ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆಕ್ಟ್–1978' ಸಿನಿಮಾ ವಿಮರ್ಶೆ: ಹತಾಶ ಹೆಣ್ಣಿನ ಬಸಿರ ‘ತೇವ’, ಒಡಲುರಿ!

Last Updated 20 ನವೆಂಬರ್ 2020, 10:04 IST
ಅಕ್ಷರ ಗಾತ್ರ

ಚಿತ್ರ: ಆಕ್ಟ್–1978 (ಕನ್ನಡ)

ನಿರ್ಮಾಣ: ದೇವರಾಜ್ ಆರ್.

ನಿರ್ದೇಶನ: ಮಂಸೋರೆ

ತಾರಾಗಣ: ಯಜ್ಞಾ ಶೆಟ್ಟಿ, ಬಿ. ಸುರೇಶ, ಪ್ರಮೋದ್ ಶೆಟ್ಟಿ, ಅವಿನಾಶ್, ಅಚ್ಯುತ ಕುಮಾರ್, ಅವಿನಾಶ್, ಶ್ರುತಿ, ದತ್ತಣ್ಣ

ಚಕ್ಕಳ ಮಕ್ಕಳ ಹಾಕಿ ಕುಳಿತ ಸಿಲ್ವರ್‌ ಪೇಂಟೆಡ್ ಗಾಂಧಿ ವೇಷಧಾರಿಯನ್ನು ಅನಾಮತ್ತಾಗಿ ಸರ್ಕಾರಿ ಕಚೇರಿಯ ಕಾಂಪೌಂಡಿನಿಂದ ಹೊರಗೆ ಕೂರಿಸುತ್ತಾರೆ. ನ್ಯಾಯಕ್ಕಾಗಿ ಅವನ 317ನೇ ದಿನದ ಹೋರಾಟ ಅಲ್ಲೇ ಮುಂದುವರಿಯುತ್ತದೆ. ಮಾತೇ ಆಡದ ಆ ಗಾಂಧಿ ಎದ್ದೇಳುವುದು ಕೊನೆಗೆ. ಅವನ ಹೋರಾಟದ ಬೋರ್ಡು ಆಗ ಬಾಗುತ್ತದೆ. ಇದು ಈ ದಿನಮಾನದ ರೂಪಕ.

ತುಂಬು ಗರ್ಭಿಣಿಯೊಬ್ಬಳು ಬಾಂಬ್ ಅನ್ನು ಹೊಟ್ಟೆಗೆ ಕಟ್ಟಿಕೊಂಡು ಕೈಲಿ ಗನ್ ಹಿಡಿದು ಕೃಷಿ ಇಲಾಖೆಯ ಕಚೇರಿಯನ್ನು ವಶಕ್ಕೆ ತೆಗೆದುಕೊಂಡು, ಎಲ್ಲ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿಸುತ್ತಾಳೆ. ‘ಗಾಂಧಿ’ ಹೊರಗೆ ಹೋಗುವುದು ಆಗ! ಒಳಗೆ ನ್ಯಾಯಕ್ಕಾಗಿ ಅವಳದ್ದು ಹಿಂಸಾಮಾರ್ಗದ ಹೋರಾಟ. ಅದರಲ್ಲಿ ಅವಳು ಗೆದ್ದು ಸೋಲುವಳೊ, ಸೋತು ಗೆಲ್ಲುವಳೊ ಎನ್ನುವುದನ್ನು ಕೊನೆಕೊನೆಗೆ ಕಣ್ಣಂಚಿನಲ್ಲಿ ಜಮೆಯಾಗುವ ಹನಿಗಳೇ ಹೇಳುತ್ತವೆ.

‘ಆಕ್ಟ್–1978’ ಸಿನಿಮಾದ ಶಕ್ತಿ ಇರುವುದು ಅದರ ಬರವಣಿಗೆಯಲ್ಲಿ. ಟಿ.ಕೆ. ದಯಾನಂದ, ವೀರು ಮಲ್ಲಣ್ಣ ಹಾಗೂ ನಿರ್ದೇಶಕ ಮಂಸೋರೆ ಪ್ರೇಕ್ಷಕನಲ್ಲಿ ಏಳಬಹುದಾದ ತಾತ್ವಿಕ ಪ್ರಶ್ನೆಗಳಿಗೆಲ್ಲ ಸಾವಧಾನದಿಂದ ಉತ್ತರ ಕೊಡುವ ರೀತಿ ಚಿತ್ರಕಥೆಯನ್ನು ಹೊಸೆದಿದ್ದಾರೆ. ಭ್ರಷ್ಟ ವ್ಯವಸ್ಥೆಯಿಂದ ಹತಾಶೆಗೊಂಡು ನಾಯಕಿ ಹೊಮ್ಮಿಸುವ ಆರ್ತನಾದ ಸಿನಿಮಾದ ಒನ್‌ಲೈನರ್. ಹಾಗೆಂದು ಹಿಂಸೆಯನ್ನು ಅನುಮೋದಿಸದೆ ಅಂತ್ಯವನ್ನು ಭಾವುಕವಾಗಿಸುವ ಮಾನವೀಯ ಹಾದಿಯನ್ನು ಆರಿಸಿಕೊಂಡಿರುವುದು ನಿರ್ದೇಶಕರ ಸಂವೇದನೆಗೆ ಹಿಡಿದ ಕನ್ನಡಿ.

‘ಇಂಡಿಯನ್’, ‘ಅನ್ನಿಯನ್’ ತರಹದ ತಮಿಳು ಸಿನಿಮಾಗಳಲ್ಲಿ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ನಾಯಕ ಹಿಂಸೆಯನ್ನು ಅನುಮೋದಿಸಿದ್ದನ್ನು ನೋಡಿದ್ದೇವೆ. ಹೋದ ತಿಂಗಳು ಒಟಿಟಿಯಲ್ಲಿ ತೆರೆಕಂಡ ತಮಿಳಿನ ‘ಕಾ ಪೇ ರಣಸಿಂಗಂ’ ತಮಿಳು ಸಿನಿಮಾದಲ್ಲಿ ವ್ಯವಸ್ಥೆಯ ವಿರುದ್ಧ ನಾಯಕಿಯ ತಣ್ಣನೆಯ ಪ್ರಭಾವಿ ಹೋರಾಟದ ಕಥನವನ್ನು ನಾವು ಕಂಡಿದ್ದೆವು. ಇವ್ಯಾವ ಪ್ರಭೇದಕ್ಕೂ ಸೇರದಂತೆ ಮಂಸೋರೆ ‘ಆಕ್ಟ್–1978’ ಅನ್ನು ಒಪ್ಪಿತ ಡ್ರಾಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಸಿನಿಮಾದಲ್ಲಿ ಕಾಡುವ ಹಲವು ದೃಶ್ಯಗಳಿವೆ. ಬಸಿರಿನ ತೇವ ತೊಟ್ಟಿಕ್ಕಿಸುತ್ತಾ ಶೌಚಾಲಯದತ್ತ ಏದುಸಿರು ಬಿಡುತ್ತಾ ಸಾಗುವ ನಾಯಕಿ ಗನ್ನು, ವಾಕಿಟಾಕಿಯನ್ನು ಸಿಂಕಿನ ಮೇಲಿಟ್ಟು ಹೊಮ್ಮಿಸುವ ನೋವಿನ ದನಿ. ಹೊರಗೆ ಬಾಯಿಗೆ ಬಂದಂತೆ ಕಥೆ ಕಟ್ಟುತ್ತಿದ್ದ ಟಿ.ವಿ ವಾಹಿನಿಯ ವರದಿಗಾರ್ತಿಯನ್ನು ಒಳಗೆ ಕರೆಸಿಕೊಂಡು, ತನ್ನ ಅಸಲಿ ನೋವಿನ ಕಥೆಯನ್ನು ದಾಟಿಸಿ ಕಳುಹಿಸುವ ಒಳದನಿ, ಒಂದೂ ಮಾತನಾಡದೆ, ಮುರಿದು ಜೋಡಿಸಿದಂತಿರುವ ಸೋಡಾ ಗ್ಲಾಸಿನ ಒಳಗಿನ ಕಣ್ಣುಗಳಿಂದಲೇ ಕೊಲ್ಲುವ ಮುದುಕನ ಬೇಗುದಿ– ಮೂರು ಸಶಕ್ತ ಉದಾಹರಣೆಗಳು.

ಯಜ್ಞಾ ಶೆಟ್ಟಿ ಹೊಮ್ಮಿಸುವ ನಿಟ್ಟುಸಿರು ಪ್ರೇಕ್ಷಕನ ಎದೆಗೆ ನಾಟುವಂತಿದೆ. ಬಿ.ಸುರೇಶ ಅಜ್ಜನ ಪಾತ್ರಕ್ಕೆ ಜೀವತುಂಬಿದ್ದಾರೆ. ಪ್ರಮೋದ್ ಶೆಟ್ಟಿ ಪಾತ್ರದ ರೂಹು ಆಸಕ್ತಿಕರ. ಒತ್ತೆಯಾಳುಗಳಾಗುವವರಿಂದ ಇನ್ನಷ್ಟು ತೊಳಲಾಟದ ಅಭಿನಯ ತೆಗೆಸುವ ಸಾಧ್ಯತೆ ಇತ್ತು. ನಾಯಕಿಯ ಆರ್ತನಾದ ಹೊಮ್ಮಲು ಅಸಲಿ ಕಾರಣ ಏನು ಎನ್ನುವುದನ್ನು ದೃಶ್ಯವತ್ತಾಗಿ ತೋರಿದ್ದರೆ ಇನ್ನಷ್ಟು ರಕ್ತ–ಮಾಂಸ ತುಂಬಿದಂತಾಗುತ್ತಿತ್ತು. ಬಜೆಟ್‌ನ ಮಿತಬಳಕೆಯ ಕಾರಣದಿಂದಲೋ ಏನೋ ಇಂತಹ ದರ್ಶನಾವಕಾಶವನ್ನು ಅಲ್ಲಲ್ಲಿ ಮೀರಲಾಗಿದೆ.

ಕಥನಾವಕಾಶದ ಚೌಕಟ್ಟಿನಲ್ಲಿ ಸತ್ಯ ಹೆಗಡೆ ಇಟ್ಟಿರುವ ಫ್ರೇಮುಗಳಿಗೆ ಶಹಬ್ಬಾಸ್. ಬಕ್ಕೇಶ್ ರೊನಾಡ ಹಿನ್ನೆಲೆ ಸಂಗೀತದ ಕಸುಬುದಾರಿಕೆಗೂ ಉದಾಹರಣೆಗಳಿವೆ.

ಕೋವಿಡ್ ಕಾರಣದಿಂದಾಗಿ ಚಿತ್ರಮಂದಿರದಲ್ಲಿ ಯಾವ ಸಿನಿಮಾಗಳೂ ತೆರೆಕಂಡಿರಲಿಲ್ಲ. ಆ ದುರಿತ ಕಾಲವನ್ನು ದಾಟುವಂತೆ ಈ ಸಿನಿಮಾ ಬಿಡುಗಡೆಯಾಗಿದೆ. ಭ್ರಷ್ಟ ವ್ಯವಸ್ಥೆಯ ಕಹಿಯುಂಡಿರುವ ಯಾವುದೇ ಮನಸ್ಸನ್ನು ಕೀಲಿಸಿಕೊಳ್ಳಬಲ್ಲ ಇಂತಹ ವಸ್ತು ಈ ಕಾಲಕ್ಕೆ ಹೇಳಿ ಮಾಡಿಸಿದ್ದಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT