ಬುಧವಾರ, ಆಗಸ್ಟ್ 10, 2022
24 °C

'99 ಸಾಂಗ್ಸ್' ಸಿನಿಮಾ ವಿಮರ್ಶೆ| ದುರ್ಬಲ ಗೀತನಾಟಕ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಚಿತ್ರ: 99 ಸಾಂಗ್ಸ್ (ಹಿಂದಿ)

ನಿರ್ಮಾಣ: ಎ.ಆರ್. ರೆಹಮಾನ್ ಹಾಗೂ ಜಿಯೊ ಸ್ಟುಡಿಯೋಸ್

ನಿರ್ದೇಶನ: ವಿಶ್ವೇಶ್ ಕೃಷ್ಣಮೂರ್ತಿ

ತಾರಾಗಣ: ಎಹಾನ್ ಭಟ್, ಎಡಿಲ್ಸಿ ವರ್ಗಸ್, ಮೊನಿಷಾ ಕೊಯಿರಾಲಾ, ಲೀಸಾ ರೇ, ರಂಜಿತ್ ಬಾರೋಟ್, ರಾಹುಲ್ ರಾಮ್, ತೆಂಝಿನ್ ದಲ್ಹಾ.

***

‘ಒಂದೇ ಒಂದು ಹಾಡು ಇಡೀ ಜಗತ್ತನ್ನೇ ಬದಲಿಸಬಲ್ಲದು’– ನಾಯಕ ತನ್ನ ನಿಸ್ತೇಜ ಕಣ್ಣುಗಳ ಮಿಟುಕಿಸದೆ ಹೇಳುವಾಗ, ಎದುರಲ್ಲಿ ಕನ್ಯಾಪಿತೃ. ‘ನನ್ನ ಮಗಳ ಕೈಹಿಡಿಯುವ ಯೋಗ್ಯತೆ ನಿನಗಿದೆಯಾ’ ಎಂದು ಚರ್ವಿತ ಚರ್ವಣದಂತೆ ನಾಯಕಿಯ ಪಿತಾಶ್ರೀ ಕೇಳಿಬಿಟ್ಟರೆ ಪ್ರೇಕ್ಷಕನ ಮುಖ ಹುಳ್ಳಗಾಗುವುದಲ್ಲ, ಅದಕ್ಕೇ ಇಲ್ಲಿ ಸಂಗೀತದ ಸವಾಲನ್ನು ಒಡ್ಡುತ್ತಾನೆ. ‘ಒಂದಲ್ಲ, ನೂರು ಹಾಡುಗಳನ್ನು ಹೊಸೆದು, ಜಗತ್ತನ್ನು ಗೆದ್ದು ತೋರು ಬಾ...’ ಎನ್ನುವ ಸವಾಲದು. ನಾಯಕ ಅದನ್ನು ಸ್ವೀಕರಿಸಿ, ಹಾಡು ಹುಡುಕಿ ಶಿಲ್ಲಾಂಗ್‌ಗೆ ಹೋಗುತ್ತಾನೆ. ಜಾಗ ಚೆನ್ನಾಗಿದ್ದುಬಿಟ್ಟರೆ ಸಂಗೀತ ಸಿಗುವುದೇ ಎಂದು ನಾವು ಪ್ರಶ್ನಿಸಿಕೊಂಡರೆ, ಮುಸಿಮುಸಿ ನಗಬೇಕಷ್ಟೆ.

ಸ್ವರ ಮಾಂತ್ರಿಕ ಎ.ಆರ್. ರೆಹಮಾನ್ ಒಂದು ದಶಕದ ಹಿಂದೆಯೇ ಬರೆದಿದ್ದ ಕಥೆಯೀಗ ’99 ಸಾಂಗ್ಸ್’ ಸಿನಿಮಾ ಆಗಿದೆ. ಹಿಂದಿ, ತಮಿಳು ಎರಡೂ ಭಾಷೆಗಳಲ್ಲಿ ತೆರೆಕಂಡಿದೆ. ಚಿತ್ರಕಥಾ ಬರವಣಿಗೆಯ ಜತೆಗೆ ನಿರ್ದೇಶನದ ಹೊಣೆಗಾರಿಕೆಯನ್ನು ಹೊಸಬ ವಿಶ್ವೇಶ್ ಕೃಷ್ಣಮೂರ್ತಿ ಅವರಿಗೆ ರೆಹಮಾನ್ ವಹಿಸಿದ್ದಲ್ಲದೆ, ಬಂಡವಾಳವನ್ನೂ ಹೂಡಿದ್ದು ವಿಶೇಷ.

ರೆಹಮಾನ್ ಸ್ವರ ಸಂಯೋಜನೆ ಇದ್ದಮೇಲೆ ಸಿನಿಮಾಗೆ ದೊಡ್ಡ ಇಂಧನವೊಂದು ಸಿಕ್ಕಂತೆಯೇ ಎನ್ನುವುದು ಸಹಜ ನಿರೀಕ್ಷೆ. ಅದೇ ಇಲ್ಲಿ ದೊಡ್ಡ ಭಾರವಾಗಿದೆ. ಅಸ್ತವ್ಯಸ್ತ ಕಥೆಯನ್ನು ಮುರುಕಲು ಫ್ಯಾಷ್‌ಬ್ಯಾಕ್‌ಗಳಲ್ಲಿ ಹೇಳಲು ಹೋಗುವ ನಿರೂಪಣೆಯ ದಾರಿಯಲ್ಲಿ ಯಾವ ನಾದದಲೆಯೂ ಎದೆಗೆ ನಾಟದು. ಕಣ್ಣುಮುಚ್ಚಿಕೊಂಡರೂ ರೆಹಮಾನ್ ವಾದ್ಯ ಬಳಕೆಯ ಹಳೆಯ ಮಾಂತ್ರಿಕ ಶಕ್ತಿ ಇಲ್ಲಿ ಸೊರಗಿದೆಯೇನೋ ಎನ್ನಿಸುತ್ತದೆ. ನಿಸ್ತೇಜ ವರ್ಣಚಿತ್ರಕ್ಕೆ ಅದ್ದೂರಿ ಚೌಕಟ್ಟನ್ನು ತೊಡಿಸಿದರೆ ಹೇಗಿರುತ್ತದೋ, ಈ ಸಿನಿಮಾ ಕೂಡ ಹಾಗೆಯೇ.

ನಾಯಕನ ತಂದೆ ಸಂಗೀತ ದ್ವೇಷಿ. ತಾಯಿ ಸ್ವರಗಳ ಆರಾಧಕಿ. ಆಕೆ ಬದುಕಿಲ್ಲ. ತಂದೆಯೇ ಮಗನನ್ನು ಬೆಳೆಸಿ, ಆಮೇಲೆ ಅಸುನೀಗಿದ್ದಾನೆ. ಅಪ್ಪನಿಗೆ ಗೊತ್ತಾಗದಂತೆಯೇ ಸಂಗೀತದ ಮೋಹಕ್ಕೆ ಒಳಗಾಗುವ ನಾಯಕ ಅದನ್ನು ಹೇಗೋ ಕಲಿತುಬಿಟ್ಟಿದ್ದಾನೆ. ಸ್ವರದ ಅಮಲಿನಲ್ಲಿ ಅದ್ದಿ ತೆಗೆದಂಥ ಜೀವ ಅವನದ್ದು. ನಮ್ಮ ಕಲ್ಪನೆಯಲ್ಲಿ ಇಂತಹ ನಾಯಕ ಹೇಗಿರಬೇಕೋ ಈ ಚಿತ್ರದಲ್ಲಿ ಹಾಗೆ ಇಲ್ಲ. ಅವನು ಪ್ರೀತಿಸುವ ನಾಯಕಿಗೆ ಮಾತೇ ಬಾರದು. ಆದರೆ, ವರ್ಣಚಿತ್ರಗಳಲ್ಲಿ ಭಾವಗಳ ಗೆರೆಗಳನ್ನು ಕಾಡುವಂತೆ ಮೂಡಿಸಬಲ್ಲಳು. ಸಂಗೀತದ ಹುಡುಕಾಟದಲ್ಲಿ ಜಾಸ್ ಲೋಕದ ಅಮಲಿನ ಓಣಿ ತಲುಪುವ ನಾಯಕನ ಬದುಕಿನಲ್ಲೊಂದು ಅನಿರೀಕ್ಷಿತ ತಿರುವು. ವಿರಹವಿಲ್ಲಿ ನೂರು ತರಹವಲ್ಲ, ಒಂದೇ ತರಹ. ಆಮೇಲೆ ಕೃತಕ ಪರಿಸರದಲ್ಲಿನ ದುರ್ಬಲ ಗೀತನಾಟಕದಂತೆ ಸಿನಿಮಾ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಜಗತ್ತನ್ನೇ ಬದಲಿಸಬಲ್ಲ ಒಂದು ಹಾಡಿಗಾಗಿ ನಾವೂ ಕಾಯತೊಡಗುತ್ತೇವೆ. ಕೊನೆಯಲ್ಲಿ ಹೊಮ್ಮುವ ಆ ಹಾಡು ಚೆನ್ನಾಗಿ ಇದೆ. ಹಾಗೆಂದು, ಜಗತ್ತನ್ನು ಬದಲಿಸುವಷ್ಟು, ಕೂತಲ್ಲೇ ಮನವ ಕದಡುವಷ್ಟು ಅಲ್ಲ.

ತನಯ್ ಸತಮ್, ಜೇಮ್ಸ್‌ ಕೋವ್ಲಿ ಸಿನಿಮಾಟೊಗ್ರಫಿಯಲ್ಲಿ ಎಲ್ಲವೂ ಚೆನ್ನಾಗಿ ಕಂಡಿವೆ. ನಾಯಕನ ಅರಣ್ಯ ರೋದನ, ಮೋಂಬತ್ತಿಯ ಉರಿಗೆ ತನ್ನದೇ ಮೇಣದಂಥ ಬೆರಳುಗಳ ತಾಕಿಸುವ ನಾಯಕಿ, ನಾಯಕ–ನಾಯಕಿ ಅಂಗೈಗಳನ್ನು ಹತ್ತಿರ ತಂದಾಗ ಮೂಡುವ ಬೆಳಕು, ಪಿಯಾನೋ ಕೀಲಿಗಳ ಕದಲಿಕೆ, ಮಂದ್ರ ಸಂಗೀತಕ್ಕೆ ಮಂದ ಲೈಟಿಂಗ್, ಜನಪದ ಕಥೆ ಹೇಳುವಂತಹ ಸಣ್ಣ ಪುಟ್ಟ ದೃಶ್ಯಗಳು...ಹೀಗೆ ಎಲ್ಲವೂ ಚೆಂದಕಿಂತ ಚೆಂದ ಕಂಡರೂ ಮನದಾಳಕ್ಕೆ ಗಾಳ ಹಾಕೊಲ್ಲ. ಸಂಗೀತ ಜಗತ್ತನ್ನು ಬದಲಿಸುತ್ತದೆ ಎಂಬ ಒನ್‌ಲೈನರ್‌ ಅನ್ನು ರಾಜಕಾರಣಿಯೊಬ್ಬನ ಪರಿವರ್ತನೆಯಾಗಿ ಬಿಂಬಿಸಿ, ಕೊನೆಯಲ್ಲಿ ತೆಳು ಮಾಡಲಾಗಿದೆ.

‘ಓ ಆಶಿಕಾ’ ಹಾಡಿನ ಕಾಡುವ ಕೆಲವು ಪಲುಕುಗಳು ಹಾಗೂ ಸಂಗೀತ ತಾಂತ್ರಿಕತೆಯ ನೈಪುಣ್ಯ, ರೀರೆಕಾರ್ಡಿಂಗ್, ಕಲರ್ ಗ್ರೇಡಿಂಗ್‌ನ ವೃತ್ತಿಪರತೆ ಇವು ಸಿನಿಮಾದ ಸಕಾರಾತ್ಮಕ ಅಂಶಗಳು. ಹೊಸ ನಾಯಕ ಎಹಾನ್ ಭಟ್ ಕಣ್ಣುಗಳು ಚೆನ್ನಾಗಿವೆಯಾದರೂ ಸಂಗೀತದ ಭಾವ ತುಳುಕಿಸಬಲ್ಲ ಗೆರೆಗಳು ಮುಖದ ಮೇಲೆ ಮೂಡಿಲ್ಲ. ನಾಯಕಿ ಎಡಿಲ್ಸಿ ಚೆಂದವಾಗಿ ಇಸ್ತ್ರಿ ಹಾಕಿಟ್ಟಂತೆ ಇದ್ದಾರಷ್ಟೆ. ಮೊನಿಷಾ, ಲೀಸಾ ರೇ ಅಭಿನಯವೂ ಅಷ್ಟಕ್ಕಷ್ಟೆ. ಸಂಗೀತಗಾರರೂ ಆಗಿರುವ ರಂಜಿತ್ ಬಾರೋಟ್ ನಾಯಕಿಯ ತಂದೆ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ನಾಯಕನ ಸ್ನೇಹಿತನಾಗಿ ತೆಂಜಿನ್ ದಲ್ಹಾ ಅಭಿನಯವೂ ಚೆಂದ.

ಸಂಗೀತ, ನೃತ್ಯ ಪ್ರಧಾನ ಚಿತ್ರಗಳು ದೀರ್ಘಾವಧಿ ಕಾಡಬೇಕು ಅಥವಾ ತಕ್ಷಣಕ್ಕೆ ಮೇಲೆದ್ದು ಪ್ರೇಕ್ಷಕ ಕುಣಿಯುವಂತೆ ಮಾಡಬೇಕು. ಅವೆರಡನ್ನೂ ಮಾಡದ ಈ ಚಿತ್ರ, ರೆಹಮಾನ್ ಎಂಬ ನಿರ್ಮಾಪಕ ಮಗುವಿನ ಅಂಬೆಗಾಲು ಎನ್ನದೇ ವಿಧಿಯಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು