ಮಂಗಳವಾರ, ನವೆಂಬರ್ 24, 2020
19 °C
ಅಲಾಸ್ಕಾದಿಂದ ನ್ಯೂಜಿಲೆಂಡ್‌ಗೆ ತಡೆರಹಿತ ಪಯಣ; ಹೊಸ ದಾಖಲೆ ಬರೆದ ಗಾಡ್‌ವಿಟ್ ಹಕ್ಕಿ

PV Web Exclusive: ಒಂದೇ ನೆಗೆತಕ್ಕೆ 12,000 ಕಿಲೋಮೀಟರ್ ಹಾರಿದ ಪಕ್ಷಿ

ಅಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಹಕ್ಕಿ ಹಾರುತಿದೆ ನೋಡಿದಿರಾ... ಎಂದು ಕವಿಯೊಬ್ಬರು ಉದ್ಗಾರ ತೆಗೆದಿದ್ದರು. ಹಕ್ಕಿ ಎಷ್ಟು ದೂರ ಹಾರಬಲ್ಲದು? ಅದು ಅವರವರ ಊಹೆಗೆ  ಬಿಟ್ಟಿದ್ದು. ಆದರೆ ಎಲ್ಲರ ಊಹೆಯನ್ನೂ ಮೀರಿ ಪಕ್ಷಿಯೊಂದು ಹಾರಿದೆ. ಹಾರಿದೆ ಎಂದರೆ ಅದು ಸಾಧಾರಣ ಹಾರಾಟವಲ್ಲ! ಪೆಸಿಫಿಕ್ ಸಾಗರದ ಮೇಲೆ ಪಯಣ ಹೊರಟ ಅದು ಹೋಗಿ ತಲಿಪಿದ್ದು ಬರೋಬ್ಬರಿ 12 ಸಾವಿರ ಕಿಲೋಮೀಟರ್ (7987 ಮೈಲು) ದೂರದ ಪ್ರದೇಶವನ್ನು.

ಈ ಪಯಣದ ಮಾರ್ಗದಲ್ಲಿ ಅದೂ ಎಲ್ಲಿಗೂ ವಿಶ್ರಾಂತಿ ಪಡೆಯಲಿಲ್ಲ ಎಂಬುದು ಇನ್ನೊಂದು ಅಚ್ಚರಿ. ತೆಗೆದುಕೊಂಡ ಸಮಯ 224 ಗಂಟೆಗಳು. ಈ ಮೂಲಕ ಹೊಸ ದಾಖಲೆ ಬರೆದಿರುವುದು ಗಾಡ್‌ವಿಟ್ (A bar-tailed godwit (Limosa lapponica)) ಎಂಬ ಖಗ. ವಲಸೆ ಹೊರಟ ಬಳಿಕ ಎಲ್ಲಿಯೂ ಕೆಳಗಿಳಿಯದೇ, ಆಹಾರವನ್ನು ತಿನ್ನದೇ, ವಿಶ್ರಾಂತಿಯನ್ನೂ ಪಡೆಯದೇ ಗುರಿ ಮುಟ್ಟುವಲ್ಲಿ ಈ ಜಾತಿಯ ಪಕ್ಷಿಗಳು ಹೆಸರುವಾಸಿ. 

ಪಕ್ಷಿಗಳು ಗಮ್ಯ ತಲುಪಲು ಎಂಥ ಸಾಹಸವನ್ನಾದರೂ ಮಾಡುತ್ತವೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನ. ಅಲಾಸ್ಕಾದಿಂದ ನ್ಯೂಜಿಲೆಂಡ್‌ವರೆಗೆ ಬೃಹತ್ ಸಾಗರವನ್ನು ದಾಟಿ ಸಾಗಿದ ಇದರ ಪಯಣ ಯಾವ ಜೆಟ್ ವಿಮಾನಕ್ಕೂ ಕಡಿಮೆಯಿಲ್ಲ. ಈ ಪಯಣವನ್ನು ಕರಾರುವಕ್ಕಾಗಿ ದಾಖಲಿಸಲು ತಂತ್ರಜ್ಞಾನ ನೆರವು ನೀಡಿದೆ. ‘ಗ್ಲೋಬಲ್ ಫ್ಲೈವೇ ನೆಟ್‌ವರ್ಕ್’ ಸಂಘಟನೆಯ ವಿಜ್ಞಾನಿಗಳು ದೀರ್ಘ ಪಯಣದ ವಲಸೆ ಹಕ್ಕಿಗಳ ಪಥವನ್ನು ದಾಖಲಿಸುವ ಕೆಲಸ ಮಾಡಿದ್ದಾರೆ. ಗಾಡ್‌ವಿಟ್ ಪಕ್ಷಿಯು 5 ಗ್ರಾಮ್‌ನ ಸ್ಯಾಟಲೈಟ್ ಟ್ಯಾಗ್‌ನೊಂದಿಗೆ ಹಾರಾಟ ನಡೆಸಿತ್ತು. ಈ ಟ್ಯಾಗ್, ಹಾರುತ್ತಿರುವ ಹಕ್ಕಿಯ ಪಥವನ್ನು ದಾಖಲಿಸುತ್ತಿತ್ತು. 

‘ಪೆಸಿಫಿಕ್‌ ಸಾಗರದ ಮೇಲೆ ಸಾಗುತ್ತಿದ್ದ ಪಕ್ಷಿಗಳು ದಿನಗಟ್ಟಲೆ ಹಾರುತ್ತಲೇ ಇದ್ದವು. ಅಲ್ಲೆಲ್ಲೂ ಭೂಭಾಗ ಸಿಗುವುದೇ ಇಲ್ಲ. ಕ್ಯಾಲೆಡೋನಿಯಾ ಮತ್ತು ಪಪುವಾ ನ್ಯೂಗಿನಿಯಾದಲ್ಲಿ ಕೆಲವು ದ್ವೀಪಗಳು ಕಾಣಸಿಗುತ್ತವೆ. ಆದರೆ ಎಲ್ಲೆಲ್ಲೂ ನಿಲ್ಲದೆ ನ್ಯೂಜಿಲೆಂಡ್‌ನತ್ತ ಅವು ಪಯಣ ಮುಂದುವರಿಸಿದವು’ ಎಂದು ಗ್ಲೋಬಲ್ ಫ್ಲೈವೇ ನೆಟ್‌ವರ್ಕ್‌ನ ಡಾ. ಜೀಸ್ ಕೊನ್‌ಕ್ಲಿನ್ ಹೇಳುತ್ತಾರೆ. 

ಅವುಗಳ ಹಾರಾಟದ ಶಕ್ತಿ ಮತ್ತು ಸಾಮರ್ಥ್ಯ ಊಹೆಯನ್ನೂ ಮೀರಿದ್ದು. ಉದ್ದದ, ಮೊನಚಾದ ರೆಕ್ಕೆಗಳು ಮತ್ತು ನಯವಾದ ವಿನ್ಯಾಸದ ಕಾರಣ, ಅವು ಗಾಳಿಯನ್ನು ಭೇದಿಸಿಕೊಂಡು ಹೋಗುವ ವೈಜ್ಞಾನಿಕ ಬಲವನ್ನು ಪಡೆದಿವೆ. ನಮ್ಮ ಮಾನವ ನಿರ್ಮಿತ ತಂತ್ರಜ್ಞಾನಗಳಿಗಿಂತ ಪ್ರಕೃತಿ ಹೆಚ್ಚು ಸಾಮರ್ಥ್ಯ ಹೊಂದಿದೆ ಎಂಬುದನ್ನು ಈ ದೀರ್ಘ ಪಯಣದ ದೃಷ್ಟಾಂತ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕೊನ್‌ಕ್ಲಿನ್ ಹೇಳಿದ್ದಾರೆ. 


ಅಲಾಸ್ಕಾದಿಂದ ಆಕ್ಲೆಂಡ್‌ವರೆಗೆ ಪಯಣದ ಹಾದಿ–ಡೈಲಿಮೇಲ್ ಚಿತ್ರ

ವಲಸೆ ಹೊರಡುವ ಮುನ್ನ ಒಂದೆರೆಡು ತಿಂಗಳು ಆಹಾರ ಭದ್ರಪಡಿಸಿಕೊಳ್ಳುವ ಹಕ್ಕಿಗಳು, ಸುದೀರ್ಘ ವಲಸೆಗಾಗಿ ದೇಹವನ್ನು ಹಗುರ ಮಾಡಿಕೊಳ್ಳಲು ತಮ್ಮ ಅಂಗಾಂಗಗಳನ್ನು ಕುಗ್ಗಿಸಿಕೊಳ್ಳುತ್ತವೆ. 19 ಪಕ್ಷಿಗಳಿಗೆ ಟ್ಯಾಗ್ ಹಾಗೂ ವಿವಿಧ ಬಣ್ಣದ ರಿಂಗ್‌ಗಳನ್ನು ತೊಡಿಸಲಾಗಿತ್ತು. ಈ ಪೈಕಿ ‘4ಬಿಬಿಆರ್‌ಡಬ್ಲ್ಯೂ’ ಹೆಸರಿನ ಟ್ಯಾಗ್ ಇದ್ದ ಗಾಡ್‌ವಿಟ್ ಗಂಡು ಪಕ್ಷಿಯು ಈ ದೂರವನ್ನು ಮೊದಲು‌ ತಲುಪಿತು. ಸೆ.16ರಂದು ಆಲಾಸ್ಕಾದಿಂದ ಹೊರಟ ಅದು, ನ್ಯೂಜಿಲೆಂಡ್‌ನ ಭೂಪ್ರದೇಶ ಸ್ಪರ್ಶಿಸಲು ತೆಗೆದುಕೊಂಡಿದ್ದು ಸರಿಯಾಗಿ 11 ದಿನ. ಗಂಟೆಗೆ 89 ಕಿಲೋಮೀಟರ್ ವೇಗದಲ್ಲಿ ಸಂಚರಿಸಿತು.

ಉಪಗ್ರಹದಲ್ಲಿ ದಾಖಲಾಗಿರುವ ದತ್ತಾಂಶದ ಪ್ರಕಾರ, 12,854 ಕಿಲೋಮೀಟರ್ ದೂರವನ್ನು ಕ್ರಮಿಸುವ ಮೂಲಕ, ಈ ಹಿಂದಿನ 11,680 ಕಿಲೋಮೀಟರ್ ದಾಖಲೆಯನ್ನು ಅಳಿಸಿಹಾಕಿತು. 2007ರಲ್ಲಿ ಗಾಡ್‌ವಿಟ್ ಹೆಣ್ಣು ಹಕ್ಕಿಯು 9 ದಿನಗಳಲ್ಲಿ 11,680 ಕಿಲೋಮೀಟರ್ ದೂರ ಕ್ರಮಿಸಿದ್ದು ಈವರೆಗಿನ ದಾಖಲೆ ಎನಿಸಿತ್ತು ಎಂದು ನ್ಯಾಷನಲ್ ಜಿಯೊಗ್ರಾಫಿಕ್ ವರದಿ ಮಾಡಿದೆ. 

ಈ ಪಕ್ಷಿಗಳು ಸುದೀರ್ಘ ಹಾಗೂ ತಡೆರಹಿತ ಪಯಣಕ್ಕೆ ಹೆಸರಾಗಿರುವ ಜೊತೆಗೆ ಸಾಂಸ್ಕೃತಿಕ ರಾಯಭಾರಿಗಳಾಗಿಯೂ ಗುರುತಿಸಿಕೊಂಡಿವೆ. ನ್ಯೂಜಿಲೆಂಡ್‌ನ ಮಾವೊರಿ ಎಂಬ ಸ್ಥಳೀಯ ಸಮುದಾಯವು ಈ ಪಕ್ಷಿಯನ್ನು ‘ಕೌಕಾ’ ಎಂದು ಕರೆಯುತ್ತದೆ. ಈ ಪಕ್ಷಿಗಳು ಬಂದವೆಂದರೆ, ಒಳ್ಳೆಯ ದಿನಗಳ ಮುನ್ಸೂಚನೆ ಎಂದು ಅವರು ನಂಬುತ್ತಾರೆ. 

ಈ ಪಕ್ಷಿಗಳು ಮಾರ್ಚ್‌ನಲ್ಲಿ ನ್ಯೂಜಿಲೆಂಡ್‌ನಿಂದ ವಾಪಸ್ ಹೊರಡುತ್ತವೆ. ಯಾವುದೇ ತಡೆ ಇಲ್ಲದೆ ಹೋಗುವ ಅವು, ವಾಪಸ್ ಬರುವಾಗ ಚೀನಾದ ಹಳದಿ ಸಮುದ್ರ ದಂಡೆಯಲ್ಲಿ ಆಹಾರಕ್ಕಾಗಿ ಒಂದು ತಿಂಗಳು ತಂಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು