ಶನಿವಾರ, ಸೆಪ್ಟೆಂಬರ್ 19, 2020
26 °C

ದಕ್ಷಿಣ ಅಮೆರಿಕದ ‘ಜೌಗುಜಿಂಕೆ’

ಪ್ರಾಣಿ ಪ್ರಪಂಚ Updated:

ಅಕ್ಷರ ಗಾತ್ರ : | |

Prajavani

ನೋಡಿದ ಕೂಡಲೇ ಗಮನ ಸೆಳೆಯುವ ಪ್ರಾಣಿಗಳು ಕೆಲವು ಮಾತ್ರ. ಅಂತಹ ಪ್ರಾಣಿಗಳಲ್ಲಿ ಜಿಂಕೆಗಳೂ ಇವೆ. ವಿಶ್ವದ ವಿವಿಧ ಪ್ರದೇಶಗಳಲ್ಲಿ ಜಿಂಕೆ ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಸುಂದರ ಮಾರ್ಷ್‌ ಡೀರ್‌ (Marsh Deer) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಬ್ಲಾಸ್ಟೊಕೆರಸ್ ಡೈಕೊಟೊಮಸ್‌ (Blastocerus dichotomus). ಇದು ಜಿಂಕೆಗಳ ಸರ್ವಿಡೇ (Cervidae) ಕುಟುಂಬ ಮತ್ತು ಕ್ಯಾಪ್ರಿಯೊಲಿನೇ (Capreolinae) ಉಪ ಕುಟುಂಬಕ್ಕೆ ಸೇರಿದ್ದು, ಅರ್ಟಿಯೊಡ್ಯಾಕ್ಟಿಲಾ (Artiodactyla) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?: ದೇಹವೆಲ್ಲಾ ಕಂದು ಬಣ್ಣದ ಕೂದಲು ಬೆಳೆದಿರುವ ತುಪ್ಪಳದಿಂದ ಆವರಿಸಿರುತ್ತದೆ. ಕಾಲಿನ ಕೆಳಭಾಗ ಮಾತ್ರ ಕಪ್ಪು ಬಣ್ಣದಲ್ಲಿರುವುದು ವಿಶೇಷ. ಆಕರ್ಷಕ ಕೋಡುಗಳು ಮರದ ಟೊಂಗೆಗಳನ್ನು ಹೋಲುತ್ತವೆ. ಮೂತಿ ನೀಳವಾಗಿದ್ದು, ಮೂಗು ಮತ್ತು ಅದರ ಸುತ್ತಮುತ್ತಲಿನ ಭಾಗ ಕಪ್ಪು ಬಣ್ಣದಲ್ಲಿರುತ್ತದೆ. ಕಣ್ಣುಗಳು ಮಧ್ಯಮ ಗಾತ್ರದಲ್ಲಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಎಲೆಯಾಕಾರದ ಕಿವಿಗಳು ದೊಡ್ಡದಾಗಿದ್ದು, ಸದಾ ಸೆಟೆದುಕೊಂಡಿರುತ್ತವೆ. ಬಾಲ ಪುಟ್ಟದಾಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಗೊತ್ತಾಗುತ್ತದೆ.

ಎಲ್ಲಿದೆ?

ಇದು ದಕ್ಷಿಣ ಅಮೆರಿಕ ಖಂಡದಲ್ಲಿ ಮಾತ್ರ ಕಾಣಸಿಗುವ ಜಿಂಕೆ. ಅರ್ಜೆಂಟೀನಾ, ಬೊಲಿವಿಯಾ, ಪೆರು, ಬ್ರೆಜಿಲ್ ಮತ್ತು ಪರಾಗ್ವೆ ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ನದಿಪಾತ್ರ ಪ್ರದೇಶಗಳು, ಅಮೆಜಾನ್ ಕಾಡುಗಳಲ್ಲಿ ಇದು ಹೆಚ್ಚಾಗಿ ವಾಸಿಸುತ್ತದೆ. ಬಹೌಜಾ ರಾಷ್ಟ್ರೀಯ ಅಭಯಾರಣ್ಯದಲ್ಲೂ ಇದರ ಸಂತತಿ ಇದೆ. ಕೆಸರಿನಿಂದ ಕೂಡಿದ ಜೌಗು ಪ್ರದೇಶಗಳು ಇದರ ನೆಚ್ಚಿನ ವಾಸಸ್ಥಾನವಾಗಿರುವುದರಿಂದ ಇದನ್ನು ಮಾರ್ಷ್ ಡೀರ್ (ಜೌಗುಜಿಂಕೆ) ಎನ್ನುತ್ತಾರೆ.

ಜೀವನಕ್ರಮ ಮತ್ತು ವರ್ತನೆ

ಇದು ಒಂಟಿಯಾಗಿ ಜೀವಿಸಲು ಇಷ್ಟಪಡುವ ಜಿಂಕೆಯಾದರೂ ಗರಿಷ್ಠ ಆರು ಜಿಂಕೆಗಳಿರುವ ಪುಟ್ಟ ಗುಂಪನ್ನೂ ರಚಿಸಿಕೊಂಡಿರುತ್ತದೆ. ಈ ಗುಂಪಿನಲ್ಲಿ ಒಂದು ವಯಸ್ಕ ಗಂಡು ಜಿಂಕೆ ಮಾತ್ರ ಇರುತ್ತದೆ. ಪ್ರತಿ ಗಂಡು ಜಿಂಕೆ ಹೆಚ್ಚು ವ್ಯಾಪ್ತಿಯಲ್ಲಿ ಗಡಿ ಗುರುತಿಸಿಕೊಂಡಿರುತ್ತದೆ. ತನ್ನ ಗಡಿಯೊಳಗೆ ಹೆಣ್ಣು ಜಿಂಕೆಗಳಿಗೆ ಮಾತ್ರ ಪ್ರವೇಶ ಕಲ್ಪಿಸುತ್ತದೆ.

ಸಾಮಾನ್ಯವಾಗಿ ಮುಂಜಾನೆ ಮತ್ತು ಸಂಜೆ ಮಾತ್ರ ಇದು ಹೆಚ್ಚು ಚುರುಕಾಗಿರುತ್ತದೆ. ತಾಪಮಾನ ಹೆಚ್ಚಾಗಿರುವ ಅವಧಿಯಲ್ಲಿ ಸುರಕ್ಷಿತ ಮತ್ತು ನೆರಳಿರುವ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತದೆ. ದೇಹಕ್ಕೆ ಸಾಕಾಗುವಷ್ಟು ಆಹಾರ ದೊರೆಯದೇ ಇದ್ದರೆ, ರಾತ್ರಿಯಲ್ಲೂ ಆಹಾರ ಹುಡುಕುತ್ತಾ ಅಲೆಯುತ್ತದೆ.

ನೀರಿನಲ್ಲಿ ಸರಾಗವಾಗಿ ಈಜುವ ಕಲೆಯೂ ಇದಕ್ಕೆ ಗೊತ್ತಿದೆ. ಹೆಚ್ಚು ಹಸಿರಿನಿಂದ ಕೂಡಿದ ಮತ್ತು ದಟ್ಟವಾಗಿ ಮರಗಳು ಬೆಳೆದಿರುವ ಪ್ರದೇಶಗಳಲ್ಲಿ ವಾಸಿಸುವುದರಿಂದ ಪರಭಕ್ಷಕ ಪ್ರಾಣಿಗಳ ದಾಳಿಯಿಂದ ಸುಲಭವಾಗಿ ರಕ್ಷಿಸಿಕೊಳ್ಳುತ್ತದೆ.

ನೆರೆ ಮತ್ತು ಬರಗಾಲಕ್ಕೆ ತಕ್ಕಂತೆ ವಾಸಸ್ಥಾನವನ್ನು ಬದಲಾಯಿಸುವುದರಿಂದ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿಯೂ ಇದೆ. ಶಬ್ದಗಳಿಗಿಂತ ಹೆಚ್ಚಾಗಿ ದೇಹದ ಭಂಗಿಗಳ ಮೂಲಕವೇ ಸಂವಹನ ನಡೆಸುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಜಲಸಸ್ಯಗಳೇ ಇದರ ಪ್ರಮುಖ ಆಹಾರ. ನೀರಿನಲ್ಲಿ ಬೆಳೆಯುವ ಗಿಡಗಳ ಹೂಗಳು, ಪೊದೆಗಿಡಗಳ ಎಲೆಗಳು, ಕೆಸರಿನಲ್ಲಿ ಬೆಳೆಯುವ ಸಸ್ಯಗಳ ಎಲೆಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತದೆ. ಬರಗಾಲ ಮತ್ತು ನೆರೆ ಸಂದರ್ಭಗಳಿಗೆ ತಕ್ಕಂತೆ ಇದರ ಆಹಾರ ಕ್ರಮದಲ್ಲೂ ಬದಲಾವಣೆಗಳು ಇರುತ್ತವೆ.

ಸಂತಾನೋತ್ಪತ್ತಿ

ಬಹುತೇಕ ಜಿಂಕೆಗಳು ಆಹಾರ ಹೆಚ್ಚಾಗಿ ದೊರೆಯುವ ಸಂದರ್ಭಗಳಲ್ಲಿ ಸಂತಾನೋತ್ಪತ್ತಿ ನಡೆಸಿದರೆ ಇದು ಮಾತ್ರ ಉಷ್ಣಾಂಶ ಹೆಚ್ಚಾಗಿರುವ ಅವಧಿಯಲ್ಲಿ ಸಂತಾನೋತ್ಪತ್ತಿ ನಡೆಸುವುದು ವಿಶೇಷ. ಹೆಣ್ಣು ಜಿಂಕೆ ಸುಮಾರು 270 ದಿನ ಗರ್ಭಧರಿಸಿ ಅಕ್ಟೋಬರ್ ಅಥವಾ ನವೆಂಬರ್‌ಲ್ಲಿ ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತದೆ.

ನವಜಾತ ಮರಿ ತುಪ್ಪಳ ಬಿಳಿ ಬಣ್ಣದಲ್ಲಿದ್ದು, ಬೆಳೆಯುತ್ತಾ ಹೋದಂತೆಲ್ಲಾ ಕಂದು ಬಣ್ಣಕ್ಕೆ ಬದಲಾಗುತ್ತದೆ. ಸುಮಾರು ಐದು ತಿಂಗಳ ವರೆಗೆ ತಾಯಿಯ ಆರೈಕೆಯಲ್ಲೇ ಬೆಳೆದು, ನಂತರ ಘನ ಆಹಾರ ಸೇವಿಸಲು ಆರಂಭಿಸುತ್ತದೆ. ಸುಮಾರು ಒಂದು ವರ್ಷದ ವರೆಗೆ ತಾಯಿಯ ಜೊತೆಯಲ್ಲೇ ಬೆಳೆಯುತ್ತದೆ. ಎರಡು ವರ್ಷದೊಳಗೆ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ದಕ್ಷಿಣ ಅಮೆರಿಕ ಖಂಡದ ಜಿಂಕೆ ಪ್ರಭೇದಗಳ ಪೈಕಿ ಗಾತ್ರದಲ್ಲಿ ಈ ಜಿಂಕಿಯೇ ದೊಡ್ಡದು.

* ಇದರ ಕೋಡುಗಳು ಸುಮಾರು 25 ಇಂಚುಗಳಷ್ಟು ಉದ್ದ ಬೆಳೆಯುತ್ತವೆ. 

* ಇದರ ಗೊರಸುಗಳು ವಿಶೇಷವಾಗಿ ರಚನೆಯಾಗಿದ್ದು, ಗೊರಸುಗಳ ಮಧ್ಯಭಾಗದಲ್ಲಿ ವಿಶೇಷ ಜಲನಿರೋಧಕ ಅಂಗ ಬೆಳೆದಿರುತ್ತದೆ. ಕೆಸರುಭೂಮಿಯಲ್ಲಿ ಎಷ್ಟು ಹೊತ್ತು ಇದ್ದರೂ ಕಾಲುಗಳಿಗೆ ಯಾವುದೇ ಹಾನಿ ಆಗುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.