ಬುಧವಾರ, ಜೂನ್ 3, 2020
27 °C

ಒಟಿಟಿ ಮೂಲಕ ರಿಲೀಸ್: ಮಲ್ಟಿಪ್ಲೆಕ್ಸ್‌ಗಳಿಂದ ಪ್ರತೀಕಾರದ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇರೆ ಬೇರೆ ಭಾಷೆಗಳ ಒಟ್ಟು ಏಳು ಸಿನಿಮಾಗಳು ಅಮೆಜಾನ್‌ ಪ್ರೈಮ್‌ ಮೂಲಕ ತೆರೆಗೆ ಬರುತ್ತಿರುವುದು ಮಲ್ಟಿಪ್ಲೆಕ್ಸ್‌ ಉದ್ಯಮದಲ್ಲಿ ತಲ್ಲಣ ಸೃಷ್ಟಿಸಿದೆ. ‘ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನೇರವಾಗಿ ಒಟಿಟಿ ಮೂಲಕ ತೆರೆಗೆ ತರುವ ತೀರ್ಮಾನಕ್ಕೆ ಬಂದಿದ್ದು ನಿರಾಶೆ ಮೂಡಿಸಿದೆ’ ಎಂದು ಪಿವಿಆರ್‌ ಕಂಪನಿ ಹೇಳಿದೆ.

ಸಿನಿಮಾಗಳನ್ನು ಚಿತ್ರಮಂದಿರಗಳ ಮೂಲಕ ಬಿಡುಗಡೆ ಮಾಡುವ ಬದಲು, ಒಟಿಟಿ ಮೂಲಕ ಬಿಡುಗಡೆ ಮಾಡುವ ನಿರ್ಮಾಣ ಸಂಸ್ಥೆಗಳ ವಿರುದ್ಧ ‘ಪ್ರತೀಕಾರದ ಕ್ರಮ ತೆಗೆದುಕೊಳ್ಳುವ ಆಯ್ಕೆ ಕೂಡ ಮುಕ್ತವಾಗಿದೆ’ ಎಂದು ಐನಾಕ್ಸ್‌ ಈಗಾಗಲೇ ಹೇಳಿದೆ.

ಅಮಿತಾಭ್ ಬಚ್ಚನ್, ಆಯುಷ್ಮಾನ್ ಖುರಾನಾ ಅಭಿನಯದ ‘ಗುಲಾಬೊ ಸಿತಾಬೊ’, ವಿದ್ಯಾ ಬಾಲನ್ ಅಭಿನಯದ ‘ಶಕುಂತಲಾ ದೇವಿ’, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಎರಡು ಸಿನಿಮಾಗಳು ಕೂಡ ಪ್ರೈಮ್‌ ಮೂಲಕ ನೇರವಾಗಿ ತೆರೆಗೆ ಬರುತ್ತಿವೆ.

ಇಷ್ಟೇ ಅಲ್ಲ, ಅಕ್ಷಯ್ ಕುಮಾರ್ ಅಭಿನಯದ ‘ಲಕ್ಷ್ಮಿ ಬಾಂಬ್’ ಕೂಡ ಒಟಿಟಿ ಮೂಲಕವೇ ತೆರೆಗೆ ಬರಬಹುದು ಎಂಬ ಸುದ್ದಿ ಇದೆ. ಅಭಿಷೇಕ್ ಬಚ್ಚನ್ ಅಭಿನಯದ ಒಂದು ಸಿನಿಮಾ ಹಾಗೂ ಅಮಿತಾಭ್ ಅಭಿನಯದ ಇನ್ನೊಂದು ಚಿತ್ರ ಕೂಡ ಒಟಿಟಿ ಮೂಲಕವೇ ವೀಕ್ಷಕರ ಎದುರು ಬರುವ ಸಾಧ್ಯತೆಗಳು ಇವೆ.

‘ಸಿನಿಮಾ ಮಾಡಿದವರ ಶ್ರಮ ಹಾಗೂ ಸೃಜನಶೀಲತೆಯನ್ನು ವೀಕ್ಷಕರು ಅರ್ಥ ಮಾಡಿಕೊಳ್ಳಬೇಕು ಎಂದಾದರೆ, ಸಿನಿಮಾಗಳನ್ನು ದೊಡ್ಡ ಪರದೆಯ ಮೂಲಕ ಬಿಡುಗಡೆ ಮಾಡುವುದೇ ಸೂಕ್ತ. ದಶಕಗಳಿಂದಲೂ ಹೀಗೇ ನಡೆದುಕೊಂಡು ಬಂದಿದೆ. ಈ ರೀತಿಯ ಪದ್ಧತಿ ಇರುವುದು ಭಾರತದಲ್ಲಿ ಮಾತ್ರವೇ ಅಲ್ಲ; ವಿಶ್ವದ ಎಲ್ಲೆಡೆ ಇದು ಹೀಗೇ ಇದೆ’ ಎಂದು ಪಿವಿಆರ್‌ ಕಂಪನಿಯ ಸಿಇಒ ಕಮಲ್ ಗ್ಯಾನ್‌ಚಂದಾನಿ ಹೇಳಿದ್ದಾರೆ.

ಪರಿಸ್ಥಿತಿ ಸಹಜವಾದ ನಂತರ ಜನ ಸಿನಿಮಾ ಮಂದಿರಗಳಿಗೆ ಪುನಃ ಬರುತ್ತಾರೆ ಎಂಬುದು ಅವರಲ್ಲಿನ ವಿಶ್ವಾಸ. ‘ಗುಲಾಬೊ ಸಿತಾಬೊ’ ಚಿತ್ರವು ಅಮೆಜಾನ್‌ ಮೂಲಕ ಬಿಡುಗಡೆ ಆಗಲಿದೆ ಎಂಬ ಘೋಷಣೆ ಹೊರಬಿದ್ದ ನಂತರ ಐನಾಕ್ಸ್ ಕಂಪನಿಯು, ತನ್ನ ಅಸಮಾಧಾನ ತೋಡಿಕೊಂಡಿತ್ತು.

ಸಿನಿಮಾಗಳನ್ನು ಚಿತ್ರಮಂದಿರಗಳ ಮೂಲಕವೇ ಬಿಡುಗಡೆ ಮಾಡುವುದು ಸದ್ಯದಲ್ಲಿ ಹಾಗೂ ಭವಿಷ್ಯದಲ್ಲಿ ತುಸು ಅವಧಿಯವರೆಗೆ ಒಂದು ಆಯ್ಕೆಯಾಗಿ ಉಳಿದಿಲ್ಲ. ಏಕೆಂದರೆ, ಸಿನಿಮಾ ಉದ್ಯಮ ಚೆನ್ನಾಗಿರಬೇಕು ಎಂದಾದರೆ, ದೇಶದಲ್ಲಿ ಹಾಗೂ ಹೊರದೇಶಗಳಲ್ಲಿ ಎಲ್ಲ ಕಡೆ ಸಿನಿಮಾ ಮಂದಿರಗಳ ಬಾಗಿಲು ತೆರೆಯಬೇಕಾಗುತ್ತದೆ ಎಂದು ದೇಶದ ನಿರ್ಮಾಪಕರ ಒಕ್ಕೂಟವು ಹೇಳಿಕೆ ನೀಡಿತ್ತು.

ಸಣ್ಣ ಹಾಗೂ ಮಧ್ಯಮ ಬಜೆಟ್ಟಿನ ಸಿನಿಮಾಗಳು ಒಟಿಟಿ ವೇದಿಕೆಗಳ ಮೂಲಕ ತೆರೆಗೆ ಬರುವುದರಿಂದ ಸಿನಿಮಾ ಉದ್ಯಮದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ತೊಂದರೆಯೇನೂ ಆಗುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಎಲ್ಲವೂ ಸಹಜವಾಗಿ ಇದ್ದಾಗ ಕೂಡ ಸಿನಿಮಾಗಳು ಒಟಿಟಿ ಮೂಲಕವೇ ತೆರೆಗೆ ಬಂದ ನಿದರ್ಶನಗಳಿವೆ. ಆ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್‌ಗಳು ಏನನ್ನೂ ಹೇಳಲಿಲ್ಲ. ಈಗ ಏಳು ಸಿನಿಮಾಗಳು ಒಟಿಟಿ ಮೂಲಕ ತೆರೆಗೆ ಬರಲು ಸಿದ್ಧವಾಗಿರುವುದರಲ್ಲಿ ಆಘಾತಕಾರಿ ಅನಿಸುವಂಥದ್ದು ಏನೂ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಈ ನಿರ್ಧಾರ ಸರಿಯಾಗಿದೆ’ ಎಂದು ವ್ಯಾಪಾರ ವಿಶ್ಲೇಷಕ ಅಮುಲ್ ಮೋಹನ್ ಹೇಳುತ್ತಾರೆ.

‘ಅನಿಶ್ಚಿತತೆಯ ಈ ಸಂದರ್ಭದಲ್ಲಿ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ. ಹಾಗೆ ಮಾಡುವುದು ಅವರ ಹಕ್ಕು. ಆದರೆ, ನಾವು ಆ ಸಿನಿಮಾಗಳನ್ನು ನಮ್ಮ ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿಸುವುದಿಲ್ಲ’ ಎಂದು ಕಾರ್ನಿವಾಲ್ ಸಿನಿಮಾಸ್ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು