ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಸರ್ಕಾರದ ಬಿಳಿಯಾನೆ ಏರ್‌ ಇಂಡಿಯಾ

ನಷ್ಟವೂ ಇಳಿಯುತ್ತಿಲ್ಲ, ಮಾರಾಟವೂ ಆಗುತ್ತಿಲ್ಲ
Last Updated 29 ಜನವರಿ 2020, 4:01 IST
ಅಕ್ಷರ ಗಾತ್ರ

ಸರ್ಕಾರಕ್ಕೆ ಬಿಳಿ ಆನೆಯಾಗಿರುವ, ಹಲವು ವರ್ಷಗಳಿಂದ ನಷ್ಟದಲ್ಲೇ ನಡೆಯುತ್ತಿರುವ ‘ಏರ್‌ ಇಂಡಿಯಾ’ ಸಂಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಆಸಕ್ತರಿಂದ ಬಿಡ್‌ ಆಹ್ವಾನಿಸಲಾಗಿದೆ. ಎರಡು ವರ್ಷಗಳ ಹಿಂದೆಯೂ ಸರ್ಕಾರ ಬಿಡ್‌ಗಳನ್ನು ಆಹ್ವಾನಿಸಿತ್ತು. ಆದರೆ ಸಂಸ್ಥೆಯ ಶೇ 76ರಷ್ಟು ಪಾಲು ಬಂಡವಾಳವನ್ನು ಮಾತ್ರ ಖಾಸಗಿಯವರಿಗೆ ನೀಡುವುದಾಗಿ ಆಗ ಹೇಳಿತ್ತು. ಪರಿಣಾಮ, ಈ ಸಂಸ್ಥೆಯ ಖರೀದಿಗೆ ಯಾರೂ ಮುಂದೆ ಬಂದಿರಲಿಲ್ಲ. ಈಗ ಸರ್ಕಾರವು ಪಟ್ಟು ಸಡಿಲಿಸಿದೆ. ಶೇ 100ರಷ್ಟು ಪಾಲು ಮಾರಾಟ ಮಾಡುವುದಾಗಿ ಮತ್ತು ಸಾಲದ ಹೊರೆಯಲ್ಲೂ ಸ್ವಲ್ಪ ಪ್ರಮಾಣವನ್ನು ತಾನೇ ಹೊರುವುದಾಗಿ ಹೇಳಿದೆ. ಈ ಬಾರಿಯ ಪ್ರಸ್ತಾವವು ಖರೀದಿದಾರರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ

ದೇಶದ ಅರ್ಥ ವ್ಯವಸ್ಥೆಯು ಇಳಿಕೆಯ ಹಾದಿಯಲ್ಲಿರುವ ಈ ಸಂದರ್ಭದಲ್ಲಿ, ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ಮಾರಾಟ ಮಾಡುವ ಮೂಲಕ ಹೊರೆಯನ್ನು ಸ್ವಲ್ಪ ಪ್ರಮಾಣದಲ್ಲಿ ಇಳಿಸುವ ಪ್ರಯತ್ನವನ್ನುಸರ್ಕಾರವು ಮಾಡುತ್ತಿದೆ.

ಏರ್‌ ಇಂಡಿಯಾದ ಮಾರಾಟವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆದ್ಯತಾ ಪಟ್ಟಿಯಲ್ಲೇ ಇತ್ತು. ವಿಪರೀತವಾದ ಇಂಧನ ದರ, ವಿಮಾನ ನಿಲ್ದಾಣ ಬಳಕೆ ದರ ದುಬಾರಿಯಾಗಿರುವುದು, ಅಗ್ಗದ ದರದ ವಿಮಾನ ಯಾನ ಕಂಪನಿಗಳಿಂದ ತೀವ್ರವಾದ ಸ್ಪರ್ಧೆಯ ಜತೆಗೆ ಸಾಲದ ಮೇಲಿನ ದೊಡ್ಡ ಪ್ರಮಾಣದ ಬಡ್ಡಿ... ಇವೆಲ್ಲವೂ ಏರ್‌ ಇಂಡಿಯಾ ಸಂಸ್ಥೆಯನ್ನು ನಿಜಾರ್ಥದಲ್ಲಿ ಬಿಳಿ ಆನೆಯಾಗಿಸಿದ್ದವು. ಜೊತೆಗೆ ಸಂಸ್ಥೆಯ ಹಣಕಾಸಿನ ನಿರ್ವಹಣೆಯೂ ದುರ್ಬಲವಾಗಿತ್ತು ಎಂದು ವಿಶ್ಲೇಷಿಸಲಾಗಿದೆ.

ಏರ್‌ ಇಂಡಿಯಾ ಸಂಸ್ಥೆಯ ನಷ್ಟದ ಹಾದಿ ಆರಂಭವಾದದ್ದು 2007ರಲ್ಲಿ. ಆ ವರ್ಷ ಏರ್‌ ಇಂಡಿಯಾದಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ಸಂಸ್ಥೆಯನ್ನು ವಿಲೀನಗೊಳಿಸಲಾಯಿತು. ಇದಾದ ಮೊದಲ ವರ್ಷದಲ್ಲೇ ಸಂಸ್ಥೆ ಸುಮಾರು ₹ 33 ಕೋಟಿ ನಷ್ಟ ಅನುಭವಿಸಿತು. ಇದಾದ ನಂತರ ಸಂಸ್ಥೆಯು ಲಾಭದ ಮುಖ ಕಾಣಲೇ ಇಲ್ಲ.

ಮಾರಾಟಕ್ಕೆ ಅಡೆತಡೆ

ಸಂಸ್ಥೆಯ ಮಾರಾಟಕ್ಕೆ ಸರ್ಕಾರ ಮುಂದಾಗುತ್ತಿದ್ದಂತೆಯೇ ವಿವಿಧ ಕಾರ್ಮಿಕ ಸಂಘಟನೆಗಳು ತಮ್ಮ ಚಟುವಟಿಕೆಯನ್ನು ಚುರುಕುಗೊಳಿಸಿವೆ ಎಂದು ತಿಳಿದುಬಂದಿದೆ.

ಸಂಸ್ಥೆಯಲ್ಲಿ ಸುಮಾರು 14 ಸಾವಿರ ಸಿಬ್ಬಂದಿ ಇದ್ದಾರೆ. ಖರೀದಿದಾರರು ಇವರನ್ನು ಉಳಿಸಿಕೊಳ್ಳುವರೇ ಎಂಬ ಪ್ರಶ್ನೆ ಈಗ ಸಿಬ್ಬಂದಿಗೆ ಎದುರಾಗಿದೆ. ಈ ಕುರಿತು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲು ಕಾರ್ಮಿಕ ಸಂಘಟನೆಗಳು ಸದ್ಯದಲ್ಲೇ ಸಭೆ ನಡೆಸಲಿವೆ ಎಂದೂ ವರದಿಯಾಗಿದೆ.

ಮತ್ತೆ ‘ಟಾಟಾ’ ಮಡಿಲಿಗೆ

ಏರ್‌ ಇಂಡಿಯಾವನ್ನು ‘ಟಾಟಾ ಗ್ರೂಪ್‌’ ಖರೀದಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಜತೆಗೆ, ಹಿಂದೂಜಾ ಸಮೂಹ ಸಂಸ್ಥೆ, ಇಂಡಿಗೊ ಮತ್ತು ಸ್ಪೈಸ್‌ ಜೆಟ್‌ ಸಹ ಏರ್‌ ಇಂಡಿಯಾವನ್ನು ಖರೀದಿಸುವ ಸ್ಪರ್ಧೆಗೆ ಇಳಿಯಬಹುದು ಎಂಬ ನಿರೀಕ್ಷೆ ಇದೆ.

ಏರ್‌ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆಯೇ ಸ್ಥಾಪಿಸಿದ್ದ ಕಾರಣ, ಈ ಕಂಪನಿಯೇ ಏರ್ ಇಂಡಿಯಾವನ್ನು ಖರೀದಿಸಲಿದೆ. ಟಾಟಾ ಸಮೂಹ ಸಂಸ್ಥೆಯು ‘ವಿಸ್ತಾರಾ’ ವಿಮಾನಯಾನ ಸಂಸ್ಥೆಯಲ್ಲಿ ಶೇ 51ರಷ್ಟು ಪಾಲುದಾರಿಕೆ ಹೊಂದಿದೆ. ವಿಸ್ತಾರಾ ಸಂಸ್ಥೆಯೇ ಏರ್‌ ಇಂಡಿಯಾವನ್ನು ಖರೀದಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಏರ್ ಇಂಡಿಯಾದ ಎಲ್ಲಾ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಸುದ್ದಿ 2019ರ ಅಕ್ಟೋಬರ್‌ನಲ್ಲೇ ಬಹಿರಂಗವಾಗಿತ್ತು. ಏರ್‌ ಇಂಡಿಯಾವನ್ನು ಖರೀದಿಸುವ ಬಗ್ಗೆ ದೇಶದ ದೈತ್ಯ ಉದ್ದಿಮೆ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿದ್ದವು. ಈ ಸಂಸ್ಥೆಗಳ ಮುಖ್ಯಸ್ಥರಲ್ಲಿ ಹಲವರು, ಮಾಧ್ಯಮಗಳ ಮುಂದೆ ಈ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ ಇದರಲ್ಲಿ ಹೆಚ್ಚು ಸುದ್ದಿ ಮಾಡಿದ್ದದ್ದು, ಟಾಟಾ ಸನ್ಸ್‌ನ ಮುಖ್ಯಸ್ಥ ಎನ್‌. ಚಂದ್ರಶೇಖರನ್ ಅವರ ಮಾತು.

ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಚಂದ್ರಶೇಖರನ್ ಅವರ ಉತ್ತರ ಹೀಗಿತ್ತು. ‘ಈ ಬಗ್ಗೆ ಪರಿಶೀಲನೆ ನಡೆಸುವಂತೆ ಆಡಳಿತ ಮಂಡಳಿಯನ್ನು ಕೇಳಿಕೊಳ್ಳಬಹುದು. ಏರ್‌ ಇಂಡಿಯಾವನ್ನು ಖರೀದಿಸಿದರೆ, ಅದು ನಮ್ಮ ಮೂರನೇ ವಿಮಾನಯಾನ ಸಂಸ್ಥೆಯಾಗುತ್ತದೆ (ಏರ್‌ ಏಷ್ಯಾ ಮತ್ತು ವಿಸ್ತಾರದಲ್ಲಿ ಟಾಟಾ ಕಂಪನಿಯು ಪಾಲುದಾರಿಕೆ ಹೊಂದಿದೆ). ಆ ಮೂರನ್ನೂ ವಿಲೀನ ಮಾಡದೆ ಇದ್ದರೆ ಸಮಸ್ಯೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಏರ್ ಇಂಡಿಯಾವನ್ನು ಖರೀದಿಸುವ ಬಗ್ಗೆ ‘ವಿಸ್ತಾರ’ ಕಂಪನಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದಿದ್ದರು.

‘ಟಾಟಾ ಸಂಸ್ಥೆಯೇ ಏರ್‌ ಇಂಡಿಯಾವನ್ನು ಸ್ಥಾಪಿಸಿತ್ತು. ಏರ್ ಇಂಡಿಯಾ ಖರೀದಿ ಬಗ್ಗೆ ಯೋಚಿಸಲು ಇದೂ ಒಂದು ಭಾವನಾತ್ಮಕ ಕಾರಣ. ಆದರೆ, ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ’ ಎಂದು ವಿಸ್ತಾರ ಸಂಸ್ಥೆಯ
ಉನ್ನತಾಧಿಕಾರಿಗಳು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಥಗಿತವಾದರೆ ಪ್ರಯಾಣಿಕರಿಗೆ ಹೊರೆ

ಎರಡನೇ ಬಾರಿಯೂ ಯಾವ ಕಂಪನಿಯೂ ಏರ್‌ ಇಂಡಿಯಾ ಖರೀದಿಗೆ ಆಸಕ್ತಿ ತೋರಿಸದೇ ಇದ್ದರೆ, ಏರ್ ಇಂಡಿಯಾವು ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಹೀಗೆ ಆದರೆ, ಭಾರತದ ವಿಮಾನಯಾನ ಕ್ಷೇತ್ರದ ಸಾಮರ್ಥ್ಯ ಭಾರಿ ಪ್ರಮಾಣದಲ್ಲಿ ಕುಸಿಯುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏರ್‌ ಇಂಡಿಯಾವು ಈಗ 31 ದೇಶಗಳ 43 ನಗರಗಳ ಮಧ್ಯೆ ಮತ್ತು ಭಾರತದ 55 ನಗರಗಳ ಮಧ್ಯೆ ವಿಮಾನಯಾನ ಸೇವೆ ಒದಗಿಸುತ್ತಿದೆ.

ಭಾರತದ ಕೆಲವು ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸುವ ಏಕೈಕ ಸಂಸ್ಥೆ ಏರ್ ಇಂಡಿಯಾ ಆಗಿದೆ. ಭಾರತದಿಂದ ಕೆಲವು ವಿದೇಶಿ ನಗರಗಳಿಗೆ ನೇರ ವಿಮಾನ ಸೇವೆ ನೀಡುತ್ತಿರುವ ಏಕೈಕ ಕಂಪನಿಯೂ ಆಗಿದೆ. ಏರ್ ಇಂಡಿಯಾ ಕಾರ್ಯಾಚರಣೆ ಸ್ಥಗಿತಗೊಳಿಸಿದರೆ, ಈ ಸವಲತ್ತುಗಳು ಇಲ್ಲವಾಗುತ್ತವೆ.

ಏರ್‌ ಇಂಡಿಯಾವು ಮಾರುಕಟ್ಟೆಯಿಂದ ಹಿಂದೆ ಸರಿದರೆ, ಪ್ರತಿಸ್ಪರ್ಧಿಗಳಿಗೆ ಇದರ ಲಾಭವಾಗುತ್ತದೆ. ಆದರೆ, ಎಲ್ಲಾ ವಿಮಾನಯಾನ ಕಂಪನಿಗಳ ಮೇಲೆ, ವಿಮಾನ ನಿಲ್ದಾಣಗಳ ಮೇಲೆ ಒತ್ತಡ ಏರಿಕೆಯಾಗುತ್ತದೆ. ಇದು ವಿಮಾನದ ಟಿಕೆಟ್ ದರ ಏರಿಕೆಗೂ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದ್ವಿಪಕ್ಷೀಯ ಒಪ್ಪಂದಗಳ ಸಮಸ್ಯೆ

ಎರಡು ದೇಶಗಳು ನಡುವೆ ನಿಗದಿತ ಅವಧಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಮೇಲೆ ಮಿತಿ ಇದೆ. ಇದನ್ನು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ನಿರ್ಧರಿಸಲಾಗಿರುತ್ತದೆ. ಆದರೆ, ಇಂತಹ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ಸರ್ಕಾರವು ಎಡವಿದೆ. ಇದರಿಂದಲೂ ಏರ್‌ ಇಂಡಿಯಾ ನಷ್ಟ ಅನುಭವಿಸುತ್ತಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿತ್ತು.

ದುಬೈ–ಅಬುಧಾಬಿ ಮತ್ತು ಭಾರತದ ನಡುವೆ ಪ್ರಯಾಣಿಸಬಹುದಾದ ಪ್ರಯಾಣಿಕರ ಸಂಖ್ಯೆಯ ಮಿತಿಯನ್ನು, ಅಗತ್ಯಕ್ಕಿಂತ ಹೆಚ್ಚು ಇರಿಸಲಾಗಿದೆ. ಈ ಒಪ್ಪಂದವನ್ನು ಬಳಸಿಕೊಂಡು, ದುಬೈ ಮತ್ತು ಅಬುಧಾಬಿಯನ್ನು ಅಂತರರಾಷ್ಟ್ರೀಯ ವಿಮಾನಗಳ ‘ಇಂಟರ್‌ಚೇಂಜ್‌’ ಕೇಂದ್ರವಾಗಿ ವಿದೇಶಿ ವಿಮಾನಯಾನ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಅಂದರೆ, ಭಾರತದಿಂದ ಬೇರೆ ದೇಶಗಳಿಗೆ ಹೋಗಬೇಕಾದ ಪ್ರಯಾಣಿಕರನ್ನು ದುಬೈ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳ ಮೂಲಕ ಕರೆದೊಯ್ಯಲಾಗುತ್ತಿದೆ. ಇದರಿಂದ ಭಾರತದಿಂದ ಬೇರೆ ದೇಶಗಳಿಗೆ ನೇರ ವಿಮಾನ ಸೇವೆ ಒದಗಿಸುತ್ತಿರುವ ಏರ್‌ ಇಂಡಿಯಾಗೆ ನಷ್ಟವಾಗುತ್ತಿದೆ. ಈ ಒಪ್ಪಂದವನ್ನು ಮಾಡಿಕೊಳ್ಳುವಾಗ ಕಡೆಗಣಿಸಿದ ಸಣ್ಣ ಅಂಶ ಕೂಡ ಏರ್ ಇಂಡಿಯಾ ನಷ್ಟಕ್ಕೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿತ್ತು.

ನಷ್ಟಕ್ಕೆ ಕಾರಣಗಳು

ಏರ್‌ ಇಂಡಿಯಾವು ತನ್ನ ನಷ್ಟದಿಂದ ಹೊರಬರಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ವಿಶ್ಲೇಷಿಸಲಾಗಿತ್ತು. 2017ರ ಮಾರ್ಚ್‌ 10ರಂದು ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. 2010–2016ರ ನಡುವೆ ಏರ್‌ ಇಂಡಿಯಾದ ಕಾರ್ಯಾಚರಣೆಯ ಲೆಕ್ಕಪರಿಶೋಧನೆ ನಡೆಸಿ, ಈ ವರದಿ ಸಿದ್ಧಪಡಿಸಲಾಗತ್ತು. ಏರ್‌ ಇಂಡಿಯಾವನ್ನು ನಷ್ಟದಿಂದ ಹೊರತರಲು ಗುರಿ ನಿಗದಿಪಡಿಸಲಾಗಿತ್ತು. ಈ ಗುರಿಯನ್ನು ಮುಟ್ಟುವಲ್ಲಿ ಸಂಸ್ಥೆಯು ವಿಫಲವಾಗಿತ್ತು. ಸಂಸ್ಥೆಯ ನಷ್ಟಕ್ಕೆ ಸಿಎಜಿ ಹಲವು ಕಾರಣಗಳನ್ನು ಗುರುತಿಸಿತ್ತು

- ಸಂಸ್ಥೆಯ ವಿಮಾನಗಳ ಸರಾಸರಿ ಸೀಟು ಭರ್ತಿ ಪ್ರಮಾಣವು ಶೇ 70ರಿಂದ ಶೇ 75ರ ಆಸುಪಾಸಿನಲ್ಲೇ ಇದೆ. ಇದು ಪ್ರತಿ ವಿಮಾನದ, ಪ್ರತಿ ಹಾರಾಟದಲ್ಲೂ ನಷ್ಟಕ್ಕೆ ಕಾರಣವಾಗುತ್ತಿದೆ. ಸಂಸ್ಥೆಯು ಅಗತ್ಯಕ್ಕಿಂತ ದೊಡ್ಡ ವಿಮಾನಗಳನ್ನು ಹೊಂದಿದೆ. ಹೀಗಾಗಿಯೇ ಅವುಗಳ ಸೀಟು ಭರ್ತಿಯಾಗುವುದು ಕಷ್ಟ

- 12 ಸಣ್ಣ ವಿಮಾನಗಳನ್ನು ಖರೀದಿಸುವಂತೆ (ಸೇವೆಗೆ ನಿಯೋಜಿಸುವಂತೆ) ಸಂಸ್ಥೆಗೆ ಸೂಚನೆ ನೀಡಲಾಗಿತ್ತು. ಆದರೆ, ಸಂಸ್ಥೆಯು ನಿಗದಿತ ಅವಧಿಯಲ್ಲಿ ಕೇವಲ ಐದು ಸಣ್ಣ ವಿಮಾನಗಳನ್ನು ಖರೀದಿಸಿದೆ. ಈ ಸ್ವರೂಪದ ನಿರ್ಲಕ್ಷ್ಯದಿಂದ ಕಾರ್ಯಾಚರಣೆ ವೆಚ್ಚ ಇಳಿಕೆಯಾಗುತ್ತಿಲ್ಲ. ನಷ್ಟವೂ ಇಳಿಕೆಯಾಗುತ್ತಿಲ್ಲ

- ಸಂಸ್ಥೆಯ ವಿಮಾನಗಳು ನಿಗದಿತ ಸಮಯದಲ್ಲಿ ಕಾರ್ಯಾಚರಣೆಗೆ ಲಭ್ಯವಿರುವ ಪ್ರಮಾಣ ಕಡಿಮೆ ಇದೆ. ಇದರಿಂದ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ಅವಧಿಗೆ ‘ಗ್ರೌಂಡ್‌ ಫೋರ್ಸ್‌’ (ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ) ನಿಯೋಜನೆಯಿಂದ ಕಾರ್ಯಾಚರಣೆ ವೆಚ್ಚ ಏರಿಕೆಯಾಗುತ್ತಿದೆ. ಇದರಿಂದಲೂ ನಷ್ಟ ಏರಿಕೆಯಾಗುತ್ತಿದೆ

- ಸಂಸ್ಥೆಯು ದೇಶದ ವಿವಿಧೆಡೆ ಹೊಂದಿರುವ, ಆದರೆ ಉಪಯೋಗಿಸದೇ ಇರುವ 12 ಸ್ವತ್ತುಗಳನ್ನು ಮಾರಾಟ ಮಾಡುವಂತೆ ಸೂಚಿಸಲಾಗಿತ್ತು. ಮಾರಾಟದಿಂದ ಬಂದ ಹಣದಲ್ಲಿ ಸಾಲ ತೀರಿಸುವಂತೆ ಸೂಚಿಸಲಾಗಿತ್ತು. ಆದರೆ, ಈ ಗುರಿಯನ್ನು ಮುಟ್ಟುವಲ್ಲಿ ಸಂಸ್ಥೆ ವಿಫಲವಾಗಿದೆ

- ವಿಶ್ವದ ಕೆಲವು ನಗರಗಳಿಗೆ ಏರ್‌ ಇಂಡಿಯಾ ಸೇವೆ ಒದಗಿಸುತ್ತಿದೆ. ಈ ಮಾರ್ಗಗಳು ವಿಪರೀತ ನಷ್ಟದ್ದಾಗಿವೆ. ಈ ಮಾರ್ಗಗಳಲ್ಲಿ ಸೇವೆ ಸ್ಥಗಿತಗೊಳಿಸದೆ ಇರುವುದೂ ನಷ್ಟ ಏರಿಕೆಯಾಗಲು ಕಾರಣವಾಗಿದೆ

- ಸಂಸ್ಥೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇದ್ದಾರೆ. ಈ ಸಿಬ್ಬಂದಿಯನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಸಂಸ್ಥೆ ವಿಫಲವಾಗಿದೆ

ಹಾರಾಟದ ಹಾದಿ...

-1932: ಉದ್ಯಮಿ ಜೆಆರ್‌ಡಿ ಟಾಟಾ ಅವರಿಂದ ಭಾರತದಲ್ಲಿ ‘ಟಾಟಾ ಏರ್‌ಲೈನ್ಸ್‌’ ಆರಂಭ

-1946: ಟಾಟಾ ಏರ್‌ಲೈನ್ಸ್‌ ಅನ್ನು ಪಬ್ಲಿಕ್‌ ಕಂಪನಿಯಾಗಿ ಪರಿವರ್ತಿಸಿ ‘ಏರ್‌ ಇಂಡಿಯಾ’ ಎಂದು ಮರು ನಾಮಕರಣ

-1948: ಏರ್‌ ಇಂಡಿಯಾದಲ್ಲಿ ಶೇ 49ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡ ಸರ್ಕಾರ

-1953: ಸರ್ಕಾರದಿಂದ ಏರ್‌ ಇಂಡಿಯಾ ರಾಷ್ಟ್ರೀಕರಣ

- 2007: ಇಂಡಿಯನ್‌ ಏರ್‌ಲೈನ್ಸ್‌ನಲ್ಲಿ ಏರ್‌ ಇಂಡಿಯಾ ವಿಲೀನ

- 2007–08: ₹ 33.4 ಕೋಟಿ ನಷ್ಟ ಅನುಭವಿಸಿದ ಏರ್‌ ಇಂಡಿಯಾ

- 2018: ಏರ್‌ ಇಂಡಿಯಾ ಸಂಸ್ಥೆಯ ಶೇ 76ರಷ್ಟು ಷೇರು ಮಾರಾಟಕ್ಕೆ ಪ್ರಯತ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT