ಶುಕ್ರವಾರ, ಮೇ 27, 2022
22 °C

ಜಾನೂ ಈಗ ‘ಕಾರ್ಗಿಲ್‌ ಗರ್ಲ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಧಡಕ್‌’ ಸುಂದರಿ ಜಾಹ್ನವಿ ಕಪೂರ್‌ ಕೊನೆಗೂ ಯುದ್ಧ ವಿಮಾನವೇರಲು ಸಜ್ಜಾಗಿದ್ದಾರೆ. ಭಾರತೀಯ ವಾಯುಪಡೆಯ ಮೊದಲ ಮಹಿಳಾ ಕ್ಯಾಪ್ಟನ್‌ ಗುಂಜನ್‌ ಸಕ್ಸೇನಾ ಜೀವನಕತೆ ಆಧರಿಸಿದ ಚಿತ್ರ ‘ಕಾರ್ಗಿಲ್‌ ಗರ್ಲ್‌’ ಚಿತ್ರೀಕರಣದಲ್ಲಿ ಜಾನೂ ತೊಡಗಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಿನವರೆಗೂ ಗುಂಜನ್‌ ಮತ್ತು ಕರಣ್‌ ಜೋಹರ್‌ ಅವರ ‘ತಖ್ತ್‌’ನಲ್ಲಿ ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದ ಜಾನೂ ಕೊನೆಗೂ ಗುಂಜನ್‌ ಪೋಷಾಕು ತೊಟ್ಟಿದ್ದಾರೆ. 

ಚಿತ್ರದ ಸೆಟ್‌ನಿಂದ ಒಂದಷ್ಟು ಫೋಟೊಗಳನ್ನೂ ಸೆಲ್ಫಿಗಳನ್ನೂ ಜಾನೂ ಸಾಮಾಜಿಕ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಗುಂಜನ್‌ ಸಕ್ಸೇನಾ ಕುರಿತ ಚಿತ್ರದ ಬಹುತೇಕ ಸನ್ನಿವೇಶಗಳು ಲಖನೌನಲ್ಲೇ ಚಿತ್ರೀಕರಣವಾಗಲಿವೆ. ಎರಡು ದಿನಗಳ ಹಿಂದೆಯೇ ಲಖನೌನಲ್ಲಿ ಶರಣ್‌ ಶರ್ಮಾ ಕ್ಯಾಂಪ್‌ನಲ್ಲಿ ಬೀಡುಬಿಟ್ಟಿರುವ ಜಾನೂ ಮಾರ್ಚ್‌ ಕೊನೆಯವರೆಗೂ ಗುಂಜನ್‌ ಪೋಷಾಕಿನಲ್ಲಿ ಇರಲಿದ್ದಾರೆ.

ಗುಂಜನ್‌ ಅವರಂತೆ ಕಡು ನೀಲಿ ಬಣ್ಣದ ಜಂಪ್‌ಸೂಟ್‌ ಧರಿಸಿದ ಜಾನೂ, ಕಾರಿನಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡಿದ್ದಾರೆ. ಚಿತ್ರದಲ್ಲಿ ಜಾನೂ ತಂದೆಯ ಪಾತ್ರವನ್ನು ಪಂಕಜ್‌ ತ್ರಿಪಾಠಿ ಮಾಡುತ್ತಿದ್ದಾರೆನ್ನಲಾಗಿದೆ. ಜಾನೂ ಸಹೋದರ ಹಾಗೂ ಸೇನಾಧಿಕಾರಿ ಅಂಶುಮಾನ್‌ ಸಕ್ಸೇನಾ ಪಾತ್ರದಲ್ಲಿ ಅಂಗದ್‌ ಬೇಡಿ ನಟಿಸಲಿದ್ದಾರೆ. ಒಂದು ಮೂಲದ ಪ್ರಕಾರ ಜಾನೂ ಮತ್ತು ಅಂಗದ್ ಅವರು ತಡರಾತ್ರಿವರೆಗೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

‘ಧಡಕ್‌’ ಬಳಿಕ ಜಾನೂ ನಟಿಸುತ್ತಿರುವ ಚಿತ್ರ ಇದಾದರೂ ಕರಣ್‌ ಜೋಹರ್‌ ನಿರ್ಮಾಣ, ನಿರ್ದೇಶನದ ‘ತಖ್ತ್‌’ಗೆ ಈಗಾಗಲೇ ಕಾಲ್‌ಶೀಟ್‌ ನೀಡಿದ್ದಾರೆ. ಈ ಎರಡೂ ಚಿತ್ರಗಳಿಗೆ ದೇಹನೋಟ ವಿಭಿನ್ನವಾಗಿರಬೇಕಾಗಿದೆ. ಇದರಿಂದಾಗಿ ಎರಡರಲ್ಲಿ ಯಾವ ಪಾತ್ರಕ್ಕೆ ಒಪ್ಪಿಗೆ ನೀಡಬೇಕು ಎಂಬ ಗೊಂದಲದಲ್ಲಿದ್ದರು ಜಾನೂ. ಮಾರ್ಚ್‌ ಹೊತ್ತಿಗೆ ಈ ಸಿನಿಮಾದ ಚಿತ್ರೀಕರಣ ಪ್ಯಾಕಪ್‌ ಮಾಡಿದ ನಂತರವೇ ಕೆಜೋ ಕ್ಯಾಂಪ್‌ಗೆ ಹೋಗುವ ತೀರ್ಮಾನಕ್ಕೆ ಈಗ ಬಂದಿದ್ದಾರೆ. 

1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ವೇಳೆ ಗಾಯಗೊಂಡ ಯೋಧರನ್ನು ಪ್ರಾಣಾಪಾಯ ಲೆಕ್ಕಿಸದೆ ಸ್ಥಳಾಂತರ ಮಾಡಿದವರು ಗುಂಜನ್‌ ಸಕ್ಸೇನಾ. ಅವರ ಕುಟುಂಬದಲ್ಲಿ ಅನೇಕ ಮಂದಿ ಸೇನೆಯಲ್ಲಿ ವಿವಿಧ ಹಂತದಲ್ಲಿ ಸೇವೆ ಸಲ್ಲಿಸಿದವರು. ಹಾಗಾಗಿ ಪದವಿ ಶಿಕ್ಷಣ ಮುಗಿಸಿದ ತಕ್ಷಣ ಗುಂಜನ್‌, ವಾಯುಪಡೆ ಸೇರುವ ಇಚ್ಛೆ ವ್ಯಕ್ತಪಡಿಸಿದಾಗ ಎಲ್ಲರೂ ಬೆಂಬಲಿಸಿದರು. ಗುಂಜನ್‌, 25ನೇ ವಯಸ್ಸಿಗೇ ಭಾರತೀಯ ವಾಯುಪ‍ಡೆಯ ಟ್ರೈನಿ ಪೈಲಟ್‌ ಆಗಿ ನಿಯೋಜನೆಗೊಂಡರು. ಮೊದಲ ಮಹಿಳಾ ಹೆಲಿಕಾಪ್ಟರ್‌ ಪೈಲಟ್‌ ಆಗಿ ನಿಯೋಜನೆಗೊಂಡ ಅವರು ಕಾರ್ಗಿಲ್‌ ಯುದ್ಧದಲ್ಲಿ ತಮ್ಮ ಪಡೆಯ ನೇತೃತ್ವ ವಹಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು