ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಮ್‌ಬಾಯ್‌ ‘ಆರೋಹಿ’

Last Updated 16 ಜೂನ್ 2020, 10:21 IST
ಅಕ್ಷರ ಗಾತ್ರ

ನಟಿ ಆರೋಹಿ ನಾರಾಯಣ್ ಹಾಗೂ ‘ಕಿರಿಕ್‌ ಪಾರ್ಟಿ’ ಸಿನಿಮಾ ಖ್ಯಾತಿಯ ಅರವಿಂದ ಅಯ್ಯರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಭೀಮಸೇನ ನಳಮಹಾರಾಜ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಕತೆ ಕಾರಣದಿಂದಾಗಿ, ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ ಕುತೂಹಲ ಹುಟ್ಟುಹಾಕಿತ್ತು. ಈಗ ಎಡಿಟಿಂಗ್‌, ಡಬ್ಬಿಂಗ್‌ ಸೇರಿದಂತೆ ಈ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿವೆ. ಲಾಕ್‌ಡೌನ್‌ ಕಾರಣದಿಂದ ಥಿಯೇಟರ್‌ಗಳು ಮುಚ್ಚಿರುವುದರಿಂದ ಈ ಸಿನಿಮಾ ಸಹಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಹಾದಿಯಲ್ಲಿದೆ.

‘ಮಸಾಲಡಬ್ಬಿಯಲ್ಲಿರುವ ಉಪ್ಪು, ಹುಳಿ, ಸಿಹಿ, ಖಾರ, ಒಗರಿನಂತೆ ಪ್ರೀತಿ, ಕೋಪ, ದುಃಖ ಸಮಾನವಾಗಿ ಇದ್ದರಷ್ಟೇ ಜೀವನ ಅದ್ಭುತ‘ ಎಂಬ ಕಥಾಹಂದರ ಚಿತ್ರದ್ದು.

‘ದೃಶ್ಯ’ ಸಿನಿಮಾದಲ್ಲಿ ನಟಿಸಿದ್ದ ನಟಿ ಆರೋಹಿಗೆ ಇದು ನಾಲ್ಕನೇ ಚಿತ್ರ. ಆದರೂ ಅವರು ಪೂರ್ಣಪ್ರಮಾಣದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರವಿದು. ನಟ ಅರವಿಂದ ಅಯ್ಯರ್‌ ಅವರೂ ಈ ಚಿತ್ರದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿ ದ್ದಾರೆ. ಇದರಲ್ಲಿ ಅರವಿಂದ್‌ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರೋಹಿಯದು ಅಯ್ಯಂಗಾರಿ ಬ್ರಾಹ್ಮಣ ಹುಡುಗಿಯ ಪಾತ್ರ. ಟಾಮ್‌ಬಾಯ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಈ ಚಿತ್ರದ ಚಿತ್ರೀಕರಣ ವರ್ಷದ ಹಿಂದೆಯೇ ಮುಗಿದಿತ್ತು. ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆ ಕಾರಣದಿಂದ ಈ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಆದರೆ ಅಷ್ಟರಲ್ಲಿ ಲಾಕ್‌ಡೌನ್‌ ಆಯಿತು. ಈಗ ಒಟಿಟಿಯಲ್ಲಿ ಬಿಡುಗಡೆ ಮಾಡಲು ಮಾತುಕತೆ ನಡೆಯುತ್ತಿದೆ.ಅಂತಿಮ ನಿರ್ಧಾರದ ಬಗ್ಗೆ ನಿರ್ದೇಶಕ ಕಾರ್ತಿಕ್‌ ಸರಗೂರು ತಿಳಿಸಲಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು ಆರೋಹಿ.

ಈ ಸಿನಿಮಾವನ್ನು ಕಳಸ, ನಾಗರಹೊಳೆ ಸಮೀಪದ ಕುಟ್ಟ, ಚಿಕ್ಕಮಗಳೂರು ಸುತ್ತಮುತ್ತಲಿನ ಸ್ಥಳಗಳಲ್ಲಿ ಶೂಟಿಂಗ್‌ ಮಾಡಲಾಗಿದೆ. ಇದರಲ್ಲಿ ಕೋಲಾರದ 100 ವರ್ಷ ಹಳೆಯ ಬೇಕರಿಯನ್ನು ತೋರಿಸಲಾಗಿದೆ. ಈ ಬೇಕರಿಯಲ್ಲಿ ಈಗಲೂ ಹಳೆ ಕಾಲದ ಪದ್ಧತಿಯಂತೆ ಗೋಡೆಗಳಲ್ಲೇ ಅಚ್ಚು ಇಟ್ಟು, ಬ್ರೆಡ್‌, ಬನ್‌, ಬೇಕರಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಕೆಲ ದೃಶ್ಯಗಳನ್ನು ಅಂಡರ್‌ ವಾಟರ್‌ನಲ್ಲಿ ಶೂಟಿಂಗ್‌ ನಡೆಸಲಾಗಿದೆ ಎಂದು ಚಿತ್ರೀಕರಣದ ನೆನಪನ್ನು ಮೆಲುಕು ಹಾಕಿದರು ಆರೋಹಿ.

ಈ ಚಿತ್ರದಲ್ಲಿ ನಟಿ ಪ್ರಿಯಾಂಕಾ ತಿಮ್ಮೇಶ್‌ ಎರಡನೇ ನಾಯಕಿಯಾಗಿ ನಟಿಸಿದ್ದಾರೆ.

‘ಭೀಮಸೇನ, ನಳಮಹಾರಾಜ ಇಬ್ಬರೂ ಲೋಕ ಕಂಡ ಜನಪ್ರಿಯ ಅಡುಗೆ ಭಟ್ಟರು. ಹಾಗೆಯೇ ಇಬ್ಬರು ಅದ್ಭುತ ಪ್ರೇಮಿಗಳು. ಈ ಚಿತ್ರದ ನಾಯಕನೂ ಅವರ ಹಾಗೆಯೇ. ಹಾಗಾಗಿಯೇ ಇಬ್ಬರ ಹೆಸರನ್ನು ಸೇರಿಸಿ ಈ ಚಿತ್ರಕ್ಕೆ ಇಡಲಾಗಿದೆ’ ಎಂದು ಚಿತ್ರಶೀರ್ಷಿಕೆ ಹಿಂದಿನ ಕತೆಯನ್ನು ಬಿಚ್ಚಿಟ್ಟರು.

ಈ ಚಿತ್ರವನ್ನು ‘ಜೀಜೀಂಬೆ’ ಸಿನಿಮಾ ಖ್ಯಾತಿಯ ಕಾರ್ತಿಕ್‌ ಸರಗೂರು ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ, ಪುಷ್ಕರ್‌ ಮಲ್ಲಿಕಾರ್ಜುನಯ್ಯ, ಹೇಮಂತ್‌ ರಾವ್‌ ಬಂಡವಾಳ ಹೂಡಿದ್ದಾರೆ.

ಕತೆ ಬರೆಯುತ್ತಿದ್ದಾರೆ ಆರೋಹಿ

ಲಾಕ್‌ಡೌನ್‌ ಅವಧಿಯಲ್ಲಿ ಆರೋಹಿ ಕತೆ ಬರೆಯಲು ಆರಂಭಿಸಿದ್ದಾರೆ. ನಿರ್ದೇಶನದ ಬಗ್ಗೆಯೂ ಆಸಕ್ತಿ ಹೊಂದಿರುವ ಅವರು ಭವಿಷ್ಯದಲ್ಲಿ ಸಿನಿಮಾ ನಿರ್ದೇಶನಕ್ಕಿಳಿಯುವ ಆಲೋಚನೆ ಮಾಡುತ್ತಿದ್ದಾರೆ. ‘ಲಾಕ್‌ಡೌನ್‌ ಸಮಯದಲ್ಲಿ ಸುಮ್ಮನೆ ಕತೆ ಬರೆಯುತ್ತಿದ್ದೆ. ಸಣ್ಣ ಸಣ್ಣ ಕತೆ ಬರೆಯುತ್ತಿದ್ದೆ. ಆದರೆ ನಿರ್ದೇಶನದ ಆಲೋಚನೆ ದೂರ ಇದೆ. ಈಗಿನ್ನೂ ನಾನು ನಟನೆಗೆ ಬಂದಿದ್ದೀನಷ್ಟೇ’ ಎಂದು ನಗುತ್ತಾರೆ.

ಹಾಗೆಯೇ ಲಾಕ್‌ಡೌನ್‌ ಅವಧಿಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳನ್ನು ನೋಡಿದ್ದಾರೆ. ‘ನನ್ನ ನಟನೆಯನ್ನು ಉತ್ತಮ ಪಡಿಸಿಕೊಳ್ಳುವುದು ಹೇಗೆ ಎಂಬ ಕಾರಣಕ್ಕೆ ಸಿನಿಮಾಗಳನ್ನು ನೋಡುತ್ತಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT