ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೈಂಡ್ ಸಿನಿಮಾ ವಿಮರ್ಶೆ: ಸೋನಂ ಅಭಿನಯದ ಗಾಳಕ್ಕೂ ಸಿಗದ ಥ್ರಿಲ್ಲರ್ ಮೀನು

Published 8 ಜುಲೈ 2023, 14:02 IST
Last Updated 8 ಜುಲೈ 2023, 14:02 IST
ಅಕ್ಷರ ಗಾತ್ರ

ಚಿತ್ರ: ಬ್ಲೈಂಡ್ (ಹಿಂದಿ–ಜಿಯೊ ಸಿನಿಮಾದಲ್ಲಿ ಬಿಡುಗಡೆಯಾಗಿದೆ)

ನಿರ್ಮಾಣ: ಸುಜೊಯ್ ಘೋಷ್, ಅವಿಶೇಕ್ ಘೋಷ್, ಹ್ಯುನ್‌ವೂ ಥಾಮಸ್‌ ಕಿಮ್, ಸಚಿನ್ ನಹಾರ್

ನಿರ್ದೇಶನ: ಶೋಮ್ ಮಖಿಜಾ

ತಾರಾಗಣ: ಸೋನಂ ಕಪೂರ್, ಪೂರಬ್ ಕೊಹ್ಲಿ, ಲ್ಯೂಸಿ ಆರ್ಡೆನ್, ವಿನಯ್ ಪಾಠಕ್, ಶುಭಂ ಸರಫ್

ನಾಲ್ಕು ವರ್ಷಗಳ ಹಿಂದೆ ‘ಬದ್ಲಾ’ ಹಿಂದಿ ಸಿನಿಮಾವನ್ನು ಸುಜೊಯ್ ಘೋಷ್ ನಿರ್ದೇಶಿಸಿದ್ದರು. ಸ್ಪ್ಯಾನಿಷ್ ಭಾಷೆಯ ‘ದಿ ಇನ್‌ವಿಸಿಬಲ್ ಗೆಸ್ಟ್‌’ ಸಿನಿಮಾದ ಅಧಿಕೃತ ರೀಮೇಕ್ ಅದು. ತಾಪ್ಸಿ ಪನ್ನು, ಅಮಿತಾಭ್ ಬಚ್ಚನ್ ಹದವರಿತ ಅಭಿನಯ ಹಾಗೂ ಬಿಗಿಯಾದ ಚಿತ್ರಕಥೆ ಪ್ರೇಕ್ಷಕರು ಅತ್ತಿತ್ತ ಮಿಸುಕಾಡದಂತೆ ಮಾಡಿದ್ದ ಚಿತ್ರವದು. ‘ಬ್ಲೈಂಡ್’ ಹಿಂದಿ ಚಲನಚಿತ್ರ ಕೂಡ ರೀಮೇಕ್. ಈ ಸಲ ಸುಜೊಯ್ ಘೋಷ್ ಹಣ ಹೂಡಿದ್ದಾರೆ. ತಮ್ಮ ಗರಡಿಯಲ್ಲಿ ಪಳಗಿದ ಶೋಮ್ ಮಖಿಜಾ ಅವರಿಗೆ ನಿರ್ದೇಶಕನ ಟೋಪಿ ಹಾಕಿದ್ದಾರೆ. 2011ರಲ್ಲಿ ಇದೇ ಹೆಸರಿನಲ್ಲಿ ತೆರೆಕಂಡಿದ್ದ ಕೊರಿಯನ್ ಸಿನಿಮಾದ ರೀಮೇಕ್ ಇದು.

ಪ್ರಮುಖ ಪಾತ್ರವೊಂದು ದೃಷ್ಟಿ ಕಳೆದುಕೊಂಡಾಗ ಅದರ ಎದುರಲ್ಲಿ ನಡೆಯುವ ವಿದ್ಯಮಾನಗಳು ಥ್ರಿಲ್ಲರ್‌ಗೆ ಬೇಕಾದ ಪರಿಸರವೊಂದನ್ನು ತಂತಾನೇ ಸೃಷ್ಟಿಸುತ್ತವೆ. ಚಿತ್ರಕಥೆಯ ಕಟ್ಟುವಿಕೆಯ ಸಾಧ್ಯತೆಯನ್ನು ವಿಸ್ತರಿಸಿಕೊಳ್ಳುವ ತಂತ್ರವೂ ಇದು. ‘ಅಂಧಾಧುನ್‌’ ಹಿಂದಿ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ಪಾತ್ರ ಇದಕ್ಕೊಂದು ಉದಾಹರಣೆ. ಸಂಜಯ್ ಗುಪ್ತಾ ನಿರ್ದೇಶಿಸಿದ ‘ಕಾಬಿಲ್’ ಸಿನಿಮಾದಲ್ಲಿ ಹೃತಿಕ್ ರೋಷನ್ ಕೂಡ ದೃಷ್ಟಿ ಕಳೆದುಕೊಂಡ ನಾಯಕ. ಆ ಸಿನಿಮಾಗಳಲ್ಲಿ ಅಚಾನಕ್ಕಾಗಿ ಎದುರಾಗುವ ಪರಿಸ್ಥಿತಿಗಳಿಗೆ ಮುಖ್ಯಪಾತ್ರ ಎದೆಗೊಡುವ ಗಟ್ಟಿ ಶಿಲ್ಪವಿದೆ. ಆದರೆ, ‘ಬ್ಲೈಂಡ್‌’ನಲ್ಲಿ ‘ಕಡಿಮೆ ಅಚ್ಚರಿ, ಮೆಲೋಡ್ರಾಮಾ ಹಚ್ಚಿರಿ’ ಎನ್ನುವ ತಂತ್ರಕ್ಕೆ ಶೋಮ್ ಮಖಿಜಾ ಜೋತುಬಿದ್ದಿದ್ದಾರೆ.

ದೃಷ್ಟಿದೋಷ ಇರುವ ಪಾತ್ರಗಳು ಭಾರತದ ಪರಿಸರದಲ್ಲಿ ಕಾಣುವುದಕ್ಕೂ, ವಿದೇಶಿ ನೆಲದಲ್ಲಿ ವರ್ತಿಸುವುದಕ್ಕೂ ವ್ಯತ್ಯಾಸವಿದೆ. ಇದೊಂದು ರೀತಿ ಪ್ರೇಕ್ಷಕರಿಗೆ ದೃಶ್ಯವಂತಿಕೆ ವಿಷಯದಲ್ಲಿ ಮಾಡುವ ಕಣ್ಕಟ್ಟು. ಈ ಸಿನಿಮಾ ನಾಯಕಿಯೂ ವಿದೇಶದಲ್ಲಿ ಪೊಲೀಸ್. ಪಾಶ್ಚಾತ್ಯ ರ‍್ಯಾಪ್ ಮೋಹ ಇರುವ, ಆಕೆಯ ಸಹೋದರ ಪರೀಕ್ಷೆಯ ಹಿಂದಿನ ದಿನವೂ ಕಾರ್ಯಕ್ರಮ ನೋಡಲು ಹೋಗಿರುತ್ತಾನೆ. ಅವನನ್ನು ಬಲವಂತವಾಗಿ ಕರೆತರುವಾಗ ಆಗುವ ಕಾರಿನ ಅಪಘಾತ, ನಾಯಕಿಯ ಬದುಕಿನಲ್ಲಿ ದೊಡ್ಡ ತಿರುವು. ಅವಳು ದೃಷ್ಟಿ ಕಳೆದುಕೊಳ್ಳಲು ಕಾರಣವಾಗುವ ಆ ಅಪಘಾತವು ಆಮೇಲೆ ಅವಳ ಬದುಕಿನಲ್ಲಿ ಹಲವು ಸಿಕ್ಕುಗಳನ್ನು ಮೂಡಿಸುತ್ತದೆ. ಅವನ್ನೆಲ್ಲ ಬಿಡಿಸಿಕೊಳ್ಳುವ ಸಾವಧಾನದ ಕಥಾನಕವಿದು.

ದೀರ್ಘಾವಧಿಯ ನಂತರ ಸೋನಂ ಕಪೂರ್ ದೃಷ್ಟಿ ಇಲ್ಲದ ನಾಯಕಿಯ ಪಾತ್ರವನ್ನು ಜೀವಿಸಲು ಕೈಮೀರಿ ಯತ್ನಿಸಿದ್ದಾರೆ. ಬಹುತೇಕ ದೃಶ್ಯಗಳಲ್ಲಿ ಅವರ ಅಭಿನಯ ಸಾಮರ್ಥ್ಯ ಅನಾವರಣಗೊಂಡಿದೆ. ಎಲ್ಲವೂ ಎದುರಲ್ಲೇ ನಡೆಯುತ್ತಿರುವಾಗ, ತನಿಖೆಯೊಂದು ಹುಟ್ಟಿಸಬೇಕಾದ ರೋಚಕತೆಯನ್ನು ಈ ಚಿತ್ರಕಥಾ ಕ್ರಮ ಅಳಿಸಿಹಾಕಿಕೊಂಡಿದೆ. ಸರಣಿ ಅಪಹರಣಕಾರನೂ ವಿಕೃತನೂ ಆದ ಪಾತ್ರದಲ್ಲಿ ಪೂರಬ್ ಕೊಹ್ಲಿ ಸಪ್ಪೆ. ತನಿಖಾಧಿಕಾರಿಯಾಗಿ ವಿನಯ್ ಪಾಠಕ್ ಅವರ ಅಭಿನಯಕ್ಕೆ ಅಂಕಗಳನ್ನು ನೀಡಬಹುದಾದರೂ, ಅವರ ಪಾತ್ರದ ವರ್ತನೆಗೆ ತಕ್ಕ ಸಮರ್ಥನೆಗಳು ಸಿಗುವುದಿಲ್ಲ.

ಸಸ್ಪೆನ್ಸ್‌ ಥ್ರಿಲ್ಲರ್ ಪ್ರಕಾರದ ಸಿನಿಮಾಗಳು ಪುಂಖಾನುಪುಂಖವಾಗಿ ಬಂದು, ಮೆದುಳಲ್ಲಿ ಅಸಂಖ್ಯಾತ ಹುಳುಗಳನ್ನು ಈಗಾಗಲೇ ಬಿಟ್ಟು ಆಗಿದೆ. ಅವಕ್ಕೆ ಹೋಲಿಸಿದರೆ, ಶೋಮ್ ಮಖೀಜಾ ಬಿಟ್ಟಿರುವ ಹುಳು ದುರ್ಬಲವಾಗಿದೆ ಎಂದೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT