ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಖಾಹಾರಿ’ ಸಿನಿಮಾ ವಿಮರ್ಶೆ: ಶಾಖಾಹಾರದ ಜಿಹ್ವಾನಂದ

ಸಂದೀಪ್ ಸುಂಕದ್ ನಿರ್ದೇಶನದ ಚಿತ್ರ
Published 16 ಫೆಬ್ರುವರಿ 2024, 9:57 IST
Last Updated 16 ಫೆಬ್ರುವರಿ 2024, 10:08 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಸಿನಿಮಾ: ಶಾಖಾಹಾರಿ (ಕನ್ನಡ)
ಫೆಬ್ರುವರಿ16
ನಿರ್ದೇಶಕ:ನಿರ್ದೇಶನ: ಸಂದೀಪ್ ಸುಂಕದ್, ನಿರ್ಮಾಣ: ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ
ಪಾತ್ರವರ್ಗ:ತಾರಾಗಣ: ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಸುಜಯ್ ಶಾಸ್ತ್ರಿ, ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗಡೆ ಮತ್ತಿತರರು 

ಕನ್ನಡದಲ್ಲಿ ಅದ್ಭುತವಾದ, ಸೆಳೆಯಬಲ್ಲ ಬರವಣಿಗೆಯುಳ್ಳ ಕಥೆಗಾರರ ಕೊರತೆ ಇದೆ ಎನ್ನುವುದಕ್ಕೆ ಉತ್ತರವಾಗಿ ‘ಶಾಖಾಹಾರಿ’ ತೆರೆಗೆ ಬಂದಿದೆ. ಚೊಚ್ಚಲ ಚಿತ್ರದಲ್ಲೇ ನಿರ್ದೇಶಕ ಸಂದೀಪ್‌ ಸುಂಕದ್‌ ಮಣ್ಣಿನ ಕಥೆಯೊಂದಕ್ಕೆ ಕುತೂಹಲ ಬೆರೆಸಿ ಶುದ್ಧ ಶಾಕಾಹಾರಿ ದುರ್ಗಾ ಪ್ರಸಾದ್‌ ಹೋಟೆಲ್‌ನಲ್ಲಿ ‘ಶಾಖಾಹಾರ’ ಬಡಿಸಿದ್ದಾರೆ.

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ, ‘in the heat of the moment’. ಅಂದರೆ ಘಟನೆಯೊಂದರ ಬೆನ್ನಲ್ಲೇ ಆವರಿಸುವ ಭಯ, ಆತುರದಿಂದ ಉದ್ಭವಿಸುವ ನಿರ್ಧಾರ. ಒಂದರ್ಥದಲ್ಲಿ ಇದುವೇ ‘ಶಾಖಾಹಾರಿ’ ಸಿನಿಮಾದ ಎಳೆಯಂತೆ ಕಂಡುಬರುತ್ತದೆ. ‘ಶಾಖ’ವೇ ಇಲ್ಲಿನ ಚಿತ್ರಕಥೆಯ ವೇಗ. ಆ ‘ಶಾಖ’ ಆರದಂತೆ ಚಿತ್ರಕಥೆಗೆ ಪ್ರತಿ ದೃಶ್ಯದಲ್ಲೂ ಉಸಿರು ತುಂಬಿದ ರಂಗಾಯಣ ರಘು ಈ ಚಿತ್ರದಿಂದ ‘ಅಭಿನಯಾಸುರ’ ಆಗಿದ್ದಾರೆ. ಆ ಪಟ್ಟಕ್ಕೆ ಅರ್ಹ ಎಂಬಂತೆ ಅವರಿಲ್ಲಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಎಂದಿನಂತೆ ತಮ್ಮ ಇರುವಿಕೆಯಿಂದಲೇ ಸಿನಿಮಾಗೊಂದು ಗತ್ತು ತಂದುಕೊಟ್ಟಿದ್ದಾರೆ. 

ಮಲೆನಾಡಿನ ಮೇಳಿಗೆ–ಮೃಗವಧೆ ಅಕ್ಕಪಕ್ಕದ ಊರುಗಳು. ಮೇಳಿಗೆಯಲ್ಲಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅಲಿಯಾಸ್‌ ಸುಬ್ಬಣ್ಣನ(ರಂಗಾಯಣ ರಘು) ‘ದುರ್ಗಾ ಪ್ರಸಾದ್‌’ ಎಂಬ ಸಣ್ಣ ಶುದ್ಧ ಶಾಕಾಹಾರಿ ಹೋಟೆಲ್‌. ಮೃಗವಧೆಯ ಪೊಲೀಸ್‌ ಠಾಣೆಯಲ್ಲಿ ಉತ್ತರ ಕರ್ನಾಟಕದ ಮಲ್ಲಿಕಾರ್ಜುನ್‌ (ಗೋಪಾಲಕೃಷ್ಣ ದೇಶಪಾಂಡೆ) ಎಸ್‌.ಐ ಆಗಿ ಕೆಲಸ ನಿರ್ವಹಿಸುತ್ತಿರುವಾತ. ಮಲೆನಾಡಿನ ವಾತಾವರಣ ಹಿಡಿಸದೆ ಮಲ್ಲಿಕಾರ್ಜುನ್‌ ಪತ್ನಿ ಊರಿಗೆ ಮರಳಿದ್ದಾಳೆ. ಮಲ್ಲಿಕಾರ್ಜುನನೂ ವರ್ಗಾವಣೆ ಬಯಸಿ ಅರ್ಜಿ ಹಾಕಿದ್ದಾನೆ. ಅರ್ಜಿಗೆ ಇನ್ನೇನು ಒಪ್ಪಿಗೆ ಸಿಗಬೇಕು ಎನ್ನುವಷ್ಟರಲ್ಲಿ ಠಾಣೆಯಲ್ಲಿ ಬಂಧಿಯಾಗಿದ್ದ ಕೊಲೆ ಪ್ರಕರಣದ ಆರೋಪಿ ವಿಜಯ್‌(ವಿನಯ್ ಯು.ಜೆ.) ತಪ್ಪಿಸಿಕೊಳ್ಳುತ್ತಾನೆ. ಅತ್ತ ಚಿತ್ರಕಥೆ ಮುಂದುವರಿದಂತೆ ಸುಬ್ಬಣ್ಣನ ಹೋಟೆಲ್‌ನ ‘ಮೆನು’ ಬದಲಾಗುತ್ತದೆ. ‘ಶಾಖ’ ಜಾಸ್ತಿಯಾಗುತ್ತದೆ. ಕೇವಲ ಇಡ್ಲಿ, ದೋಸೆ, ಕಾಫಿ, ಚಹಾ ಸಿಗುತ್ತಿದ್ದ ಶುದ್ಧ ಶಾಕಾಹಾರಿ ಹೋಟೆಲ್‌ನಲ್ಲಿ ಇಡ್ಲಿ, ದೋಸೆ, ಪುಳಿಯೋಗರೆ, ಕೇಸರೀಬಾತ್‌, ಬಾದಾಮಿ ಹಾಲು, ಕಷಾಯ ಸಿಗುವ ಸ್ಥಿತ್ಯಂತರವೇ ಕಥೆಯ ವಿಸ್ತರಣೆ.

ಶೀರ್ಷಿಕೆಯನ್ನೇ ಭಿನ್ನವಾಗಿ ರೂಪಿಸಿ ಟ್ರೇಲರ್‌ ಮೂಲಕವೇ ನಿರ್ದೇಶಕ ಸಂದೀಪ್‌ ಚಿತ್ರಕಥೆಯ ಸುಳಿವು ನೀಡಿದ್ದರು. ಕಥೆಗಾರನಾಗಿ ಅವರು ಚಿತ್ರದೊಳಗೆ ಅಳವಡಿಸಿದ ತಿರುವುಗಳು ಇಡೀ ಕಥೆಯನ್ನು ಬೇರೆಯೇ ಹಂತಕ್ಕೆ ಕರೆದೊಯ್ದಿದೆ. ಚೊಚ್ಚಲ ನಿರ್ದೇಶನದಲ್ಲೇ ಒಂದು ಅಚ್ಚುಕಟ್ಟಾದ ಸಿನಿಮಾ ನೀಡುವಲ್ಲಿ ಯಶಸ್ಸು ಕಂಡಿದ್ದಾರೆ. ಆರಂಭಿಕ ಹೆಜ್ಜೆಯಲ್ಲೇ ಸಿದ್ಧಸೂತ್ರದ ಸಿನಿಮಾ ಜಗತ್ತಿನಿಂದ ಹೊರಗುಳಿದು ಪ್ರಬುದ್ಧತೆ, ನಿರ್ದೇಶನದ ಮೇಲಿನ ಬದ್ಧತೆ ತೋರಿದ್ದಾರೆ ಸಂದೀಪ್‌. ತಮ್ಮೊಳಗಿನ ನೈಜ ಕಲಾವಿದನನ್ನು ಪ್ರೇಕ್ಷಕರೆದುರಿಗೆ ಇಡುವ ಮೂಲಕ ರಂಗಾಯಣ ರಘು ಅವರು ಕನ್ನಡ ಚಿತ್ರರಂಗಕ್ಕೂ ಪ್ರಶ್ನೆಯೊಂದನ್ನು ಎಸೆದಿರುವಂತೆ ಕಾಣುತ್ತಾರೆ. ಮುಗ್ಧ ಪ್ರೀತಿ, ಭಯ, ಸಂಕಟ, ಹಾಸ್ಯವೆಲ್ಲವನ್ನು ತುಂಬಿದ ‘ಅಭಿನಯಾಸುರ’ ಅವರು. ದೃಶ್ಯವೊಂದರಲ್ಲಿ ತಲೆಬಾಚುವ ಮೊದಲು, ನಂತರದ ಕನ್ನಡಿಯಲ್ಲಿನ ಅವರ ನೋಟವನ್ನು ತೆರೆಯಲ್ಲೇ ಅನುಭವಿಸಬೇಕು. ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಇನ್ನೊಂದು ಆಧಾರಸ್ತಂಭ. ಆ ಮೆಲು ದನಿ, ನಡಿಗೆ, ಹಾವಭಾವದಲ್ಲಿನ ಪ್ರಯೋಗ, ರಘು ಜೊತೆಗಿನ ಸಂಭಾಷಣೆಗಳು ಹಲವು ಸಮಯ ನೆನಪಿನಲ್ಲಿ ಉಳಿಯುವಂತಹದು. ಉಳಿದಂತೆ ಎಲ್ಲ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. 

ಒಂದೆರಡು ಕಡೆಗಳಲ್ಲಿ ವಿಜಯ್‌ ದೃಶ್ಯಗಳಿಗೆ ಕತ್ತರಿ ಹಾಕಬಹುದು ಎಂದೆನಿಸಿದ್ದು ಬಿಟ್ಟರೆ ಚಿತ್ರಕಥೆಯಲ್ಲಿ ವೇಗವಿದೆ. ವಿಶ್ವಜಿತ್‌ ರಾವ್‌ ಛಾಯಾಚಿತ್ರಗ್ರಹಣವೂ ಚಿತ್ರಕ್ಕೊಂದು ಹೊಸ ಆಯಾಮ ನೀಡಿದೆ. ಸುಬ್ಬಣ್ಣನ ಪರಿವರ್ತನೆಗಳನ್ನು ಸಮಗ್ರವಾಗಿ ಸೆರೆಹಿಡಿಯುವಲ್ಲಿ ವಿಶ್ವಜಿತ್‌ ಗೆದ್ದಿದ್ದಾರೆ. ಶಶಾಂಕ್‌ ಸಂಕಲನ, ಮಯೂರ್‌ ಅವರ ಸಂಗೀತ ಚಿತ್ರಕಥೆಯ ಕುತೂಹಲಕಾರಿ ಹೆಜ್ಜೆಗೆ ಇಂಬು ನೀಡಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT