ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

World Environment Day| ‘ನಮ್ಮ ಮನೆ, ನಮ್ಮ ಮರ’ ತಂಡದ ಪರಿಸರ ಕಾಳಜಿ

6 ವರ್ಷಗಳಲ್ಲಿ 16 ಸಾವಿರ ಗಿಡ ನೆಟ್ಟಿರುವ ತಂಡ
Last Updated 5 ಜೂನ್ 2022, 5:15 IST
ಅಕ್ಷರ ಗಾತ್ರ

ಉಡುಪಿ: ‘ನಮ್ಮ ಮನೆ, ನಮ್ಮ ಮರ’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಕಳೆದ 6 ವರ್ಷಗಳಿಂದ ಸದ್ದಿಲ್ಲದೆ ಪರಿಸರ ಪರಿಚಾರಿಕೆ ಮಾಡುತ್ತಿದೆ ಉಡುಪಿಯ ಮೂವರು ಪರಿಸರ ಪ್ರೇಮಿಗಳ ತಂಡ.

ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುವುದರ ಜತೆಗೆ ಪರಿಸರ ಜಾಗೃತಿ ಮೂಡಿಸುತ್ತಿರುವ ರವಿರಾಜ್ ಎಚ್‌.ಪಿ, ನೈಸರ್ಗಿಕ ನಾಗಬನಗಳ ರಕ್ಷಣೆಯ ಜತೆಗೆ ಹಾವುಗಳ ಕುರಿತು ಸಾರ್ವಜನಿಕರಲ್ಲಿರುವ ತಪ್ಪುಕಲ್ಪನೆಗಳನ್ನು ಬರಹಗಳ ಮೂಲಕ ನಿವಾರಿಸುತ್ತಿರುವ ಉರಗ ತಜ್ಞ ಗುರುರಾಜ್ ಸನೀಲ್ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವಿನಾಶ್ ಕಾಮತ್ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಮೂವರ ವೃತ್ತಿ ಬೇರೆಯಾದರೂ ಪ್ರವೃತ್ತಿ ಮಾತ್ರ ಪರಿಸರಕ್ಕೆ ಪೂರಕವಾಗಿದ್ದು ‘ನಮ್ಮ ಮನೆ ನಮ್ಮ ಮರ’ ಎಂಬ ಶೀರ್ಷಿಕೆಯಡಿ ಉಡುಪಿ ನಗರದಲ್ಲಿ ಸಾವಿರಾರುಮನೆಗಳ ಅಂಗಳದಲ್ಲಿ, ದೇವಸ್ಥಾನ, ಶಾಲಾ–ಕಾಲೇಜು, ಮಸೀದಿ, ಪ್ರಾರ್ಥನಾ ಮಂದಿರಗಳಲ್ಲಿ ಗಿಡಗಳನ್ನು ನೆಟ್ಟಿದೆ.

ಕರಾವಳಿಯ ಹಸಿರು ಹೊದಿಕೆ ಹಾಗೆಯೇ ಉಳಿಯಬೇಕು ಹಾಗೂ ನೈಸರ್ಗಿಕವಾದ ನಾಗಬನಗಳು ಮಾನವನ ಹಸ್ತಕ್ಷೇಪ ಇಲ್ಲದೆ ಉಳಿಯಬೇಕು ಎಂಬುದು ‘ನಮ್ಮ ಮನೆ, ನಮ್ಮ ಮರ’ ತಂಡದ ಸದಸ್ಯರ ಸದಾಶಯ.

ಬಿಡುವಿನ ವೇಳೆಯಲ್ಲಿ ಒಟ್ಟಾಗುವ ಸಮಾನ ಮನಸ್ಕರ ತಂಡ ಮನೆ ಮನೆಗೂ ತೆರಳಿ ಪರಿಸರ ಜಾಗೃತಿ ಮೂಡಿಸುತ್ತಿದೆ. ಜತೆಗೆ, ಮನೆಯ ಅಂಗಳದಲ್ಲಿ ಮಾಲೀಕರ ಇಷ್ಟದ ಗಿಡಗಳನ್ನು ನೆಟ್ಟು ಪೋಷಿಸುವಂತೆ ಪ್ರೇರೇಪಿಸುತ್ತಿದೆ.

16,000 ಗಿಡಗಳ ಪೋಷಣೆ:

6 ವರ್ಷಗಳಿಂದ ಪರಿಸರ ಕಾಳಜಿಯಲ್ಲಿ ತೊಡಗಿಸಿಕೊಂಡಿರುವ ತಂಡ ಇದುವರೆಗೂ 16 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಟ್ಟಿದೆ. ನೆಟ್ಟ ಗಿಡಗಳನ್ನು ಪೋಷಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದೆ.

ಎರಡು ಸಣ್ಣ ಅರಣ್ಯಗಳ ನಿರ್ಮಾಣ:

ಕಾರ್ಕಳ ತಾಲ್ಲೂಕಿನ ಇನ್ನಾ ಗ್ರಾಮದಲ್ಲಿ 60 ಜಾತಿಯ 1,111 ಗಿಡಗಳನ್ನು ಒಂದೆಡೆ ನೆಟ್ಟು ಸಣ್ಣ ಅರಣ್ಯ ನಿರ್ಮಿಸಿರುವ ‘ನಮ್ಮ ಮನೆ, ನಮ್ಮ ಮರ’ ತಂಡ ಹೆಬ್ರಿ ಸಮೀಪದ ಶಿವಪುರದಲ್ಲೂ 54 ಜಾತಿಯ ನೂರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿದೆ. ಇವರ ಕಾರ್ಯಕ್ಕೆ ಹಲವು ಸಂಘಟನೆಗಳು, ಪರಿಸರ ಕಾಳಜಿ ಹೊಂದಿರುವ ಮನಸ್ಸುಗಳು ಜತೆಯಾಗಿವೆ.

ನಾಗಬನಗಳ ಉಳಿವಿಗೆ ಶ್ರಮ:

ಅಭಿವೃದ್ಧಿ ಹಾಗೂ ಪ್ರತಿಷ್ಠೆಯ ಹೆಸರಿನಲ್ಲಿ ಕರಾವಳಿಯಲ್ಲಿ ನಾಗಬನಗಳು ಕಾಂಕ್ರೀಟಿಕರಣಗೊಳ್ಳುತ್ತಿರುವುದರ ಬಗ್ಗೆ ಪ್ರತಿರೋಧ ಒಡ್ಡುತ್ತಿರುವ ‘ನಮ್ಮ ಮನೆ ನಮ್ಮ ಮರ’ ತಂಡದ ಸದಸ್ಯರು ನಾಗಬನಗಳಲ್ಲಿ ಗಿಡಗಳನ್ನು ನೆಟ್ಟು ಪಂಚಶಕ್ತಿ ಅರಣ್ಯಗಳನ್ನು ಬೆಳೆಸುತ್ತಿದ್ದಾರೆ. ಜತೆಗೆ, ನೈಸರ್ಗಿಕ ನಾಗಬನಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುತ್ತಿದ್ದಾರೆ.

ತಂಡದ ಗುರುರಾಜ್ ಸನೀಲ್ ಹಾವುಗಳ ಬಗ್ಗೆ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸರಣಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಹಾವಿನ ಕುರಿತಾಗಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT