ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಸಂದರ್ಶನ | ಜನರ ನಗುವೇ ನನಗೆ ಆಶೀರ್ವಾದ: ಸೃಜನ್‌ ಲೋಕೇಶ್‌ 

Published : 27 ನವೆಂಬರ್ 2025, 23:30 IST
Last Updated : 27 ನವೆಂಬರ್ 2025, 23:30 IST
ಫಾಲೋ ಮಾಡಿ
Comments
ಕಿರುತೆರೆಯಲ್ಲಿ ಮಿಂಚಿದ ನಟ ಸೃಜನ್‌ ಲೋಕೇಶ್‌ ನಿರ್ದೇಶನದ ಚೊಚ್ಚಲ ಸಿನಿಮಾ ‘ಜಿಎಸ್‌ಟಿ’ ಇಂದು (ನ.28) ತೆರೆ ಕಾಣುತ್ತಿದೆ. ಈ ಸಿನಿಮಾ ಮೂಲಕ ಸೃಜನ್‌ ಪುತ್ರ ಸುಕೃತ್‌ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಿರ್ದೇಶಕನಾಗುವ ಮೂಲಕ ಇನ್ನು ಆರಂಭ ನನ್ನ ಪಯಣ ಎಂದಿದ್ದಾರೆ ಸೃಜನ್‌...
ಪ್ರ

ನಿಮ್ಮ ಸಿನಿಮಾಗಳ ಸಂಖ್ಯೆ ಕಡಿಮೆಯಿರಲು ಕಾರಣ...

ನನಗೆ ಹಾಗೇನು ಅನಿಸಿಲ್ಲ. ನನಗಿನ್ನೂ ವಯಸ್ಸಿದೆ. ಗುರಿ ಇಟ್ಟುಕೊಂಡು ಕೆಲಸ ಮಾಡುವವನು ನಾನಲ್ಲ. ಕೆಲಸ ಮಾಡುತ್ತಿರುವುದೇ ಗುರಿಯಾಗಬೇಕು. ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲವಷ್ಟೇ. ಆದರೆ ನಾನು ದೃಶ್ಯ ಮಾಧ್ಯಮದಲ್ಲೇ ಇದ್ದೆ. ನನ್ನ ಒಂದು ಶೋ ನನ್ನನ್ನು ಸಾಕಿ ಸಲಹಿದೆ. ಕಲಾ ಮಾಧ್ಯಮ ಎಲ್ಲಾ ಒಂದೇ ಅಲ್ಲವೇ. ನಮ್ಮ ವಂಶವನ್ನು ನೂರು ವರ್ಷ ಈ ಚಿತ್ರರಂಗ ಸಾಕಿದೆ. ಇನ್ನೇನು ಬೇಕು? ನಾನು ಸಿನಿಮಾ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ, ಆದರೆ ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ. ಇದೀಗ ನಿರ್ದೇಶನ ಆರಂಭಿಸಿದ್ದೇನೆ. ಇದು ಯಶಸ್ವಿಯಾದರೆ ಮುಂದೆ ಅವಕಾಶಗಳು ಮತ್ತಷ್ಟು ತೆರೆದುಕೊಳ್ಳಬಹುದು. ಇಲ್ಲಿ ಕನಸುಗಳನ್ನು ಈಡೇರಿಸಬಹುದು. ಸಿನಿಪಯಣದಲ್ಲೊಂದು ಹೊಸ ಹೆಜ್ಜೆ ಇದು. 

ಪ್ರ

ನಿರ್ದೇಶನ ಎನ್ನುವುದು ಸವಾಲು. ಅದನ್ನು ಎದುರಿಸಿದ ಬಗೆ...

ಇದೊಂದು ಪ್ರಯೋಗವಾಗಿತ್ತು. ಮೊದಲ ಬಾರಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದೆ. ಇದು ಎಷ್ಟು ಕಷ್ಟ ಎನ್ನುವುದನ್ನು ಅರಿತೆ. ನಟನೆಯ ಜೊತೆಗೆ ನಿರ್ದೇಶನ ಮಾಡುವುದು ಸವಾಲಿನ ವಿಷಯವೇ. ನನ್ನದೇ ಕಾನ್ಸೆಪ್ಟ್‌ ಆಗಿರುವ ಕಾರಣ ನಾನೇ ನಿರ್ದೇಶನ ಮಾಡುವುದಕ್ಕೆ ಮುಂದಾದೆ. 40 ನಿಮಿಷದ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಅಂತೂ ಹೊಸ ಅನುಭವವನ್ನೇ ನೀಡಿತು. ಕ್ಲೈಮ್ಯಾಕ್ಸ್‌ನಲ್ಲಿ 30–40 ಜನ ಇರುತ್ತಾರೆ. ದೃಶ್ಯಗಳ ನಿರಂತರತೆ, ಕಲಾವಿದರ ಲುಕ್‌, ಸಂಭಾಷಣೆ, ಕ್ಯಾಮೆರಾ ಎಲ್ಲಿಡಬೇಕು?, ಜೊತೆಗೆ ನಟನೆ..ಹೀಗೆ ಎಲ್ಲಾ ವಿಷಯಗಳು ಒಮ್ಮೆಯೇ ತಲೆಯಲ್ಲಿ ಸುತ್ತುತ್ತಿರುವಾಗ ಕಣ್ಣಲ್ಲಿ ಮಂಜು ಮುಸುಕಿದಂಥ ಅನುಭವವಾಗಿತ್ತು.  

ಪ್ರ

ಯಾಕೀ ಶೀರ್ಷಿಕೆ?  

ಶೀರ್ಷಿಕೆಗೆ ಹಲವು ಆಯ್ಕೆಗಳಿದ್ದವು. ಆದರೆ ಈಗ ‘ಜಿಎಸ್‌ಟಿ’ ಎನ್ನುವುದು ಪ್ರತಿ ಭಾರತೀಯನಿಗೂ ಗೊತ್ತು. ಹೀಗಾಗಿ ಈ ಶೀರ್ಷಿಕೆ ಅಂತಿಮಗೊಳಿಸಿದೆವು. ‘ಜಿಎಸ್‌ಟಿ’ ಎಂದರೆ ‘ಘೋಸ್ಟ್ಸ್‌ ಇನ್‌ ಟ್ರಬಲ್‌’ ಎಂದರ್ಥ. 

ಪ್ರ

ಕಥೆ ಹೊಳೆದಿದ್ದು ಹೇಗೆ? 

ಕೋವಿಡ್‌ ಎರಡನೇ ಅಲೆ ಬಂದ ಸಂದರ್ಭದಲ್ಲಿ ಕನಸಲ್ಲಿ ಬಂದ ಕಥೆ ಇದು. ಇದಕ್ಕೆ ಸಿನಿಮಾ ರೂಪ ನೀಡಿದ್ದೇನೆ. ಈ ಕಥೆಯೊಂದಿಗೆ ಎರಡು ವರ್ಷ ಕಳೆದಿದ್ದೇನೆ. ಆ ಅವಧಿಯಲ್ಲಿ ಕೋವಿಡ್‌ ಒತ್ತಡ, ಮುಂದೆ ಏನಾಗುತ್ತದೆ ಎನ್ನುವ ಗೊಂದಲದಲ್ಲೇ ಇದ್ದೆವು. ಜನರನ್ನು ನಗಿಸಬೇಕು ಎನ್ನುವ ಉದ್ದೇಶದಿಂದಲೇ ಈ ಚಿತ್ರ ಹೆಣೆದಿದ್ದೇನೆ. ಜನರನ್ನು ನಗಿಸುವುದಷ್ಟೇ ನನಗೆ ಗೊತ್ತಿದೆ. ಪ್ರೇಕ್ಷಕರಿಗೆ ಖಂಡಿತವಾಗಿಯೂ ಮನರಂಜನೆ ನೀಡುತ್ತೇನೆ. ಸದ್ಯದ ಸ್ಥಿತಿಯಲ್ಲಿ ಟ್ರಾಫಿಕ್‌ನಿಂದ ಹಿಡಿದು ಆರೋಗ್ಯ ಸಮಸ್ಯೆಯವರೆಗೂ ಮನುಷ್ಯನೊಬ್ಬನ ಜೀವನ ಸಮಸ್ಯೆಯಲ್ಲೇ ಮುಳುಗಿ ಹೋಗಿದೆ. ಇಂಥವರು ಸಿನಿಮಾಗೆ ಬಂದಾಗ ಅವರನ್ನು ನಗಿಸುವುದೇ ನನ್ನ ಧರ್ಮ. ಅವರು ನಕ್ಕರೆ ನನಗೆ ತೃಪ್ತಿ, ಅದುವೇ ಆಶೀರ್ವಾದ.  

ಪ್ರ

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ...

‘ಲಕ್ಕಿ’ ಎನ್ನುವುದು ನನ್ನ ಪಾತ್ರದ ಹೆಸರು. ಹೆಸರಿಗಷ್ಟೇ ಇವನು ‘ಲಕ್ಕಿ’. ಜೀವನದುದ್ದಕ್ಕೂ ಈತ ಅನ್‌ಲಕ್ಕಿ. ಇಂತಹವನು ಬೇರೆಯವರ ಜೀವನದಲ್ಲಿ ಹೇಗೆ ಬದಲಾವಣೆ ತರುತ್ತಾನೆ ಎನ್ನುವುದೇ ಕಥೆ. ಕುಟುಂಬ ಸಮೇತವಾಗಿ ನೋಡುವ ಸಿನಿಮಾವಿದು. ದೆವ್ವಗಳು ಇರುವ ಸಿನಿಮಾವಾದರೂ ಎಲ್ಲೂ ಭಯಪಡಿಸುವುದಿಲ್ಲ. ಇದು ಖಂಡಿತವಾಗಿಯೂ ಹಾರರ್‌ ಸಿನಿಮಾವಲ್ಲ. ಒಂದೆರಡು ಕಡೆ ಹಾರರ್‌ ಎಲಿಮೆಂಟ್‌ ಇದೆ ಅಷ್ಟೇ.   

ಪ್ರ

ವಾರಕ್ಕೆ ಏಳೆಂಟು ಸಿನಿಮಾಗಳು ತೆರೆಗೆ ಬರುತ್ತಿವೆ? ಜನ ಯಾವುದನ್ನು ನೋಡಬೇಕು? 

ನಮ್ಮ ಸಿನಿಮಾ ನ.21ಕ್ಕೆ ಬರಬೇಕಿತ್ತು. ಆ ದಿನ ಐದಾರು ಸಿನಿಮಾಗಳಿವೆ ಎಂದು ಒಂದು ವಾರ ಮುಂದೂಡಿದೆವು. ನ.28ಕ್ಕೆ ಸಿನಿಮಾ ಬಿಡುಗಡೆ ಎಂದು ಘೋಷಿಸಿದ ಆ ದಿನದಲ್ಲೂ ಅದೇ ಪರಿಸ್ಥಿತಿ ಇದೆ. ಹೀಗೆ ಎಷ್ಟು ಎಂದು ಮುಂದೂಡೋಣ. ಪ್ರತಿಯೊಬ್ಬ ನಿರ್ದೇಶಕ, ನಿರ್ಮಾಪಕರು ಅವರದ್ದೇ ಆದ ಯೋಜನೆ ಹಾಕಿಕೊಂಡಿರುತ್ತಾರೆ. ನಾನು ಕಳೆದ ಆರೇಳು ತಿಂಗಳಿಂದ ಸಿನಿಮಾದ ವಹಿವಾಟಿಗಾಗಿ ಓಡಾಡುತ್ತಿದ್ದೇನೆ. ಬೇರೆಯವರಿಗೆ ಸಿನಿಮಾ ಮುಂದೂಡಿ ಎಂದು ಹೇಳಲೂ ಆಗದ ಸ್ಥಿತಿ ಇದೆ. ಡಿಸೆಂಬರ್‌ನಲ್ಲಿ ಮೂರು ದೊಡ್ಡ ಸಿನಿಮಾಗಳು ಇವೆ. ಜನವರಿ ಮಧ್ಯದವರೆಗೂ ಇವುಗಳ ಅಬ್ಬರ ಇರುತ್ತದೆ. ಜನವರಿಯಲ್ಲಿ ಪರಭಾಷಾ ಸಿನಿಮಾಗಳು ಲಗ್ಗೆ ಇಡುತ್ತವೆ. ‘ವಿಶಾಲ ಹೃದಯ’ದವರಾದ ನಾವು ನಮ್ಮ ಸಿನಿಮಾಗಳಿಗಿಂತ ಅವುಗಳಿಗೆ ಜಾಗ ಮಾಡುತ್ತೇವೆ. ಇವುಗಳ ಅಬ್ಬರದಲ್ಲಿ ಉಳಿದ ಸಿನಿಮಾಗಳು ತೇಲಿಹೋಗುತ್ತವೆ. ಈ ರೀತಿ ಏಳೆಂಟು ಸಿನಿಮಾಗಳನ್ನು ಒಮ್ಮೆಯೇ ರಿಲೀಸ್‌ ಮಾಡುವುದು ಖಂಡಿತಾ ಸರಿ ಅಲ್ಲ. ಆದರೆ ವೈಯಕ್ತಿಕವಾಗಿ ಎಲ್ಲರೂ ಯೋಚಿಸಿದಾಗ ತಪ್ಪೂ ಅಲ್ಲ. ಅನಿವಾರ್ಯ ಅಷ್ಟೇ.     

ಪ್ರ

ಅಮ್ಮನಿಗೂ–ಮಗನಿಗೂ ಆ್ಯಕ್ಷನ್‌ ಕಟ್‌ ಹೇಳಿದ್ದೀರಿ...

ಇದು ಅನಿರೀಕ್ಷಿತ. ತಾತನಿಂದ ಆರಂಭವಾದ ಈ ಪಯಣ ಈಗ ನನ್ನ ಮಗ ಸುಕೃತ್‌ವರೆಗೂ ಬಂದಿದೆ. ಕಥೆ ಬರೆಯುವ ಸಂದರ್ಭದಲ್ಲಿ ಹೆಣ್ಣುಮಗುವೊಂದನ್ನು ಇಟ್ಟುಕೊಂಡು ಬರೆದಿದ್ದೆ. ಭಾವನಾತ್ಮಕವಾಗಿ ಇದು ಕೆಲಸ ಮಾಡಲಿದೆ ಎಂದುಕೊಂಡಿದ್ದೆ. ಆದರೆ ಸುಕೃತ್‌ನ ಹುಮ್ಮಸ್ಸು ನೋಡಿದ ಬಳಿಕ ಪಾತ್ರದ ಬದಲಾವಣೆ ಮಾಡಿಕೊಂಡೆ. ಒಂದೇ ಫ್ರೇಮ್‌ನಲ್ಲಿ ಮೂರು ತಲೆಮಾರು ಇರುವ ಮೊದಲ ಸಿನಿಮಾ ಇದಾಗಿದೆ. ಸುಕೃತ್‌ ನಟನಾಗಿ ನನ್ನ ಮರ್ಯಾದೆಯನ್ನು ಉಳಿಸಿದ್ದಾನೆ ಎನ್ನುವ ಭರವಸೆ ಇದೆ. ಸಿನಿಮಾದಲ್ಲಿ ಮುಂದವರಿಯುವುದು ಬಿಡುವುದು ಅವನಿಗೆ ಬಿಟ್ಟಿದ್ದು. ನಾನು ಯಾವುದೇ ಒತ್ತಡ ಹಾಕುವುದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT