ಶನಿವಾರ, ಮಾರ್ಚ್ 25, 2023
25 °C

PV Web Exclusive | ನವಿಲು ಕುಣಿಯುತಿದೆ ನೋಡಿ...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ನವದೆಹಲಿಯ ಲೋಕಕಲ್ಯಾಣ್‌ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವಿಲುಗಳಿಗೆ ಬೆಳಗಿನ ವಾಯುವಿಹಾರದ ಸಮಯದಲ್ಲಿ ಕಾಳು ತಿನ್ನಿಸುವುದು, ವಾಕಿಂಗ್‌ ಮಾಡುವಾಗ ಅವು ಗರಿಬಿಚ್ಚಿ ನರ್ತಿಸುವುದು, ಪುಸ್ತಕ ಓದುವಾಗ ಅವರ ಪಕ್ಕದಲ್ಲಿ ನಲಿದಾಡುವ ಮೋಹಕ ದೃಶ್ಯಗಳನ್ನೊಳಗೊಂಡ ವಿಡಿಯೊವನ್ನು ಕೆಲವು ದಿನಗಳ ಹಿಂದೆ ಅವರೇ ತಮ್ಮ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಾಗ ಸಾಕಷ್ಟು ಸುದ್ದಿ ಮಾಡಿತ್ತು. 1.47 ನಿಮಿಷದ ಈ ವಿಡಿಯೊದಲ್ಲಿ ಮೋದಿ ನವಿಲುಗಳೊಂದಿಗೆ ಖುಷಿಯಿಂದ ಕಾಲ ಕಳೆಯುತ್ತಿರುವ ದೃಶ್ಯಗಳಿದ್ದವು.

ಪ್ರಧಾನಿ ಮೋದಿ ಪ್ರತಿದಿನವೂ ಬೆಳಗಿನ ಸ್ವಲ್ಪ ಸಮಯ ನವಿಲಿನ ಜೊತೆ ಕಾಲ ಕಳೆಯುತ್ತಾರಂತೆ. ಅವರ ನಿವಾಸದಲ್ಲಿ ಪಕ್ಷಿಗಳು ಗೂಡು ಕಟ್ಟಲು ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆಯಂತೆ...

ಅರೆರೇ... ನಮ್ಮನೆ ಅಂಗಳದಲ್ಲೂ ನವಿಲುಗಳು ಹೀಗೆ ಓಡಾಡಿಕೊಂಡಿದ್ದರೆ, ನಮ್ಮೆದುರೂ ನವಿಲು ಗರಿಬಿಚ್ಚಿ ನರ್ತಿಸುತ್ತಿದ್ದರೆ? ಒಹೋ ಎಷ್ಟು ಚೆನ್ನಾಗಿರ್ತಿತ್ತಲ್ವೆ ಎಂದು ಆ ವಿಡಿಯೊ ನೋಡಿದಾಗ ಅನ್ನಿಸಿರಬಹುದು. ಜನಸಾಮಾನ್ಯರಿಗೆಲ್ಲಿದೆ ಬಿಡಿ ಈ ಅದೃಷ್ಟ ? ಮನೆಯ ಎದುರು ನವಿಲು ತಿರುಗಾಡುತ್ತ, ಮನಬಂದಂತೆ ಗರಿಬಿಚ್ಚಿ ಕುಣಿಯುತ್ತ, ಕೈಯ್ಯಾರೆ ಕಾಳು ತಿಂದುಕೊಂಡು ಹೋಗುವ ದೈನಿಕವೊಂದಿದ್ದರೆ ಬದುಕು ಅದೆಷ್ಟು ಸುಂದರ ಅಲ್ಲವೇ?

ಇಂತಹ ಅದೃಷ್ಟವಂತರೂ ನಮ್ಮ ನಡುವೆ ಇದ್ದಾರೆ. ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಬಿದ್ರಕಾನ ಎಂಬ ಊರಿನ ಮನೆಯೊಂದರ ಅಂಗಳದಲ್ಲಿ ಬಹುತೇಕ ಪ್ರತಿದಿನ ಈ ದೃಶ್ಯ ನೋಡಲು ಸಿಗುತ್ತದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಕೆಮಿಸ್ಟ್ರಿ) ಓದುತ್ತಿರುವ ಇಲ್ಲಿನ ನೇರ್ಲಮನೆಯ ಶ್ರೀಲಕ್ಷ್ಮಿ ಮಂಜುನಾಥ ಭಟ್ಟ ಎಂಬ ಯುವತಿ ನವಿಲಿಗೆ ಕೈಯ್ಯಾರೆ ಆಹಾರ ತಿನ್ನಿಸಿ ಖುಷಿ ಪಡುತ್ತಾರೆ. ನವಿಲಿನ ಈ ದೈನಿಕಕ್ಕೆ ಮನೆಯವರೆಲ್ಲ ಮನಸೋತಿದ್ದಾರೆ...

ಅಷ್ಟಕ್ಕೂ ಇದೇನು ಸಾಕಿದ ನವಿಲಲ್ಲ. ಕಾಡಿನ ನವಿಲು! ಪ್ರತಿದಿನ ತಪ್ಪದೆ ಮನೆಮುಂದೆ ಹಾಜರಾಗುವ ಈ ನವಿಲು, ಯುವತಿಯಿಂದ ಕೈಯ್ಯಾರೆ ಆಹಾರ ತಿಂದ ಮೇಲೆಯೇ ತೆರಳುವುದು ವಿಶೇಷ.

ನೀಲ ಗಗನದೊಳು ಮೇಘಗಳ ಕಂಡಾಗಲೇ
ನಲಿಯುವ ನವಿಲು ಕುಣಿಯುತಿದೆ ನೋಡಾ...

ದಟ್ಟ ಕಾನನದ ನಡುವಿನ ಮಲೆನಾಡಿನ ಸುಂದರ ಸೊಬಗಿನ ಈ ಊರಿನಲ್ಲಿ ನವಿಲುಗಳ ಓಡಾಟ ಬಹಳ. ಗದ್ದೆ, ತೋಟಗಳಲ್ಲಿ ಓಡಾಡಿಕೊಂಡು ಹುಳ,ಹುಪ್ಪಟಿ ತಿಂದು ನಲಿದಾಡಿಕೊಂಡು ಗರಿಬಿಚ್ಚಿ ಕುಣಿದಾಡುತ್ತವೆ.  ಕುರುಚಲು ಕಾಡು, ನೆಲಮಟ್ಟದ ಪೊದೆಗಳಲ್ಲಿ ಗೂಡು ಕಟ್ಟುತ್ತವೆ. ಇತ್ತೀಚಿನ ವರ್ಷಗಳಲ್ಲಿ ನವಿಲುಗಳನ್ನು ಬೇಟೆಯಾಡದಂತೆ ಕಟ್ಟುನಿಟ್ಟಾಗಿ ಕಾನೂನು ಜಾರಿಗೊಂಡಿರುವುದರಿಂದ ಮಾಂಸಕ್ಕಾಗಿ, ಇಲ್ಲವೇ ಅವುಗಳ ಗರಿಗಳಿಗಾಗಿ ನವಿಲುಗಳ ಬೇಟೆ ಬಹುತೇಕ ನಿಂತಿದೆ. ಹೀಗಾಗಿ ಇವುಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಹೀಗಾಗಿ ತುಸು ಧೈರ್ಯದಿಂದ ನವಿಲುಗಳು ಮನುಷ್ಯರ ಕಣ್ಮುಂದೆ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿವೆ.

ಸಾಧಾರಣವಾಗಿ ವರ್ಷವಿಡೀ ಈ ಭಾಗದಲ್ಲಿ ಕಾಣಿಸಿಕೊಳ್ಳುವ ನವಿಲುಗಳು ಮಳೆ, ಬಿಸಿಲು, ಮೋಡಗಟ್ಟಿದಾಗ ಕ್ವಾಂ...ಕ್‌.... ಕ್ವಾಂ...ಕ್‌ ಎಂದು ಧ್ವನಿ ಹೊರಡಿಸುತ್ತ ಗುಡ್ಡಬೆಟ್ಟವೇರುತ್ತವೆ. ತೋಟ, ಗದ್ದೆಗಳನ್ನು ಹೊಕ್ಕುವ ಈ ನವಿಲುಗಳು, ಅಕಸ್ಮಾತ್ ಅಂಗಳಕ್ಕೆ ಕಾಲಿಟ್ಟರೂ ಮನುಷ್ಯರನ್ನು ಕಂಡ ಕೂಡಲೇ ಕಾಲ್ಕೀಳುತ್ತವೆ. ಹಾಕಿದ ಆಹಾರ ತಿಂದುಕೊಂಡು ಹೋಗುವುದು ದೂರದ ಮಾತು.

ಆದರೂ ಕಾಡಿನ ನವಿಲೊಂದು ಇಲ್ಲಿ ಮನೆಯಂಗಳಕ್ಕೆ ಬಂದು ಕುಣಿದು, ಮನೆಯವರ ಕೈತುತ್ತು ತಿಂದುಕೊಂಡು ಹೋಗುವುದು ಬಹಳ ಅಪರೂಪ.

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು, ಕತ್ತು ಕೊಂಕಿಸುತ್ತ ವೈಯ್ಯಾರ ಮಾಡಿ ಬರುವ ಈ ನವಿಲು ಹಸಿರು ಕಾಡು ದಾಟಿ, ಬೇಣದಿಂದ ಕುಣಿಯುತ್ತ, ದಣಪೆ ದಾಟಿ ಅಂಗಳಕ್ಕೆ ಬರುತ್ತಲೇ, ಕೂಗುತ್ತಿದ್ದರೆ ಭಾರಿ ಹಸಿವಾಗಿದೆ ಎಂದರ್ಥ. ಅದಾಗಲೇ ಅಂಗಳದಲ್ಲಿ ಅಕ್ಕಿ ಸುರಿವಿಟ್ಟರೆ ತನ್ನಪಾಡಿಗೆ ತಿಂದುಕೊಂಡು ಹೋಗುತ್ತದೆ. ಏನೂ ಕಾಣದಿದ್ದರೆ ‘ನಂಗೆ ಊಟಕ್ಕೆ ಇಟ್ಟಿಲ್ವೇ ಇನ್ನೂ?ಹೊಟ್ಟೆ ಹಸಿದಿದೆ’ ಎನ್ನುವಂತೆ ಧ್ವನಿ ಹೊರಡಿಸಿ ಕೂಗಿ ಕರೆಯವುದುಂಟು. ಕೂಗಿ ಕರೆಯದಿದ್ದರೆ ಹೊಟ್ಟೆ ತುಂಬಿದೆ ಎಂದರ್ಥ. ಬಳಿಕ  ಒಂದಿಷ್ಟು ಕಾಲ ಅಂಗಳದಲ್ಲಿ ಸುಮ್ಮನೇ ಸುತ್ತಾಡಿ, ಮನಬಂದರೆ ಗರಿಬಿಚ್ಚಿ ಕುಣಿದು ವಯ್ಯಾರ ಮಾಡಿ ಕಾಡಿಗೆ ತೆರಳುವುದು ದೈನಿಕ.

‘ನಮ್ಮನೆ ಹತ್ತಿರ ನವಿಲುಗಳ ಹಿಂಡು ಕಳೆದ ಏಳೆಂಟು ವರ್ಷಗಳಿಂದ ಕಾಣಿಸಿಕೊಳ್ಳುತ್ತಿವೆ. ಮೊದಲು ಮನೆ ಎದುರಿನ  ಗೇಟಿನ ಹೊರಗಷ್ಟೇ ಅಡ್ಡಾಡುತ್ತಿದ್ದವು. ಎರಡು ವರ್ಷಗಳ ಹಿಂದೆ ಒಂದು ದಿನ ಈ ಗಂಡು ನವಿಲೊಂದು  ಮನೆಯಂಗಳಕ್ಕೆ ಮೆಲ್ಲನೆ ಬಂತು. ಓಹ್‌ ಆದಿನ ಆದ ಖುಷಿಗೆ ಎಣೆಯುಂಟೆ? ಅಲ್ಲಿಂದ ಮತ್ತೆ ಮತ್ತೆ ಈ ನವಿಲು ಬರುವುದು ಶುರು. ನಾನೊಂದು ದಿನ ಮುಷ್ಟಿ ಅಕ್ಕಿ ಹಾಕಿದೆ. ಅದರ ರುಚಿ ನೋಡಿದ ಮೇಲೆ ದಿನಕ್ಕೆರಡು ಬಾರಿಯೆಲ್ಲ ಮನೆ ಬಾಗಿಲಿಗೆ ನವಿಲಿನ ಹಾಜರಿ ಗ್ಯಾರಂಟಿ...’  ಎಂದು ಶ್ರೀಲಕ್ಷ್ಮಿ ಖುಷಿಯಿಂದ ವರ್ಣಿಸುತ್ತಾರೆ.

‘ಮೊದಲ ಮೊದಲು ತುಸು ಅಂಜಿಕೆಯಿಂದ ನಾವು ಮರೆಯಾದಾಗ ಅಕ್ಕಿ ತಿಂದುಕೊಂಡು ಹೋಗುತ್ತಿದ್ದ ಈ ನವಿಲು ಈಗ ಕೈಯ್ಯಾರೆ ಅದನ್ನು ತಿಂದುಕೊಂಡು ಹೋಗುತ್ತದೆ. ರೊಟ್ಟಿ, ಚಪಾತಿ, ಕರಿದ ತಿಂಡಿಗಳಾದರೂ ಸರಿ ತಿನ್ನುತ್ತದೆ. ಅಷ್ಟೇ ಅಲ್ಲ, ಭಾರಿ ಹಸಿವಾಗಿದ್ದರೆ ಹೊರಗಡೆಯಿಂದ ಕೂಗುವುದು ಬೇರೆ! ನಾನಿಲ್ಲದಿದ್ದರೆ ನನ್ನ ಅಮ್ಮನೂ ಇದಕ್ಕೆ ‘ನನ್ನ ಮಗಾ‘ ಅಂತ ಕಕ್ಕುಲಾತಿಯಿಂದ ಅಕ್ಕಿ ಹಾಕಿ ತಿನ್ನಿಸುತ್ತಾಳೆ. ನಾವೆಲ್ಲ ‘ಮಯೂರ’ ಎಂದು ಹೆಸರಿಟ್ಟು ಕರೆಯುವ ಈ ನವಿಲು, ಒಂದು ದಿನ ಮನೆಮುಂದೆ ಬಾರದೇ ಇದ್ದರೂ ಏನೋ ಮಿಸ್‌ ಮಾಡಿಕೊಂಡಿದ್ದೇವೆ ಅನಿಸುತ್ತದೆ’ ಎನ್ನುತ್ತಾರೆ.

ವಿಶೇಷವೆಂದರೆ ಹಿಂಡಿನೊಟ್ಟಿಗೆ ಮನೆಯಾಚೆಗೆ ಓಡಾಡಿಕೊಂಡಿರುವ ಈ ನವಿಲು ಮನೆಯಂಗಳಕ್ಕೆ ಧೈರ್ಯವಾಗಿ ಬಂದು, ಕೂಗಿ ಕರೆದು, ಕೈಯಿಂದಲೇ ಆಹಾರ ತಿಂದುಕೊಂಡು ಮರಳುವುದು ಮಾತ್ರ ಒಂಟಿಯಾಗಿ. ಉಳಿದವೆಲ್ಲ ಆ ಸಮಯದಲ್ಲಿ ಗೇಟಿನಾಚೆಗೆ ಇರುತ್ತವೆ. ಈ ನವಿಲು ಆಹಾರ ತಿಂದು, ಅಂಗಳದಲ್ಲಿ ಅಡ್ಡಾಡಿ, ಗರಿಬಿಚ್ಚಿ ಇಲ್ಲವೇ ಅವುಗಳನ್ನು ಸರಿಪಡಿಸಿಕೊಂಡು ಅಲ್ಲಿಂದು ತೆರಳಿ ಮತ್ತೆ ತನ್ನ ಹಿಂಡಿನೊಟ್ಟಿಗೆ ಸೇರಿಕೊಳ್ಳುತ್ತದೆ.

ಇಷ್ಟಕ್ಕೂ ಮಳೆಗಾಲದಲ್ಲಿ ಮೋಹಕ ಗರಿಗಳಿಂದ ದರ್ಶನ ನೀಡುವ ಈ ನವಿಲಿಗೆ ಚಳಿಗಾಲದಲ್ಲಿ ಪುಕ್ಕವೆಲ್ಲ ಉದುರುತ್ತದೆ. ಮತ್ತೆ ಸಾವಿರ ಕಣ್ಣುಗಳ ಉದ್ದನೆಯ ಗರಿಗಳು ಬಂದ ಮೇಲೆಯೇ ಮನೆಯಂಗಳಕ್ಕೆ ಓಡಿಬರುವುದು! ಇದೊಂದು ಅಚ್ಚರಿ ಎನ್ನುತ್ತಾರೆ.

‘ಎಲ್ಲರ ಮನೆಗೂ ಒಂದಿಲ್ಲೊಂದು ಪ್ರಾಣಿ ಪಕ್ಷಿ ಬಂದೇ ಬರುತ್ತದೆ. ಅವುಗಳನ್ನು ಹೆದರಿಸಿ ಓಡಿಸದೇ ನಮ್ಮ ಕೈಲಾದ್ದು ನೀಡಿದರೆ ಅವುಗಳ ಪ್ರೀತಿ ಗಳಿಸಬಹುದು, ಜೊತೆಗೆ ನಾವೂ ಖುಷಿಪಡಬಹುದು’ ಎನ್ನುತ್ತಾರೆ ಶ್ರೀಲಕ್ಷ್ಮಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು