ ‘ಮತ್ತೆ ಉದ್ಭವ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಪ್ರಸ್ತುತ ರಾಜಕೀಯ ವ್ಯವಸ್ಥೆಯ ವಿಡಂಬನೆಯನ್ನು ಒಳಗೊಂಡಿರುವ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಪಂಚಿಂಗ್‌ ಡೈಲಾಗ್‌, ಹಾಸ್ಯ ಹಾಗೂ ಆ್ಯಕ್ಷನ್‌ ಅಂಶಗಳಿಂದ ಕೂಡಿರುವ 40 ಸೆಕೆಂಡುಗಳ ಟೀಸರ್‌ಚಿತ್ರಪ್ರಿಯರ ಗಮನ ಸೆಳೆಯುವಂತಿದೆ.

ಟೀಸರ್‌ ಬಿಡುಗಡೆ ಮಾಡಿದ ನಿರ್ದೇಶಕ ಮತ್ತು ನಟ ರಿಷಭ್‌ ಶೆಟ್ಟಿ, ಚಿತ್ರದಲ್ಲಿ ತಾಜಾತನವಿದೆ. ಮೂರು ದಶಕಗಳ ಹಿಂದೆ ಹೊಸ ಅಲೆ ಸೃಷ್ಟಿಸಿದ ಚಿತ್ರದ ಮುಂದುವರಿದ ಭಾಗವಾಗಿ ಆ ಸೀಕ್ವೆಲ್‌ಗೆ ಧಕ್ಕೆಯಾಗದಂತೆ ಚಿತ್ರ ಮಾಡುವುದು ಸವಾಲಿನ ಕೆಲಸ. ಅದರಲ್ಲಿ ರಾಮಕೃಷ್ಣ ಅವರು ಯಶಸ್ವಿಯಾಗಿರುವುದು ಟೀಸರ್‌ನಲ್ಲಿ ಕಾಣಿಸುತ್ತದೆ ಎಂದು ಪ್ರಶಂಸಿಸಿದರು.

ಹಿರಿಯ ನಿರ್ದೇಶಕ ಟಿ.ಎನ್‌. ಸೀತರಾಂ ‘ಇದೊಂದು ವಿನೋದಭರಿತ ಚಿತ್ರ. ಚಿತ್ರದ ಸಂಭಾಷಣೆಯು ಪ್ರೇಕ್ಷಕನ ಬುದ್ಧಿಯ ಮೂಲಕ‌ ಹೃದಯ ತಟ್ಟುತ್ತದೆ. ಹಳೆಯ ಉದ್ಭವದಂತೆ ‘ಮತ್ತೆ ಉದ್ಭವ’ವೂ ಶತದಿನ ಪೂರೈಸಲಿ’ ಎಂದು ಆಶಿಸಿದರು.

ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ, ‘ಇದು ನನ್ನ ಮೊದಲ ಕಮರ್ಷಿಯಲ್‌ ಸಿನಿಮಾ. ವಿಭಿನ್ನ ಕಥೆಯ ಚಿತ್ರ. ಹಳೆಯ ‘ಉದ್ಭವ’ಕ್ಕಿಂತ ನಾಲ್ಕು ಪಟ್ಟು ಚೆನ್ನಾಗಿ ಈ ಸಿನಿಮಾ ಮೂಡಿಬಂದಿದೆ. ಎಲ್ಲ ಕಲಾವಿದರೂ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ನಾಯಕ ಪ್ರಮೋದ್‌ ಇಷ್ಟೊಂದು ಪ್ರತಿಭಾವಂತ ನಟ ಎನ್ನುವುದು ಗೊತ್ತಿರಲಿಲ್ಲ. ಈ ಚಿತ್ರ ಪ್ರಮೋದ್‌ಗೆ ಕಮರ್ಷಿಯಲ್‌ ಚಿತ್ರಗಳ ನಾಯಕನಾಗಿ ಬ್ರೇಕ್‌ ಕೊಡಲಿದೆ. ನಾಯಕಿ ಮಿಲನಾ ನಾಗರಾಜ್‌ ಕೂಡ ಅಷ್ಟೇ ಸೊಗಸಾಗಿ ನಟಿಸಿದ್ದಾರೆ. ನಟ ಮೋಹನ್‌ ಗಮನ ಸೆಳೆಯುವಂತಹ ಸಂಭಾಷಣೆ ಬರೆದು ಚಿತ್ರಕಥೆಗೆ ನ್ಯಾಯ ಒದಗಿಸಿದ್ದಾರೆ’ ಎಂದರು.

ನಾಯಕ ನಟನಾಗಿ ಬಡ್ತಿ ಪಡೆದಿರುವ ಪ್ರಮೋದ್‌ಗೆ ಇದು ಮೂರನೇ ಚಿತ್ರ. ‘ಪ್ರೀಮಿರ್‌ ಪದ್ಮಿನಿ ನಂತರ ವಿಭಿನ್ನ ಪಾತ್ರ ಹುಡುಕುತ್ತಿದ್ದ ನನಗೆ ಬಯಸಿದಂತಹ ಪಾತ್ರವೇ ಸಿಕ್ಕಿದೆ. ಇಂದಿನ ಪೀಳಿಗೆಯವರಿಗೆ ಇಷ್ಟವಾಗುವಂತಹ ಸಿನಿಮಾ ಇದು. ಚಿತ್ರದ ಮೇಲೆ ನನಗೂ ತುಂಬಾ ನಿರೀಕ್ಷೆ ಇದೆ. ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾತರದಿಂದ ಎದುರು ನೋಡುತ್ತಿದ್ದೇನೆ’ ಎಂದರು ಪ್ರಮೋದ್‌.

ನಟಿಮಿಲನಾ ನಾಗರಾಜ್, ‘ಇದು ಆಫ್ ಬೀಟ್ ಸಿನಿಮಾ. ನಿರ್ಮಾಪಕರು ಮತ್ತು ನಿರ್ದೇಶಕರುಹೇಳಿದ ಸಮಯಕ್ಕೆ ಈ ಚಿತ್ರವನ್ನು ಪೂರ್ಣಗೊಳಿಸಿ ತೆರೆಗೆ ತರುತ್ತಿದ್ದಾರೆ. ತುಂಬಾನೆ ವೃತ್ತಿಪರ ತಂಡದಲ್ಲಿ ಕೆಲಸ ಮಾಡಿದ ಖುಷಿ ಮತ್ತು ತೃಪ್ತಿ ಸಿಕ್ಕಿದೆ’ ಎಂದರು.

ನಿರ್ಮಾಪಕನಿತ್ಯಾನಂದ ಭಟ್,ರಾಜೇಶ್, ಸತ್ಯ, ಮಹೇಶ್‌ ಮುದ್ಗಲ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ‘ಕರ್ವ’ ಚಿತ್ರದ ಖ್ಯಾತಿಯ ಮೋಹನ್‌, ಸಂಕಲನ ಕೆಂಪರಾಜು, ಸಂಗೀತ ವಿ.ಮನೋಹರ್‌ ಅವರದ್ದು.ರಂಗಾಯಣ ರಘು, ಸುಧಾ ಬೆಳವಾಡಿ, ಮೋಹನ್‌, ಅವಿನಾಶ್‌, ಶಂಕರ್‌ ಅಶ್ವತ್ಥ್‌, ಶುಭಾ ರಕ್ಷಾ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT