ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಲಾಗದ ‘ನೀರುಕಾಗೆ’

Last Updated 4 ಫೆಬ್ರುವರಿ 2020, 15:14 IST
ಅಕ್ಷರ ಗಾತ್ರ
ADVERTISEMENT
""
""

ಹಕ್ಕಿಗಳ ಮುಖ್ಯ ಲಕ್ಷಣವೇ ಗರಿಬಿಚ್ಚಿ ಬಾನಲ್ಲಿ ಹಾರಾಡುವುದು. ಆದರೆ ಹಾರುವ ಸಾಮರ್ಥ್ಯವಿಲ್ಲದ ಹಕ್ಕಿಗಳೂ ಕೆಲವು ಇವೆ. ಜೀವಿತಾವಧಿಯ ಬಹುತೇಕ ಅವಧಿಯನ್ನು ನೀರಿನಲ್ಲಿ ಕಳೆಯುವ ಹಕ್ಕಿಗಳಲ್ಲಿ ನೀರುಕಾಗೆ ಕೂಡ ಒಂದು. ನೀರು ಕಾಗೆಗಳಲ್ಲೂ ಕೆಲವು ಪ್ರಬೇಧಗಳನ್ನು ಗುರುತಿಸಲಾಗಿದ್ದು, ಈ ಕುಟುಂಬಕ್ಕೆ ಸೇರಿದ ಹಕ್ಕಿಗಳ ಪೈಕಿ ಹಾರುವ ಹಾರುವ ಸಾಮರ್ಥ್ಯವಿಲ್ಲದ ಏಕೈಕ ನೀರುಕಾಗೆಯ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿಯೋಣ.

ಹೇಗಿರುತ್ತದೆ:ದೊಡ್ಡಗಾತ್ರದ ಮತ್ತು ನೀಳವಾದ ದೇಹವನ್ನು ಹೊಂದಿರುವ ಹಕ್ಕಿಗಳಲ್ಲಿ ಇದು ಕೂಡ ಒಂದು. ದಡೂತಿಯಂತೆ ಕಾಣುವ ಈ ಹಕ್ಕಿಯ ದೇಹವೆಲ್ಲಾ ಕಂದು ಮತ್ತು ಕಪ್ಪು ಮಿಶ್ರಿತ ಪುಕ್ಕದಿಂದ ಕೂಡಿರುತ್ತದೆ. ರೆಕ್ಕೆಯ ಗರಿಗಳು ಜಾಳಾಗಿದ್ದು, ಈಜು ರೆಕ್ಕೆಗಳಂತೆ ಕೆಲಸ ಮಾಡುತ್ತವೆ. ಬಾಲದ ಗರಿಗಳೂ ಜಾಳಾಗಿದ್ದು, ಈಜುವುದಕ್ಕೆ ನೆರವಾಗುವಂತೆ ಇವೆ. ನೀಳವಾದ ಕೊಕ್ಕು ಹಾಗೂ ದೊಡ್ಡಗಾತ್ರದ ತಲೆ ದಟ್ಟವಾದ ಪುಕ್ಕದಿಂದ ಕೂಡಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ನೀಲಿ ಬಣ್ಣದಲ್ಲಿರುತ್ತವೆ. ದೃಢವಾದ ಕೊಕ್ಕು ಕಪ್ಪು ಹಾಗೂ ಹಳದಿ ಮಿಶ್ರಿತ ಬಣ್ಣದಲ್ಲಿರುತ್ತದೆ. ಆಹಾರ ಹೆಕ್ಕಿ ತಿನ್ನುವುದಕ್ಕೆ ನೆರವಾಗುವಂತೆ ತುದಿಯಲ್ಲಿ ಬಾಗಿರುತ್ತದೆ. ಬೂದು ಬಣ್ಣದ ಜಾಲಪಾದಗಳು ಅಗಲವಾಗಿದ್ದು, ದೊಡ್ಡದಾಗಿರುತ್ತವೆ.

ವಾಸಸ್ಥಾನ:ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್ ದೇಶದ ಗಲಾಪಗೊಸ್‌ ದ್ವೀಪಪ್ರದೇಶಗಳಲ್ಲಿ ಮಾತ್ರ ಈ ಹಕ್ಕಿ ಕಾಣಸಿಗುತ್ತದೆ. ಕಡಲತೀರ ಪ್ರದೇಶ, ಜಲಸಂಧಿಗಳು, ಹೆಚ್ಚು ಆಳವಿಲ್ಲದ ನೀರಿನ ಪ್ರದೇಶಗಳಲ್ಲಿ ಈ ಹಕ್ಕಿ ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ:ಹೆಚ್ಚಿನ ಪ್ರಮಾಣದಲ್ಲಿ ಆಹಾರ ದೊರೆಯುವ ಹಾಗೂ ಪರಭಕ್ಷಕ ಪ್ರಾಣಿಗಳ ಭೀತಿಯಿಲ್ಲದ ದ್ವೀಪ ಪ್ರದೇಶಗಳಲ್ಲಿ ಈ ಹಕ್ಕಿ ಸಾವಿರಾರು ವರ್ಷಗಳಿಂದ ವಾಸಿಸುತ್ತಿರುವುದರಿಂದ ಕಾಲಕ್ರಮೇಣ ಹಾರುವ ಶಕ್ತಿ ಕಳೆದುಕೊಂಡಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಅಗಲವಾದ ಜಾಲಪಾದಗಳು ನೀರಿನಲ್ಲಿ ಸರಾಗವಾಗಿ ಈಜುವುದಕ್ಕೆ ನೆರವಾಗುತ್ತವೆ. ಇದರ ಪುಕ್ಕ ಜಲನಿರೋಧಕ ಆಗಿಲ್ಲದಿರುವುದರಿಂದ ಹೆಚ್ಚು ಹೊತ್ತು ನೀರಿನಲ್ಲಿ ಇರುವುದಿಲ್ಲ. ನೀರಿನಿಂದ ಹೊರಬಂದ ಕೂಡಲೇ ಬಿಸಿಲಿಗೆ ಮೈಯೊಡ್ಡಿ, ರೆಕ್ಕೆಗಳನ್ನು ಅಗಲಿಸಿ ದೇಹದ ತೇವಾಂಶವನ್ನು ಒಣಗಿಸಿಕೊಳ್ಳುತ್ತದೆ. ಇದು ಸೋಮಾರಿ ಹಕ್ಕಿ, ದೇಹಕ್ಕೆ ಬೇಕಾಗುವಷ್ಟು ಆಹಾರ ದೊರೆತರೆ ಒಂದೇ ಪ್ರದೇಶದಲ್ಲಿ ಇರುತ್ತದೆ.

ಸಂತಾನೋತ್ಪತ್ತಿಗೆ ಅನುಕೂಲವಾಗುವ ಪ್ರದೇಶದೊಂದಿಗೆ ಹೆಚ್ಚು ಬಾಂಧವ್ಯ ಬೆಳೆಸಿಕೊಂಡಿರುತ್ತದೆ. ಈ ಪ್ರದೇಶದ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲೇ ಆಹಾರ ಹುಡುಕುತ್ತದೆ. ಸಂತಾನೋತ್ಪತ್ತಿ ಅವಧಿಯನ್ನು ಹೊರತುಪಡಿಸಿದರೆ ಬಹುತೇಕ ನಿಶಬ್ದವಾಗಿಯೇ ಇರುತ್ತದೆ. ಮೆಲುಧ್ವನಿಯಲ್ಲಿ ಸದ್ದುಗಳನ್ನು ಹೊರಡಿಸುತ್ತಾ ಸಂವಹನ ನಡೆಸುತ್ತದೆ.

ಆಹಾರ: ಇದು ಸಂಪೂರ್ಣ ಮಾಂಸಾಹಾರಿ ಹಕ್ಕಿ. ವಿವಿಧ ಬಗೆಯ ಮೀನುಗಳೇ ಇದರ ಪ್ರಮುಖ ಆಹಾರ. ರಾಕ್‌ಫಿಶ್‌ ಅನ್ನು ಹೆಚ್ಚು ಇಷ್ಪಪಟ್ಟು ತಿನ್ನುತ್ತದೆ. ಕೆಲವು ಬಗೆಯ ಆಕ್ಟೋಪಸ್ ಹಾಗೂ ಸ್ಕ್ವಿಡ್‌ಗಳನ್ನೂ ಇದು ಬೇಟೆಯಾಡಿ ಭಕ್ಷಿಸುತ್ತದೆ.

ಸಂತಾನೋತ್ಪತ್ತಿ:ಮಾರ್ಚ್‌ನಿಂದ ಸೆಪ್ಟೆಂಬರ್‌ ವರೆಗಿನ ಅವಧಿಯಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಒಂದು ಅವಧಿಯಲ್ಲಿ ಒಂದು ಹಕ್ಕಿಯೊಂದಿಗೆ ಮಾತ್ರ ಇದು ಜೊತೆಯಾಗುತ್ತದೆ. ಮತ್ತೊಂದು ಸಂತಾನೋತ್ಪತ್ತಿ ಅವಧಿಯಲ್ಲಿ ಹೊಸ ಸಂಗಾತಿಯೊಂದಿಗೆ ಕೂಡುತ್ತದೆ.

ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ನೀರಿನಲ್ಲಿ ಒಂದರ ಸುತ್ತ ಒಂದು ಈಜುತ್ತಾ, ಕತ್ತನ್ನು ವಿವಿಧ ಭಂಗಿಗಳಲ್ಲಿ ತಿರುಗಿಸುತ್ತಾ ಗಮನ ಸೆಳೆಯಲು ಪ್ರಯತ್ನಿಸುತ್ತವೆ. ಹೆಣ್ಣು ಹಕ್ಕಿ 2ರಿಂದ 3 ಮೊಟ್ಟೆಗಳನ್ನು ಇಟ್ಟರೆ, 35 ದಿನಗಳ ವರೆಗೆ ಪೋಷಕ ಹಕ್ಕಿಗಳೆರಡೂ ಸಮಾನ ಕಾಳಜಿಯಿಂದ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಗಂಡು ಹಕ್ಕಿ ಸಮುದ್ರದಲ್ಲಿ ಬೆಳೆಯುವ ಕಳೆಗಿಡಗಳನ್ನು ಹೆಣ್ಣು ಹಕ್ಕಿಗೆ ಉಡುಗೊರೆಯಾಗಿ ನೀಡಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತದೆ.

ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ಪುಕ್ಕ ಬೆಳೆದಿರುವುದಿಲ್ಲ. ಆದರೆ ಕಡಿಮೆ ಅವಧಿಯಲ್ಲೇ ಪುಕ್ಕ ಬೆಳೆಯುತ್ತದೆ. 2ರಿಂದ 4 ತಿಂಗಳ ವರಗೆ ಪೋಷಕ ಹಕ್ಕಿಗಳು ಆಹಾರ ಉಣಿಸಿ ಬೆಳೆಸುತ್ತವೆ. ನಂತರ ಸ್ವತಂತ್ರವಾಗಿ ಆಹಾರ ಹುಡುಕುವುದು, ಬೇಟೆಯಾಡುವುದನ್ನು ಕಲಿಯುತ್ತವೆ. ಎರಡು ವರ್ಷಗಳ ನಂತರ ಮರಿಗಳು ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ನೀರು ಕಾಗೆಗಳ ಪೈಕಿ ಇದರ ಕಣ್ಣುಗಳು ಹೆಚ್ಚು ಆಕರ್ಷಕವಾಗಿರುತ್ತವೆ.

* ಇದಕ್ಕೆ ಹಾರುವ ಸಾಮರ್ಥ್ಯವಿಲ್ಲದಿದ್ದರೂ ಇತರೆ ನೀರುಕಾಗೆಗಳಿಗೆ ಹೋಲಿಸಿದರೆ ಉತ್ತಮವಾಗಿ ನೀರಿನಲ್ಲಿ ಬೇಟೆಯಾಡುತ್ತದೆ.

* ಇತರೆ ನೀರುಕಾಗೆಗಳಿಗೆ ಹೋಲಿಸಿದರೆ ಇದರ ದೇಹದಲ್ಲೇ ಹೆಚ್ಚು ಮಂದವಾಗಿ ಪುಕ್ಕ ಬೆಳೆಯುತ್ತದೆ. ಹೆಚ್ಚು ಮೃದುವಾಗಿಯೂ ಇರುತ್ತದೆ. ಈ ಪುಕ್ಕ ನೀರಿನಲ್ಲಿ ತೇಲುವುದಕ್ಕೂ ನೆರವಾಗುತ್ತದೆ.

* ದಟ್ಟವಾದ ಪುಕ್ಕದಲ್ಲಿ ಗಾಳಿ ತುಂಬಿಕೊಂಡು ನೀರಿನಲ್ಲಿದ್ದರೂ ದೇಹವನ್ನು ತೇಲುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT