ಸೋಮವಾರ, 22 ಡಿಸೆಂಬರ್ 2025
×
ADVERTISEMENT
ADVERTISEMENT

2025ರ ಮೆಲುಕು | ನನ್ನ ಸಾಮರ್ಥ್ಯ ನನಗೇ ಸಾಬೀತಾದ ವರ್ಷ: ತನಿಷಾ ಕುಪ್ಪಂಡ ಸಂದರ್ಶನ

Published : 22 ಡಿಸೆಂಬರ್ 2025, 5:20 IST
Last Updated : 22 ಡಿಸೆಂಬರ್ 2025, 5:20 IST
ಫಾಲೋ ಮಾಡಿ
Comments
ಚಂದನವನದಲ್ಲಿ ಹಲವರು ನಟಿಯರಾಗಿ ಗುರುತಿಸಿಕೊಳ್ಳಲು ಇಷ್ಟಪಡುವುದು ಸಹಜ. ಅದರಾಚೆಗೆ ಹೋಗುವ ಸಾಹಸಕ್ಕೆ ಕೈಹಾಕುವವರು ವಿರಳ. ಆಡಿಕೊಳ್ಳುವವರ ನಡುವೆ ಸಾಧನೆ ಮಾಡಿ‌ ತೋರಿಸಲು ಸಜ್ಜಾದವರು ಕೊಡಗಿನ ಕುವರಿ ತನಿಷಾ ಕುಪ್ಪಂಡ. ತಮ್ಮ ನಿರ್ಮಾಣದ ಚೊಚ್ಚಲ ಸಿನಿಮಾ, 'ಕೋಣ'ವನ್ನು ಚಿತ್ರಮಂದಿರದಿಂದ ಒಟಿಟಿಯವರೆಗೂ ದಾಟಿಸಿದ ಕೀರ್ತಿ ಅವರದ್ದು. ಬಿಗ್‌ಬಾಸ್‌ ಮಾಜಿ ಸ್ಪರ್ಧಿಯೂ ಆಗಿರುವ ಅವರು ಸದ್ಯ ದೊಡ್ಡ ದೊಡ್ಡ ಕನಸುಗಳನ್ನು ಮುಂದಿಟ್ಟುಕೊಂಡು ತಮ್ಮನ್ನು ತಾವು ಪರೀಕ್ಷೆಗೊಡ್ಡುವ ಸಾಹಸದಲ್ಲಿ ತೊಡಗಿದ್ದಾರೆ. 2025ರ ಸಿನಿಮಾ ಯಾನ, 2026ರ ಕನಸಿನ‌ ಪಯಣದ ಬಗ್ಗೆ ತಮ್ಮ ಅನುಭವಗಳನ್ನು ‘ಪ್ರಜಾವಾಣಿ ಡಿಜಿಟಲ್’ ನೊಂದಿಗೆ ಚುಟುಕಾಗಿ ಹಂಚಿಕೊಂಡಿದ್ದಾರೆ.
ಪ್ರ

2025 ನಿಮ್ಮ ಪಾಲಿಗೆ ಹೇಗಿತ್ತು?

ಹಲವು ರೀತಿಯ ಅನುಭವಗಳನ್ನು ನೀಡಿದ ವರ್ಷ 2025. ಹಲವರ ಮನಸ್ಥಿತಿಗಳು ಅರ್ಥವಾದವು. ನಮ್ಮವರು ಎಂದು ನಾವು ಅಂದುಕೊಂಡವರು ಯಾರೂ ನಮ್ಮವರಾಗಿರಲ್ಲ ಎನ್ನುವುದು ತಿಳಿಯಿತು. ಅಂತಹ ವಿಚಿತ್ರ ಅನುಭವಗಳನ್ನು ಈ ವರ್ಷ ಕೊಟ್ಟಿತು. ಸಿನಿಮಾ ವಿಷಯಕ್ಕೆ ಬರುವುದಾದರೆ ತುಂಬಾ ಒಳ್ಳೆಯದಾಯಿತು. ನಿರ್ಮಾಪಕಿಯಾಗಿ ಗುರುತಿಸಿಕೊಂಡೆ ಎಂಬ ಖುಷಿ ಇದೆ. 'ಕೋಣ' ಸಿನಿಮಾ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿ ಗೆದ್ದು, ಒಟಿಟಿಗೂ ಬಂದಿದೆ. ವೈಯಕ್ತಿಕವಾಗಿ ಸಿನಿಮಾ ವಲಯದಲ್ಲಿ ಅನುಭವಗಳೊಂದಿಗೆ ಎತ್ತರಕ್ಕೆ ಬೆಳೆದೆ.

ಪ್ರ

ವರ್ಷದ ಸಿಹಿ ನೆನಪು?

ನನಗೆ ನನ್ನ ಸಾಮರ್ಥ್ಯ ಬಗ್ಗೆ ಗೊತ್ತಿತ್ತು. ಆದರೆ ಅದರ ಫಲಿತಾಂಶ ಗೊತ್ತಿರಲಿಲ್ಲ. 2025ರಲ್ಲಿ ನನ್ನ ಸಾಮರ್ಥ್ಯದ ಫಲಿತಾಂಶ ನನಗೇ ಕಾಣಿಸಿತು. ಅದು ಈ ವರ್ಷದ ಅತ್ಯಂತ ಸಿಹಿನೆನಪು ನನಗೆ. ನನ್ನಿಂದ ಇದು ಸಾಧ್ಯನಾ ಎಂದು ಅನುಮಾನ ಪಡುತ್ತಿದ್ದದ್ದನ್ನು ಈ ವರ್ಷ ಸಾಧಿಸಿದೆ ಎನ್ನುವ ಸಂಭ್ರಮ ಇದೆ.

ಪ್ರ

ಏನಾದರೂ ಕಹಿ ನೆನಪು, ಬೇಸರ ಕೊಟ್ಟ ಸಂಗತಿ?

ಬದುಕು ಸಾಧ್ಯವಾದಷ್ಟು ಉತ್ತಮವಾಗಿರುತ್ತದೆ. ಸಿಹಿ- ಕಹಿ ಎಲ್ಲವೂ ಇರುತ್ತದೆ. ಈ ವರ್ಷ ಕೆಲವರ ನಿಜ ಬಣ್ಣ ಬಯಲಾಯಿತು. ಕೆಲವರ ಬೇಳೆ ಬೇಯಲ್ಲ ಎಂದಾಕ್ಷಣ ಎಷ್ಟು ನಾಜೂಕಿನಿಂದ ಬದಲಾಗುತ್ತಾರೆ ಎನ್ನುವುದು ಸಾಕ್ಷಿಸಹಿತ ಬಯಲಾಯಿತು. ಅದರ ಬಗ್ಗೆ ಮಾತುಕತೆಯಾಗುವಾಗ ವಿಷಯ ಪಲ್ಲಟ ಮಾಡುತ್ತ ಒಳ್ಳೆಯವರಾಗಿರಲು ಪ್ರಯತ್ನಪಡುತ್ತಾರೆ. ಅಂಥವರನ್ನು ದೂರ ಇಡುವ ಪ್ರಯತ್ನದಲ್ಲಿ ಈ ಯಶಸ್ವಿಯಾದೆ. ಒಂದು ಕಾಲದಲ್ಲಿ ನನಗೆ ಹಿತೈಷಿಗಳಂತೆ ಇದ್ದವರು ಈಗ ಹೀಗಾಗಿರುವುದು ಒಂದು ರೀತಿಯಲ್ಲಿ ಕಹಿ ಸಂಗತಿಯೇ ಹೌದು.

ಪ್ರ

ಹೊಸ ವರ್ಷದಲ್ಲಿ ಬದುಕಿನಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದರೆ?

ತೂಕ ಕಡಿಮೆ ಮಾಡಬೇಕು ಅಂತ ಪ್ರತಿ ವರ್ಷ ಅಂದುಕೊಳ್ಳುತ್ತೇನೆ. ವರ್ಷ ಮುಗಿಯುವಷ್ಟರಲ್ಲಿ, ಅಯ್ಯೋ‌ ಇದಕ್ಕಿಂತ ಕಳೆದ ವರ್ಷ ಎಷ್ಟೋ‌ ಚೆನ್ನಾಗಿದ್ದೆ ಅಂತ ಅನಿಸತೊಡಗುತ್ತದೆ(ನಗು?). ಅದು ಬಿಟ್ಟರೆ ಬೇರೆ ರೀತಿಯ ಬದಲಾವಣೆಗಳು ಸಹಜವಾಗಿ ಇದ್ದೇ ಇರುತ್ತವೆ.

ಪ್ರ

2026ರ ಯೋಜನೆಗಳು?

ನಿರ್ಮಾಪಕಿಯಾಗಿ, ಉದ್ಯಮಿಯಾಗಿ ಕುಪ್ಪಂಡ ಪ್ರೊಡಕ್ಷನ್ಸ್ ನಿಂದ ಗುರುತಿಸಿಕೊಂಡಿದ್ದೇನೆ. ಆದರೆ ಈ ಬಾರಿ ಇದನ್ನೆಲ್ಲ ಮೀರಿದ ಬಹುದೊಡ್ಡ ಯೋಜನೆಯೊಂದಕ್ಕೆ ಕೈ ಹಾಕಿದ್ದೇವೆ. ಸಿನಿಮಾ ಅಲ್ಲ, ಆದರೆ ಸಿನಿಮಾ ವಲಯದಲ್ಲಿಯೇ ಬೇಕಾದ ವಿಷಯ. ಶೋಕಿಗಾಗಿ, ಮಾತಿಗಾಗಿ ಇದನ್ನು ಹೇಳುತ್ತಿಲ್ಲ. ಆ ಯೋಜನೆ ಏನು ಎನ್ನುವುದನ್ನು ಈಗ ಹೇಳುವುದಕ್ಕಿಂತ ಕೆಲಸ ಸಾಕಾರಗೊಂಡ ಮೇಲೆ ಹೇಳುವೆ. ಇನ್ನೊಂದು ಸಿನಿಮಾ ಕೂಡ ಸಿದ್ಧವಾಗಲಿದೆ.

ಪ್ರ

ಜನರಿಗೆ ನಿಮ್ಮ ಹೊಸ ವರ್ಷದ ಸಂದೇಶ ಏನು?

ಕಷ್ಟದ ಸಂದರ್ಭಗಳಲ್ಲಿ ನೋವುಗಳನ್ನು ಇತರರ ಮುಂದೆ ತೋಡಿಕೊಳ್ಳದೆ, ನೋವಿದ್ದರೂ ಇಲ್ಲದಂತೆ ಕಾಣಿಸಿಕೊಳ್ಳುವುದು ಒಳ್ಳೆಯದು. ನೀವು ನೋವು ತೋಡಿಕೊಂಡರೆ ಅದನ್ನು ಆಡಿಕೊಳ್ಳುವವರೇ ಇದ್ದಾರೆಯೇ ಹೊರತು ವಾಸ್ತವದಲ್ಲಿ ನಿಮ್ಮ ಸಂಕಟ ಯಾರಿಗೂ ಬೇಕಿರುವುದಿಲ್ಲ. ಪಕ್ವವಾಗಿ, ಪ್ರಬುದ್ಧರಾಗಿ ನಿಮ್ಮಷ್ಟಕ್ಕೇ ಬೆಳೆಯಿರಿ. ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಇನ್ನು, ಫ್ಯಾಶನ್ ಕಡೆ ಗಮನ ಕೊಡಿ. ಒಳ್ಳೊಳ್ಳೆಯ, ನಿಮ್ಮಿಷ್ಟದ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿ. ಯಾಕೆಂದರೆ ತೊಟ್ಟ ಬಟ್ಟೆಯ ಆಧಾರದಲ್ಲಿ ವ್ಯಕ್ತಿತ್ವವನ್ನು ಅಳೆಯುವವರಿದ್ದಾರೆ. ಅದನ್ನು ಮೀರಬೇಕು. ಧೈರ್ಯವಾಗಿ ನಿಮ್ಮಿಷ್ಟದಂತೆ ಬದುಕಿ. ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT