ಶುಕ್ರವಾರ, ಸೆಪ್ಟೆಂಬರ್ 17, 2021
22 °C

Pv Web Exclusive: ಶೆರ್ಲಾಕ್ ಪ್ರಭಾವಳಿ ಮೀರಿದ ‘ಎನೋಲಾ’

ನವೀನ್ ಕುಮಾರ್ ಜಿ. Updated:

ಅಕ್ಷರ ಗಾತ್ರ : | |

Prajavani

ಪತ್ತೇದಾರಿ ಕಾದಂಬರಿ, ಸಿನಿಮಾಗಳನ್ನು ಇಷ್ಟಪಡುವವರು ಶೆರ್ಲಾಕ್ ಹೋಮ್ಸ್ ಹೆಸರು ಕೇಳಿಯೇ ಇರುತ್ತೀರಿ. ಚತುರತೆ, ತಾರ್ಕಿಕತೆ, ವಿಧಿವಿಜ್ಞಾನ ಕುರಿತ ಅರಿವು ಇವೆಲ್ಲವುಗಳನ್ನು ಬಳಸಿಕೊಂಡು ಜಟಿಲವಾದ ಪ್ರಕರಣಗಳ ಸುಳಿಗಳನ್ನು ಬಿಚ್ಚಿಡುವ ಪತ್ತೇದಾರ ಶೆರ್ಲಾಕ್, ಓದುಗರ ಅಥವಾ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುವ ಪಾತ್ರ.

ಬ್ರಿಟಿಷ್ ಲೇಖಕ ಸರ್ ಅರ್ಥರ್ ಕೊನಾನ್ ಡೋಯ್ಲ್‌ ಅವರ ಈ ಕಾಲ್ಪನಿಕ ಪಾತ್ರವು ಹಲವು ಸಿನಿಮಾ, ರಂಗ ಪ್ರಯೋಗಗಳಿಗೂ ವಸ್ತುವಾಗಿದೆ.

ಆದರೆ ಶೆರ್ಲಾಕ್ ತಂಗಿ ಎನೋಲಾ ಹೋಮ್ಸ್ ಪಾತ್ರವು ಅಷ್ಟಾಗಿ ಜನಪ್ರಿಯವಾದುದಲ್ಲ. ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿರುವ ‘ಎನೋಲಾ ಹೋಮ್ಸ್’ ಚಿತ್ರವು ಈ ಕಥಾಪಾತ್ರದ ಬಗ್ಗೆ ಇದೀಗ ಚರ್ಚೆ ಹುಟ್ಟುಹಾಕಿದೆ.

1887ರಲ್ಲಿ ಅರ್ಥರ್ ರಚಿಸಿದ್ದ 'ಎ ಸ್ಟಡಿ ಆಫ್ ಸ್ಕಾರ್ಲೆಟ್' ಕೃತಿಯಲ್ಲಿ ಮೊದಲ ಬಾರಿಗೆ ಶೆರ್ಲಾಕ್ ಕಥಾ ಪಾತ್ರವನ್ನು ಸೃಷ್ಟಿಸಲಾಗಿದೆ.

ಒಟ್ಟು ನಾಲ್ಕು ಕಾದಂಬರಿ ಹಾಗೂ 56 ಸಣ್ಣ ಕಥೆಗಳಲ್ಲಿ ಅರ್ಥರ್ ಅವರು ಶೆರ್ಲಾಕ್ ಕಥಾಪಾತ್ರ ನಡೆಸುವ ಪತ್ತೇದಾರಿಕೆಯ ಸಾಹಸಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಕೃತಿಗಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ.

ಶೆರ್ಲಾಕ್ ಕಥೆಗಳನ್ನು ಓದಿದವರಿಗೆ ಈಗ ಕಾಡುವ ಪ್ರಶ್ನೆಯೆಂದರೆ, ಶೆರ್ಲಾಕ್ ತಂಗಿಯ ಬಗ್ಗೆ ಅರ್ಥರ್ ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದಾರೆಯೇ ಎಂಬುದು. ಎನೋಲಾ ಹೋಮ್ಸ್ ಕಥಾಪಾತ್ರವು ಅರ್ಥರ್‌ ಸೃಷ್ಟಿಸಿದ್ದಲ್ಲ. ಇದು ಅಮೆರಿಕ ಲೇಖಕಿ ನ್ಯಾನ್ಸಿ ಸ್ಪ್ರಿಂಗರ್ ಅವರ ‘ದಿ ಎನೋಲಾ ಹೋಮ್ಸ್ ಮಿಸ್ಟರಿ’ ಕಾದಂಬರಿಯಲ್ಲಿ ಬರುವ ಪ್ರಮುಖ ಕಥಾಪಾತ್ರದ ಹೆಸರು.

ನ್ಯಾನ್ಸಿ ಅವರ ಈ ಕೃತಿಯನ್ನು ಆಧರಿಸಿ ‘ಎನೋಲಾ ಹೋಮ್ಸ್’ ಪಾತ್ರವನ್ನು ಬ್ರಿಟಿಷ್ ಚಿತ್ರ ನಿರ್ದೇಶಕ ಹ್ಯಾರಿ ಬ್ರಾಡ್‌ಬೀರ್ ಅವರು ತಮ್ಮ ನಿರ್ದೇಶನದ ಮೂಲಕ ಇದೀಗ ಬೆಳ್ಳಿಪರದೆಗೆ ತಂದಿದ್ದಾರೆ. ಅರ್ಥರ್ ಅವರ ಶೆರ್ಲಾಕ್ ಹೋಮ್ಸ್ ಕಥಾಪಾತ್ರದಿಂದ ಪ್ರಭಾವಿತರಾಗಿ ನ್ಯಾನ್ಸಿ ಅವರು ತಮ್ಮ ಕಾದಂಬರಿಗಳಲ್ಲಿ ಎನೋಲಾ ಪಾತ್ರವನ್ನು ಸೃಷ್ಟಿಸಿದ್ದರು.

‘ದಿ ಕೇಸ್ ಆಫ್ ದಿ ಮಿಸ್ಸಿಂಗ್ ಮಾರ್ಕ್ವೆಸ್’, ‘ದಿ ಕೇಸ್ ಆಫ್ ದಿ ಲೆಫ್ಟ್ ಹ್ಯಾಂಡೆಂಡ್ ಲೇಡಿ’, ‘ದಿ ಕೇಸ್ ಆಫ್ ದಿ ಬಿಝಾರ್ ಬೋಕೆಸ್’,‘ದಿ ಕೇಸ್ ಆಫ್ ದಿ ಪಿಂಕ್ ಫ್ಯಾನ್’, ‘ದಿ ಕೇಸ್ ಆಫ್ ದಿ ಕ್ರಿಪ್ಟಿಕ್ ಕ್ರಿನೋಲಿನ್’ ಮತ್ತು ‘ದಿ ಕೇಸ್ ಆಫ್ ದಿ ಜಿಪ್ಸಿ ಗುಡ್ ಬೈ’ ಎಂಬ ಪತ್ತೇದಾರಿ ಕಾದಂಬರಿಗಳನ್ನು ನ್ಯಾನ್ಸಿ ಅವರು ಎನೋಲಾ ಸಾಹಸಕ್ಕೆ ಮೀಸಲಿರಿಸಿದ್ದಾರೆ.

2006 ರಿಂದ -10ರ ನಡುವೆ ನ್ಯಾನ್ಸಿ ರಚಿಸಿರುವ ಈ ಕಾದಂಬರಿ ಸರಣಿಗಳಲ್ಲಿ ಅರ್ಥರ್ ಅವರ ಶೆರ್ಲಾಕ್ ಹೋಮ್ಸ್ ಕಥಾಪಾತ್ರದ ಪ್ರಸ್ತಾಪವಿದ್ದರೂ ಆತನ ತಂಗಿ ಎನೋಲಾ ಹೋಮ್ಸ್‌ ನಡೆಸುವ ಪತ್ತೇದಾರಿಕೆಯೇ ಪ್ರಧಾನ ಕಥಾವಸ್ತು. ಇಲ್ಲಿ ಶೆರ್ಲಾಕ್‌ ಹೋಮ್ಸ್‌ ಪ್ರಭಾವಳಿಯನ್ನು ಮೀರಿ ಎನೋಲಾ ಪಾತ್ರವು ತನ್ನದೇ ಆದ ಅಸ್ಮಿತೆಯನ್ನು ಕಂಡುಕೊಂಡಿದೆ.

‘ದಿ ಕೇಸ್ ಆಫ್ ದಿ ಮಿಸ್ಸಿಂಗ್ ಮಾರ್ಕ್ವೆಸ್’ ಕಾದಂಬರಿಯು 16 ವರ್ಷದ ಎನೋಲಾ ತನ್ನ ನಾಪತ್ತೆಯಾಗಿರುವ ತಾಯಿಗಾಗಿ ಹುಡುಕಾಟ ನಡೆಸುವ ಕಥಾಹಂದರವನ್ನು ಹೊಂದಿದೆ.

ಸಹೋದರರಾದ ಶೆರ್ಲಾಕ್ ಹೋಮ್ಸ್ ಮತ್ತು ಮೈಕ್ರಾಫ್ಟ್ ಹೋಮ್ಸ್ ತಾಯಿಯನ್ನು ಹುಡುಕಿ ತರಲು ವಿಫಲರಾದಾಗ. ಎನೋಲಾ ಪತ್ತೇದಾರಿಕೆಯ ಮೂಲಕ ತನ್ನ ತಾಯಿಗಾಗಿ ಲಂಡನ್‌ನಲ್ಲಿ ಹುಡುಕಾಟ ನಡೆಸುವುದನ್ನು ನ್ಯಾನ್ಸಿ ಅವರು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಇದೇ ಕಥೆಯನ್ನು ಆಧರಿಸಿ ‘ಎನೋಲಾ’ ಚಿತ್ರ ಕೂಡ ನಿರ್ಮಾಣವಾಗಿದೆ.

ಚತುರತೆ ಮತ್ತು ಸಾಹಸ ಪ್ರವೃತ್ತಿಯಿಂದ ಎನೋಲಾ ಪಾತ್ರ ಓದುಗರನ್ನು ಮೋಡಿ ಮಾಡಿತ್ತು. ಇದೀಗ ದೃಶ್ಯರೂಪದಲ್ಲಿಯೂ ಮುನ್ನೆಲೆಗೆ ಬಂದಿದೆ. ಜೊತೆಗೆ ಪತ್ತೇದಾರಿಕೆಯ ಹೊಸ ಆಯಾಮವನ್ನೂ ಪರಿಚಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು