ಬುಧವಾರ, 24 ಡಿಸೆಂಬರ್ 2025
×
ADVERTISEMENT
ADVERTISEMENT

ಸಿನಿಮಾನೇ ಯಾನ, ಸಿನಿಮಾನೇ ಧ್ಯಾನ: ನಿರ್ದೇಶಕ ಮಂಸೋರೆ ಸಂದರ್ಶನ

Published : 24 ಡಿಸೆಂಬರ್ 2025, 4:41 IST
Last Updated : 24 ಡಿಸೆಂಬರ್ 2025, 4:41 IST
ಫಾಲೋ ಮಾಡಿ
Comments
ಚೊಚ್ಚಲ ಸಿನಿಮಾದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಮಂಸೋರೆ. ಹರಿವು, ನಾತಿಚರಾಮಿ, ಆ್ಯಕ್ಟ್-1978, 19.20.21, ಹಾಗೂ ದೂರ ತೀರ ಯಾನ... ಇದು ಮಂಸೋರೆ ಸಿನಿಮಾ ಯಾನ. ಅದ್ಭುತ ಕಲಾಕುಸುರಿಯ ಕೌಶಲವುಳ್ಳ ಮಂಸೋರೆ ಅವರ ಚಿತ್ರಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ರೀತಿಯೇ ಭಿನ್ನ. ದಮನಿತರ ಗಟ್ಟಿದನಿಯಾಗಿ ಸದಾ ನಿಲ್ಲುವ ಅವರು ಈ ಬಾರಿ, 'ಜೂಲಿಯೆಟ್‌' ದೂರ ತೀರ ಯಾನಕ್ಕೆ ಸಜ್ಜಾಗಿದ್ದಾರೆ. ಹೌದು, ಹಿಂದಿಯಲ್ಲಿ 'ಜೂಲಿಯೆಟ್' ಹೆಸರಿನ ಚೊಚ್ಚಲ ಸಿನಿಮಾ ಘೋಷಿಸಿರುವ ಮಂಸೋರೆ, ವರ್ಷಾಂತ್ಯ- ವರ್ಷಾರಂಭದ ಹೊತ್ತಿನಲ್ಲಿ 'ಪ್ರಜಾವಾಣಿ ಡಿಜಿಟಲ್'ನೊಂದಿಗೆ ಆಡಿದ ಸಿನಿ-ಮಾತು ಹೀಗಿದೆ...
ಪ್ರ

ಈ ವರ್ಷ ನಿಮ್ಮ ಪಾಲಿಗೆ ಹೇಗಿತ್ತು?

ಚೆನ್ನಾಗಿತ್ತು. ನನ್ನ ನಿರ್ದೇಶನದ 'ದೂರ ತೀರ ಯಾನ' ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾ ಕೆಲಸ ಶುರುವಾಗಿ, ಅದು ಪೂರ್ಣಗೊಂಡು ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದೇ ನಿರ್ದೇಶಕರ ಪಾಲಿಗೆ ಖುಷಿ‌. ಸದ್ಯ ಇನ್ನೊಂದು ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ.

ಪ್ರ

ವರ್ಷದ ಸಿಹಿ ನೆನಪು ಯಾವುದು?

ದೂರ ತೀರ ಯಾನ ಬಿಡುಗಡೆಯಾಗಿದ್ದೇ ನನಗೆ ಸಿಹಿ ನೆನಪು. ನನ್ನ ಮನಸ್ಸಿಗೆ ಹತ್ತಿರವಾದ ಕತೆ ಅದು. ಭಿನ್ನ ರೀತಿಯ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದೆ. ಮೊದಲ ಬಾರಿಗೆ ಪ್ರೇಮಕಥೆಯ ಚಿತ್ರ ಮಾಡಿದ್ದು. ಅದು ಬಿಡುಗಡೆ ಕಂಡಿದ್ದೇ ವರ್ಷದ ಒಳ್ಳೆಯ ನೆನಪು ನನಗೆ.

ಪ್ರ

ಕಹಿ ನೆನಪು, ಬೇಸರ ಉಂಟುಮಾಡಿದ ಘಟನೆ ಏನಾದರೂ?

ವರ್ಷಪೂರ್ತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ.‌ ಅಂತಹ ಕಹಿ ನೆನಪು ಏನೂ ಇಲ್ಲ ಈ ವರ್ಷ. ಎಲ್ಲವೂ ಸಕಾರಾತ್ಮಕವಾಗಿಯೇ ಇತ್ತು. ಬೇಸರ ಮೂಡಿಸಿದ ಒಂದು ಸಂಗತಿ ಎಂದರೆ ಚಿತ್ರಮಂದಿರದಿಂದ ನನ್ನ ಸಿನಿಮಾವನ್ನು ತೆಗೆದದ್ದು. ಅದು ಬಿಟ್ಟರೆ ಬೇರೆಲ್ಲವೂ ಚೆನ್ನಾಗಿತ್ತು.

ಪ್ರ

2026ರ ಯೋಜನೆಗಳೇನು?

ಜೂಲಿಯೆಟ್ ಹೆಸರಿನ‌ ಒಂದು ಹಿಂದಿ ಸಿನಿಮಾ ಘೋಷಣೆಯಾಗಿದೆ. ಮೂರು, ನಾಲ್ಕು ವರ್ಷಗಳಿಂದ ಅದರ ತಯಾರಿ ನಡೆಸುತ್ತಿದ್ದೆ. ಕೊನೆಗೆ ಈ ಬಾರಿ ಘೋಷಣೆಯಾಗಿದೆ. 2026ರಲ್ಲಿ ಅದು ನನ್ನ ಬದುಕಿನ ಮೈಲಿಗಲ್ಲು ಆಗಲಿದೆ. ಇದುವರೆಗೆ ಕನ್ನಡ ಸಿನಿಮಾಗಳನ್ನೇ ಮಾಡುತ್ತ ಬಂದಿದ್ದೆ. ಈ ಬಾರಿ ಹಿಂದಿ ಸಿನಿಮಾ‌ ಪ್ರಯತ್ನ ಹೊಸದು. ಹೊರತಾಗಿ ಇನ್ನೂ ಒಂದೆರಡು ಚಿತ್ರಗಳು ಮಾತುಕತೆ ಹಂತದಲ್ಲಿವೆ. ಒಟ್ಟಿನಲ್ಲಿ 2026 ವರ್ಷಾಂತ್ಯದವರೆಗೂ ಬ್ಯುಸಿಯಾಗುವಷ್ಟು ಕೆಲಸಗಳಿವೆ.

ಪ್ರ

ಹೊಸ ವರ್ಷದಲ್ಲಿ ಏನು ಬದಲಾವಣೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೀರಿ?

ತುಂಬಾ ಇದೆ. ಬದುಕಿನ ಪ್ರತಿ ಹಂತವೂ ಕಲಿಕೆಯ ಹಂತ. ಸಿನಿಮಾ ಕ್ಷೇತ್ರದಲ್ಲಿ ಸೋಲೂ ಶಾಶ್ವತವಲ್ಲ, ಗೆಲುವೂ ಶಾಶ್ವತವಲ್ಲ. ಒಂದೊಂದು ಸಿನಿಮಾದ ಕೆಲಸಗಳಿಂದ ಬಹಳಷ್ಟು ಕಲಿಯುವುದಕ್ಕೆ‌ ಇರುತ್ತದೆ. ಕಲಿಕೆಯೇ‌ ಬದಲಾವಣೆಗೆ ಮೆಟ್ಟಿಲಾಗುತ್ತ ಹೋಗುತ್ತದೆ.

ಪ್ರ

ಹೊಸ ವರ್ಷದ ಸಂದೇಶ?

ಮೊದಲೇ‌ ಹೇಳಿದ ಹಾಗೆ, ಇಲ್ಲಿ ಸೋಲು- ಗೆಲುವು ಶಾಶ್ವತವಲ್ಲ. ಆದರೆ ಪ್ರಯತ್ನ, ‌ಕಲಿಕೆ‌ ಸದಾ ನಿರಂತರವಾಗಿರಬೇಕು. ಸಿನಿಮಾ‌ ಕ್ಷೇತ್ರದಲ್ಲಂತೂ ಯಾವಾಗ ಏನು ಜಾದೂ ನಡೆಯಬಹುದು ಎಂದು ಹೇಳಲಾಗದು. ಹಾಗಾಗಿ ಸಹನೆ ಅತಿ ಮುಖ್ಯ. ಒಂದು ಸಿನಿಮಾದಲ್ಲಿ ಗೆದ್ದ ತಕ್ಷಣ ಎಲ್ಲವೂ ಗೊತ್ತಿದೆ ಎಂದಲ್ಲ, ಅದು ಅಲ್ಲಿಗೆ ಮುಗಿಯುತ್ತದೆ ಅಷ್ಟೆ.‌ ನಾಳೆ ಹೊಸದನ್ನು ಆರಂಭಿಸಲೇಬೇಕು. ಹಾಗಿದ್ದಾಗ ಮಾತ್ರ ದೀರ್ಘಾವಧಿಯಲ್ಲಿ ಯಾವುದೇ ಕ್ಷೇತ್ರದಲ್ಲಿ ನಾವು ನೆಲೆನಿಲ್ಲುವುದಕ್ಕೆ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT