ಗುರುವಾರ , ಅಕ್ಟೋಬರ್ 29, 2020
26 °C

PV Web Exclusive | ಮತ್ತೆ ಸಿಗುವೆ, ತುಂಬಾ ಮಾತಾಡೋಣ ಎಂದಿದ್ರು ಎಸ್‌ಪಿಬಿ

ಕೆ.ಎಂ. ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಅದು ದಿನಾಂಕ 14.06.2019, ಬಹುಶಃ ಶುಕ್ರವಾರ ಎಂದುಕೊಂಡಿರುವೆ. ರಾತ್ರಿ ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಡುವ ಧಾವಂತದಲ್ಲಿದ್ದೆ. ಅಷ್ಟರಲ್ಲಿ ‘ರೆನೆಸಾನ್ಸ್ ಹೋಟೆಲ್‌ನಲ್ಲಿ ಎಸ್‌ಪಿಬಿ ಕಾರ್ಯಕ್ರಮವಿದೆ, ನಾನು ಹೋಗಲು ಆಗುತ್ತಿಲ್ಲ, ನೀವು ಹೋಗಿ, ಸಾಧ್ಯವಾದರೆ ಸಂದರ್ಶನ ಮಾಡಿ’ ಎಂದು ನಮ್ಮ ವಿಭಾಗದ ಮುಖ್ಯಸ್ಥರು ಕೆಲಸ ಒಪ್ಪಿಸಿದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ. ಮನಸು ನವಿಲಿನಂತೆ ಗರಿಗೆದರಿತು! ಅವರನ್ನು ಹತ್ತಿರದಿಂದ ನೋಡುವ ಮತ್ತು ಮಾತನಾಡಿಸುವ ಅವಕಾಶ ಸಿಕ್ಕಿದ್ದು ಆ ಖುಷಿಗೆ ಕಾರಣವಾಗಿತ್ತು.

ಎಸ್‌ಪಿಬಿ ಫ್ಯಾನ್ಸ್‌ ಚಾರಿಟೆಬಲ್‌ ಫೌಂಡೇಶನ್‌ ಮತ್ತು ‘ಪ್ರಜಾವಾಣಿ’ ಸಹಭಾಗಿತ್ವದಲ್ಲಿ 2019ರ ಜೂನ್‌ 15ರಂದು ಆಯೋಜಿಸಿದ್ದ ‘ದ ಜರ್ನಿ ಆಫ್‌ ಬಾಲಿವುಡ್‌’ ಎಸ್‌ಪಿಬಿ ಹಿಂದಿ ಹಾಡುಗಳ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲು ಆ ದಿನ ಎಸ್‌ಬಿಪಿ ಬೆಂಗಳೂರಿಗೆ ಬಂದಿದ್ದರು. ದಕ್ಷಿಣ ಭಾರತದಲ್ಲಿ ಸಂಪೂರ್ಣ ಬಾಲಿವುಡ್‌ ರಸಸಂಜೆ ಕಾರ್ಯಕ್ರಮ ನೀಡಿದ್ದು ಅವರು ಅದೇ ಮೊದಲು ಮತ್ತು ಅದೇ ಕೊನೆಯೂ ಇರಬಹುದು.

ಅಷ್ಟೊಂದು ದೊಡ್ಡ ಗಾಯಕರನ್ನು ಪೂರ್ವ ತಯಾರಿ ಇಲ್ಲದೆ, ದಿಢೀರ್‌ ಸಂದರ್ಶನ ಮಾಡುವುದು ಹೇಗೆ ಎನ್ನುವ ಅಳುಕು ಒಳಗಿದ್ದರೂ, ಅವರ ಮೇಲಿದ್ದ ಅಭಿಮಾನ ಮತ್ತು ಪ್ರೀತಿಯ ನೆನಪಾಗಿ ಅಂತಹ ಗಾನಗಂಧರ್ವನನ್ನು ಮಾತನಾಡಿಸುವ ಅವಕಾಶ ಕೈಚೆಲ್ಲಲು ತಯಾರಿಲ್ಲದೆ ಖುಷಿಯಿಂದಲೇ ಹೊರಟು ನಿಂತಿದ್ದೆ. ಎಂ.ಜಿ. ರಸ್ತೆಯಿಂದ ಆಟೊ ಹಿಡಿದು ಬೆಂಗಳೂರು ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ರೆನೆಸಾನ್ಸ್ ಹೋಟೆಲ್‌ ತಲುಪುವಷ್ಟರಲ್ಲಿ ರಾತ್ರಿ 9 ಗಂಟೆ ಸಮೀಪಿಸುತ್ತಿತ್ತು. ಆಟೋದಲ್ಲೇ ಒಂದಿಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು, ಡೈರಿಗೆ ಬರೆದುಕೊಂಡಿದ್ದೆ. ಆಟೋ ಇಳಿದಾಗ ಮಳೆ ತುಂತುರಿನಂತೆ ಸುರಿಯುತ್ತಿತ್ತು. ತುಂತುರು ಮಳೆಯಲ್ಲೇ ಹೋಟೆಲ್‌ ಕಡೆಗೆ ಓಡೋಡೋತ್ತಲೇ ಹೆಜ್ಜೆ ಹಾಕಿದೆ, ಕಾರ್ಯಕ್ರಮದ ಸಭಾಂಗಣ ಪ್ರವೇಶಿಸಲು ಲಿಫ್ಟ್‌ನಿಂದ ಹೊರಬಂದರೆ ಎದುರಿಗೆ ಎಸ್‌ಪಿಬಿ ನಿಂತಿದ್ದಾರೆ! ಅವರು ಕಾರ್ಯಕ್ರಮ ಮುಗಿಸಿ ಹೋಟೆಲ್‌ ಕೊಠಡಿ ತಲುಪಲು ಹೊರಟಿದ್ದರು!!

ಇದನ್ನೂ ಓದಿ: 

‘ಸರ್‌ ನಾನು ‘ಪ್ರಜಾವಾಣಿ’ ವರದಿಗಾರ’ ಎಂದು ಪರಿಚಯಿಸಿಕೊಂಡು, ಚಿಕ್ಕ ಸಂದರ್ಶನದ ಕೋರಿಕೆ ಇಡುವಷ್ಟರಲ್ಲಿ, ಅವರ ಅರ್ಧ ವಯಸ್ಸಿನವನಾದ ನನ್ನನ್ನು ‘ಬನ್ನಿ ಅಣ್ಣಯ್ಯ’ ಎಂದರು. ಅವರ ಮಂದಸ್ಮಿತ ನಗು, ಅವರ ವಿನೀತ ಮಾತು ಎಂಥವರಿಗೂ ಕ್ಷಣಕಾಲ ನಾವು ಯಾರೆನ್ನುವುದನ್ನು ಮೈಮರೆಸಿಬಿಡುತ್ತದೆ. ನಾನು ಪತ್ರಕರ್ತ ಎನ್ನುವ ಬಿಗುಮಾನ ಮರೆತು ಅವರ ಅಭಿಮಾನಿಯಾಗಿ ಪಾದ ಸ್ಪರ್ಶಿಸಲು ಮುಂದಾದಾಗ, ಅವರು ನನ್ನ ಭುಜ ಹಿಡಿದು ಎತ್ತಿದವರು, ‘ಗುರುಗಳೇ ನೀವು ಕಾಲಿಗೆ ಬೀಳಬಾರದು, ನೀವು ಮಾಧ್ಯಮದವರು’ ಎಂದು ಆಲಂಗಿಸಿಕೊಂಡರು. ಕಾರ್ಯಕ್ರಮ ಆಯೋಜಕರಿಂದ ಚಿಕ್ಕ ಉಡುಗೊರೆಯ ಪೊಟ್ಟಣ ಪಡೆದು ನನ್ನ ಕೈಗೆ ಇಡಲು ಬಂದರು, ‘ಕ್ಷಮಿಸಿ ಸರ್‌, ಉಡುಗೊರೆ ಸ್ವೀಕರಿಸುವುದಿಲ್ಲ’ವೆಂದಾಗ ‘ಬೇರೆ ಏನೂ ಅಲ್ಲ, ನನ್ನ ಹಸ್ತಾಕ್ಷರದ ಕಾಫಿ ಕಪ್‌ ಅದು’ ಸ್ವೀಕರಿಸಿ ಎನ್ನುತ್ತಲೇ ಅವರ ಜತೆಗೆ ನಿಲ್ಲಿಸಿಕೊಂಡು ಫೋಟೊಗೆ ಫೋಸು ಕೊಟ್ಟರು. ಅವರೊಂದಿಗಿರುವ ಬೆಲೆ ಕಟ್ಟಲಾಗದ ಫೋಟೊ ಮತ್ತು ಅವರ ಹಸ್ತಾಕ್ಷರದ ಕಾಫಿ ಕಪ್‌ ಅನ್ನು ನಾನು ಜತನದಿಂದ ಇಟ್ಟುಕೊಂಡಿರುವೆ. ಬೆಳಿಗ್ಗೆ ಕಾಫಿ ಕುಡಿಯುವಾಗಲೆಲ್ಲ ಎಸ್‌ಪಿಬಿಯವರ ‘ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ’ ಹಾಡು ನೆನಪಾದಂತೆ ಅವರ ಮೊದಲ ಭೇಟಿಯೂ ನೆನಪಾಗುತ್ತದೆ.

ನಾನು ‘ಸರ್‌ ನಿಮ್ಮ ಸಂದರ್ಶನ ಬಯಸಿ ಬಂದಿರುವೆ’ ಎಂದಾಗ, ‘ಇವತ್ತು ಬೇಡಪ್ಪಾ, ತುಂಬಾ ಬಳಲಿದ್ದೇನೆ, ವಿಶ್ರಾಂತಿ ಪಡೆಯಲು ಹೋಗುತ್ತಿರುವೆ. ನಾಳೆ ಕಾರ್ಯಕ್ರಮಕ್ಕೆ ರಿಹರ್ಸಲ್‌ ನಡೆಸುವುದೂ ಇದೆ. ತಡವಾಗುತ್ತದೆ, ಅನ್ಯತಾ ಭಾವಿಸಬೇಡಿ. ಮತ್ತೊಮ್ಮೆ ಖಂಡಿತಾ ಸಿಗುವೆ, ತುಂಬಾ ಹೊತ್ತು ಮಾತನಾಡೋಣ’ ಎಂದು ವಿನಮ್ರವಾಗಿ ಹೇಳಿ ಹೊರಟು ಹೋಗಿದ್ದರು.

ಅಷ್ಟರಲ್ಲಿ ನನ್ನ ಸಹದ್ಯೋಗಿ ಗವಿಸಿದ್ದಪ್ಪ ಬ್ಯಾಳಿ ಅವರು ಅಲ್ಲಿ ನನಗೆ ಎದುರಾದರು, ಅವರೂ ಎಸ್‌ಪಿಬಿ ಸಂದರ್ಶನಕ್ಕೆ ಪ್ರಯತ್ನಿಸಿ ಕೈಗೂಡದಿದ್ದ ಸಂಗತಿಯನ್ನು ನನಗೆ ತಿಳಿಸಿದರು. ನೆಚ್ಚಿನ ಗಾಯಕನನ್ನು ಹತ್ತಿರದಿಂದ ನೋಡಿ, ಮಾತನಾಡಿಸಿದ ತೃಪ್ತಿ ಅವರ ಅಭಿಮಾನಿಯಾದ ನನಗೂ ಸಿಕ್ಕರೆ, ನನ್ನೊಳಗಿನ ಪತ್ರಕರ್ತನಿಗೆ ಅವರ ಸಂದರ್ಶನ ಸಿಗಲಿಲ್ಲವಲ್ಲಾ, ಕೇಳಬೇಕಾದ ಪ್ರಶ್ನೆಗಳು ಹಾಗೇ ಉಳಿದುಬಿಟ್ಟವಲ್ಲಾ ಎನ್ನುವ ನಿರಾಸೆ ಕಾಡಿತು. ಮರು ದಿನವಾದರೂ ಸಂದರ್ಶನ ಮಾಡಲು ಯೋಜಿಸಿ, ಎಸ್‌ಪಿಬಿ ಅವರಿಂದ ಸಮಯ ಕೊಡಿಸುವಂತೆ ಪಿಆರ್‌ ಆನಂದ್‌ ಅವರಿಗೆ ಕೇಳಿದ್ದೆ. ‘ನಾವು ಅವರನ್ನು ಹತ್ತಿರದಿಂದ ನೋಡಿರುವಂತೆ, ಕಾರ್ಯಕ್ರಮ ಮುಗಿಯುವವರೆಗೂ ಅವರು ಯಾರನ್ನೂ ಭೇಟಿ ಮಾಡುವುದು ಕಷ್ಟ, ಅವರ ಸಂಗೀತ ಕಾರ್ಯಕ್ರಮಕ್ಕೆ ತುಂಬಾ ತಯಾರಿ ನಡೆಸುತ್ತಾರೆ. ಬಹುಶಃ ಸಂದರ್ಶನ ಕಷ್ಟ’ ಎಂದರು. ‘ಐವತ್ತು ವರ್ಷಗಳಿಂದ ಹಾಡುತ್ತಿರುವ ಹಿನ್ನೆಲೆ ಗಾಯಕ ಇಡೀ ದಿನ ರಿಹರ್ಸಲ್‌ ಮಾಡ್ತಾರಾ’ ಎಂದು ಅಚ್ಚರಿಯಿಂದ ನಾನು ಕೇಳುವಾಗ, ಅವರು ‘ಎಸ್‌ಪಿಬಿ ಹಾಡಿರುವ ಪ್ರತಿ ಹಾಡನ್ನು ಮತ್ತೆ ಹಾಡುವಾಗಲೂ ಹೊಸ ಹಾಡು ಹಾಡುತ್ತಿದ್ದೇನೇ ಎಂದುಕೊಂಡೇ ಅಭ್ಯಾಸ ನಡೆಸುತ್ತಾರೆ’ ಎನ್ನುವ ಅಚ್ಚರಿಯ ಸಂಗತಿಯನ್ನು ತಿಳಿಸಿದರು. ಪರಿಸ್ಥಿತಿಯ ಅರಿವಾಗಿ, ಎಸ್‌ಪಿಬಿ ಹೇಗೂ ‘ಮತ್ತೊಮ್ಮೆ ಸಿಗುವೆ, ತುಂಬಾ ಹೊತ್ತು ಮಾತಾಡೋಣ’ ಎಂದಿದ್ದಾರಲ್ಲಾ ಎಂಬ ನಿರೀಕ್ಷೆಯೊಂದಿಗೆ ವಾಪಸಾಗಿದ್ದೆ. ಕೇಳಬೇಕಿಂದಿದ್ದ ಪ್ರಶ್ನೆಗಳು ಡೈರಿಯಲ್ಲೇ, ನನ್ನಲ್ಲೇ ಉಳಿದುಬಿಟ್ಟವು.

ಮರುದಿನ ನಡೆಯಲಿದ್ದ ‘ದ ಜರ್ನಿ ಆಫ್‌ ಬಾಲಿವುಡ್‌’ ಎಸ್‌ಪಿಬಿ ಹಿಂದಿ ಹಾಡುಗಳ ರಸಸಂಜೆ ಕಾರ್ಯಕ್ರಮ ವರದಿ ಮಾಡುವ ಅವಕಾಶ ಪುಣ್ಯಕ್ಕೆ ನನಗೇ ಸಿಕ್ಕಿಬಿಟ್ಟಿತು. ಮೈಸೂರು ರಸ್ತೆಯ ನಾಯಂಡನಹಳ್ಳಿ ಮೆಟ್ರೊ ನಿಲ್ದಾಣದ ಬಳಿಯ ನಂದಿ ಲಿಂಕ್‌ ಗ್ರೌಂಡ್ಸ್‌ನಲ್ಲಿ ಸಂಜೆ 6.30ಕ್ಕೆ ಶುರುವಾಗಲಿದ್ದ ಆ ಕಾರ್ಯಕ್ರಮಕ್ಕೆ ಅರ್ಧ ತಾಸು ಮುಂಚಿತವಾಗಿ ಗಣ್ಯರ ಸಾಲಿನಲ್ಲಿ ಆಸೀನನಾಗಿಬಿಟ್ಟಿದ್ದೆ. ರಾಜ್ಯವಷ್ಟೇ ಅಲ್ಲ, ಪಕ್ಕದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯದಿಂದಲೂ ಎಸ್‌ಪಿಬಿ ಅಭಿಮಾನಿಗಳು ಅಂದಿನ ರಸ ಸಂಜೆ ಆಸ್ವಾದಿಸಲು ಬಂದಿದ್ದರು. ‘ಇದೇ ನಾಡು, ಇದೇ ಭಾಷೆ, ಎಂದೆಂದೂ ನನ್ನದಾಗಿರಲಿ, ಎಲ್ಲೇ ಇರಲಿ, ಹೇಗೆ ಇರಲಿ, ಕನ್ನಡವೇ ನಮ್ಮ ಉಸಿರಲ್ಲಿ...’ ಎಂಬ ಗೀತೆಯನ್ನು ಎಸ್‌ಪಿಬಿ ನಾಂದಿ ಗೀತೆಯಾಗಿ ಹಾಡುತ್ತಿದ್ದಂತೆ ಸಭಾಂಗಣದಲ್ಲಿ ಅಭಿಮಾನದ ಅಲೆಯೇ ಉಕ್ಕಿತ್ತು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಗಳು ನಾಡಿಗೆ ನೀಡಿದ ಕೊಡುಗೆಯನ್ನು ಎಸ್‌ಪಿಬಿ ಅಂದು ಸ್ಮರಿಸಿ, ಗುಣಗಾನ ಮಾಡಿದ್ದರು.‌

ಏಳು ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ನಡೆದ ಆ ರಸ ಸಂಜೆಯಲ್ಲಿ ಅಕ್ಷರಶಃ ಎಲ್ಲರೂ ಮಿಂದೆದ್ದವು. ಆ ರಸಸಂಜೆಯ ಹಿಂದಿನ ದಿನ ‘ನನ್ನ ಶರೀರಕ್ಕೆ 73 ವರ್ಷ. ಶಾರೀರಕ್ಕೆ (ಕಂಠ) ಇನ್ನೂ 37ರ ಹರೆಯ. ಶರೀರಕ್ಕೆ ವಯಸ್ಸಾಗಿರಬಹುದು, ಶಾರೀರಕ್ಕಲ್ಲ. ವಯಸ್ಸಿನಿಂದ ದೇಹ ಬಳಲಿರಬಹುದು. ಕಂಠ ಬಳಲಿಲ್ಲ. ಜೀವನದ ಕೊನೆಯ ಉಸಿರು ಇರುವರೆಗೂ ನನ್ನ ಧ್ವನಿ ಬಳಲುವುದಿಲ್ಲ. ಹಾಡು ನಿಲ್ಲುವುದಿಲ್ಲ...’ ಎಂದು ಅಭಿಮಾನಿಗಳ ಸಮ್ಮುಖದಲ್ಲಿ ಎಸ್‌ಪಿಬಿ ಹೇಳಿದ್ದ ಮಾತು ಅಕ್ಷರಶಃ ಸತ್ಯವೆನಿಸಿತು. ಅವರ ದಣಿವರಿಯದ ಗಾಯನಕ್ಕೆ ಅಂದು ಅವರಿಗೆ ಸಾಥ್‌ ನೀಡಿದವರು ಅವರ ಪುತ್ರ ಚರಣ್, ಅವರ ಸಹೋದರನ ಪುತ್ರ ಅಭಿಷೇಕ್, ಗಾಯಕರಾದ ಪಲ್ಲವಿ, ಹರಿಣಿ, ರಮ್ಯಾ. ಹೈದರಾಬಾದ್‌ನಿಂದ ಬಂದಿದ್ದ ಈ ಗಾಯಕ– ಗಾಯಕಿಯರಿಗೆ 'ಕನ್ನಡ ಕಲಿಯಿರಿ, ಕನ್ನಡ ಕಲಿತರೆ ಅದು ನಿಮ್ಮನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತದೆ. ಸನ್ಮತಿ ಇರಲಿ, ಅದು ಇದ್ದರೆ ಭಾಷೆ, ಧರ್ಮ, ಸಂಸ್ಕೃತಿಗಳ ಮೀರಿ ಎಲ್ಲರಿಗೂ ನಾವು ಸಲ್ಲುತ್ತೇವೆ’ ಎಂದಾಗ ಇಡೀ ಸಭೆಯಲ್ಲಿ ಕರತಾಡನದ ಭೋರ್ಗರೆತ ಮಾರ್ಧನಿಸಿತ್ತು. ಆ ಸನ್ಮತಿ ಇದ್ದಿದ್ದರಿಂದಲೇ ಎಸ್‌ಪಿಬಿ ಎತ್ತರಕ್ಕೆ ಬೆಳೆದು, ಇಂದು ವಿಶ್ವಕ್ಕೆ ಸೇರಿದವರೆನಿಸಿಕೊಂಡುಬಿಟ್ಟಿದ್ದಾರೆ.

‘ಕನ್ನಡ ನಾಡಿನೊಂದಿಗೆ ನನ್ನದು ಅವಿನಾಭಾವ ಸಂಬಂಧ. ಈ ನಾಡಿನಲ್ಲಿ ನನಗೆ ಸಿಕ್ಕಿರುವ ಗೌರವ, ಅಭಿಮಾನ ಪೂರ್ವ ಜನ್ಮದ ಸುಕೃತ ಫಲ. ಪುನರ್ಜನ್ಮವಿದ್ದರೆ ಅದು ಈ ನೆಲದಲ್ಲಿ ಆಗಲಿ’ ಎನ್ನುವ ಮಾತನ್ನು ಆ ದಿನವೂ ಎಸ್‌ಪಿಬಿ ಹೇಳಿದ್ದರು. ಗಾಯನದ ನಡುವೆ ಆಗಾಗ ಅವರು ಆಡುತ್ತಿದ್ದ ಮುತ್ತಿನಂತಹ ಮಾತುಗಳು ನಿನ್ನೆಮೊನ್ನೆ ಕೇಳಿದಂತೆ ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ. ನಿಮ್ಮ ಪುನರ್ಜನ್ಮ ಕರುನಾಡಿನಲ್ಲೇ ಆಗಲಿ ಎಸ್‌ಪಿಬಿ ಸರ್‌, ಸಂದರ್ಶನದಲ್ಲಿ ನಿಮ್ಮನ್ನು ಕೇಳಬೇಕೆಂದಿದ್ದ ಪ್ರಶ್ನೆಗಳಿಗೆ ನಿಮ್ಮ ಉತ್ತರ ಪಡೆಯಬೇಕಿದೆ!

ಇನ್ನಷ್ಟು...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು