ಮಂಗಳವಾರ, ಜನವರಿ 21, 2020
28 °C

ಪಾಣಿಪತ್: ಸಾವಧಾನ ಕಥನಗಳೊಡ್ಡುವ ದಣಿವು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಪಾಣಿಪತ್ (ಹಿಂದಿ)
ನಿರ್ದೇಶಕ: ಆಶುತೋಷ್ ಗೋವಾರಿಕರ್
ನಿರ್ಮಾಣ: ಸುನೀತಾ ಗೋವಾರಿಕರ್, ರೋಹಿತ್ ಶೆಲಾಟ್ಕರ್
ತಾರಾಗಣ: ಅರ್ಜುನ್ ಕಪೂರ್, ಸಂಜಯ್ ದತ್, ಕೃತಿ ಸನನ್, ಮೊಹ್ನಿಶ್ ಬೆಹ್ಲ್, ಪದ್ಮಿನಿ ಕೊಲ್ಹಾಪುರೆ, ಜೀನತ್ ಅಮಾನ್, ನವಾಬ್ ಶಾ.

ಮೂರನೇ ಪಾಣಿಪತ್ ಯುದ್ಧದ ಕಥಾನಕ ಇರುವ ಸಿನಿಮಾ ‘ಪಾಣಿಪತ್’. 1761ರಲ್ಲಿ ಮರಾಠಾ ಪೇಶ್ವೆಗಳು ಹಾಗೂ ಅಫ್ಗನ್‌ ದೊರೆ ಅಹ್ಮದ್ ಶಾ ಅಬ್ದಾಲಿ ನಡುವೆ ನಡೆದ ಈ ಯುದ್ಧ ಭಾವುಕತೆಯ ಕಾರಣದಿಂದ ಗಮನ ಸೆಳೆದಿತ್ತು. ಸದಾಶಿವರಾವ್ ಭಾವು ಪೇಶ್ವೆಗಳ ಪರವಾಗಿ ಕೊನೆಯುಸಿರು ಇರುವವರೆಗೆ ತೋರಿದ ಹೋರಾಟವನ್ನು ನೋಡಿ ಅಬ್ದಾಲಿಯ ಕ್ರೂರ ಮನಸ್ಸೂ ಕರಗಿಹೋಗುತ್ತದೆ. ಯುದ್ಧದಲ್ಲಿ ಗೆದ್ದರೂ ಮತ್ತೆ ಹಿಂದೂಸ್ತಾನದತ್ತ ಅವನು ಕಾಲಿಡದೇ ಇರಲು ಅದೇ ಕಾರಣವಾಗುವುದು ಮನಕಲಕುವ ಕಥಾನಕ.

ಅಶೋಕ್ ಚಕ್ರಧರ್ ಇತಿಹಾಸಕ್ಕೆ ತುಸುವೂ ಅಪಚಾರವಾಗದಂತೆ ಬರೆದ ಚಿತ್ರಕಥೆಯನ್ನು ಆಶುತೋಷ್ 173 ನಿಮಿಷಗಳ ಸುದೀರ್ಘಾವಧಿಯ ಸಿನಿಮಾ ಆಗಿಸಿದ್ದಾರೆ. ಅಲ್ಲಲ್ಲಿ ಸಿನಿಮೀಯ ಸ್ವಾತಂತ್ರ್ಯ ತೆಗೆದುಕೊಂಡಿದ್ದಾರಷ್ಟೆ.

ಸಿನಿಮಾದ ಎರಡನೇ ಅರ್ಧ ಬಿಗಿಯಾಗಿದೆ. ಕೊನೆಯಲ್ಲಿ ಯುದ್ಧದ ದೃಶ್ಯಗಳು ಕಣ್ಣೆವೆಯಿಕ್ಕದಂತೆ ನೋಡುವಂತಿವೆ. ಆದರೆ, ಮೊದಲರ್ಧದ್ದು ಮಂದಗತಿ. ನಾಯಕನೂ ಸೇರಿದಂತೆ ಎಲ್ಲ ಪಾತ್ರಗಳೂ ಆ ಭಾಗದಲ್ಲಿ ದಣಿದ ಛದ್ಮವೇಷಧಾರಿಗಳಂತೆ ವರ್ತಿಸಿದ್ದಾರೆ. ಅಬ್ದಾಲಿ ಪಾತ್ರಧಾರಿ ಸಂಜಯ್ ದತ್ ಪ್ರವೇಶವಾದ ನಂತರ ಚಿತ್ರಕಥೆಗೆ ವೇಗ ದಕ್ಕುತ್ತದೆ.

ಆಶುತೋಷ್ ಅವರದ್ದು ಸಾವಧಾನದ ಧೋರಣೆ. ಸದಾಶಿವರಾವ್ ಹಾಗೂ ಪಾರ್ವತಿ ಬಾಯಿ ನಡುವಿನ ಪ್ರೇಮಪಲ್ಲವ, ನಾಯಕ ಹಾಗೂ ಆತನ ಅಜ್ಜಿಯ ನಡುವಿನ ಬಾಂಧವ್ಯ, ಯುದ್ಧ ಸನ್ನದ್ಧ ದೃಶ್ಯಗಳ ಹೆಣಿಗೆ ಎಲ್ಲದರಲ್ಲೂ ಸುಸ್ಪಷ್ಟ ಸಾವಧಾನವಿದೆ. ಸಿ.ಕೆ. ಮುರಳೀಧರನ್ ಸಿನಿಮಾಟೊಗ್ರಫಿ, ಅಜಯ್–ಅತುಲ್ ಹಿನ್ನೆಲೆ ಸಂಗೀತವೂ ಔಚಿತ್ಯಪೂರ್ಣ. ಸಾಂದ್ರ ಕಥನಗಳೂ ಇವೆ. ಹೀಗಿದ್ದೂ ಸಿನಿಮಾದ ಅವಧಿ ದಣಿವು ಉಂಟುಮಾಡುತ್ತದೆ.

ನಾಯಕ ಅರ್ಜುನ್ ಅಭಿನಯ ಅಸ್ಥಿರ. ಬಂಡೆಗೆ ಮೀಸೆ ಅಂಟಿಸಿದಂತೆ ಕಾಣುವ ಅವರು, ಯುದ್ಧದ ದೃಶ್ಯಗಳಲ್ಲಿ ಮಾತ್ರ ಮೈಚಳಿ ಬಿಟ್ಟು ಹೊರಬಂದಿದ್ದಾರೆ. ವಯೋಸಹಜವಾಗಿ ಬಸವಳಿದಂತೆ ಕಾಣುವ ಸಂಜಯ್ ದತ್ ಮುಖದ ನಿರಿಗೆಗಳಲ್ಲಿ ಹಳೆಯ ಖದರ್ ನಾಪತ್ತೆ. ಕಣ್ಣುಗಳು ಮಾತ್ರ ಆಗೀಗ ತೀವ್ರವಾಗಿ ಮಾತಾಡುತ್ತವೆ. ಕೃತಿ ನೋಡಲು ಸುಂದರ. ಅಭಿನಯದಲ್ಲಿ ಮಂಕು. ಜೀನತ್ ಅಮಾನ್ ಸಣ್ಣ ಪಾತ್ರದಲ್ಲಿದ್ದಾರೆ. ಅವರು ಗುರುತೇ ಸಿಗದಷ್ಟು ಬದಲಾಗಿದ್ದು, ಅತಿ ಕೆಟ್ಟ ನಟನೆಯ ಉದಾಹರಣೆ ಉಳಿಸಿದ್ದಾರೆ. ಮೊಹ್ನಿಶ್ ಬೆಹ್ಲ್ ಹಾಗೂ ಮಂತ್ರ ತಂತಮ್ಮ ಪಾತ್ರಗಳ ರೂಹನ್ನು ಚೆನ್ನಾಗಿ ಅರಿತಿದ್ದಾರೆ.

ಐತಿಹಾಸಿಕ ಪಾತ್ರಗಳ ಮೂಲಕ ಇತ್ತೀಚಿನ ಹಿಂದಿ ಸಿನಿಮಾಗಳಲ್ಲಿ ಕಾಡಿರುವ ರಣವೀರ್ ಸಿಂಗ್ ‘ರಾಕ್ಷಸೀ ಪ್ರತಿಭೆ’ಗೆ ಹೋಲಿಸಿದರೆ ಈ ಸಿನಿಮಾ ಮಂಕೆನಿಸುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು