ಶನಿವಾರ, ಜನವರಿ 16, 2021
27 °C
ಕೋವಿಡ್ ಸಂಕಷ್ಟದ ನಂತರ ಮತ್ತೆ ಜೀವ ಪಡೆಯುತ್ತಿದೆ ವೃತ್ತಿ ರಂಗಭೂಮಿ

PV Web Exclusive: ಈಗ ಅಂಕದ ಪರದೆ ಸರಿಯುವ ಹೊತ್ತು

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಈಗ ಅಂಕದ ಪರದೆ ಸರಿಯುವ ಹೊತ್ತು. ಉತ್ತರ ಕರ್ನಾಟಕ ಭಾಗದಲ್ಲಿ ನಿಧಾನವಾಗಿ ನಾಟಕದ ಥಿಯೇಟರ್‌ಗಳು ಜೀವ ಪಡೆಯುತ್ತಿವೆ. ಮಧ್ಯಾಹ್ನ, ಇಳಿಸಂಜೆ ಅಗ್ರಪೂಜಿತ ಬೆನಕನ ಸ್ತುತಿ ಈಗ ಮತ್ತೆ ಕೇಳಿಬರುತ್ತಿದೆ. ಅದಕ್ಕೂ ಮುನ್ನ ’ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಈ ನಾಟಕ ನೋಡಿ, ನೋಡದೇ ನಿರಾಶರಾಗಬೇಡಿ‘ ಎಂಬ ಆತ್ಮೀಯ ಆಹ್ವಾನ ಬೀದಿ–ಗಲ್ಲಿಗಳಲ್ಲಿ ನಾಟಕಪ್ರಿಯರ ಕಿವಿಗೆ ಬೀಳುತ್ತಿದೆ. ಗ್ರೀನ್‌ ರೂಂ ಕಳೆಗಟ್ಟುತ್ತಿದೆ. ಇನ್ನೇನಿದ್ದರೂ ಪ್ರೇಕ್ಷಕ ಮಹಾಶಯ ಶಿಳ್ಳೆ, ಚಪ್ಪಾಳೆ, ಒನ್ಸ್‌ಮೋರ್‌ನ ಉಮೇದಿಗೆ ಬೀಳಬೇಕಿದೆ.

ಕೋವಿಡ್–19 ಲಾಕ್‌ಡೌನ್ ಕಾರಣ ಕಳೆದ ಎಂಟು ತಿಂಗಳಿನಿಂದ ರಾಜ್ಯದಲ್ಲಿ ವೃತ್ತಿ ರಂಗಭೂಮಿ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿತ್ತು. ನವೆಂಬರ್‌ ಮೊದಲ ವಾರದಿಂದ ಅದೀಗ ಮರುಚಾಲನೆಗೊಳ್ಳುತ್ತಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಸುರಕ್ಷತಾ ನಿಯಮಗಳ ಪಾಲಿಸಿ ನಾಟಕ ಪ್ರದರ್ಶಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಥಿಯೇಟರ್‌ಗಳು ಸದ್ದು ಮಾಡುತ್ತಿವೆ. ನಾಡಿನಾದ್ಯಂತ ಇರುವ 30ಕ್ಕೂ ಹೆಚ್ಚು ವೃತ್ತಿ ರಂಗಭೂಮಿ ಥಿಯೇಟರ್‌ಗಳಲ್ಲಿ ಈಗಾಗಲೇ ಕೆಲವು ನಾಟಕ ಪ್ರದರ್ಶನ ಆರಂಭಿಸಿವೆ. ಮತ್ತಷ್ಟು ಸಿದ್ಧತೆ ನಡೆಸಿವೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಸಂಶಿಯಲ್ಲಿ ಗದುಗಿನ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದವರು ಶಿವಶರಣೆ ಅಕ್ಕಮಹಾದೇವಿ ನಾಟಕ ಪ್ರದರ್ಶನ ಆರಂಭಿಸಿದ್ದಾರೆ. ತೆಗ್ಗಿಹಳ್ಳಿಯ ಸಂತಶಿಶುನಾಳ ಶಿವಯೋಗಿ ನಾಟ್ಯ ಸಂಘದವರು ಅಕ್ಟೋಬರ್ 30ರಿಂದ ’ಅಪ್ಪ ಚಿಂತ್ಯಾಗ, ಮಗಳು ಸಂತ್ಯಾಗ‘ ನಾಟಕ ಪ್ರದರ್ಶನ ಶುರು ಮಾಡಿದ್ದಾರೆ. ಕೋವಿಡ್ ಲಾಕ್‌ಡೌನ್ ನಂತರ ರಾಜ್ಯದಲ್ಲಿ ನಾಟಕ ಪ್ರದರ್ಶನಕ್ಕೆ ಅನುಮತಿ ಪಡೆದ ಮೊದಲ ಸಂಸ್ಥೆ ಇದು.

ಜೇವರಗಿಯ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘ ಶಿರಸಿಯಲ್ಲಿ ನವೆಂಬರ್ 28ರಿಂದ ’ಮಂಗ್ಳೂರ ಮಾಣಿ, ಹುಬ್ಬಳ್ಳಿ ರಾಣಿ‘ ಎನ್ನುವ ನಾಟಕ ಪ್ರದರ್ಶಿಸಲಿದೆ. ಬಾಗಲಕೋಟೆಯಲ್ಲಿ ಆಶಾಪುರದ ಸಂಗಮೇಶ್ವರ ನಾಟ್ಯಸಂಘದವರು ಡಿಸೆಂಬರ್ 1ರಿಂದ ’ಹೌದಲೆ ರಂಗಿ ಉದಲೇನ ಪುಂಗಿ’ ಎಂಬ ಹಾಸ್ಯ ನಾಟಕ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರಿನಲ್ಲಿ ಶೇಖ್ ಮಾಸ್ತರ ಅವರ ಹಾನಗಲ್ ಕುಮಾರೇಶ್ವರ ನಾಟಕ ಸಂಘ, ಯಲಬುರ್ಗಾದಲ್ಲಿ ಮಂಡಲಗಿರಿ ಕಂಪೆನಿ, ಗದುಗಿನಲ್ಲಿ ಕಲ್ಲೂರ ಕಂಪೆನಿ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಕಮತಗಿ ಹುಚ್ಚೇಶ್ವರ ನಾಟ್ಯಸಂಘ ಕ್ಯಾಂಪ್ ಹಾಕಿವೆ.

ಮತ್ತೆ ಜೀವ ಬಂದಿದೆ:

ಕೋವಿಡ್ ತಂದಿತ್ತ ಸಂಕಷ್ಟ ಉಳಿದ ಕ್ಷೇತ್ರಗಳಂತೆ ವೃತ್ತಿ ರಂಗಭೂಮಿಗೂ ಬರಸಿಡಿಲು ಬಡಿದಿತ್ತು. ಕಲಾವಿದರ ಪಾಡು ಹೇಳತೀರದಾಗಿತ್ತು. ಈಗ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡಿರುವುದು ಒಂದಷ್ಟು ಜೀವ ತುಂಬಿದೆ. ಈಗೇನಿದ್ದರೂ ಪ್ರೇಕ್ಷಕರನ್ನು ಮತ್ತೆ ಥಿಯೇಟರ್‌ನತ್ತ ಕರೆತರುವುದೇ ನಮ್ಮೆದುರಿಗಿರುವ ದೊಡ್ಡ ಸವಾಲು ಎಂದು ಆಶಾಪುರದ ಸಂಗಮೇಶ್ವರ ನಾಟ್ಯ ಸಂಘದ ಒಡತಿ ಪ್ರೇಮಾ ಗುಳೇದಗುಡ್ಡ ಹೇಳುತ್ತಾರೆ.

ಕೋವಿಡ್‌ ಲಾಕ್‌ಡೌನ್‌ಗೆ ಮುನ್ನ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು ಅಮರೇಶ್ವರದ ಜಾತ್ರೆಯಲ್ಲಿ ಹೋಳಿ ಹುಣ್ಣಿಮೆ ದಿನ ನಾವು ಕ್ಯಾಂಪ್ ಹಾಕಿದ್ದೆವು. ನಾಟಕ ಪ್ರದರ್ಶನ ಆರಂಭಿಸಿ ಇನ್ನೂ ಐದು ದಿನಗಳು ಆಗಿದ್ದವು. ಕಲೆಕ್ಷನ್ ಒಂದಷ್ಟು ಕುದುರಿಕೊಳ್ಳುತ್ತಿದೆ ಎನ್ನುವಾಗಲೇ ತಹಶೀಲ್ದಾರ್ ಬಂದು ನಾಟಕ ಪ್ರದರ್ಶನ ಬಂದ್ ಮಾಡಿಸಿದರು. ಆದಾಯ ಇರಲಿ, ಕ್ಯಾಂಪ್ ಹಾಕಲು ಮುಂಗಡ ನೀಡಿದ್ದ ಭೂಬಾಡಿಗೆ, ಥಿಯೇಟರ್ ನಿರ್ಮಾಣ ವೆಚ್ಚ ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದೆವು ಎಂದು ಪ್ರೇಮಾ ನೆನಪಿಸಿಕೊಳ್ಳತ್ತಾರೆ.

ಕೋವಿಡ್ ಸಂಕಷ್ಟ–ಕಲಾವಿದರ ಹಾಡು–ಪಾಡು..

ಲಾಕ್‌ಡೌನ್ ನಂತರ ನಾಟಕಗಳ ಪ್ರದರ್ಶನ ಇಲ್ಲದೇ ನೂರಾರು ಕಲಾವಿದರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಆ ನಡುವೆ ಆರು ತಿಂಗಳು ಕಾಲ ಕಲಾವಿದರ ಮಾಸಾಶನ ಬೇರೆ ನಿಂತಿತ್ತು. ಪುಣ್ಯಕ್ಕೆ ಈಗ ಮತ್ತೆ ಆರಂಭಿಸಿದ್ದಾರೆ. ವಯಸ್ಸಾದವರು, ಅಂದೇ ದುಡಿದು ಅಂದೇ ತಿನ್ನುವ ನೇಪಥ್ಯ ಕಲಾವಿದರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದರು ಎಂದು ಜೇವರಗಿಯ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘದ ಮಾಲೀಕ ಜೇವರಗಿ ರಾಜಣ್ಣ ಬೇಸರ ವ್ಯಕ್ತಪಡಿಸುತ್ತಾರೆ.

ಕಲಾವಿದರು ಬದುಕಿಗಾಗಿ ಟೀ ಅಂಗಡಿಯಲ್ಲಿ ಸಪ್ಲೈಯರ್ ಆಗಿ, ಹಮಾಲಿ ಕೆಲಸ ಮಾಡಿ, ಬೀದಿಯಲ್ಲಿ ಹಣ್ಣು–ತರಕಾರಿ ಮಾರಿ, ಟಂಟಂ ಓಡಿಸಿ, ಬಟ್ಟೆ ವ್ಯಾಪಾರ ಮಾಡಿದ್ದಾರೆ. ಇದರಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ವ್ಯವಹಾರ ಗೊತ್ತಿಲ್ಲದೇ ನಷ್ಟ ಅನುಭವಿಸಿದ್ದಾರೆ ಎನ್ನುತ್ತಾರೆ.

’ನಮ್ಮ ಕಂಪೆನಿಯ ನಾಟಕದಲ್ಲಿ ಹೀರೊ ಪಾತ್ರ ಮಾಡುವ ನನ್ನ ಸಹೋದರಿಯ ಮಗ ರವಿ, ಲಾಕ್‌ಡೌನ್ ನಂತರ ನಮ್ಮೂರು ಗುಳೇದಗುಡ್ಡದಲ್ಲಿ ಟಂಟಂ ಓಡಿಸಿ ಬದುಕು ಕಟ್ಟಿಕೊಂಡಿದ್ದ. ಖಳನಾಯಕ ಪಾತ್ರಧಾರಿ ರಾಜು ಹುಬ್ಬಳ್ಳಿ ಬಟ್ಟೆ ವ್ಯಾಪಾರ ಮಾಡಿದ್ದಾರೆ. ಕಳೆದ 40 ವರ್ಷಗಳಿಂದ ಕಂಪೆನಿ ನಡೆಸುತ್ತಿದ್ದೇವೆ. ಕಲಾವಿದರಿಗೆ ಎಂದೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಇದೊಂದು ದುಃಸ್ವಪ್ನ‘ ಎಂದು ಪ್ರೇಮಾ ಗುಳೇದಗುಡ್ಡ ಹೇಳುತ್ತಾರೆ.

’ರಂಗ ಕವಿ ಮಹೇಶ ಕಲ್ಲೋಳ ಶಿರಸಿಯಲ್ಲಿ ಹಮಾಲಿಗಳ ಜೊತೆ ಕೆಲಸ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಜೀವಾಪುರದ ಕಲಾವಿದರಾದ ಪಂಚಾಕ್ಷರಿ ಹಿರೇಮಠ ಹಾಗೂ ಪ್ರಭು ಹಿರೇಮಠ ಬೀದಿಯಲ್ಲಿ ಹಣ್ಣು–ತರಕಾರಿ ಮಾರಿದ್ದಾರೆ. ಮಂಗಳೂರಿನ ಕಲಾವಿದ ಶರತ್ ಕುಂಬ್ಳೆ ತುಮಕೂರಿನಲ್ಲಿ ಅಡುಗೆ ಕೆಲಸ ಮಾಡಿದ್ದಾರೆ‘ ಎಂದು ಜೇವರಗಿ ರಾಜಣ್ಣ ನೆನಪಿಸಿಕೊಳ್ಳುತ್ತಾರೆ.

ನೆರವಿನ ಹಸ್ತ:

ಕಲಾವಿದರ ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲವು ಸಹೃದಯರೂ ಬೆನ್ನಿಗೆ ನಿಂತಿದ್ದಾರೆ. ಅವರಲ್ಲಿ ಬೆಂಗಳೂರಿನ ಸಂಚಯ ಹಾಗೂ ನಾಟಕ ಬೆಂಗಳೂರು ಸಂಸ್ಥೆಗಳು ಮಾಡಿದ ಕೆಲಸ ಸ್ತುತ್ಯರ್ಹ ಎಂದು ಜೇವರಗಿ ರಾಜಣ್ಣ ಹೇಳುತ್ತಾರೆ. 

ಸದ್ದಿಲ್ಲದೇ ನೆರವಿಗೆ ನಿಂತ ಈ ಸಂಸ್ಥೆಯವರು ಲಾಕ್‌ಡೌನ್ ವೇಳೆ ಕೆಲವು ಬಡ ಕಲಾವಿದರನ್ನು ದತ್ತು ಪಡೆದಿದ್ದರು. ಶಶಿಧರ ಬಾರಿಘಾಟ ನೇತೃತ್ವದ ನಾಟಕ ಬೆಂಗಳೂರು ತಂಡದವರು 200 ಕಲಾವಿದರಿಂಗೆ ನಾಲ್ಕು ತಿಂಗಳು ಕಾಲ ತಲಾ ₹3000 ಸಾವಿರ ನೆರವಿನ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕಿದ್ದಾರೆ. ಸಂಚಯದ ಗಣೇಶ ಶೆಣೈ ಹಾಗೂ ತಂಡದವರು ₹20 ಲಕ್ಷ ಖರ್ಚು ಮಾಡಿದ್ದಾರೆ. ನಮಗೆ ಈ ವಿಚಾರದಲ್ಲಿ ಪ್ರಚಾರ ಬೇಕಿಲ್ಲ ಎಂಬುದು ಎರಡೂ ಸಂಸ್ಥೆಯವರ ವಿನಮ್ರ ಮನವಿ ಆಗಿತ್ತು. ನಾಡಿನ ಕಲಾಬಳಗದ ಪರವಾಗಿ ನಾವು ಅವರಿಗೆ ಯಾವಾಗಲೂ ಋಣಿ ಎಂಬುದು ರಾಜಣ್ಣ ಅವರ ಅಭಿಮತ..

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು