ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗದ ನಿಗೂಢ ಕುರಿಂಜಿಲೋಕ

Last Updated 11 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮೇ ಲೆ ನೀಲಾಕಾಶ. ಕೆಳಗೆ ಕುರಿಂಜಿ ಹೂಗಳ ನಿಬಿಡ ಹಾಸು. ಕೊಡಗಿನ ಕೋಟೆಬೆಟ್ಟ ಅಥವಾ ಮಾಂದಲ್‌ಪಟ್ಟಿಯ ಗಿರಿಕಂದರಗಳಲ್ಲಿ ಈ ದಿನಗಳಲ್ಲಿ ವರ್ಣರಂಜಿತ ರತ್ನಗಂಬಳಿ ಹಾಸಿದಂತೆ ಎಲ್ಲೆಲ್ಲೂ ಕಾರ್ವಿ (ಗುರಗಿ) ಹೂಗಳ ಅಪ್ಸರ ಲೋಕ. ಸಂಜೆ, ಮುಂಜಾವುಗಳಲ್ಲಂತೂ ಕಾಮನಬಿಲ್ಲಿನ ಎಲ್ಲ ಬಣ್ಣಗಳ ಚೆಲುವಿನ ಚಾದರ. ನಾವಿಲ್ಲಿ ನಗರವಾಸಿಗಳು ಗಣೇಶ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರೆ ಅಲ್ಲಿ ನಿಸರ್ಗವೇ ನೀಲಕುರಿಂಜಿ ಹೂಹಾಸಿಗೆ ಹಾಸಿ ಮಧುಮಹೋತ್ಸವವನ್ನು ಆಚರಿಸುತ್ತಿದೆ. ದುಂಬಿ, ಚಿಟ್ಟೆ, ಜೇನ್ನೊಣಗಳೇ ಮುಂತಾದ ಕೋಟಿಕೀಟಗಳಿಗೆ ಮಕರಂದದ ಧಾರೆಯನ್ನು ಹರಿಸಿ, ಪರಾಗದ ಅರಿಶಿಣ ಕುಂಕುಮ ಹಚ್ಚಿ ಹರಸುತ್ತಿದೆ.

ಇದು ಪಶ್ಚಿಮ ಘಟ್ಟಗಳ ಆಗಸ್ಟ್‌–ಸೆಪ್ಟೆಂಬರ್‌ನ ವಿಶೇಷ ವಿಸ್ಮಯ. ಆಗಸ್ಟ್‌ನಿಂದ ಸೆಪ್ಟೆಂಬರ್‌ ಕೊನೆಯವರೆಗಿನ ಶ್ರಾವಣ–ಭಾದ್ರಪದದಲ್ಲಿ ಕುರಿಂಜಿಯ ಒಂದಲ್ಲ ಒಂದು ಪ್ರಭೇದದ ಹೂಹಬ್ಬ ನಡೆಯುತ್ತದೆ. ಈ ವರ್ಷ ಸೆಸ್ಸಿಲಿಸ್‌ ಪ್ರಭೇದದ ಪಾಳಿ. ಏಳು ವರ್ಷಗಳಿಗೊಮ್ಮೆ ಹೂ ಅರಳಿಸಿ ಗುಡ್ಡ-ಬೆಟ್ಟಗಳಲ್ಲಿ ಬಣ್ಣದೋಕುಳಿ ಸೃಷ್ಟಿಸುವ ಈ ವೈಚಿತ್ರ್ಯವನ್ನು ನೋಡಲೆಂದು ಈ ಬಾರಿ ಕೊಡಗಿನಲ್ಲಿ ಜನಜಾತ್ರೆ. ಜೇನ್ನೊಣ, ದುಂಬಿ, ಜೀರುಂಡೆಗಳ ಗುನುಗುನಾದವನ್ನೂ ಮೀರಿಸಿ ಡ್ರೋನ್‌ಗಳ ಝೇಂಕಾರ. ಚಳಿ-ಮಳೆ, ಕೆಸರು ರಸ್ತೆಯನ್ನೂ ಲೆಕ್ಕಿಸದೆ ಜೀಪು, ಕಾರು, ಬೈಕುಗಳನ್ನೇರಿ ಗುಡ್ಡಬೆಟ್ಟಗಳತ್ತ ಧಾವಿಸುತ್ತಿದೆ ಜನಸಮೂಹ. ಕ್ಯಾಮೆರಾ, ಬೈನಾಕ್ಯುಲರ್‌, ಡ್ರೋನ್‌ ಹೊತ್ತ ಪ್ರಕೃತಿ ಪ್ರೇಮಿಗಳ ಹರ್ಷೋದ್ಗಾರಗಳು ಅಲ್ಲಿನ ಕಣಿವೆಗಳಲ್ಲಿ ಪ್ರತಿಧ್ವನಿಸಿ, ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್‌ಗಳೇ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಅಲೆಅಲೆಯಾಗಿ ಪಸರಿಸುತ್ತಿವೆ.

ಪಶ್ಚಿಮ ಘಟ್ಟಗಳ ಪ್ರಕೃತಿಯಲ್ಲಿ ನಾನಾ ಬಗೆಯ ನಿಗೂಢಗಳು ಲೆಕ್ಕವಿಲ್ಲದಷ್ಟಿವೆ. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿದ್ದೇ ಇಷ್ಟು ವರ್ಷ ಎಲ್ಲರ ಕಡೆಗಣನೆಗೆ ಒಳಗಾಗಿತ್ತು. ಅದು ಕುರಿಂಜಿ ಸಸ್ಯದ ಕಥೆ. ಸಸ್ಯವಿಜ್ಞಾನದಲ್ಲಿ ಅದಕ್ಕೆ ಸ್ಟ್ರೋಬಿಲಾಂಥಿಸ್‌ ಎನ್ನುತ್ತಾರೆ. ಕನ್ನಡದಲ್ಲಿ ಅದಕ್ಕೆ ಒಂದು ಸರ್ವಮಾನ್ಯ ಹೆಸರೂ ಇಲ್ಲ. ಕೊಡಗಿನಲ್ಲಿ ಕಾರ್ವಿ, ಚಿಕ್ಕಮಗಳೂರಿನ ಕೆಲವೆಡೆ ಹಾರ್ಲೆ, ಇನ್ನು ಕೆಲವೆಡೆ ಗುರಿಕಿ; ಶಿವಮೊಗ್ಗದಲ್ಲಿ ಗುರ್ಗಿ, ಸಾಗರ-ಶಿರಸಿಗಳಲ್ಲಿ ಗುರಿಗೆ. ಒಂದೊಂದು ಊರಲ್ಲಿ ಒಂದೊಂದು ಹೆಸರು. ಅವುಗಳಲ್ಲೇ ಕೆಲವು ಪ್ರಭೇದಗಳನ್ನು ಸಾಗರ-ಸಿದ್ದಾಪುರ-ಶಿರಸಿಗಳಲ್ಲಿ ಕಾಡುಗುರಿಗೆ, ಎಮ್ಮೆಗುರಿಗೆ, ಆನೆಗುರಿಗೆ ಎಂದು ಹಳ್ಳಿಯವರು ಗುರುತಿಸುತ್ತಾರೆ. ಆದರೆ ನಮ್ಮ ಅಕ್ಷರಲೋಕದ ಬಹುತೇಕ ಎಲ್ಲರೂ ಕಡೆಗಣಿಸಿದ ಕಾಡು ಹೂವು ಅದು. ಅದಕ್ಕೆ ‘ಕುರಿಂಜಿ’ ಎಂಬ ತಮಿಳು/ಮಲೆಯಾಳಿ ಹೆಸರೇ ಪ್ರಸಿದ್ಧಿ ಬರಲಿಕ್ಕೂ ಒಂದು ಕಾರಣವಿದೆ. ಪ್ರತೀ 12 ವರ್ಷಗಳಿಗೊಮ್ಮೆ ಹೂ ಬಿಡುವ ‘ನೀಲ ಕುರಿಂಜಿ’ (ಸ್ಟ್ರೋಬಿಲಾಂಥಿಸ್‌ ಕುಂತಿಯಾನಸ್‌ Strobilanthes kunthianus) ಹೂವಿನ ಬಗ್ಗೆ ಆ ರಾಜ್ಯಗಳ ನಿಸರ್ಗ ಪ್ರೇಮಿಗಳು ಅಪಾರ ಆಸಕ್ತಿ ವಹಿಸಿ ಕುರಿಂಜಿಯ ಜಾನಪದ, ಇತಿಹಾಸ, ಭೂಗೋಲ, ವಿಜ್ಞಾನ ಎಲ್ಲವನ್ನೂ ತೆರೆದಿಟ್ಟಿದ್ದಾರೆ.

ನಮ್ಮಲ್ಲಿ ಏಳು ವರ್ಷಗಳ ಬಳಿಕ ಈಗ ಅರಳಿ ನಿಂತಿದ್ದು ಸೆಸ್ಸಿಲಿಸ್‌ (Strobilanthes Sessilis) ಪ್ರಭೇದದ ಗುರಗಿ ಹೂವು. ಮೊಣಕಾಲೆತ್ತರ ಬೆಳೆಯುವ ಇದು ಕೊಡಗು ಬಿಟ್ಟರೆ ಕೊಂಕಣ ಪಟ್ಟಿಯುದ್ದಕ್ಕೂ ಮಹಾರಾಷ್ಟ್ರದ ಸಾತಾರಾ ಪಟ್ಟಣದವರೆಗೂ ಅಲ್ಲಲ್ಲಿ ಸಾವಿರ ಮೀಟರ್‌ವರೆಗಿನ ಇಳಿಜಾರಿನಲ್ಲಿ ಹಾಗೂ ಸಮತಟ್ಟಾದ ತಪ್ಪಲಿನಲ್ಲಿ ಹೂ ಅರಳಿಸುತ್ತದೆ.

ಕುರಿಂಜಿ ಅಥವಾ ಗುರಿಗೆ ಸಸ್ಯಗಳಲ್ಲಿ ಸುಮಾರು 70 ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಕೆಲವು ಪ್ರಭೇದಗಳು ಎರಡು ಅಥವಾ ಮೂರು ನಾಲ್ಕು ವರ್ಷಗಳಿಗೊಮ್ಮೆ, ಮತ್ತೆ ಕೆಲವು ಆರೇಳು ವರ್ಷಗಳಿಗೊಮ್ಮೆ ಹೂ ಅರಳಿಸಿ ಸಾಯುತ್ತವೆ. ಕೆಲವಂತೂ 12 ಅಥವಾ 18 ವರ್ಷಗಳಿಗೊಮ್ಮೆ ಹೂಬಿಡುತ್ತವೆ. ಕೆಲವು ಗುರಗಿಗಳು ದಟ್ಟಕಾಡಿನ ನಡುವೆ ಮೂರಾಳೆತ್ತರಕ್ಕೆ ಬೆಳೆದರೆ ಇನ್ನು ಕೆಲವು ಪ್ರಭೇದಗಳು ಶೋಲಾ ಕಾಡಂಚಿನಲ್ಲಿ ಆಳೆತ್ತರ, ಬೋಳುಗುಡ್ಡದ ಇಳಿಜಾರಿನಲ್ಲಿ ಮೊಣಕಾಲೆತ್ತರ ಬೆಳೆದು ನಿಲ್ಲುತ್ತವೆ. ತುಸುಮಟ್ಟಿಗೆ ಕನಕಾಂಬರ (ಅಬ್ಬಲಿಗೆ) ಹೂವಿನಂತೇ ತೆನೆಗಳಲ್ಲಿ ಹಂತಹಂತವಾಗಿ ತಿಂಗಳುಗಟ್ಟಲೇ ಹೂಬಿಡುವ ಈ ಸಸ್ಯಗಳು ಅನೇಕ ಗುಡ್ಡಬೆಟ್ಟಗಳ ಕಾನನದಲ್ಲಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹೂಗಳನ್ನು ಪ್ರತಿವರ್ಷವೂ ಅರಳಿಸುತ್ತಿರುತ್ತವೆ. ಆದರೆ ನಿಶ್ಚಿತ ಅವಧಿಯಲ್ಲಿ ವ್ಯಾಪಕವಾಗಿ ಏಕಕಾಲಕ್ಕೆ ಹೂಬಿಡುವ ಪ್ರಭೇದಗಳು ಮಾತ್ರ ನಮ್ಮ ಗಮನ ಸೆಳೆಯುತ್ತವೆ.

ಕುರಿಂಜಿ ಏಳು ವರ್ಷದ್ದಾಗಿರಲಿ, ಹನ್ನೆರಡು ವರ್ಷದ್ದಾಗಿರಲಿ ಅದರ ಕೋಟಿಗಟ್ಟಲೆ ಸಸ್ಯಗಳು ಏಕತ್ರವಾಗಿ ಬಿಗ್‌ ಬ್ಯಾಂಗ್‌ ಎಂಬಂತೆ ಪುಷ್ಪಸ್ಫೋಟ ಮಾಡುವುದನ್ನು ನೋಡುವುದೇ ಚಂದ. ಏಳು ವರ್ಷಗಳ ಹಿಂದೆ ನೆಲಕ್ಕೆ ಸೇರಿ ಗುಡ್ಡ ಕಣಿವೆಗಳ ಇಳುಕಲಿನ ಮಣ್ಣಿನ ಪದರದಲ್ಲಿ ಅವಿತಿದ್ದ ಬೀಜಗಳು ತಮ್ಮ ಅಗೋಚರ ಗಡಿಯಾರದಲ್ಲಿ ಅದೆಂಥದೋ ಸದ್ದಿಲ್ಲದ ಅಲಾರ್ಮ್‌ ಮೊಳಗಿದ ಹಾಗೆ ಮುಂಗಾರಿನ ಮೊದಲ ಗುಡುಗಿಗೆ ಮೊಳಕೆಯೊಡೆಯುತ್ತವೆ. ಶ್ರಾವಣ ಬಂದಾಗ ಹೂ ಅರಳಿಸತೊಡಗುತ್ತವೆ.

ಹಾಗೆ ಹೂ ಅರಳಿಸುವ ಮುನ್ನ ಅದೇನು ಸಿಗ್ನಲ್‌ ಕೊಡುತ್ತವೊ, ಅಂತೂ ಇಡೀ ಜೀವಮಂಡಲಕ್ಕೆ ಸಂದೇಶ ಹೋಗುತ್ತದೆ. ‘ಇನ್ನೆರಡು ತಿಂಗಳಲ್ಲಿ ಮಧುಪಾತ್ರೆಯಲ್ಲಿ ಮೃಷ್ಟಾನ್ನ ಭೋಜನ ಸಿಗಲಿದೆ, ಎಲ್ಲರೂ ಬರಬೇಕು’ ಅನ್ನುವಂಥ ಆಮಂತ್ರಣ ದಶದಿಕ್ಕುಗಳಲ್ಲಿ ಹರಡುತ್ತದೆ. ರಾಣಿಜೇನು ತನ್ನ ಗೂಡಿನಲ್ಲಿ ಲಕ್ಷಾಂತರ ಮರಿಗಳನ್ನು ಸಜ್ಜುಗೊಳಿಸಬೇಕು. ಜೇನ್ನೊಣಗಳಷ್ಟೇ ಅಲ್ಲ, ಜೀವಲೋಕದಲ್ಲಿ ಸಾವಿರಾರು ಪ್ರಭೇದಗಳ ಮಧುಭಕ್ಷಕ ಜೀವಿಗಳಿವೆ. ದುಂಬಿಗಳು, ಚಿಟ್ಟೆ-ಪತಂಗಗಳು, ಜೋಡಿರೆಕ್ಕೆಯ ಡಿಪ್ಟೆರಾಗಳು, ಕುಂಬಾರ ನೊಣಗಳು, ಹೇನುಗಳು, ನೊಣಗಳು, ಇರುವೆಗಳು... ಮಧುವನ್ನು ಹೀರುವ ನಾನಾ ತೆರನಾದ ಪಕ್ಷಿಗಳಿವೆ; ಬಾವಲಿಗಳಿವೆ. ಹೂಗಳಿಗೆ ಬರುವ ಕೀಟಗಳನ್ನು ಭಕ್ಷಿಸಲೆಂದೇ ಹೊಂಚು ಹಾಕಿ ಕೂರುವ ಜೇಡಗಳು, ಜೇಡಗಳನ್ನು ಭಕ್ಷಿಸಲೆಂದು ಬರುವ ಪಕ್ಷಿಗಳು, ಪಕ್ಷಿಗಳನ್ನು ಹಿಡಿಯಲೆಂದು ಬರುವ ಬೇಟೆಗಾರ ಪಕ್ಷಿಗಳು... ಎಲ್ಲವೂ ಕುರಿಂಜಿ ಮಧು ಮಹೋತ್ಸವಕ್ಕೆ ಲಗ್ಗೆ ಹಾಕುತ್ತವೆ. ಎಲ್ಲ ಎಲ್ಲಿ ಅವಿತಿದ್ದವೊ, ಯಾವಮ್ಮನ ಗರ್ಭದಲ್ಲಿ ಮೊಟ್ಟೆಯ ರೂಪದಲ್ಲಿದ್ದವೊ? ಕುರಿಂಜಿಗೆ ಸಂವಾದಿಯಾಗಿ ಅವೂ ಏಳು ವರ್ಷಗಳಿಗೊಮ್ಮೆ ಸಂತಾನಸ್ಫೋಟ ಮಾಡಿಕೊಳ್ಳುತ್ತವೊ? ಎಲ್ಲ ನಿಗೂಢ.

ಆಗಸ್ಟ್‌ ತಿಂಗಳಲ್ಲಿ ಏಕಕಾಲಕ್ಕೆ ತಮಿಳುನಾಡಿನ ನೀಲಗಿರಿ, ದೊಡ್ಡ ಬೆಟ್ಟ, ಅಣ್ಣಾಮಲೈ ಬೆಟ್ಟ, ನೆಲ್ಲಿಯಂಪಥಿ ಬೆಟ್ಟ, ಕಾರ್ಡಮಮ್‌ ಹಿಲ್ಸ್‌, ಕೇರಳದ ಮನ್ನಾರ್‌ ಬಳಿಯ ಕುರಿಂಜಿಮಲೆ, ಅಗಸ್ತ್ಯಮಲೈ, ಪೊನ್ಮುಡಿ ಬೆಟ್ಟ, ಪಾಲಕ್ಕಾಡ್‌ ಬೆಟ್ಟಶ್ರೇಣಿ, ಕರ್ನಾಟಕದಲ್ಲಿ ಕೊಡಗಿನ ಮಂದಲ್‌ಪಟ್ಟಿ, ಬ್ರಹ್ಮಗಿರಿ, ಪುಷ್ಪಗಿರಿ, ಕುಮಾರಪರ್ವತ, ಕುದುರೆಮುಖ, ತಡಿಯಂಡಮೋಳ್‌, ಆಗುಂಬೆ, ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಕೊಡಚಾದ್ರಿಯ ಶೋಲಾಗಳಲ್ಲಿ, ಜೋಗ, ಬೇಡ್ತಿ- ಅಘನಾಶಿನಿ ಕೊಳ್ಳ, ಕ್ಯಾಸ್ಲ್‌ ರಾಕ್ಸ್‌, ಗೋವಾ, ಮಹಾರಾಷ್ಟ್ರ... ಎಲ್ಲಿಂದ ಎಲ್ಲಿಯವರೆಗೆ ಹೂಗಳನ್ನು ಏಕಕಾಲಕ್ಕೆ ಅರಳಿಸುವ ಈ ವಿಸ್ಮಯಕ್ಕೆ ‘ಗ್ರಿಗೇರಿಯಸ್‌ ಫ್ಲವರಿಂಗ್‌’ ಎನ್ನುತ್ತಾರೆ. ಅಂದರೆ ಸಾಮೂಹಿಕ ಹೂಮೇಳ.

ಬಿದಿರುಮೆಳೆಗಳಲ್ಲಿ ನಾವು ಈ ವೈಚಿತ್ರ್ಯವನ್ನು ಕಾಣುತ್ತೇವೆ. ಒಂದು ಪ್ರಭೇದಕ್ಕೆ ಸೇರಿದ ಬಿದಿರು ಏಕಕಾಲಕ್ಕೆ ಅನೇಕ ಜಿಲ್ಲೆಗಳಲ್ಲಿ ಹೂ ಅರಳಿಸಿ, ಬೀಜ ಉದುರಿಸಿ ಸಾಯುತ್ತದೆ. ಕೆಲವು 45 ವರ್ಷಗಳಿಗೆ ಹೂಬಿಟ್ಟರೆ, ಇನ್ನು ಕೆಲವು 60 ವರ್ಷಗಳಿಗೆ ಒಂದು ಬಾರಿ. ಕೆಲವು ತಾಳೆ ಮರಗಳು 60 ವರ್ಷಗಳಿಗೆ ಹೂ ಅರಳಿಸಿ ಒಣಗುತ್ತವೆ. ಕತ್ತಾಳೆಯ ಕೆಲವು ಪ್ರಭೇದಗಳು ನೂರು ವರ್ಷಗಳಿಗೊಮ್ಮೆ ಹೂ ಅರಳಿಸಿ ಸಾಯುತ್ತವೆ ಎಂಬ ಪ್ರತೀತಿ ಇದ್ದರೂ ಸ್ಪಷ್ಟ ದಾಖಲೆಗಳಿಲ್ಲ. ಮನುಷ್ಯ ತನ್ನ ಇಡೀ ಜೀವಮಾನದಲ್ಲಿ ಎರಡನೇ ಬಾರಿ ಕಾಣಲಾಗದ ಈ ವಿದ್ಯಮಾನವನ್ನು ದಾಖಲಿಸಿಡುವುದೂ ಹಿಂದಿನ ದಿನಗಳಲ್ಲಿ ಸುಲಭವಾಗಿರಲಿಲ್ಲ.

ಬೆಟ್ಟದಲ್ಲಿ ಅರಳಿ, ಬೆಟ್ಟದಲ್ಲೇ ಮಣ್ಣಾಗುವ ಕುರಿಂಜಿ ಕುರಿತು ನಾವು, ಕನ್ನಡಿಗರು ಮಾಡಬೇಕಾದ ಕೆಲಸವೂ ಬೆಟ್ಟದಷ್ಟಿದೆ! ಈ 2021ರ ಪುಷ್ಪಸಂಭ್ರಮವನ್ನು ನೋಡಲೆಂದು ಹೋದವರಲ್ಲಿ ಬಹುತೇಕ ಮಂದಿ ಇದನ್ನು ‘12 ವರ್ಷಗಳಿಗೊಮ್ಮೆ ಅರಳುವ ನೀಲ ಕುರಿಂಜಿ’ಎಂದು ತಪ್ಪಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ, ವಿಡಿಯೊಗಳ ಸಮೇತ ಹುಯಿಲೆಬ್ಬಿಸಿದ್ದಾರೆ. ಇತರರು ಹಾಗಿರಲಿ, ಅರಣ್ಯ ಇಲಾಖೆಯ ತಜ್ಞರೂ ಹಾಗೇ ಹೇಳಿ ತಮ್ಮ ಜಾಲತಾಣದಲ್ಲೂ ‘ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುವ ಕುಂತಿಯಾನಸ್‌ ಪ್ರಭೇದ’ ಎಂದು ತಪ್ಪಾಗಿ ಪ್ರಕಟಿಸಿದ್ದಾರೆ. ಇದು ನೀಲ ಕುರಿಂಜಿ ಕುಂತಿಯಾನಸ್‌ ಅಲ್ಲ, ಏಳು ವರ್ಷಗಳಿಗೊಮ್ಮೆ ಹೂ ಅರಳಿಸುವ ನೇರಳೆ ಬಣ್ಣದ ಸೆಸ್ಸಿಲಿಸ್‌ ಪ್ರಭೇದ. ಅದರರ್ಥ ಈಗಾಗಿದ್ದು ಪುಷ್ಪಸ್ಫೋಟದ ಜೊತೆಗೆ ಅಜ್ಞಾನಸ್ಫೋಟ! ಇದನ್ನು ಮೊದಲು ನಾವು ಸರಿಪಡಿಸಬೇಕು.

ಈ ತಪ್ಪನ್ನು ಸರಿಪಡಿಸಲೆಂದೇ ಆಗಸ್ಟ್‌ನ ಕೊನೇವಾರದಲ್ಲಿ ಐದು ಮಂದಿ ತಜ್ಞರ ತಂಡವೊಂದು ಕೊಡಗಿನ ಕೋಟೆಬೆಟ್ಟ ಮತ್ತು ಮಂದಲ್‌ಪಟ್ಟಿಗೆ ತ್ವರಿತ ಸಮೀಕ್ಷೆಗೆಂದು ಹೋಗಿತ್ತು. ಸಸ್ಯವಿಜ್ಞಾನಿ ಡಾ. ಜೋಮಿ ಆಗಸ್ಟಿನ್‌, ಕಾಸರಗೋಡಿನ ಬಿಜು, ಕೇರಳದ ಉನ್ನಿಕೃಷ್ಣನ್‌, ಮಂಗಳೂರಿನ ಚೇತನಾ ಬಡೇಕರ್‌ ಮತ್ತು ಬೆಂಗಳೂರಿನ ‘ಪರಿಸರ’ ಸಂಸ್ಥೆಯ ಈಶ್ವರ ಪ್ರಸಾದ್‌ ಅಲ್ಲೆಲ್ಲ ಓಡಾಡಿದರು. ಆ ಹೂಹಾಸಿಗೆಯಲ್ಲಿ ಕುಂತಿಯಾನಸ್‌ ಪ್ರಭೇದದ ಒಂದು ಸಸ್ಯವೂ ಇಲ್ಲವೆಂಬುದನ್ನು ಖಾತ್ರಿಪಡಿಸಿದರು. ಉದ್ದ ತೊಟ್ಟಿನ ಎಲೆಗಳುಳ್ಳ, ನೇರಳೆ ಬಣ್ಣದ ಹೂಗಳು ಸೆಸ್ಸಿಲಿಸ್‌ ಪ್ರಭೇದದ್ದೇ ಹೌದೆಂದು ಘೋಷಿಸಿದರು.

ಆದರೆ, ಪ್ರಕೃತಿ ವಿಜ್ಞಾನಿಗಳು ಬರೀ ಹೂವನ್ನಷ್ಟೇ ನೋಡಿ ಬಂದರೆ ಆದೀತೆ? ಸಾಲದು. ಹೂಗಳಿದ್ದಲ್ಲಿ ಧಾವಿಸಿ ಬರುವ ಇತರ ಜೀವಿಗಳ ಪಟ್ಟಿ ತಯಾರಿಸಬೇಕು. ಬಂದ ಅತಿಥಿಗಳಿಗೆಲ್ಲ ಮಕರಂದವನ್ನು ಉಣಬಡಿಸುವ ಈ ಹೂವು, ಆ ಅತಿಥಿಗಳ ಬೆನ್ನಮೇಲೆ ಸಹಜವಾಗಿ ಪರಾಗದ ಮೂಟೆ ಹೊರಿಸಿ ಕಳಿಸುತ್ತದೆ. ಒಂಥರಾ ‘ಉಂಡೂ ಹೋದ, ಕೊಂಡೂ ಹೋದ’ ಕತೆ ಇದು! ಹೂಕುಟಿಗ ಹಕ್ಕಿಯೊಂದು ಪುಷ್ಪಪಾತ್ರೆಗೆ ಮೂತಿ ಒತ್ತಿ ಮಧು ಹೀರಿ ಹೊರಟಾಗ ಅದರ ಕೊಕ್ಕು ಅದು ಹೇಗೆ ಬಂಗಾರ ಬಣ್ಣದ್ದಾಗುತ್ತದೆ ಎಂದು ತೇಜಸ್ವಿಯವರು ಹಿಂದೊಮ್ಮೆ ವರ್ಣಿಸಿದ್ದರು. ವಿಜ್ಞಾನಿಗಳು ಅದೇ ಎಳೆ ಹಿಡಿದು ಇನ್ನಷ್ಟು ರೋಚಕ ಸಂಗತಿಗಳನ್ನು ಬಿಚ್ಚಿಡಬೇಕು. ಈ ಬಿಗ್‌ಬ್ಯಾಂಗ್‌ ಅವಧಿಯಲ್ಲಿ ಇಡೀ ಜೀವಮಂಡಲದಲ್ಲಿ ಏನೇನು ಬದಲಾವಣೆ ಆಗಿವೆ, ಆಗುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ವಾರವಾರವೂ ಗಮನಿಸಬೇಕು. ಈ ವರ್ಷ ಹೆಜ್ಜೇನು, ತುಡುವಿಗಳ ಸಂಖ್ಯೆ ಅದೆಷ್ಟು ಹೆಚ್ಚಾಗಿದೆ; ಬುಡಕಟ್ಟು ಜನರ ಆದಾಯ ಅದೆಷ್ಟು ಹೆಚ್ಚಾಗಿದೆ ನೋಡಬೇಕು.

ಇಷ್ಟಕ್ಕೇ ಮುಗಿಯುವುದಿಲ್ಲ; ಇನ್ನು ಆರೆಂಟು ತಿಂಗಳಿನ ನಂತರ ಈ ಸೆಸ್ಸಿಲಿಸ್‌ ಗಿಡಗಳು ಒಣಗಿ, ಬೀಜ ಉದುರಿಸಿ ನೆಲಕ್ಕೆ ಸೇರಿದ ನಂತರ ಆ ನೆಲಕ್ಕೆ ಭೂತಗನ್ನಡಿ ಹಿಡಿಯಬೇಕು. ಮುಂದಿನ ಆರು ವರ್ಷಗಳ ಕಾಲ ಆಗಾಗ ಎರಗುವ ಗಾಳಿ, ಬೆಂಕಿ, ಬರ, ಜಡಿಮಳೆಗಳನ್ನು, ಮೇವು ಭಕ್ಷಕ ಪ್ರಾಣಿಗಳ ದಾಳಿಯನ್ನು ಹೇಗೆ ಎದುರಿಸಿ ಇದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ ಎಂಬುದನ್ನು ದಾಖಲಿಸುತ್ತ ಹೋಗಬೇಕು. ಮುಂದಿನ ಬಾರಿ ಅದು ಹೂ ಅರಳಿಸುವ ಸಮಯ ಬಂದಾಗ, (2021+7= ಪ್ರಾಯಶಃ 2028ರಲ್ಲಿ) ಮಳೆಗಾಲಕ್ಕೆ ಮುಂಚೆಯೇ ತಿಳಿಸಿದರೆ- ಆಗ ಕರ್ನಾಟಕದಲ್ಲೂ ಚಾರಣಿಗರ, ಸಂಶೋಧಕರ, ಪ್ರವಾಸಿಗರ ಸಂಖ್ಯಾಸ್ಫೋಟ ಸುನಿಶ್ಚಿತ.

ಹೌದು, ಈ ಸುಂದರ ಕುರಿಂಜಿ ಉಳಿಯಬೇಕು. ಕಾಡಿನ ಬೆಂಕಿಯಿಂದಷ್ಟೇ ಅಲ್ಲ; ಬೆಂಕಿಗಿಂತಲೂ ಭಯಂಕರ ಕೆನ್ನಾಲಿಗೆಯುಳ್ಳ ಮನುಷ್ಯರಿಂದ ಕುರಿಂಜಿಯನ್ನು ಉಳಿಸಬೇಕು. ಮನುಷ್ಯರಿಂದಲೇ ಅದು ಉಳಿಯಬೇಕು.

(ಪೂರ್ಣಚಂದ್ರ ತೇಜಸ್ವಿಯವರ 83ನೇ ಹುಟ್ಟುಹಬ್ಬದ (ಸೆಪ್ಟಂಬರ್‌ 8) ಸಂದರ್ಭಕ್ಕೆಂದು ಬರೆದ ಕಿರುಹೊತ್ತಿಗೆಯ ಸಂಕ್ಷಿಪ್ತ ರೂಪ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT