ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ವೈದ್ಯ ದಂಪತಿಯ ‘ಶೌಚಾಲಯ ಸೇವೆ’

ಸರ್ಕಾರಿ ಶಾಲೆಗಳಿಗೆ ಆದ್ಯತೆ; ವಿಶ್ವ ಶೌಚಾಲಯ ದಿನಾಚರಣೆ ಇಂದು
Last Updated 19 ನವೆಂಬರ್ 2020, 6:01 IST
ಅಕ್ಷರ ಗಾತ್ರ
ADVERTISEMENT
""
""

ಬೆಳಗಾವಿ: ನೈರ್ಮಲ್ಯ, ಉತ್ತಮ ವಾತಾವರಣ ಹಾಗೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ, ಕಾಯಿಲೆಗಳನ್ನು ತಡೆಯುವ ಹಾಗೂ ದೇಹ ಬಾಧೆ ನೀಗಿಸಿಕೊಳ್ಳುವ ಸಂದರ್ಭದಲ್ಲಿ ‘ಮುಜುಗರ’ ತಪ್ಪಿಸುವಲ್ಲಿ ಶೌಚಾಲಯಗಳ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ವೈದ್ಯ ದಂಪತಿ ಡಾ.ಶಶಿಕಾಂತ ಕುಲಗೋಡ–ಡಾ.ವಿಜಯಲಕ್ಷ್ಮಿ ಕುಲಗೋಡ ‘ಶೌಚಾಲಯ ಸೇವೆ’ಯಲ್ಲಿ ತೊಡಗಿದ್ದಾರೆ.

ಇವರು, ವಿಶೇಷವಾಗಿ ಸರ್ಕಾರಿ ಶಾಲೆಗಳಿಗೆ ಈ ಸೌಲಭ್ಯ ಕಲ್ಪಿಸುವ ಮೂಲಕ ಗಮನಸೆಳೆದಿದ್ದಾರೆ. ತಮ್ಮ ಗಳಿಕೆಯಲ್ಲಿ ಇಂತಿಷ್ಟು ಹಣವನ್ನು ಸೇವಾ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ರಾಜಲಕ್ಷ್ಮಿ ಮಕ್ಕಳ ಪ್ರತಿಷ್ಠಾನದ ಮೂಲಕ ಶಾಲೆಗಳಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.

ಅತ್ಯಾಧುನಿಕ ಸೌಲಭ್ಯ

ಹಲವು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಅಲ್ಲಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಕಾನ್ವೆಂಟ್‌ಗಳಿಗಿಂತ ಕಡಿಮೆ ಇಲ್ಲದ ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಆಧುನಿಕ ಸ್ಪರ್ಶ ಕೊಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಗೆಂದೇ ಅವರು ಈವರೆಗೆ ₹ 30 ಲಕ್ಷಕ್ಕೂ ಮಿಕ್ಕಿ ಅನುದಾನ ಒದಗಿಸಿದ್ದಾರೆ!

ಎರಡು ವರ್ಷಗಳ ಹಿಂದೆ ಮಹಾಂತೇಶ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್‌ ವೇಣುಗ್ರಾಮ ಸಹಯೋಗದಲ್ಲಿ ಶೌಚಾಲಯ ಬ್ಲಾಕ್‌ ನಿರ್ಮಿಸಿಕೊಟ್ಟಿದ್ದರು. ಇತ್ತೀಚೆಗೆ ಶಿವಬಸವ ನಗರದ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಲ್ಲೂಕಿನ ಮುತ್ತೇನಟ್ಟಿ ಹಾಗೂ ಭೂತರಾಮನಹಟ್ಟಿ ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ವಿಶ್ವ ಶೌಚಾಲಯ ದಿನದ ಅಂಗವಾಗಿ ಈ ಶಾಲೆಗಳಿಗೆ ಮಹತ್ವದ ಕೊಡುಗೆ ನೀಡುವ ಕೆಲಸವನ್ನು ಈ ದಂಪತಿ ಮಾಡಿದ್ದಾರೆ.

ಈ ಸಾಲಿನಲ್ಲಿ ಮಹಾಂತೇಶ ನಗರ ಸರ್ಕಾರಿ ಪ್ರೌಢಶಾಲೆ, ವಂಟಮೂರಿ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಬ್ಲಾಕ್‌ ನಿರ್ಮಿಸಿಕೊಡುವ ಯೋಜನೆ ಕೈಗೆತ್ತಿಕೊಂಡಿದ್ದಾರೆ.

ಬೆಳಗಾವಿಯ ಶಿವಬಸವನಗರದ ಸರ್ಕಾರಿ ಶಾಲೆಯಲ್ಲಿ ಹೈಟೆಕ್ಶೌಚಾಲಯನಿರ್ಮಿಸಲಾಗಿದೆ

ಅವರ ದಾಸೋಹ ಗಮನಿಸಿದ ಸ್ನೇಹಿತರು, ಬಂಧುಗಳು ಹಾಗೂ ದಾನಿಗಳು ಕೈಜೋಡಿಸುತ್ತಿದ್ದಾರೆ. ವಿದೇಶದಲ್ಲಿರುವ ಅವರ ಸ್ನೇಹಿತರು ಕೂಡ ಹೃದಯ ವೈಶಾಲ್ಯ ಮೆರೆಯುತ್ತಿದ್ದಾರೆ. ಪರಿಣಾಮ, ಈ ದಂಪತಿಯು ಸರ್ಕಾರಿ ಶಾಲೆಗಳ ಪ್ರಗತಿಗೆ ವಿಶೇಷವಾಗಿ ಅಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಉಪಕ್ರಮಗಳಿಗೆ ಆದ್ಯತೆ ನೀಡಿದ್ದಾರೆ.

ಗಳಿಕೆಯಲ್ಲಿ ಒಂದು ಭಾಗವನ್ನು

‘ಬಸವಣ್ಣನ ದಾಸೋಹ ತತ್ವದಲ್ಲಿ ನಮಗೆ ಜಾಸ್ತಿ ನಂಬಿಕೆ. ಹೀಗಾಗಿ, ಗಳಿಕೆಯಲ್ಲಿ ಒಂದಿಷ್ಟು ಪಾಲನ್ನು ಸಮಾಜ ಸೇವೆಗೆಂದು ಇಡುತ್ತಿದ್ದೇವೆ. ವಿಶೇಷವಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ‘ಆರೋಗ್ಯ ವರ್ಧಕ ಶಾಲೆ’ ಉಪ ಕ್ರಮದಲ್ಲಿ ಶೌಚಾಲಯಗಳಿಗೆ ಆದ್ಯತೆ ಕೊಡುತ್ತಿದ್ದೇವೆ. ಉತ್ತಮ ಶೌಚಾಲಯವೊಂದಿದ್ದರೆ, ಮಕ್ಕಳನ್ನು ಹಲವು ಸಮಸ್ಯೆಗಳಿಂದ ದೂರ ಮಾಡಬಹುದು’ ಎನ್ನುತ್ತಾರೆ ಡಾ.ಶಶಿಕಾಂತ.

‘ಸರ್ಕಾರಿ ಶಾಲೆಗಳಿಗೆ ಬರುವವರಲ್ಲಿ ಬಹುತೇಕರು ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿರುತ್ತಾರೆ. ಎಲ್ಲರ ಮನೆಗಳಲ್ಲೂ ಶೌಚಾಲಯ ಇರುವುದಿಲ್ಲ. ಬಯಲು ಮಲ ವಿಸರ್ಜನೆಯಿಂದಾಗಿ ಅವರಿಗೆ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಕರುಳಿನ ಸೋಂಕು ಹೆಚ್ಚಾಗಿ ಬಾಧಿಸುತ್ತಿರುತ್ತದೆ. ಪರಿಣಾಮ, ಅವರು ವಯಸ್ಸಿಗೆ ತಕ್ಕಂತೆ ಎತ್ತರ ಮತ್ತು ತೂಕ ಇರುವುದಿಲ್ಲ. ಮಿದುಳಿನ ಬೆಳವಣಿಗೆಯೂ ಸಮರ್ಪಕ ಪ್ರಮಾಣದಲ್ಲಿ ಆಗಿರುವುದಿಲ್ಲ. ಇದರಿಂದ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಈ ಕಾರಣಗಳಿಂದಾಗಿ ನಾವು ಅತ್ಯಾಧುನಿಕ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ಕೊಡುತ್ತಿದ್ದೇವೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ನಿರ್ವಹಣೆಗೆ ಪೂರಕವಾಗುವಂತೆ

‘ಮೊದಲಿಗೆ ಬಚ್ಚಲು ಗುಂಡಿ ನಿರ್ಮಿಸುತ್ತೇವೆ. ಏಕೆಂದರೆ, ಶೌಚಾಲಯದ ನೀರು ಸಂಸ್ಕರಣೆಯೂ ಮಹತ್ವದ್ದಾಗುತ್ತದೆ. ಜೊತೆಗೆ, ನೀರಿನ ವ್ಯವಸ್ಥೆಯ ಬಗ್ಗೆಯೂ ಖಾತ್ರಿಪಡಿಸಿಕೊಳ್ಳುತ್ತೇವೆ. ಸುಲಭವಾಗಿ ಸ್ವಚ್ಛಗೊಳಿಸಲು ಪೂರಕವಾದ ಸಾಮಗ್ರಿಗಳನ್ನು ಬಳಸುತ್ತಿದ್ದೇವೆ. ಗಾಳಿ–ಬೆಳಕು ಲಭ್ಯವಾಗುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಶೌಚಾಲಯವೆಂದರೆ, ಮೂಗು ಮುಚ್ಚಿಕೊಂಡು ಹೋಗುವಂತಹ ಸ್ಥಿತಿ ಇರಬಾರದು. ಹೀಗಾಗಿ, ಅತ್ಯಾಧುನಿಕ ವ್ಯವವ್ಥೆಗೆ, ವಾಶ್ ಬೇಸಿನ್ ಅಳವಡಿಕೆಗೆ ಆದ್ಯತೆ ಕೊಟ್ಟಿದ್ದೇವೆ’ ಎಂದು ತಿಳಿಸಿದರು.

ಸರ್ಕಾರಿ ಶಾಲಾ ಮಕ್ಕಳೊಂದಿಗೆ ಕುಲಗೋಡವೈದ್ಯದಂಪತಿ

‘ನಮ್ಮೊಂದಿಗೆ ದಾನಿಗಳು, ಎನ್‌ಜಿಗಳು, ಸ್ನೇಹಿತರು–ಬಂಧುಗಳು ಕೈಜೋಡಿಸುತ್ತಿದ್ದಾರೆ. ಅಮೆರಿಕದಲ್ಲಿರುವ ಸ್ನೇಹಿತರೂ ನೆರವಾಗುತ್ತಿದ್ದಾರೆ. ನಮ್ಮ ಗಳಿಕೆ ಹಾಗೂ ಸ್ನೇಹಿತರು ನಮ್ಮ ಮೇಲೆ ವಿಶ್ವಾಸವಿಟ್ಟು ನೀಡಿದ ಹಣದಿಂದ ಒದಗಿಸಿದ ಸೌಲಭ್ಯವನ್ನು ಸರ್ಕಾರಿ ಶಾಲೆಗಳ ಮಕ್ಕಳಿಗೆ ಸದ್ಬಳಕೆ ಮಾಡಿಕೊಂಡರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ’ ಎಂದರು.

‘ಹಿಂದೆ ಶೌಚಾಲಯವೆಂದರೆ ಮಡಿವಂತಿಕೆಯ ಭಾವನೆ ಹಿಂದೆ ಇತ್ತು. ಕಟ್ಟಿಸಿದರೂ, ಊರ ಹೊರಗೆ ಅಥವಾ ಮನೆಯಿಂದ ದೂರದಲ್ಲಷ್ಟೇ ಸ್ಥಾನವಿರುತ್ತಿತ್ತು. ಈಗ, ‘ಅದು’ ಮನೆಯ ಭಾಗವೇ ಆಗಿದೆ. ಇದರಿಂದ ಸುಸ್ಥಿರ ನೈರ್ಮಲ್ಯ ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲೂ ಶೌಚಾಲಯ ಬಳಕೆಗೆ ಆದ್ಯತೆ ನೀಡಬೇಕು. ಆರೋಗ್ಯವು ಶೋಚನೀಯ ಸ್ಥಿತಿಗೆ ತಲುಪುವುದರಿಂದ ತಪ್ಪಿಸಿಕೊಳ್ಳಲು ಶೌಚಾಲಯ ಬಳಸಬೇಕು. ಈ ಕುರಿತು ಜಾಗೃತಿಗೆ ವಿಶ್ವ ಶೌಚಾಲಯ ದಿನ ಆಚರಿಸುವುದು ಅರ್ಥಪೂರ್ಣವಾಗಿದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ ಮೊ: 9480188790.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT