ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಇಂದು ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌, ಸಾರಾ ಅಲಿ ಖಾನ್‌ ವಿಚಾರಣೆ

ಡ್ರಗ್ಸ್‌ ಪ್ರಕರಣ: ಬಾಲಿವುಡ್‌ನ ಮತ್ತಷ್ಟು ಪ್ರಮುಖ ವ್ಯಕ್ತಿಗಳ ವಿಚಾರಣೆ ಸಾಧ್ಯತೆ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಎರಡು ಡ್ರಗ್ಸ್ ಪ್ರಕರಣಗಳನ್ನು ಏಕಕಾಲದಲ್ಲಿ ತನಿಖೆ ನಡೆಸುತ್ತಿರುವ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ), ಮುಂದಿನ ದಿನಗಳಲ್ಲಿ ಬಾಲಿವುಡ್‌ನ ಹಲವು ಪ್ರಮುಖ ವ್ಯಕ್ತಿಗಳ ಮನೆಯ ಕದತಟ್ಟಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಮುಂದಿನ ಕೆಲ ವಾರದಲ್ಲಿ ಬಾಲಿವುಡ್‌ನ ಖ್ಯಾತನಾಮರಿಗೆ ಎನ್‌ಸಿಬಿ ನೋಟಿಸ್‌ ನೀಡುವ ಸಾಧ್ಯತೆ ಇದೆ. ನಟ ಸುಶಾಂತ್‌ ಸಿಂಗ್‌ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣ ಹಾಗೂ ಬಾಲಿವುಡ್‌ನಲ್ಲಿ ಇರುವ ಡ್ರಗ್ಸ್‌ ಜಾಲದ ಬಗ್ಗೆ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ಎನ್‌ಸಿಬಿ ದಾಖಲಿಸಿಕೊಂಡಿದೆ. ಸುಶಾಂತ್‌ ಪ್ರಕರಣದ ವಿಚಾರಣೆ ಬಲಾರ್ಡ್‌ ಎಸ್ಟೇಟ್‌ನಲ್ಲಿ ಇರುವ ಎನ್‌ಸಿಬಿಯ ವಲಯ ಕಚೇರಿಯಲ್ಲಿ ನಡೆಯುತ್ತಿದ್ದು, ಡ್ರಗ್ಸ್‌ ಜಾಲದ ಬಗ್ಗೆ ಈವ್‌ಲಿನ್‌ ಹೌಸ್‌ನಲ್ಲಿ ವಿಚಾರಣೆ ನಡೆಯುತ್ತಿದೆ. 

ಶುಕ್ರವಾರ ನಿರ್ದೇಶಕ, ಚಿತ್ರ ನಿರ್ಮಾಪಕ ಕರಣ್ ಜೋಹರ್‌ ಅವರ ಆಪ್ತಸ್ನೇಹಿತ ಹಾಗೂ ಧರ್ಮ ಪ್ರೊಡಕ್ಷನ್‌ನ ಕಾರ್ಯಕಾರಿ ನಿರ್ಮಾಪಕ, ನಿರ್ದೇಶಕ ಕ್ಷಿತಿಜ್‌ ರವಿ ಪ್ರಸಾದ್‌ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಪ್ರಸಾದ್‌, ಖ್ಯಾತ ನಟ, ನಟಿಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಜೊತೆಗೆ ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ರಕುಲ್‌ ಪ್ರೀತ್‌ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್‌ ಕರಿಷ್ಮಾ ಪ್ರಕಾಶ್‌ ಅವರನ್ನೂ ಎನ್‌ಸಿಬಿ ವಿಚಾರಣೆ ನಡೆಸಿದೆ. ‌ 

ಶನಿವಾರ(ಸೆ.26) ಹಾಗೂ ಭಾನುವಾರದಂದು(ಸೆ.27) ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌, ಸಾರಾ ಅಲಿ ಖಾನ್‌ ಅವರನ್ನು ಎನ್‌ಸಿಬಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಸುಶಾಂತ್‌ಗಾಗಿ ಸಹೋದರನಿಂದ ಡ್ರಗ್ಸ್ ಪಡೆಯುತ್ತಿದ್ದ ರಿಯಾ

ಮುಂಬೈ: ನಟಿ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್‌‌ ಮೂಲಕ ಡ್ರಗ್ಸ್‌ಗಳನ್ನು ಖರೀದಿಸಿ ಸುಶಾಂತ್‌ ಸಿಂಗ್‌ ರಜಪೂತ್‌ಗೆ ನೀಡುತ್ತಿದ್ದರು ಎಂದು ಎನ್‌ಸಿಬಿ ಶುಕ್ರವಾರ ತಿಳಿಸಿದೆ.

ತನಿಖೆ ವೇಳೆ ಹಲವು ಡ್ರಗ್ಸ್‌ ಮಾರಾಟ ಜಾಲಗಳನ್ನು ಎನ್‌ಸಿಬಿಯು ಪತ್ತೆಹಚ್ಚಿದೆ. ಬಾಂದ್ರಾದ ನಿವಾಸಿ, ಡ್ರಗ್ಸ್‌ ಮಾರಾಟಗಾರ ಬಸಿತ್‌ ಪರಿಹಾರ್‌ ವಿಚಾರಣೆ ವೇಳೆ, ಶೋವಿಕ್‌ ಚಕ್ರವರ್ತಿ ಹೆಸರು ಬಹಿರಂಗವಾಗಿತ್ತು. ‘ಪರಿಹಾರ್‌ ಹಾಗೂ ಕೈಜನ್‌ ಇಬ್ರಾಹಿಂ ಎಂಬಾತನಿಂದ ‘ಗಾಂಜಾ ಮೊಗ್ಗು’ಗಳನ್ನು ಪಡೆದು, ರಿಯಾಗೆ ನೀಡುತ್ತಿದ್ದೆ. ಆಕೆ ಅದನ್ನು ಸುಶಾಂತ್‌ಗೆ ನೀಡುತ್ತಿದ್ದಳು’ ಎಂದು ಶೋವಿಕ್‌ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಸುಶಾಂತ್‌ನ ಮ್ಯಾನೇಜರ್‌ ಸ್ಯಾಮುಯೆಲ್‌ ಮಿರಾಂಡಾ ಹಾಗೂ ಅಡುಗೆ ಕೆಲಸಕ್ಕೆ ಇದ್ದ ದೀಪೇಶ್‌ ಸಾವಂತ್‌ ಈ ಗಾಂಜಾ ಮೊಗ್ಗುಗಳನ್ನು ಸಿಗರೇಟ್‌ ರೂಪದಲ್ಲಿ ಪ‍ರಿವರ್ತಿಸಿ ಸುಶಾಂತ್‌ಗೆ ನೀಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರಸ್ತುತ ರಿಯಾ ಹಾಗೂ ಶೋವಿಕ್ ಇತರೆ ಆರೋಪಿಗಳ ಜೊತೆ‌ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದವರ ಬಂಧನ
ಜೇವರ್ಗಿ (ಕಲಬುರ್ಗಿ ಜಿಲ್ಲೆ): ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡು ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಆಂದೋಲಾ ಗ್ರಾಮದ ನಿವಾಸಿ ಲಾಲ್ ಅಹಮದ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ನಿವಾಸಿ ಚಂದ್ರಶೇಖರ ಬಂಧಿತರು. ಇವರಿಂದ ₹10 ಸಾವಿರ ಮೌಲ್ಯದ 1,236 ಗ್ರಾಂ ಗಾಂಜಾ, ಪಿಸ್ತೂಲ್, ₹2 ಲಕ್ಷ ಮೌಲ್ಯದ ಕಾರು, ₹2.94 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು