ಶುಕ್ರವಾರ, ಅಕ್ಟೋಬರ್ 22, 2021
29 °C

ರಾಮಾಯಣದ 'ರಾವಣ' ಪಾತ್ರಧಾರಿ ಹಿರಿಯ ನಟ ಅರವಿಂದ ತ್ರಿವೇದಿ ಇನ್ನಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

 ನಟ ಅರವಿಂದ ತ್ರಿವೇದಿ

ಮುಂಬೈ: ರಮಾನಂದ ಸಾಗರ್‌ ಅವರ ಜನಪ್ರಿಯ 'ರಾಮಾಯಣ' ಧಾರಾವಾಹಿಯಲ್ಲಿ ರಾವಣ ಪಾತ್ರ ನಿರ್ವಹಿಸಿದ್ದ ನಟ ಅರವಿಂದ ತ್ರಿವೇದಿ (82) ಮಂಗಳವಾರ ರಾತ್ರಿ ನಿಧನರಾದರು.

ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಅರವಿಂದ ತ್ರಿವೇದಿ ಅವರು ಕೆಲವು ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು ಹಾಗೂ ಹೃದಯಾಘಾತ, ಬಹುಅಂಗಾಂಗ ವೈಫಲ್ಯದ ಕಾರಣಗಳಿಂದಾಗಿ ಅವರು ಸಾವಿಗೀಡಾದರು. ಮುಂಬೈನ ದಹನುಕರವಾಡಿಯಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದೆ.

ಗುಜರಾತಿ ಸಿನಿಮಾಗಳಲ್ಲಿ 40 ವರ್ಷಗಳ ನಟನೆಯ ಸುದೀರ್ಘ ಪ್ರಯಾಣದಲ್ಲಿ ಹಲವು ಚಿತ್ರಗಳು ಜನಪ್ರಿಯತೆ ಪಡೆದಿವೆ. ಹಿಂದಿ ಮತ್ತು ಗುಜರಾತಿಯ ಸಾಮಾಜಿಕ, ಪೌರಾಣಿಕ ಕಥೆಯಾಧಾರಿತ ಸುಮಾರು 300 ಸಿನಿಮಾಗಳಲ್ಲಿ ಅರವಿಂದ ಅಭಿನಯಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅವರನ್ನು ಗುರುತಿಸುವಂತೆ ಮಾಡಿದ್ದು ರಾಮಾಯಣ ಧಾರಾವಾಹಿಯ 'ರಾವಣ' ಪಾತ್ರ. ಇದರೊಂದಿಗೆ ಖ್ಯಾತಿ ತಂದುಕೊಟ್ಟ ಮತ್ತೊಂದು ಧಾರಾವಾಹಿ 'ವಿಕ್ರಮ್‌ ಔರ್‌ ಬೇತಾಳ್‌'.

ಅರವಿಂದ ತ್ರಿವೇದಿ ಅವರು 1991ರಿಂದ 1996ರ ವರೆಗೂ ಸಂಸತ್‌ ಸದಸ್ಯರಾಗಿದ್ದರು. ಗುಜರಾತ್‌ನ ಸಾಬರ್‌ಕಾಂಠಾ ಜಿಲ್ಲೆಯಿಂದ ಅವರು ಆಯ್ಕೆಯಾಗಿದ್ದರು. ವಿಜಯ್‌ ಆನಂದ್‌ ಅವರ ನಂತರ 2002ರಿಂದ 2003ರವರೆಗೂ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಮುಖ್ಯಸ್ಥರಾಗಿದ್ದರು.

ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ದೂರದರ್ಶನ ರಾಮಾಯಣ ಧಾರವಾಹಿಯನ್ನು ಮರುಪ್ರಸಾರ ಮಾಡಿದಾಗ, ಆ ಧಾರಾವಾಹಿಯ ಎಲ್ಲ ಹಿರಿಯ ನಟರು ಮತ್ತೆ ಮುನ್ನೆಲೆಗೆ ಬಂದರು. ಹಲವು ಕಲಾವಿದರು ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆದು ಸಕ್ರಿಯರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು