ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಯ್ಸಳ ಸಿನಿಮಾ ವಿಮರ್ಶೆ: ಮರ್ಯಾದೆಗೇಡು ಹತ್ಯೆಯೂ ಹೊಯ್ಸಳನ ಅಬ್ಬರವೂ

Last Updated 30 ಮಾರ್ಚ್ 2023, 15:58 IST
ಅಕ್ಷರ ಗಾತ್ರ

ಸಿನಿಮಾ: ಹೊಯ್ಸಳ
ನಿರ್ದೇಶಕ : ವಿಜಯ್ ಎನ್.
ನಿರ್ಮಾಪಕರು: ಕೆಆರ್‌ಜಿ ಸ್ಟುಡಿಯೋಸ್‌
ಪಾತ್ರವರ್ಗ: ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ಅಚ್ಯುತ್ ಕುಮಾರ್, ನವೀನ್ ಶಂಕರ್

***

ಮರಾಠ ಕುಟುಂಬದ ಹುಡುಗಿ ಕೆಳಜಾತಿಯ ಹುಡುಗನನ್ನು ಮದುವೆಯಾದಳು ಎಂಬ ಕಾರಣಕ್ಕೆ ಆಕೆಯ ಪತಿ ರವಿಯ ಹತ್ಯೆಯಾಗಿರುತ್ತದೆ. ತಂದೆಯಿಂದಲೇ ಹಲ್ಲೆಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಾ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಭೂಮಿ ಹೀಗೆ ಹೇಳುತ್ತಾಳೆ, ‘ಇನ್ಸ್‌ಪೆಕ್ಟರ್‌ ಆದ ನಿಮಗೆ ಕರ್ತವ್ಯ ಮುಖ್ಯ, ನಮ್ಮ ಅಪ್ಪನಿಗೆ ಜಾತಿ ಮುಖ್ಯ. ಇದರ ನಡುವೆ ನನ್ನ ಜೀವ ಯಾರಿಗೂ ಬೇಡ. ಮುಂದಿನ ಜನ್ಮದಲ್ಲಿ ಮನುಷ್ಯ ಜಾತಿಯಲ್ಲಿಯೇ ಹುಟ್ಟೋದಿಲ್ಲ ಬಿಡಿ ಸರ್‌’. ಚಿತ್ರದಲ್ಲಿ ಈ ಮಾತು ಬರುವ ಹೊತ್ತಿಗೆ ಸಿನಿಮಾ ಕ್ಲೈಮ್ಯಾಕ್ಸ್‌ ಹಂತ ತಲುಪಿರುತ್ತದೆ.

ಚಿತ್ರದ ನಾಯಕ ಇನ್ಸ್‌ಪೆಕ್ಟರ್‌ ಗುರುದೇವ್‌ ಹೊಯ್ಸಳನಿಗೆ ಕಣ್ಣಂಚು ಒದ್ದೆಯಾಗಿರುತ್ತದೆ. ಲಾಜಿಕ್‌ ಇಲ್ಲದ ಸಾಕಷ್ಟು ಮಾಸ್‌ ಸಿನಿಮಾಗಳ ನಡುವೆ ‘ಹೊಯ್ಸಳ’ದ ಮೂಲಕ ನಿರ್ದೇಶಕ ವಿಜಯ್ ಎನ್. ಸಮಾಜಕ್ಕೊಂದು ಗಟ್ಟಿಯಾದ ಸಂದೇಶ ತಲುಪಿಸುವ ಯತ್ನ ಮಾಡಿದ್ದಾರೆ. ಇದೇ ಸಿನಿಮಾದ ಪ್ಲಸ್‌ ಮತ್ತು ಮೈನಸ್‌ ಎರಡೂ ಹೌದು. ಯಾಕೆಂದರೆ ಹೊಡೆದಾಟ, ಬಡಿದಾಟದ ಅಬ್ಬರದ ನಡುವೆ ಚಿತ್ರಮಂದಿರದಿಂದ ಹೊರಗೆ ಬರುವ ಹೊತ್ತಿಗೆ ಪ್ರೇಕ್ಷಕನಿಗೆ ಚೆಂದದ ಕಥೆಯ ಎಳೆಯೊಂದು ಕಾಡುವುದೇ ಇಲ್ಲ! ಸಳ, ಸಳ ಹೊಯ್ಸಳ ಎಂಬ ಖಡಕ್‌ ಪೊಲೀಸ್‌ ಅಧಿಕಾರಿ, ಅವನ ವಿರುದ್ಧ ನಿಂತ ಮರಾಠಿ ದಾದಾನ ಪಡೆಯ ಹೊಡೆದಾಟವಷ್ಟೇ ನೆನಪಿನಲ್ಲಿ ಉಳಿದು, ಇದೊಂದು ಮಾಸ್‌ ಪ್ರಿಯರ ಸಿನಿಮಾವಾಗುತ್ತದೆ. ಡಾಲಿ ಧನಂಜಯ್‌ 25ನೇ ಸಿನಿಮಾವಾಗಿದ್ದು, ಅವರ ಅಭಿಮಾನಿಗಳ ಪಾಲಿಗಿದು ಭರ್ಜರಿ ರಸದೌತಣ.

ಚಿತ್ರ ಪ್ರಾರಂಭವಾಗುವುದೇ ಗಡಿನಾಡು ಬೆಳಗಾವಿಯಲ್ಲಿನ ಕನ್ನಡ ಹಬ್ಬದ ಗಲಾಟೆಯಿಂದ. ಇದು ಮಾಮೂಲಿ ಕನ್ನಡ–ಮರಾಠಿ ಭಾಷೆ ದ್ವೇಷದ ಸಿನಿಮಾ ಎಂದುಕೊಳ್ಳುವ ಹೊತ್ತಿಗೆ, ಮರಳು ಮಾಫಿಯಾದ ಕಥೆ ಪ್ರಾರಂಭವಾಗುತ್ತದೆ. ಸ್ಥಳೀಯ ರಾಜಕಾರಣಿ ಮತ್ತು ಪೊಲೀಸ್‌ ಅಧಿಕಾರಿಯ ಕಥೆ ಇರಬಹುದೆಂದು ಊಹಿಸುವ ಹೊತ್ತಿಗೆ ‘ಭೂಮಿ’ ಮತ್ತು ‘ರವಿ’ ಎಂಬ ಜೋಡಿಯ ಪ್ರೇಮ ಕಥೆ ಪ್ರಾರಂಭವಾಗುತ್ತದೆ. ಅನಾಥರೆಂದು ಹೇಳಿಕೊಂಡು ನಾಯಕ ಗುರುದೇವ್‌ ಹೊಯ್ಸಳ ಇರುವ ಠಾಣೆಗೆ ಬರುವ ಈ ಜೋಡಿಯ ಅಸಲಿ ಕಥೆಯೇ ಚಿತ್ರಕ್ಕೊಂದು ಟ್ವಿಸ್ಟ್‌ ನೀಡುವುದು.

ಅರಸೀಕೆರೆ ಮೂಲಕ ಗುರುದೇವ್ ಹೊಯ್ಸಳ (ಧನಂಜಯ), ಹೆಂಡತಿ ಗಂಗಾ (ಅಮೃತಾ) ಜತೆಗೆ ಬೆಳಗಾವಿಗೆ ಬಂದಿರುತ್ತಾನೆ. ಆಗ ಇನ್ಸ್‌ಪೆಕ್ಟರ್‌ ಒಬ್ಬರು ಕಾಣೆಯಾಗಿರುವ ಪ್ರಕರಣ ಹೊಯ್ಸಳನ ಹೆಗಲೇರುತ್ತದೆ. ಜಿಲ್ಲೆಯ ಅಥಣಿಗೆ ವರ್ಗವಾಗುವ ಹೊಯ್ಸಳನ ಪ್ರಾರಂಭ ನಗುವಿನಿಂದ ಕೂಡಿದೆ. ಕಳ್ಳನಾಗಿ ಸಿನಿಮಾದಲ್ಲಿ ಫ್ರೇಮ್‌ಗಳ ಲೆಕ್ಕದಲ್ಲಿ ಕಾಣಿಸಿಕೊಳ್ಳುವ ನಾಗಭೂಷಣ್‌, ತೆರೆಯ ಮೇಲಿದ್ದಷ್ಟೂ ಕಾಲ ಪ್ರೇಕ್ಷಕರನ್ನು ನಗಿಸಿ ಹೋಗುತ್ತಾರೆ. ಹಲವೆಡೆ ಮಾಸ್ತಿ ಅವರ ಸಂಭಾಷಣೆಯೇ ಚಿತ್ರಕ್ಕೆ ದೊಡ್ಡ ಶಕ್ತಿ. ಗಡಿಭಾಗದ ಕನ್ನಡದ ಜತೆಗೆ ಖಡಕ್‌ ಮಾತುಗಳು ಚಿತ್ರದಲ್ಲಿ ಎಷ್ಟೋ ಕಡೆ ಧನಂಜಯ್‌ ಇಮೇಜ್‌ ಹೆಚ್ಚಿಸುತ್ತದೆ. ಸಣ್ಣ ಹಾಸ್ಯ ಮುಗಿಯುವ ಹೊತ್ತಿಗೆ ಊರಿನ ಮುಖಂಡ ದಾದಾ ಪಡೆ ಹೊಯ್ಸಳನಿಗೆ ಎದುರಾಗುತ್ತದೆ.

ಕೆಜಿಎಫ್‌ ಅವಿನಾಶ್‌ ದಾದಾ ಪಾತ್ರದಲ್ಲಿ ಖಳನಾಯಕರ ಗ್ಯಾಂಗಿನ ಮುಖಂಡ. ಆದರೆ ಪ್ರೇಕ್ಷಕರಿಗೆ ಸಪ್ರೈಸ್‌ ನೀಡುವುದು ‘ಗುಲ್ಟು’ ನವೀನ್‌ ಶಂಕರ್‌. ಯಾವುದೇ ಪಾತ್ರ ಕೊಟ್ಟರೂ ನಟನೆಯಿಂದಲೇ ಗುರುತಿಸಿಕೊಳ್ಳುವ ನವೀನ್‌ ಇಲ್ಲಿ ‘ಬಲಿ’ ಎಂಬ ಖಳನಾಯಕ. ಕೆಲ ದೃಶ್ಯಗಳಲ್ಲಿ ಕಣ್ಣಿನ ನೋಟದಿಂದಲೇ ಕೊಲ್ಲುವ ನವೀನ್‌ ಸಾಕಷ್ಟು ಕಡೆ ನಟನೆಯಲ್ಲಿ ಧನಂಜಯ್‌ ಅವರನ್ನೇ ನುಂಗಿ ಹಾಕಿದ್ದಾರೆ. ಪಾತ್ರ ಪ್ರವೇಶದ ವೇಳೆಯಲ್ಲಿಯೇ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಿರ್ದೇಶಕರು ಈ ಪಾತ್ರವನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಂಡು ಚಿತ್ರದಲ್ಲಿ ಅವರ ಇರುವಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಎಲ್ಲ ಅವಕಾಶವೂ ಅವರಿಗಿತ್ತು. ಆದರೆ ಬಲಿ ನೇರವಾಗಿ ಡಾಲಿಗೆ ಎದುರಾಗುವುದು ಒಂದೆರಡು ಕಡೆ ಮಾತ್ರ.

ಅನಾಥರೆಂದುಕೊಂಡು ಪೊಲೀಸ್‌ ಠಾಣೆಗೆ ಬಂದ ಭೂಮಿ ಮತ್ತು ರವಿಯನ್ನು ಹೊಯ್ಸಳ ಮದುವೆ ಮಾಡಿಸುತ್ತಾನೆ. ಆ ಮೇಲೆ ಅದು ಅಂತರ್ಜಾತಿ ಮದುವೆ ಎಂಬುದು ಗೊತ್ತಾಗುತ್ತದೆ. ಭೂಮಿ ಮರಾಠ ದಾದಾನ ಮಗಳೆಂದು. ಅಲ್ಲಿಂದ ಕಥೆ ತಿರುವು ಪಡೆದುಕೊಂಡು ಇಂಟರ್‌ವಲ್‌ ಹೊತ್ತಿಗೆ ಸಪ್ಪೆಯಾಗಿಬಿಡುತ್ತದೆ. ಅಲ್ಲಿಂದ ಬಳಿಕ ಕ್ಲೈಮ್ಯಾಕ್ಸ್‌ವರೆಗೂ ಕಥೆಯಲ್ಲಿ ಅಷ್ಟೊಂದು ಸ್ವಾರಸ್ಯ, ಟ್ವಿಸ್ಟ್‌ ಕಾಣುವುದಿಲ್ಲ. ದುಷ್ಟರನ್ನು ಶಿಕ್ಷಿಸಲು ಶಿಷ್ಟ ಪೊಲೀಸ್‌ ಅಧಿಕಾರಿಗೆ ಬೇಕಾದ ದಾರಿಯಷ್ಟೇ ಕಥೆಯಲ್ಲಿ ಸೃಷ್ಟಿಯಾಗುತ್ತ ಹೋಗುತ್ತದೆ. ಮಾಸ್‌, ಫೈಟ್‌ ನಡುವೆಯೂ ತೀರ ಲಾಜಿಕ್‌ ಇಲ್ಲದೆ ಇಲ್ಲಿ ಯಾವುದೂ ಘಟಿಸುವುದಿಲ್ಲ ಎಂಬುದು ಖುಷಿಯ ವಿಷಯ.

ನಾಯಕಿ ಇಲ್ಲದಿದ್ದರೂ ನಡೆಯುತ್ತಿತ್ತು!
ಇನ್ಸ್‌ಪೆಕ್ಟರ್‌ ಹೊಯ್ಸಳನ ಹೆಂಡತಿ ಗಂಗಾ ಆಗಿ ಅಮೃತಾ ಅಯ್ಯಂಗಾರ್‌ ಕಾಣಿಸಿಕೊಂಡಿದ್ದಾರೆ. ನಾಯಕಿ ಬೇಕು ಮತ್ತು ಒಂದು ಡ್ಯುಯೆಟ್‌ ಸಾಂಗ್‌ ಇರಬೇಕು ಎಂಬ ಕಾರಣಕ್ಕೆ ಇದೊಂದು ಪಾತ್ರ ಸೃಷ್ಟಿಯಾದಂತೆ ಕಾಣುತ್ತದೆ. ಒಂದೊಮ್ಮೆ ಚಿತ್ರದಲ್ಲಿ ಈ ಪಾತ್ರವೇ ಇಲ್ಲದಿದ್ದರೂ ಕಥೆಯಲ್ಲಿ, ಹೊಯ್ಸಳನ ಬದುಕಿನಲ್ಲಿ ಬಹುಶಃ ಏನೂ ಬದಲಾಗುತ್ತಿರಲಿಲ್ಲ. ಅಜನೀಶ್ ಲೋಕನಾಥ್‌ ಹಿನ್ನೆಲೆ ಸಂಗೀತ ಮಾಸ್‌ ಚಿತ್ರಕ್ಕೆ ಬೇಕಾದ ಎನರ್ಜಿ ನೀಡುತ್ತದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಭೂಮಿ ಮತ್ತು ರವಿ ಪಾತ್ರಧಾರಿಗಳಾದ ಮಯೂರಿ ನಟರಾಜ್ ಮತ್ತು ಅನಿರುದ್ಧ್ ಭಟ್ ಮೊದಲ ಅವಕಾಶದಲ್ಲಿಯೇ ಸಿಕ್ಸರ್‌ ಬಾರಿಸಿದ್ದಾರೆ. ನಟನೆ, ಇರುವಿಕೆಯಿಂದ ಬಹಳ ಭರವಸೆ ಮೂಡಿಸುತ್ತಾರೆ. ‘ಕೆಜಿಎಫ್’ ಅವಿನಾಶ್ ಮುಖ್ಯ ಖಳನಟನಾಗಿದ್ದರೂ, ಅವರ ಬಾಯಿಯಲ್ಲಿ ಮರಾಠಿಯನ್ನು ಬಲವಂತವಾಗಿ ತುಂಬಿಸಿದ ಭಾವನೆ ಮೂಡುತ್ತದೆ. ದಾದಾ ಮಗ ‘ನಾನಾ’ ಆಗಿ ಪ್ರತಾಪ್ ನಾರಾಯಣ್ ಇದ್ದರೂ, ನವೀನ್‌ ಶಂಕರ್‌ ಇಡೀ ಖಳನಟರ ಗ್ಯಾಂಗ್‌ನ್ನು ನುಂಗಿ ನೀರು ಕುಡಿದುಬಿಡುತ್ತಾರೆ. ರಾಜೇಶ್ ನಟರಂಗ, ಹೇಮಂತ್ ಸುಶೀಲ್, ರಾಘು ಶಿವಮೊಗ್ಗ, ಮಾನಸಿ ಸುಧೀರ್, ಅಚ್ಯುತ್‌ ಕುಮಾರ್‌ ಕೊಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT