ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳ ಜಾಗದಲ್ಲಿ ಮಾನವನ ಹಸ್ತಕ್ಷೇಪ

ವನ್ಯಜೀವಿ ಸಪ್ತಾಹ
Last Updated 4 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಧಾರವಾಡ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ವಾಸಸ್ಥಳಗಳ ಮೇಲೆ ಮನುಷ್ಯನ ಹಸ್ತಕ್ಷೇಪ ಹೆಚ್ಚಾದಂತೆಲ್ಲಾ ಆರಂಭದಲ್ಲಿ ಸಂಘರ್ಷ ನಂತರ ಸಂಕಷ್ಟದೊಂದಿಗೆ ಪ್ರಾಣಿಗಳು ಅವನತಿ ಹೊಂದುತ್ತಿವೆ. ಮನುಷ್ಯನ ದುರಾಸೆ, ನಿರ್ಲಕ್ಷ್ಯ ಮತ್ತು ಪರಿಸರ ವೈವಿಧ್ಯತೆಯ ಜ್ಞಾನವಿಲ್ಲದೆ ಜೀವ ಸಂಕುಲಗಳು ಸಂಕೋಲೆಯ ಬದುಕು ನಡೆಸುವಂತಾಗಿದೆ.

***

ಯಾರೋ ಕುಡಿದು ಬಿಸಾಡಿದ ಬಿಯರ್‌ ಟಿನ್‌ನಲ್ಲಿ ಆಹಾರ ಅರಸಿ ನುಗ್ಗಿದ ಹಾವೊಂದು ತಲೆ ಹಾಕಿ ಸಿಕ್ಕಿಹಾಕಿಕೊಂಡಿತು. ಗಾಳಿಪಟಕ್ಕೆ ಹಾಕುವ ಮಾಂಜಾ ದಾರಕ್ಕೆ ಸಿಲುಕಿ ಹದ್ದು ರೆಕ್ಕೆ ಕಳೆದುಕೊಂಡಿತು, ಆಹಾರ ಅರಸಿ ನಗರಕ್ಕೆ ನುಗ್ಗಿದ ಕಾಡುಕೋಣ ಬೆದರಿಸಿದ ಜನರತ್ತ ಸಿಟ್ಟಾಗಿ ಬೈಕ್‌ ಅನ್ನೇ ತನ್ನ ಕೊಂಬಿನಿಂದ ಎತ್ತಿ ಎಸೆಯಿತು.

ಹೀಗೆ ಪಟ್ಟಿ ಮಾಡುತ್ತಾ ಹೋದರೆ, ಧಾರವಾಡ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ವಾಸಸ್ಥಳಗಳ ಮೇಲೆ ಮನುಷ್ಯನ ಹಸ್ತಕ್ಷೇಪ ಹೆಚ್ಚಾದಂತೆಲ್ಲಾ ಆರಂಭದಲ್ಲಿ ಸಂಘರ್ಷ ನಂತರ ಸಂಕಷ್ಟದೊಂದಿಗೆ ಪ್ರಾಣಿಗಳು ಅವನತಿ ಹೊಂದುತ್ತಿವೆ.

ಧಾರವಾಡ ಜಿಲ್ಲೆ ಭೌಗೋಳಿಕವಾಗಿ 4,273 ಲಕ್ಷ ಹೆಕ್ಟೇರ್ ಜಾಗವನ್ನು ಹೊಂದಿದೆ. ಇದರಲ್ಲಿ ಅರಣ್ಯ ಪ್ರದೇಶವಿರುವುದು 0.352ಲಕ್ಷ ಹೆಕ್ಟೇರ್ ಮಾತ್ರ. ಅಂದರೆ ಶೇ 8.24ರಷ್ಟು ಅರಣ್ಯ ಪ್ರದೇಶ ಮಾತ್ರ.ಮಲೆನಾಡಿನ ಸೆರಗಾಗಿರುವ ಧಾರವಾಡ ಜಿಲ್ಲೆಯ ಅರ್ಧ ಬಯಲು ಸೀಮೆಗೆ ಸೇರಿದರೆ, ಉಳಿದರ್ಧ ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿ ಚಿರತೆ, ಜಿಂಕೆ, ಪುನುಗು ಬೆಕ್ಕು, ತರಹೇವಾರಿ ಉರಗ ಇಲ್ಲಿನ ಪ್ರದೇಶಗಳಲ್ಲೇ ಓಡಾಡಿಕೊಂಡಿದ್ದಾರೆ, ದೇಶ ಹಾಗೂ ವಿದೇಶಗಳ ಪಕ್ಷಿಗಳು ಇಲ್ಲಿಗೆ ಭೇಟಿ ನೀಡುವ ಅತಿಥಿಗಳಾಗಿವೆ. ಆದರೆ ಮನುಷ್ಯನ ದುರಾಸೆ, ನಿರ್ಲಕ್ಷ್ಯ ಮತ್ತು ಪರಿಸರ ವೈವಿಧ್ಯತೆಯ ಜ್ಞಾನವಿಲ್ಲದೆ ಜೀವ ಸಂಕುಲಗಳು ಸಂಕೋಲೆಯ ಬದುಕು ನಡೆಸುವಂತಾಗಿದೆ.

ಹೆಚ್ಚುತ್ತಿರುವ ನಗರ ಜೀವಿಗಳಿಗೆ ಮಾರಕ: ಧಾರವಾಡ ನಗರವೇ ಜೀವ ವೈವಿಧ್ಯಗಳ ತಾಣ. ಆದರೆ ಹೆಚ್ಚುತ್ತಿರುವ ನಗರ ಪ್ರದೇಶದಿಂದ ನಿವೇಶನ, ಬಡಾವಣೆ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ ಏರುಮುಖವಾಗಿದೆ. ಸಹಜವಾಗಿ ಪ್ರಕೃತಿ ಮಧ್ಯೆ ಬದುಕು ನಡೆಸುತ್ತಿದ್ದ ಪ್ರಾಣಿಗಳು ದಿಕ್ಕು ಕಾಣದೆ ಸಂಕಷ್ಟಕ್ಕೆ ಸಿಲುಕಿವೆ. ಇದರ ಪರಿಣಾಮ, ಅಪಘಾತ, ಮಾನವ ಹಾಗೂ ನಾಯಿಗಳ ದಾಳಿಗೆ ತುತ್ತಾಗುತ್ತಿವೆ. ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಮೃತಪಡುತ್ತಿವೆ.

ಈ ಕುರಿತು ಪ್ರತಿಕ್ರಿಯಿಸಿದ ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ, 'ಜಿಲ್ಲೆಯಲ್ಲಿ ವಿವಿಧ ಪ್ರಭೇದಗಳ ಹಾವುಗಳಿವೆ. ಆದರೆ, ನಗರ ಪ್ರದೇಶ ಹೆಚ್ಚಾದಂತೆ, ಅವುಗಳ ಸಂತತಿಯೂ ಅಡಗುತ್ತಿದೆ. ಆಹಾರ ಅರಸಿ ನಗರಕ್ಕೆ ಬರುವ ಉರುಗಗಳ ಮಹತ್ವ ಅರಿಯದೆ ಜನ ಕೊಲ್ಲುತ್ತಿದ್ದಾರೆ. ರೈತನ ಮಿತ್ರವಾಗಿರುವ ಹಾವುಗಳ ಸಂತತಿ ದಿನೇ ದಿನೇ ಕುಸಿಯುತ್ತಿದೆ. ಇಲ್ಲಿದ್ದ ರಾಕ್‌ ಪೈಥಾನ್ ಕಣ್ಮರೆಯಾಗಿದೆ. ಇನ್ನಷ್ಟು ಅಪರೂಪದ ಪ್ರಭೇದಗಳು ಈಗ ಕಣ್ಣಿಗೆ ಕಾಣುತ್ತಿಲ್ಲ' ಎಂದು ಕಳವಳ ವ್ಯಕ್ತಪಡಿಸಿದರು.

'ಪುನುಗು ಬೆಕ್ಕುಗಳು ಅನಾದಿ ಕಾಲದಿಂದಲೂ ಧಾರವಾಡದ ಸುತ್ತಮುತ್ತಲಿನಲ್ಲೇ ವಾಸಿಸುತ್ತಿವೆ. ಆಗೊಮ್ಮೆ ಈಗೊಮ್ಮೆ ಮನುಷ್ಯ ವಾಸಸ್ಥಳಗಳ ಬಳಿ ಸುರಕ್ಷಿತ ತಾಣದಲ್ಲಿ ಮರಿ ಹಾಕುತ್ತವೆ. ಆದರೆ, ಅವುಗಳನ್ನೂ ಕೆಲವರು ಹೊಡೆದು ತಿನ್ನಲು ಆರಂಭಿಸಿದ್ದಾರೆ. ನಮ್ಮ ಗಮನಕ್ಕೆ ಬಂದಿದ್ದನ್ನು ರಕ್ಷಿಸುತ್ತಿದ್ದೇವೆ. ಆದರೆ ಬಾರದೆ ಅವೆಷ್ಟು ಪ್ರಾಣ ತೆತ್ತಿವೆಯೋ ಲೆಕ್ಕವಿಲ್ಲ’ ಎಂದು ಬೇಸರ ಅವರು ವ್ಯಕ್ತಪಡಿಸಿದರು.

‘ಇಷ್ಟು ಮಾತ್ರವಲ್ಲ; ಗಾಳಿಪಟಕ್ಕೆ ಬಳಸುವ ಮಾಂಜಾದಿಂದಾಗಿ ಬ್ರಾಹ್ಮಿಣಿ ಕೈಟ್ ಸೇರಿದಂತೆ ಹಲವು ಪಕ್ಷಿಗಳು ರೆಕ್ಕೆ ಕಳೆದುಕೊಂಡಿವೆ. ಕೆಲವು ಪ್ರಾಣಗಳನ್ನೇ ಕಳೆದುಕೊಂಡಿವೆ. ಗಿಳಿಗಳ ರೆಕ್ಕೆ ಮುರಿದು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಅಮೆಗಳ ಸಾಕಾಣಿಕೆಗೆ ನಿಷೇಧವಿದ್ದರೂ ಅಧಿಕಾರಿಗಳು, ರಾಜಕಾರಣಿಗಳ ಮನೆಯಲ್ಲೂ ನೀರಿನ ತೊಟ್ಟಿಯಲ್ಲಿ ಬಂಧಿಯಾಗಿವೆ' ಎಂದು ಬೇಸರ ವ್ಯಕ್ತಪಡಿಸಿದರು.

ಇಂಥ ತೊಂದರೆಗೆ ಸಿಲುಕಿದ ಪ್ರಾಣಿಗಳನ್ನು ಕೃಷಿ ವಿಶ್ವವಿದ್ಯಾಲಯದಲ್ಲಿರುವ ಪ್ರಾಣಿ ಚಿಕಿತ್ಸಾ ವಿಭಾಗದ ಡಾ.ಅನಿಲ್ ಪಾಟೀಲ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಪೆಟ್ಟು ಮಾಡಿಕೊಂಡ ಪ್ರಾಣಿಗಳಿಗೆ ಚಿಕಿತ್ಸೆ, ಕಾಲು ಕಳೆದುಕೊಂಡ ಹಕ್ಕಿಗಳಿಗೆ ಕೃತಕ ಕಾಲು ಜೋಡಣೆ, ಪರಸ್ಪರ ಕಾದಾಟದಲ್ಲಿ ಗಾಯಗೊಂಡ ಚಿರತೆಗೆ ಸುಶ್ರೂಷೆ ಮೂಲಕವೇ ಗಮನ ಸೆಳೆದಿದ್ದಾರೆ. ಆ ಮೂಲಕ ಸಂಕಷ್ಟದಲ್ಲಿರುವ ವನ್ಯಜೀವಿಗಳಿಗೆ ಆಸರೆಯಾಗಿದ್ದಾರೆ.

ಅಳ್ನಾವರ, ಕಲಘಟಗಿ ಭಾಗದಲ್ಲಿ ಕಾಡು ಹಂದಿ, ಜಿಂಕೆಗಳ ಶಿಕಾರಿ ನಡೆಯುತ್ತಲೇ ಇರುತ್ತವೆ ಎಂದು ಆ ಭಾಗಗಳ ಜನರು ಹೇಳುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದರು.

ಅರಣ್ಯ ಇಲಾಖೆ ಕ್ರಮ
ಸತತ ನಾಲ್ಕು ವರ್ಷಗಳ ಬರಗಾಲದಲ್ಲಿ ವನ್ಯ ಜೀವಿಗಳು ಸಾಕಷ್ಟು ತೊಂದರೆ ಅನುಭವಿಸಿದವು. ಅವುಗಳಿಗೆ ನಿರುಣಿಸಲು, ಕಾಡಿನಲ್ಲೇ ನೀರಿನ ಪುಟ್ಟ ಕೊಳಗಳನ್ನು ಅರಣ್ಯ ಇಲಾಖೆ ನಿರ್ಮಿಸಿತ್ತು. ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಪ್ರಾಣಿಗಳು ಇಲ್ಲಿ ಬಂದು ನೀರು ಕುಡಿದು, ಬಾಯಾರಿಕೆ ಅರಿಸಿಕೊಂಡಿರುವ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಕುಮಾರ್ ಮಾಹಿತಿ ನೀಡಿದರು.

‘ಅಂಚಟಗೇರಿ ಮತ್ತು ಬಿಂಕದಕಟ್ಟೆ ಪ್ರದೇಶದಲ್ಲಿ 156 ಎಕರೆ ಪ್ರದೇಶವನ್ನು ಮೃಗಾಲಯಕ್ಕಾಗಿ ಗುರುತಿಸಲಾಗಿದೆ. ಮೃಗಾಲಯ ಪ್ರಾಧಿಕಾರ ಅನುಮತಿ ನೀಡಿದರೆ, ಪ್ರಸ್ತಾವನೆ ಸಲ್ಲಿಸಲಾಗುವುದು. ಇತ್ತೀಚೆಗೆ ವನ್ಯಜೀವಿಗಳ ಬೇಟೆ ಮಾಡಿದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಅವುಗಳ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT